ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ ಅಂಕಣ | ಚಂದ್ರನ ಚಹರೆ ಬದಲಾಗುವುದೇ?

ಚಂದ್ರನಲ್ಲಿನ ಸಂಪನ್ಮೂಲಗಳ ಕೊಳ್ಳೆಗೆ ಹೊರಟಿದ್ದಾರೆ ಭೂಒಡೆಯರು
Published 19 ಜುಲೈ 2023, 23:12 IST
Last Updated 19 ಜುಲೈ 2023, 23:12 IST
ಅಕ್ಷರ ಗಾತ್ರ

ಚಂದ್ರಯಾನ- 3 ಮೊನ್ನೆ ನಭಕ್ಕೆ ಹಾರಿದ ದಿನ ಕನ್ನಡ ವಾಹಿನಿಯೊಂದರಲ್ಲಿ ಒಬ್ಬರು, ‘ಚಂದ್ರನಲ್ಲಿ ಅಗಾಧವಾದ ಖನಿಜ ಸಂಪತ್ತಿದ್ದು, ಅದನ್ನು ಭೂಮಿಗೆ ತರಲು ಪ್ರಯತ್ನಗಳು ನಡೆಯುತ್ತಿವೆ. ಅವುಗಳನ್ನು ಹೇಗೆ ತರಬೇಕು, ಅದಕ್ಕಾಗಿ ಎಷ್ಟು ಖರ್ಚಾಗುತ್ತದೆ ಎನ್ನುವುದು ಬೇರೆ ವಿಷಯ. ಆದರೆ ಅನೇಕ ರೀತಿಯ ಬಹುಅಮೂಲ್ಯ ಖನಿಜಗಳು ಮತ್ತು ನೀರು ಇವೆ’ ಎಂದು ಹೇಳುತ್ತಿದ್ದರು.

ಭೂಮಿಗೆ ದೊಡ್ಡದಾದ ಕ್ಷುದ್ರಗ್ರಹವೊಂದು ಡಿಕ್ಕಿ ಹೊಡೆದ ಕಾರಣ ಚಂದ್ರ ಸೃಷ್ಟಿಯಾದ. ಭೂಮಿಗೆ ಬರೀ 3.84 ಲಕ್ಷ ಕಿ.ಮೀ. ದೂರದಲ್ಲಿರುವ ಚಂದ್ರನ ಬಗ್ಗೆ ಮಾನವನ ಇತಿಹಾಸದಲ್ಲಿ ಬರೆದಷ್ಟು ಸಾಹಿತ್ಯ, ವೈಜ್ಞಾನಿಕ ವಿಷಯಗಳು ಬೇರೆ ಯಾವ ಗ್ರಹದ ಬಗ್ಗೆಯೂ ಬಂದಿಲ್ಲ. ಮಗುವಿಗೆ ಚಂದ್ರನನ್ನು ತೋರಿಸಿ ತಿನ್ನಿಸುವುದು, ಪ್ರಣಯಿಗಳು ಚಂದ್ರನನ್ನು ನೋಡುತ್ತ ಹಾಡುವುದು, ಕವಿಗಳು ಚಂದ್ರನನ್ನು ವರ್ಣಿಸುವುದು ಸಾಮಾನ್ಯ. ವಿಜ್ಞಾನಿಗಳು, ತತ್ವಶಾಸ್ತ್ರಜ್ಞರು, ಗಣಿತಜ್ಞರು ಮತ್ತು ಖಗೋಳವಿಜ್ಞಾನಿಗಳು ಚಂದ್ರನ ಬಗ್ಗೆ ವಿಪುಲ ಕಲ್ಪನೆಗಳನ್ನು ಸೃಷ್ಟಿಸಿದ್ದಾರೆ.

ಮಾನವನು ಚಂದ್ರನಲ್ಲಿಗೆ ಹೋಗಿ ಅಲ್ಲೇ ಕಾಲೊನಿಗಳನ್ನು ಕಟ್ಟಿ, ಕೈಗಾರಿಕಾ ಕೇಂದ್ರಗಳನ್ನು ಸ್ಥಾಪಿಸಿ, ಆರ್ಥಿಕ ಕೇಂದ್ರಗಳನ್ನು ಚಂದ್ರನ ಅಂಗಳಕ್ಕೆ ವಿಸ್ತರಿಸಲು ಯೋಜಿಸುತ್ತಿದ್ದಾನೆ. ಕಕ್ಷೆಯಲ್ಲಿ ಇನ್ನೊಂದು ಭೂಲೋಕವನ್ನೇ ಸೃಷ್ಟಿಸುವ ಉತ್ಸಾಹದಲ್ಲಿದ್ದಾನೆ. ಚಂದ್ರನಲ್ಲಿನ ಅನ್ವೇಷಣೆ 2,000 ವರ್ಷಗಳ ಹಿಂದಿನಿಂದಲೇ ನಡೆಯುತ್ತಿದ್ದು, 17ನೇ ಶತಮಾನದಲ್ಲಿ ಗೆಲಿಲಿಯೊ ತನ್ನ ಪುಟ್ಟ ದೂರದರ್ಶಕದ ಮೂಲಕ ಇದಕ್ಕೆ ನಾಂದಿ ಹಾಡಿದ. ಅಲ್ಲಿಂದ ಇಲ್ಲಿಯವರೆಗೂ ಚಂದ್ರನ ಬಗ್ಗೆ ಊಹಾಪೋಹಗಳು, ಕಲ್ಪನೆಗಳು ಸೃಷ್ಟಿಯಾಗುತ್ತಲೇ ಇವೆ. ಭೂಮಿಯ ಮೇಲಿನ ಬಿಸಿಲು, ಗಾಳಿ, ಸುನಾಮಿ, ಚಂಡಮಾರುತ, ಜ್ವಾಲಾಮುಖಿಯಂತಹ ಎಲ್ಲ ನೈಸರ್ಗಿಕ ಪ್ರಕ್ರಿಯೆಗಳೂ ಅಲ್ಲಿ ನಡೆಯುತ್ತವೆ, ಅಲ್ಲಿ ಜೀವಜಂತುಗಳಿವೆ, ಸಮುದ್ರಗಳಿವೆ, ಬೆಟ್ಟಗುಡ್ಡಗಳಿವೆ, ಖನಿಜ ಭಂಡಾರವೇ ಇದೆ ಎಂದೆಲ್ಲ ಕೇಳಿಬರುತ್ತದೆ.

ಕೊನೆಗೆ ತಿಳಿದುಬಂದ ವಿಷಯವೆಂದರೆ, ಅಲ್ಲಿ ವಾತಾವರಣವೇ ಇಲ್ಲ ಎನ್ನುವುದು.
ಇನ್ನು ಭೂಮಿಗೆ ನೀರು ಹೇಗೆ ಬಂದಿತು ಎನ್ನುವ ಪ್ರಶ್ನೆಗೇ ಇಂದಿಗೂ ಉತ್ತರ ಕಂಡುಕೊಳ್ಳಲು ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ. ಚಂದ್ರನ ಮೇಲೆ ಸಮುದ್ರಗಳು ಇದ್ದವೇ, ಇದ್ದರೆ ಅವು ಉಲ್ಕಾಶಿಲೆಗಳು, ಧೂಮಕೇತುಗಳಿಂದ ಸೃಷ್ಟಿಯಾದವೇ ಎನ್ನುವ ಪ್ರಶ್ನೆಗಳು ಏಳುತ್ತವೆ. 1957ರಲ್ಲಿ ಸೋವಿಯತ್ ರಷ್ಯಾದ ಸ್ಪುಟ್ನಿಕ್- 1 ಚಂದ್ರನ ಮೇಲೆ ಮೊದಲ ಬಾರಿಗೆ ಇಳಿದಾಗ, ಚಂದ್ರನ ಮೇಲ್ಮೈ ಗಟ್ಟಿಯಾಗಿದೆ ಎಂದು ತಿಳಿಯಿತು. ಹಿಂದಿನ ಆರು ದಶಕಗಳಿಂದ ರಷ್ಯಾ, ಅಮೆರಿಕ, ಚೀನಾ, ಜಪಾನ್, ಯುರೋಪಿಯನ್ ಸ್ಪೇಸ್ ಏಜೆನ್ಸಿ ಮತ್ತು ಭಾರತವು ಚಂದ್ರನ ಅನ್ವೇಷಣೆಯಲ್ಲಿ ತೋಡಗಿಕೊಂಡಿವೆ. 1969ರಲ್ಲಿ ಅಮೆರಿಕದ ನೀಲ್ ಆರ್ಮ್‍ಸ್ಟ್ರಾಂಗ್ ಮೊದಲ ಬಾರಿಗೆ ಚಂದ್ರನ ಮೇಲೆ ಕಾಲಿಡುವುದರೊಂದಿಗೆ ಅನೇಕ ಕಲ್ಪನೆಗಳಿಗೆ ಉತ್ತರ ದೊರಕಿತು. ಅದು ಕೂಡ ಸುಳ್ಳು, ಆರ್ಮ್‍ಸ್ಟ್ರಾಂಗ್ ಚಂದ್ರನ ಮೇಲೆ ಇಳಿಯಲೇ ಇಲ್ಲ ಎನ್ನುವ ವದಂತಿಗಳು ಸಹ ಹುಟ್ಟಿಕೊಂಡಿದ್ದವು.

ಭೂಮಿಯ ಒಂದು ಭಾಗವೇ ಆಗಿರುವ ಚಂದ್ರನಲ್ಲಿ ಭೂಮಿಯಲ್ಲಿ ದೊರಕುವ ಎಲ್ಲಾ ಖನಿಜ, ಲೋಹ ಸಂಪನ್ಮೂಲಗಳು ದೊರಕಬಹುದು. ಯಾವುದೇ ಜೀವಜಂತುಗಳು ಮತ್ತು ಅರಣ್ಯಗಳು ಚಂದ್ರನಲ್ಲಿ ಇಲ್ಲ ಎನ್ನುವುದು ಈಗ ಖಾತರಿಯಾಗಿದೆ. ಆದರೆ ಮಂಜುಗಡ್ಡೆಯನ್ನು ಕಟ್ಟಿಕೊಂಡ ನೀರಿನ ಸಂಪನ್ಮೂಲಗಳು ಧ್ರುವಗಳ ಆಳದಲ್ಲಿ ಹುದುಗಿರಬಹುದು ಎನ್ನುವ ಕಲ್ಪನೆಗಳು ಹುಟ್ಟಿಕೊಂಡಿವೆ. ಇನ್ನು ಉಸಿರಾಡಲು ಗಾಳಿಯಂತೂ ಇಲ್ಲವೇ ಇಲ್ಲ. ನೀರು, ಗಾಳಿ ಇಲ್ಲದೇ ಇರುವಾಗ ಅಲ್ಲಿ ಮನುಷ್ಯ ಕಾಲೊನಿಗಳು, ಕಾರ್ಖಾನೆಗಳನ್ನು ನಿರ್ಮಿಸಿಕೊಳ್ಳಲು, ಕೃಷಿ ಮಾಡಲು ಸಾಧ್ಯವೇ?!

ಭೂಮಿಯ ಮೇಲೆ ಇದ್ದಂತೆ ಚಂದ್ರನ ಮೇಲೆ ಸೌರಶಕ್ತಿ, ಆಮ್ಲಜನಕ ಮತ್ತು ಕೆಲವು ಖನಿಜ, ಲೋಹಗಳು ಇವೆ. ಆದರೆ ಅವು ಕಲ್ಲು, ಮಣ್ಣಿನಲ್ಲಿ ಸಮ್ಮಿಶ್ರಣಗೊಂಡಿವೆ. ಚಂದ್ರನಲ್ಲಿರುವ ಮೂಲವಸ್ತುಗಳಲ್ಲಿ ಜಲಜನಕ, ಆಮ್ಲಜನಕ, ಸಿಲಿಕಾನ್, ಕಬ್ಬಿಣ, ಮೆಗ್ನೀಷಿಯಂ, ಕ್ಯಾಲ್ಸಿಯಂ, ಅಲ್ಯೂಮಿನಿಯಮ್, ಮ್ಯಾಂಗನೀಸ್ ಮತ್ತು ಟೈಟಾನಿಯಂ ಸೇರಿವೆ. ಆಮ್ಲಜನಕ, ಕಬ್ಬಿಣ ಮತ್ತು ಸಿಲಿಕಾನ್ ಹೆಚ್ಚಾಗಿವೆ. ಈ ಎಲ್ಲವೂ ಸಹಜವಾಗಿಯೇ ಶಿಲೆಗಳು ಮತ್ತು ಮಣ್ಣಿನೊಂದಿಗೆ ದೊರಕುತ್ತವೆ. ಅಪೋಲೊ- 17ರ ಅನ್ವೇಷಣೆಯ ಪ್ರಕಾರ, ಚಂದ್ರನ ಹೊರವಾತಾವರಣದಲ್ಲಿ ಜಲಜನಕ, ಹೀಲಿಯಂ, ಆರ್ಗಾನ್, ಅಮೋನಿಯಾ, ಇಂಗಾಲದ ಡೈಆಕ್ಸೈಡ್ ಮತ್ತು ಮೀಥೇನ್ ಇರುವುದಾಗಿ ಕಂಡುಬಂದಿದೆ. ಭೂಮಿಯ ಹೊರವಲಯದಲ್ಲಿರುವ ಸಾರಜನಕ ಇಲ್ಲದೇ ಇರುವುದು ಆಶ್ಚರ್ಯಕರ ಎನ್ನಬಹುದು. ಉಳಿದಂತೆ ಇವೆಲ್ಲ ಭೂಮಿಯ ವಾತಾರಣದಲ್ಲಿರುವ ಅನಿಲಗಳೇ ಆಗಿವೆ.

