ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ: ಆಸಕ್ತಿ ಕಳೆಯುವ ನಕಾರಾತ್ಮಕ ನಡೆ

Published 10 ಜೂನ್ 2024, 2:42 IST
Last Updated 10 ಜೂನ್ 2024, 2:42 IST
ಅಕ್ಷರ ಗಾತ್ರ

‘ಹೋಳಿಗೆ’ ಎಂಬುದು ಸಾಹಿತಿ ಬಸವರಾಜ ಕಟ್ಟೀಮನಿ ಅವರ ಪ್ರಸಿದ್ಧ ಕಥೆ. ಸಮಾರಂಭಕ್ಕೆ ಆಗಮಿಸಿದ ಅತಿಥಿಗಳ ಊಟಕ್ಕೆ ಹೋಳಿಗೆ ಮಾಡಲು ಬಂದ ಕೂಲಿಕಾರ್ಮಿಕ ಮಹಿಳೆಯ ಜೊತೆಗೆ ಆಕೆಯ ಕಿರಿಯ ಮಗನೂ ಬಂದಿರುತ್ತಾನೆ. ಬುಟ್ಟಿ ತುಂಬಾ ಹೋಳಿಗೆಗಳು ಸಿದ್ಧವಾಗುತ್ತವೆ. ಆಕೆಯ ಮಗ ಒಂದು ಹೋಳಿಗೆ ಎತ್ತಿಕೊಳ್ಳುತ್ತಾನೆ. ಇದನ್ನು ಗಮನಿಸಿದ ಒಡೆಯ ಧಾವಿಸಿ ಬಂದು ಬಾಲಕನನ್ನು ಥಳಿಸುತ್ತಾನೆ. ಮಗನ ಆಕ್ರಂದನಕ್ಕೆ ತಾಯಿಯ ಕಣ್ಣೀರ ಹನಿಗಳು ಹೋಳಿಗೆಯ ಹೂರಣದಲ್ಲಿ ಬೀಳುತ್ತವೆ. ಅತಿಥಿಗಳು ಊಟ ಸವಿಯುತ್ತಾರೆ. ಅವರಿಗೆ ಮಹಿಳೆಯ ದುಃಖ ದುಮ್ಮಾನ ಕಾಣುವುದೇ ಇಲ್ಲ.

ಲಖನೌನ ಚಂದೋಯಿಯ ಖೇಡಾ ಗ್ರಾಮದಲ್ಲಿ ಇರುವ ಕಲ್ಲುಗಣಿಯಲ್ಲಿ ಮಧ್ಯಾಹ್ನದ ಊಟದ ಬಳಿಕ ಮಲಗಿ ವಿರಮಿಸುತ್ತಿದ್ದ ದಲಿತ ದಿನಗೂಲಿ ಕಾರ್ಮಿಕ ರಾಜಕುಮಾರ್ ರಾವತ್ ಅವರನ್ನು ಎಚ್ಚರಗೊಳಿಸಲು
ಗಣಿ ಮಾಲೀಕ ಆತನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ, ಆ ಕೃತ್ಯವನ್ನು ಸ್ವತಃ ಚಿತ್ರೀಕರಿಸಿ ಜಾಲತಾಣದಲ್ಲಿ ಪೋಸ್ಟ್ ಮಾಡಿ ಅಟ್ಟಹಾಸ ಮೆರೆದ ವರದಿ (ಪ್ರ.ವಾ., ಜೂನ್ 4) ಓದಿದಾಗ, ಹೃದಯ ಕಲಕುವ ಹೋಳಿಗೆ ಕಥೆ ನೆನಪಾಯಿತು.

ಮನೆ, ಮಹಲು ಕಟ್ಟುವವರು, ಹೆದ್ದಾರಿ ನಿರ್ಮಾಣ, ವಿದ್ಯುತ್ ಕಂಬಗಳನ್ನು ನೆಡುವುದು, ನಳ ಜೋಡಿಸುವುದು, ಬೀದಿ ಕಸ ಗುಡಿಸುವುದು, ವಾಹನ ರಿಪೇರಿ ಮಾಡುವಂತಹವರೆಲ್ಲ ಕಾರ್ಮಿಕರು. ಸಂಪತ್ತು ಸೃಷ್ಟಿಸುವವರು ಮತ್ತು ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಂತವರೂ ಅವರೇ. ಆದರೆ ದುಡಿಸಿಕೊಳ್ಳುವವರಿಗೆ ಕಾರ್ಮಿಕರ ಬಗ್ಗೆ ಪ್ರೀತಿ, ಗೌರವ, ಕಾಳಜಿ ಇಲ್ಲದಿರುವುದು ನೋವಿನ ಸಂಗತಿ.

ಜನಪರ ಚಳವಳಿಗಳು, ಪ್ರತಿಭಟನೆಗಳು ದುರ್ಬಲವಾದ ಕಾಲದಲ್ಲಿ ತೀವ್ರ ಅಪಮಾನದ ಹಿಂಸೆಗಳು ಚಾಲ್ತಿಗೆ ಬರುತ್ತವೆ ಎನ್ನುವ ಮಾತೊಂದಿದೆ. ಪ್ರತಿಭಟನೆಯು ಆರೋಗ್ಯಪೂರ್ಣ ಸಮಾಜದ ಲಕ್ಷಣ. ‘ನಾನು ಪ್ರತಿಭಟಿಸುತ್ತೇನೆ, ಆದ್ದರಿಂದ ನಾವೆಲ್ಲ ಇದ್ದೇವೆ’ ಎಂದು ಚಿಂತಕ ಆಲ್ಬರ್ಟ್ ಕಮೂ ಹೇಳುತ್ತಾರೆ. ದುಡಿಯುವ ವರ್ಗ ಸಂಘಟಿತವಾಗಿ, ಗಟ್ಟಿ ಧ್ವನಿಯಾಗಿ ನಿಂತಾಗ ಮಾತ್ರ ‌ಶೋಷಣೆಗೆ ಕಡಿವಾಣ ಬೀಳುತ್ತದೆ.

ಕಲೆ, ಸಾಹಿತ್ಯ, ನಾಟಕಗಳ ಮೂಲಕ ನಡೆಯುವ ಪ್ರತಿರೋಧ ಬಹಳ ಶಕ್ತಿಶಾಲಿಯಾಗಿರುತ್ತದೆ. ಕಲೆ ಸದಾ ಪ್ರತಿಪಕ್ಷದಂತೆ ಕೆಲಸ ಮಾಡುತ್ತದೆ. ‘ಕವಿಗೆ ಅರಸು ಗಿರಿಸುಗಳ ಹಂಗಿಲ್ಲ ಅವನು ಅಗ್ನಿಮುಖಿ’ ಎಂದು ಕುವೆಂಪು ಹಾಡಿದ್ದು ಇದೇ ಕಾರಣಕ್ಕೆ. ‘ಶೋಷಕರು ಬರುತ್ತಲೇ ಇರುತ್ತಾರೆ, ಅವರನ್ನು ಓಡಿಸುತ್ತಲೇ ಇರಬೇಕು. ಪ್ರತಿಭಟನೆ ಕೂಡ ನಿರಂತರ ಕ್ರಿಯೆ ಆಗಿರಬೇಕು. ಅಹಿಂಸಾತ್ಮಕ ಹೋರಾಟಗಳು ಹೆಚ್ಚು ಶಕ್ತಿಶಾಲಿ ಆಗಿರುತ್ತವೆ’ ಎಂದು ಕಾದಂಬರಿಕಾರ ರಾವಬಹಾದ್ದೂರ ಹೇಳುತ್ತಿದ್ದರು.

ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಪರಿಚಿತ ಯುವಕ ಈಗ ನಿರುದ್ಯೋಗಿಯಾಗಿದ್ದಾನೆ. ವಿಚಾರಿಸಿದಾಗ ‘ಮಾಲೀಕರು ಒದೆಯುವುದು, ಬೈಯುವುದು ಮಾಡುತ್ತಾರೆ. ಕೆಲಸಕ್ಕೆ ಹೋಗುವುದಕ್ಕೆ ಮನಸ್ಸಾಗು
ವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ. ಕೆಲಸದ ಸ್ಥಳದಲ್ಲಿ ಪ್ರೀತಿ, ನೆಮ್ಮದಿ ಇಲ್ಲದಿದ್ದರೆ ಕಾರ್ಮಿಕರು ದುಡಿಯುವ ಮನೋಭಾವವನ್ನು ಕಳೆದುಕೊಳ್ಳುತ್ತಾರೆ.

ದೇಶದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಲ್ಲಿ ಶೇ 70ರಷ್ಟು ಮಂದಿ ಅಸಂಘಟಿತ ವಲಯಕ್ಕೆ ಸೇರಿದವರಾಗಿದ್ದಾರೆ. ಹೋಟೆಲ್, ಗ್ಯಾರೇಜ್, ಸಣ್ಣ ಕೈಗಾರಿಕೆಗಳು, ವ್ಯಾಪಾರಿ ಮಳಿಗೆಗಳು, ಖಾಸಗಿ ಮತ್ತು ಸಹಕಾರಿ ಸಂಸ್ಥೆಗಳು, ಗಣಿ, ರಸ್ತೆ ನಿರ್ಮಾಣದಂತಹ ವಲಯಗಳಲ್ಲಿರುವ ಕಾರ್ಮಿಕರು ಸಂಘಟಿತರಾಗಿಲ್ಲ. ಇದು ಶೋಷಣೆ, ದಬ್ಬಾಳಿಕೆಗೆ ಪ್ರಮುಖ ಕಾರಣವಾಗಿದೆ. ವಲಸೆ ಕಾರ್ಮಿಕರ ರಕ್ಷಣೆಗೆ ಬಹಳಷ್ಟು ಕಾನೂನುಗಳಿವೆ. ಇವರೂ ಅಸಂಘಟಿತರಾಗಿರುವುದರಿಂದ ಕಾನೂನಿನ ಪಾಲನೆ ಸಮರ್ಪಕವಾಗಿ ಆಗುತ್ತಿಲ್ಲ. ಕೊರೊನಾ ಉಲ್ಬಣಿಸಿದ ಸಂದರ್ಭದಲ್ಲಿ ವಲಸೆ ಕಾರ್ಮಿಕರು ಅನುಭವಿಸಿದ ಸಂಕಟ ಅಷ್ಟಿಷ್ಟಲ್ಲ.

ಜೀತಪದ್ಧತಿಯನ್ನು ಕೇಂದ್ರ ಸರ್ಕಾರವು 1976ರಷ್ಟು ಹಿಂದೆಯೇ ನಿಷೇಧಿಸಿದೆ. ಇದನ್ನು ಒಂದು ಅಪರಾಧ ಎಂದು ಪ‍ರಿಗಣಿಸಲಾಗುತ್ತದೆ. ಆದರೂ ಗಣಿಗಾರಿಕೆ ಪ್ರದೇಶಗಳಲ್ಲಿ ಜೀತದ ದುಡಿಮೆ ಈಗಲೂ ಜೀವಂತವಾಗಿರುವುದು ಕಂಡುಬರುತ್ತದೆ. ಮಾನವ ಕಳ್ಳಸಾಗಾಣಿಕೆಯ ಮೂಲಕವೂ ಜೀತಕ್ಕೆ ದೂಡಲಾಗುತ್ತದೆ. ಹಿಂದಿನ ಎರಡು ವರ್ಷಗಳ ಅವಧಿಯಲ್ಲಿ ಬೇರೆ ಬೇರೆ ಗಣಿ ಮತ್ತು ಸಣ್ಣ ಕೈಗಾರಿಕೆಗಳಲ್ಲಿ ಬಂಧನದಲ್ಲಿದ್ದು ಕೆಲಸ ಮಾಡುತ್ತಿದ್ದ 235 ಕಾರ್ಮಿಕರನ್ನು ಮುಕ್ತಗೊಳಿಸಲಾಗಿದೆ ಎಂದು ಸರ್ಕಾರಿ ವರದಿ ಹೇಳಿದೆ.

ಹಿಂಸೆ, ಅಪಮಾನ, ಸಂಬಳ ಕಡಿತ, ದಿನವಿಡೀ ದುಡಿಮೆ, ಕಾನೂನುಗಳನ್ನು ಪಾಲಿಸದೇ ಇರುವ ನಕಾರಾತ್ಮಕ ನಡೆಗಳು ಕಾರ್ಮಿಕರ ದುಡಿಯುವ ಮನೋಭಾವವನ್ನು ಕುಗ್ಗಿಸುತ್ತವೆ. ಅವರು ಕೆಲಸದ ಬಗ್ಗೆ ಆಸಕ್ತಿಯನ್ನೇ ಕಳೆದುಕೊಳ್ಳುವಂತೆ ಮಾಡುತ್ತವೆ. ಇದರಿಂದ ಆರ್ಥಿಕ, ಸಾಮಾಜಿಕ ಪ್ರಗತಿಗೆ ಹಿನ್ನಡೆ
ಆಗುತ್ತಿದೆ ಮಾತ್ರವಲ್ಲ ಯುವಕರು ದುಡಿಮೆಯ ಹುಮ್ಮಸ್ಸು ಕಳೆದುಕೊಳ್ಳುವುದು ಅಪಾಯಕಾರಿ ಬೆಳವಣಿಗೆ ಆಗಿದೆ.

ಶೋಷಣೆಯಿಂದ ಸಮಾಜದಲ್ಲಿ ಅಸಮಾನತೆ ಸೃಷ್ಟಿಯಾಗುತ್ತದೆ. ಗಾಂಧೀಜಿ ತುಂಡು ಪಂಚೆ ಉಟ್ಟುಕೊಂಡು, ಬ್ರಿಟನ್‌ ಅರಮನೆಯಲ್ಲಿ ನಡೆದ ದುಂಡುಮೇಜಿನ ಪರಿಷತ್ತಿನಲ್ಲಿ ಭಾಗವಹಿಸಿದ್ದರು. ಮೈತುಂಬ ಎರಡೆರಡು ಬಟ್ಟೆ ಧರಿಸಿಕೊಂಡು ನಿಂತಿದ್ದ ಇಂಗ್ಲೆಂಡಿನ ದೊರೆಯು ಗಾಂಧಿಯವರನ್ನು ಕೆಣಕಲು ‘ಮಿಸ್ಟರ್ ಗಾಂಧಿ, ನೀವು ಅರೆಬೆತ್ತಲೆ ಏಕೆ?’ ಎಂದು ಪ್ರಶ್ನಿಸುತ್ತಾರೆ. ‘ದೊರೆಯೇ, ನನ್ನ ಪಾಲಿನ ಬಟ್ಟೆಯನ್ನೂ ನೀವು ಧರಿಸಿದ್ದೀರಿ’ ಎಂದು ಗಾಂಧೀಜಿ ಮಾರ್ಮಿಕವಾಗಿ ಉತ್ತರಿಸುತ್ತಾರೆ. ಅವರ ಚುಟುಕು ಉತ್ತರದಲ್ಲಿ ಬಡತನಕ್ಕೆ ಶೋಷಣೆಯೇ ಕಾರಣ ಎಂಬ ಧ್ವನಿ ಕೇಳಿಸುತ್ತದೆ. ಅದು ಗಾಂಧೀಜಿ ಪ್ರತಿಭಟನೆಯ ಧ್ವನಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT