ಈ ಹಿಂದೆ ಯುಪಿಎ ಸರ್ಕಾರದ ಅಧಿಕಾರಾವಧಿಯಲ್ಲಿ, ಕಾಯಕನಿಷ್ಠೆಗೆ ಒತ್ತು ನೀಡಿ, ದೇಶವನ್ನು ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಉನ್ನತ ಸ್ಥಾನಕ್ಕೆ ಕೊಂಡೊಯ್ದಿದ್ದರು ಅಂದಿನ ಪ್ರಧಾನಿ ಡಾ. ಮನಮೋಹನ ಸಿಂಗ್. ಆದರೆ ಅವರನ್ನು ‘ಮೌನಿ ಸಿಂಗ್’ ಎಂದು ಬಿಜೆಪಿ ಜರಿಯುತ್ತಿತ್ತು. ಈಗ ದೇಶದಲ್ಲಿ ಸೃಷ್ಟಿಯಾಗಿರುವ ಎರಡು ಪ್ರಮುಖ ವಿವಾದಗಳ ಬಗ್ಗೆ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸುವ ಮೂಲಕ ತಮ್ಮ ಉತ್ತರದಾಯಿತ್ವವನ್ನು ಪ್ರದರ್ಶಿಸದೆ ಮೌನಕ್ಕೆ ಮೊರೆ ಹೋಗಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಮೌನಿ ಮೋದಿ’ ಎನ್ನಬಾರದೇಕೆ?
ಹಿಂದಿನ ತಿಂಗಳು ಮುಕ್ತಾಯಗೊಂಡ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಹಾಗೂ ಹಾಲಿ ಸಂಸತ್ ಅಧಿವೇಶನದಲ್ಲಿ ಮೋದಿ ಅವರು ಪ್ರತಿಪಕ್ಷಗಳ ತೀಕ್ಷ್ಣ ಹಾಗೂ ನೇರವಾದ ಪ್ರತಿಯೊಂದು ಪ್ರಶ್ನೆಗೂ ತಕ್ಕ ತಿರುಗೇಟು ನೀಡುತ್ತಾರೆ ಎಂಬ ವದಂತಿಗಳು ಸಂಸತ್‍ನ ಕಾರಿಡಾರ್‌ನಲ್ಲಿ ಹಬ್ಬಿದ್ದವು. ಗೌತಮ್ ಅದಾನಿ ಅವರ ಉದ್ಯಮಗಳ ವಿರುದ್ಧ ಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ಮೋದಿ ಅವರ ಪಾತ್ರ ಮತ್ತು 2002ರ ಗುಜರಾತ್ ಗಲಭೆ ಕುರಿತ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ವಿರೋಧ ಪಕ್ಷಗಳು ಸ್ಪಷ್ಟನೆ ಬಯಸಿದ್ದವು. ಸಂಸತ್ತಿನಲ್ಲಿ ಸತ್ಯ ಹೊರಬರುವುದನ್ನು ತಪ್ಪಿಸುವುದೇ ಗುರಿಯಾಗಿಸಿಕೊಂಡಿರುವ ಸರ್ಕಾರವು ಇದರ ಬಗ್ಗೆ ಚಕಾರವೆತ್ತಲಿಲ್ಲ. ಇಂತಹ ವಿವಾದಾತ್ಮಕ ವಿಷಯಗಳ ಪರಿಶೀಲನೆಗೆ ಜಂಟಿ ಸದನ ಸಮಿತಿ ರಚಿಸುವುದು ಪಾಲಿಸಿಕೊಂಡು ಬಂದಿರುವ ರೂಢಿ. ಆ ಬೇಡಿಕೆಗೂ ಸರ್ಕಾರ ಓಗೊಡಲಿಲ್ಲ.
ಮೋದಿ ಅವರು ಹೋದಲ್ಲಿ ಬಂದಲ್ಲಿ ‘ಭಾರತವು ಪ್ರಜಾಪ್ರಭುತ್ವದ ತಾಯಿ’ ಎಂದು ಪುನರುಚ್ಚಾರ ಮಾಡುತ್ತಿರುತ್ತಾರೆ. ಆದರೆ, 2002ರ ಗುಜರಾತ್ ಕೋಮುಗಲಭೆ ಬಗ್ಗೆ ಸಾಕ್ಷ್ಯಚಿತ್ರ ತಯಾರಿಸಿದ ಒಂದೇ ಕಾರಣಕ್ಕಾಗಿ, ‘ಬಿಬಿಸಿ’ಯಂತಹ ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆಯ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಮೋದಿ ಅವರು ಅದಾನಿ ಸಮೂಹದ ಉದ್ಯಮಗಳ ಅವ್ಯವಹಾರದ ಬಗ್ಗೆ ತನಿಖೆಗೆ ಮುಂದಾಗದೆ, ಮೊಂಡುತನ ಪ್ರದರ್ಶಿಸುತ್ತಿದ್ದಾರೆ. ಸಂಸತ್‍ನಲ್ಲಿ ಈ ಎರಡು ಪ್ರಮುಖ ವಿಷಯಗಳ ಕುರಿತು ದಿವ್ಯ ಜಾಣತನದ ಮೌನದೊಂದಿಗೆ, ಅಪ್ರಸ್ತುತ ವಿಷಯಗಳನ್ನು ಎತ್ತುವುದರ ಮೂಲಕ ಪಲಾಯನವಾದ ಅನುಸರಿಸುತ್ತಿದ್ದಾರೆ. ಇದು ಪ್ರಜಾ
ಪ್ರಭುತ್ವಕ್ಕೆ ಮಾಡಿದ ಅವಮಾನವಲ್ಲದೇ ಮತ್ತೇನು?
ಭಾರತದ ಅಭಿವೃದ್ಧಿಗೆ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಕೊಡುಗೆಯನ್ನು ರಾಹುಲ್ ಗಾಂಧಿ ಅವರು ಬರೀ ಪ್ರಾಸಂಗಿಕವಾಗಿ ಉಲ್ಲೇಖಿಸಿದಾಗ, ಮೋದಿ ಅವರು ಈ ಅವಕಾಶದ ದುರ್ಬಳಕೆ ಮಾಡಿಕೊಂಡು, ಚರ್ಚೆಗೆ ಸಂಬಂಧವೇ ಇಲ್ಲದ ಪ್ರಶ್ನೆಯನ್ನು ಹಾಕುವ ಮೂಲಕ ರಾಹುಲ್ ಅವರನ್ನು ಅಪಹಾಸ್ಯ ಮಾಡಲು ಹೋಗಿ ತಮ್ಮ ಮೌಲ್ಯವನ್ನೇ ಕಳೆದುಕೊಂಡರು ಅಲ್ಲವೇ?
ನೆಹರೂ ಅವರ ಬಗ್ಗೆ ಮೋದಿ ಅವರ ತಿಳಿವಳಿಕೆಗೂ, ಅವರದೇ ಪಕ್ಷದ ರಾಜಕೀಯ ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಲುವಿಗೂ ಅಜಗಜಾಂತರ ಇದೆ. ವಾಜಪೇಯಿ ಅವರು ಸಂಸತ್ತಿನಲ್ಲಿ ಒಮ್ಮೆ ನೆಹರೂ ಅವರ ಬಗ್ಗೆ ಮಾತನಾಡುತ್ತಾ, ‘ಆ ರೋಮಾಂಚಕ ವ್ಯಕ್ತಿತ್ವ, ವಿರೋಧ ಪಕ್ಷಗಳನ್ನು ಜೊತೆಯಲ್ಲಿ ಕರೆದೊಯ್ಯುವ ಅವರ ಮನೋಭಾವ ಮತ್ತು ಸಜ್ಜನಿಕೆ, ಭಿನ್ನಾಭಿಪ್ರಾಯಗಳ ನಡುವೆಯೂ ಅವರ ಸಮಗ್ರತೆ, ದೇಶಪ್ರೇಮವನ್ನು ಗೌರವಿಸದೇ ಇರಲು ಕಾರಣಗಳೇ ಇಲ್ಲ’ ಎಂದು ಹೇಳಿದ್ದರು.
ಸಂಸತ್ತಿನ ಹೊರಗೆ ಅವರ ಸಂಪುಟ ಸಹೋದ್ಯೋಗಿಗಳು ಹಾಗೂ ಬಿಜೆಪಿ ವಕ್ತಾರರು ಮೋದಿ ಪರವಾಗಿ ಭಾಜಾಭಜಂತ್ರಿ ಬಾರಿಸುತ್ತಿದ್ದಾರೆ.
‘ಮೋದಿ ಎಂದರೆ ಭಾರತ, ಭಾರತ ಎಂದರೆ ಮೋದಿ’ ಎನ್ನುವ ಅವರ ವಿಚಾರರಹಿತ ನಂಬಿಕೆಯನ್ನು ಮೋದಿ ಅವರನ್ನು ಭಾರತದೊಂದಿಗೆ ಸಮೀಕರಿಸುವ ಮೂಲಕ ಭಾವನಾತ್ಮಕಗೊಳಿಸುತ್ತಲೇ ಬಂದಿದ್ದಾರೆ. ತಮ್ಮ ವಿರುದ್ಧದ ಯಾವುದೇ ಆರೋಪಗಳನ್ನು ತಳ್ಳಿಹಾಕುವುದು ಅಥವಾ ನಿರ್ಲಕ್ಷಿಸುವುದು ಮೋದಿ ಅವರಿಗೆ ಹೊಸದೇನಲ್ಲ.
ಸಂಸತ್ ಎಂದರೆ, ಮೋದಿ ಅವರ ಮಾತಿಗೆ ಚಪ್ಪಾಳೆ ಹೊಡೆದು, ಕೇಕೆ ಹಾಕುವ 300ಕ್ಕೂ ಹೆಚ್ಚು ಸದಸ್ಯರಿರುವ ಬರೀ ಆಡಳಿತಾರೂಢ ಬಿಜೆಪಿ ಎಂದರ್ಥವಲ್ಲ. ಬದಲಿಗೆ, ಸಂಸತ್ ಎಂದರೆ ಅದನ್ನು ಒಂದು ಸಂಸ್ಥೆಯಾಗಿ ಗ್ರಹಿಸುವುದರ ಜೊತೆಗೆ, ಸಂಸತ್ತಿನೊಳಗೆ ‘ಅಲ್ಪಸಂಖ್ಯಾತರ ಮೇಲೆ ಬಹುಸಂಖ್ಯಾತರ ದಬ್ಬಾಳಿಕೆ ಅಲ್ಲ’ ಎಂಬ ಸಾಂವಿಧಾನಿಕ ತತ್ವವನ್ನು ತಮ್ಮ ನಡವಳಿಕೆಯ ಮೂಲಕ ಆಡಳಿತಾರೂಢ ಪಕ್ಷದ ಸದಸ್ಯರು ತೋರಿಸಬೇಕಿದೆ.
ಚರ್ಚೆ, ಸಂವಾದಗಳು ಯಾವುದೇ ಒಂದು ಮುಕ್ತ ಸರ್ಕಾರದ ಹೆಗ್ಗುರುತಾಗಿವೆ. ಆದರೆ, ವಾಸ್ತವವಾಗಿ ಇಂದಿನ ಸಂಸತ್‍ಗೆ ಸರ್ಕಾರವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಹೇಳಿಕೇಳಿ, ಒಬ್ಬ ವರ್ಚಸ್ವಿ ನಾಯಕನ ಕೈಯಲ್ಲಿ ಅಧಿಕಾರ ಕೇಂದ್ರೀಕರಿಸುವುದು, ಆ ಅಧಿಕಾರವನ್ನು ಆತ ತನ್ನ ಇಚ್ಛೆಯಂತೆ ಬಳಸಿಕೊಳ್ಳುವುದನ್ನು ತಡೆಯಲಾಗದು. ಇದನ್ನೇ ತಪ್ಪಾಗಿ ಅರ್ಥೈಸಿ, ‘ನಿರ್ಣಾಯಕ ಮತ್ತು ಅನಿವಾರ್ಯ ನಾಯಕತ್ವ’ಎಂದು ನೋಡಲಾಗುತ್ತಿದೆ.
ಒಬ್ಬ ವ್ಯಕ್ತಿಯ ಕೈಯಲ್ಲಿ ಹೆಚ್ಚು ಅಧಿಕಾರ ಸಂಗ್ರಹವಾದಷ್ಟೂ ಆತ ತನ್ನದೇ ಆದ ಅನಿವಾರ್ಯಗಳ ಮೇಲೆ ಆಡಳಿತ ನಡೆಸುತ್ತಾನೆ. ನಾವು ಈಗ ಭಾರತದಲ್ಲಿ ನೋಡುತ್ತಿರುವ ವ್ಯಕ್ತಿಪೂಜೆಯು ಅಂತಹ ಪ್ರಶ್ನಾತೀತ ಅಧಿಕಾರ ಕೇಂದ್ರೀಕರಣದ ಒಂದು ಭಾಗವೇ ಆಗಿದೆ.
‘ಮೌನವನ್ನು ಪದೇ ಪದೇ ಎಲ್ಲ ವಿಷಯಗಳಲ್ಲೂ ಪುನರಾವರ್ತಿಸಲು ಸಾಧ್ಯವಿಲ್ಲ’ ಎನ್ನುವ ಅಭಿಮತವಿದೆ. ಮೋದಿ ಅವರು ಮಾತ್ರ ಈ ಮಾತಿಗೆ ಹೊರತು!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.