ಚಂದ್ರನ ಮೇಲಿನ ಹಲವಾರು ಪ್ರಕ್ರಿಯೆಗಳು, ಅತ್ಯಂತ ಕಡಿಮೆ ಸಾಂದ್ರತೆಯಲ್ಲಿರುವ ಅಪರೂಪದ ಅನಿಲಗಳ ಉಪಸ್ಥಿತಿಯನ್ನು ತೋರಿಸುತ್ತವೆ. ಇನ್ನು ಭೂಮಿಯಲ್ಲಿ ದೊರಕುವ ಚಿನ್ನ, ವಜ್ರ, ಕಬ್ಬಿಣ, ಇಂಧನ, ಕಲ್ಲಿದ್ದಲು ಮತ್ತು ಅಪರೂಪದ ಖನಿಜ, ಲೋಹಗಳ ನಿಕ್ಷೇಪಗಳನ್ನು ಚಂದ್ರನ ಆಳದಲ್ಲಿ ಹುಡುಕಿ ತೆಗೆಯುವುದು ಮತ್ತು ಅದನ್ನು ಜನರಿಂದ ಅಥವಾ ರೊಬಾಟ್‍ಗಳಿಂದ ಗಣಿ ಮಾಡಿಸಿ ಹೊರತೆಗೆದು ಸಂಸ್ಕರಿಸಿ ರವಾನಿಸುವ ಖರ್ಚು ಎಷ್ಟಾಗಬಹುದು?! ಇವೆಲ್ಲವೂ ಆನಂತರದ ಮಾತುಗಳು.

ಒಟ್ಟಿನಲ್ಲಿ ಚಂದ್ರನ ಮೇಲೆ ಮೋಹಗೊಂಡಿರುವ ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳು ಅಲ್ಲಿನ ಖನಿಜ ಸಂಪನ್ಮೂಲಗಳನ್ನು ಕೊಳ್ಳೆಹೊಡೆಯಲು ಹಾಗೂ ಅಲ್ಲೇ ವಸತಿ ಹೂಡಲು ಹೇರಳ ಹಣವನ್ನು ಹೂಡುತ್ತಿವೆ. ಭೂಮಿ ಮತ್ತು ಚಂದ್ರನ ಸುತ್ತಲೂ ಆಕಾಶದಲ್ಲಿ ನೌಕೆಗಳನ್ನು, ಶಾಶ್ವತ ನೆಲೆಗಳನ್ನು ಅಥವಾ ಮಾನವ ಕಾಲೊನಿಗಳನ್ನು ಸ್ಥಾಪಿಸಿ, ಅಲ್ಲಿಂದಿಲ್ಲಿಗೆ ಹಾರಾಡುವ ಯೋಜನೆಗಳನ್ನು ರೂಪಿಸಲು ಹೊರಟಿವೆ. ಬರುವ ದಿನಗಳಲ್ಲಿ ಚಂದ್ರನನ್ನು ಬಳಸಿಕೊಂಡು ಅಲ್ಲಿಂದ ಇತರ ಕಾಯಗಳನ್ನು ಅನ್ವೇಷಿಸಬಲ್ಲ, ಮಾನವನನ್ನು ಕೊಂಡೊಯ್ಯಬಲ್ಲ ನೌಕೆಗಳು ಮತ್ತು ರೊಬಾಟ್‍ಗಳ ದಂಡೇ ಕಕ್ಷೆಗೆ ಧಾವಿಸಲಿದೆ. ಅಂದರೆ ಮಾನವನ ನೂಕುನುಗ್ಗುಲು ಪ್ರಾರಂಭವಾವಾಗುತ್ತದೆ.

ಇಷ್ಟೆಲ್ಲ ಸಾಧಿಸಬೇಕಾದರೆ ಭೂಮಿಯ ಮೇಲಿನ ಎಷ್ಟು ಸಂಪತ್ತು ಕೊಳ್ಳೆಯಾಗುತ್ತದೆ ಎನ್ನುವ ವಿಷಯವನ್ನು ಮಾತ್ರ ಯಾರೂ ಮಾತನಾಡುತ್ತಿಲ್ಲ. ಒಟ್ಟಿನಲ್ಲಿ, ಇದೊಂದು ಬೆಟ್ಟ ಅಗೆದು ಇಲಿಯನ್ನು ಹಿಡಿಯುವ ದೊಡ್ಡ ಯೋಜನೆಯಾಗಿದೆ. ಅಂದಹಾಗೆ, ಇಂದು (ಜುಲೈ 20) ಅಂತರರಾಷ್ಟ್ರೀಯ ಚಂದ್ರನ ದಿನಾಚರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT