ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಸ್ವಾತಂತ್ರ್ಯ ಮತ್ತು ಮಾನವೀಯ ಸ್ಪರ್ಶ

ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯಕ್ಕೆ ‘ಇವ ನಮ್ಮವ’ ಎಂಬ ಕಾರುಣ್ಯದ ಭಾವ ಬೇಕಿದೆ. ಆ ಭಾವದಿಂದಲೇ ನಾವು ಸಮಾಜವನ್ನು ಕಟ್ಟಬೇಕಿದೆ
Published 1 ಜನವರಿ 2024, 0:13 IST
Last Updated 1 ಜನವರಿ 2024, 0:13 IST
ಅಕ್ಷರ ಗಾತ್ರ

ನೋಡಲು ತುಂಬಾ ಸಭ್ಯರಂತಿದ್ದರು.‌ ದುಬಾರಿಯಾದ ಆಧುನಿಕ ಉಡುಗೆ. ಬಸ್ಸಿನೊಳಗೆ ಕೂತು ಜೋರಾದ ಸದ್ದಿನೊಂದಿಗೆ ರೀಲ್ಸ್ ನೋಡುತ್ತಿದ್ದರು.‌ ಆ ಕಿರಕಿರ ಸದ್ದಿಗೆ ಬಿ.ಪಿ. ಏರಿಳಿಯುವುದೊಂದು ಬಾಕಿ ಇತ್ತು. ಜೋರು ಮಾಡಿ ಅದನ್ನು ಬಂದ್ ಮಾಡಿಸುವಷ್ಟರಲ್ಲಿ ಸಾಕುಸಾಕಾಗಿ ಹೋಯಿತು. ಮೊಬೈಲ್ ಫೋನ್‌ ಅವರದೇ ಇರಬಹುದು. ಯಾವುದನ್ನು ನೋಡಬೇಕು, ಕೇಳಬೇಕು ಎಂಬುದನ್ನು ತೀರ್ಮಾನಿಸುವುದು ಅವರ ಸ್ವಾತಂತ್ರ್ಯವೇ ಆಗಿರಬಹುದು. ಆದರೆ, ಬೇರೆಯವರಿಗೆ ಕಿರಿಕಿರಿ ಉಂಟು
ಮಾಡುವಂತಹ ‘ಸ್ವಾತಂತ್ರ್ಯ’ಕ್ಕೆ ಲಗಾಮು ಬೇಡವೇ?

ರೈಲಿನಲ್ಲಿ ಗದ್ದಲ ಉಂಟುಮಾಡುವುದು, ರಸ್ತೆಯಲ್ಲಿ ಎರ್‍ರಾಬಿರ್‍ರಿ ವಾಹನ ಓಡಿಸುವುದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವುದು, ಕಂಡಲ್ಲಿ ಉಗುಳುವುದು, ಕಸವನ್ನು ಎಲ್ಲೆಂದರಲ್ಲಿ ಎಸೆಯುವುದು, ನೀರು ಪೋಲಾಗುತ್ತಿದ್ದರೂ ನೋಡಿಯೂ ನೋಡದಂತೆ ಸುಮ್ಮನೆ ತಮ್ಮ ಪಾಡಿಗೆ ತಾವು ನಡೆದು ಹೋಗುವುದು, ವಿನಾಕಾರಣ ಗಲಾಟೆ ಎಬ್ಬಿಸುವುದು, ಅಪಾಯದಲ್ಲಿ ಇದ್ದವರನ್ನು ಕೈ ಕಟ್ಟಿಕೊಂಡು ಸುಮ್ಮನೆ ನಿಂತು ನೋಡುವುದು... ಇಂತಹವುಗಳನ್ನು ಪಟ್ಟಿ ಮಾಡುತ್ತಾ ಹೋದರೆ ಇಡೀ ಬದುಕು ಅಪಸವ್ಯದಂತೆ ತೋರುವುದಿಲ್ಲವೇ?

‘ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ನಾವು ನಮ್ಮನ್ನು ಆಳಿಕೊಳ್ಳಬಹುದು. ನಮ್ಮಿಷ್ಟದಂತೆ ಇರಬಹುದು. ರಸ್ತೆಯಲ್ಲಿ ಕೈ ಬೀಸಿಕೊಂಡು ಓಡಾಡಬಹುದು. ಆದರೆ ಹಾಗೆ ಬೀಸಿದ ಕೈ ನಮ್ಮದೇ ಹಾದಿಯಲ್ಲಿ ಓಡಾಡುತ್ತಿರುವವರ ಮೈ ಸೋಕದಂತೆ ಎಚ್ಚರದಿಂದ ನಡೆಯಬೇಕಾದುದು ನಮ್ಮ ಜವಾಬ್ದಾರಿ. ಬೇರೆಯವರಿಗೆ ತೊಂದರೆ ಆಗದಂತೆ ಎಚ್ಚರಿಕೆಯಿಂದ ವರ್ತಿಸುವುದೂ ಸ್ವಾತಂತ್ರ್ಯದ ಒಂದು ಭಾಗವೇ’ ಎಂದು ಸರ್ವೇಪಲ್ಲಿ ರಾಧಾಕೃಷ್ಣನ್ ಹೇಳುತ್ತಿದ್ದರು.

ಬದುಕಿನಲ್ಲಿ ದೊಡ್ಡ ದೊಡ್ಡ ಕೆಲಸಗಳನ್ನು ಮಾಡಲು ನಮ್ಮಿಂದ ಸಾಧ್ಯವಾಗದೇ ಇರಬಹುದು. ಆದರೆ ನಾವು ಮಾಡುವ ಕೆಲಸವನ್ನೇ ನಮ್ಮ ಮಿತಿಯಲ್ಲಿ ತುಂಬಾ ಆಸ್ಥೆಯಿಂದ, ಪ್ರೀತಿಯಿಂದ ಮಾಡಬೇಕು. ಕನಿಷ್ಠ ನಮ್ಮಿಂದ ಏನೂ ಆಗದೇ ಹೋದಾಗ ಸುಮ್ಮನೆ ಇರುವುದು ಕೂಡ ನಾವು ಬೇರೆಯವರಿಗೆ ಮಾಡುವ ಉಪಕಾರವಾದೀತು. ಗಾಂಧೀಜಿ ‘ರಸ್ತೆ ಸ್ವಚ್ಛ ಮಾಡುವುದು ನನ್ನ ಕೆಲಸವಾಗಿದ್ದರೆ, ನಾನು ಗುಡಿಸುವ ರಸ್ತೆ ಜಗತ್ತಿನ ಸ್ವಚ್ಛ ರಸ್ತೆಯಾಗಿರುತ್ತಿತ್ತು’ ಎಂದಿದ್ದಾರೆ. ನಾವು ನಮ್ಮ ಸ್ವಾತಂತ್ರ್ಯದ ಎಲ್ಲೆಯಲ್ಲೇ ಮಾಡುವ ಕೆಲಸಕ್ಕೆ, ಬದುಕುವ ಬದುಕಿಗೆ ಒಂದು ಮಾನವೀಯತೆಯ ಸ್ಪರ್ಶ ಇರಬೇಕು. 

ಹೇಗಾದರೂ ಸರಿ, ನಾನು ಮಾತ್ರ ಚೆನ್ನಾಗಿರಬೇಕು ಅನ್ನುವ ಮನೋಭಾವವೇ ನಮ್ಮ ಈಗಿನ ಸ್ವಾತಂತ್ರ್ಯದ ವ್ಯಾಖ್ಯಾನದಂತಿದೆ.‌ ರಸ್ತೆಯಲ್ಲಿ ಅಪಘಾತವಾಗಿ ಬಿದ್ದು ಒದ್ದಾಡುತ್ತಿರುವ ವ್ಯಕ್ತಿಯನ್ನು ರಕ್ಷಿಸಲು ಏನೂ ಮಾಡದೆ, ನನಗ್ಯಾಕೆ ಉಸಾಬರಿ ಎಂದು ಸುಮ್ಮನೆ ನಿಂತು ನೋಡುವುದು ಅನಾಗರಿಕತೆಯಲ್ಲದೆ ಬೇರೇನೂ ಅಲ್ಲ. ಅವನ ಪಾಡಿಗೆ ಅವನು ನಿಂತು ನೋಡುವುದು ಅವನ ಸ್ವಾತಂತ್ರ್ಯವೇ ಆಗಿದ್ದರೂ ಅದೆಂತಹ ಸ್ವಾತಂತ್ರ್ಯ? ಒಬ್ಬರು ಇನ್ನೊಬ್ಬರ ನೋವಿಗೆ ಮಿಡಿಯುವುದು ಹೃದಯವಂತಿಕೆ. ನಾವು ಅನುಭವಿಸುವ ಸ್ವಾತಂತ್ರ್ಯಕ್ಕೆ ಇಂತಹ ಹೃದಯವಂತಿಕೆ ಇರಬೇಕು. ತೊಡುವ ಬಟ್ಟೆ ಮಾತ್ರ ನಾಗರಿಕತೆಯ ಕಥೆ ಹೇಳಬಾರದು. ನಾವು ಚಲಾಯಿಸುವ ಸ್ವಾತಂತ್ರ್ಯಕ್ಕೆ, ಮಾಡುವ ಕೆಲಸಕ್ಕೆ ಬರೀ ಅದರ ಕುರಿತಾದ ತಿಳಿವಳಿಕೆ ಇದ್ದರೆ ಸಾಲದು, ಹೃದಯ ಇರಬೇಕು.‌ ಅಂತಃಕರಣದ ಲೇಪನ,  ಮಾನವೀಯ ನೆಲೆ ಇರಬೇಕು. ನಾವು ನಮ್ಮ ಸುತ್ತಲಿನವರನ್ನು ಬರೀ ಕಣ್ಣುಗಳಿಂದ ನೋಡಬಾರದು, ಹೃದಯದಿಂದ ನೋಡಬೇಕು. 

ಮನೋವೈದ್ಯ ಅಶೋಕ ಪೈ ಅವರು ಹೇಳಿದ ಒಂದು ಸಂಶೋಧನಾ ಸತ್ಯವನ್ನು ದೇವನೂರ ಮಹಾದೇವ ತಮ್ಮ ‘ಎದೆಗೆ ಬಿದ್ದ ಅಕ್ಷರ’ ಪುಸ್ತಕದಲ್ಲಿ ಹೀಗೆ ಬರೆದುಕೊಂಡಿದ್ದಾರೆ: ಅಕ್ಕಪಕ್ಕದ ಎರಡು ಕೊಠಡಿಗಳಲ್ಲಿ ಪರಸ್ಪರ ಗೊತ್ತಿಲ್ಲದ ಒಂದಷ್ಟು ಜನರನ್ನು ಕೂರಿಸಲಾಗಿರುತ್ತದೆ. ಒಂದು ಕೊಠಡಿಯಲ್ಲಿ ಟಿ.ವಿಯಲ್ಲಿ ಕೊಲೆ ದೃಶ್ಯವನ್ನು ಪ್ರಸಾರ ಮಾಡಲಾಗುತ್ತದೆ. ಅದನ್ನು ನೋಡುತ್ತಿರುವವರ ಮನಸ್ಸಿನಲ್ಲಿ ಕೋಪ, ತಿರಸ್ಕಾರದ ಭಾವಗಳು ಮೂಡುತ್ತವೆ.‌ ವಿಚಿತ್ರವೆಂದರೆ, ಪಕ್ಕದ ಕೊಠಡಿಯಲ್ಲಿ ಇದರ ಅರಿವಿಲ್ಲದೆ ತಮ್ಮ ಪಾಡಿಗೆ ತಾವಿರುವವರ ಮನಸ್ಸಿಗೂ ಈ ಭಾವಗಳು ತಲುಪುತ್ತವೆ. ಈ ಕೊಠಡಿಯಲ್ಲಿ ಟಿ.ವಿಯೊಳಗೆ ಹಾಡು-ನೃತ್ಯಗಳನ್ನು ಪ್ರಸಾರ ಮಾಡಿದಾಗ ಇಲ್ಲಿರುವವರ ಮನಸ್ಸಿನಲ್ಲಿ ಹುಟ್ಟುವ ಸಂತಸದ ಭಾವಗಳು ಪಕ್ಕದ ಕೊಠಡಿಯಲ್ಲಿ ಇರುವವರನ್ನೂ ತಲುಪುತ್ತವೆ ಎಂಬುದನ್ನು ಸಂಶೋಧನೆ ಹೇಳುತ್ತದೆ. ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ ಎಂಬುದನ್ನು ಇದು ತಿಳಿಸುತ್ತದೆ. ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯಕ್ಕೆ ‘ಇವ ನಮ್ಮವ’ ಎಂಬ ಕಾರುಣ್ಯದ ಭಾವ ಬೇಕಿದೆ. ಆ ಭಾವದಿಂದಲೇ ನಾವು ಸಮಾಜವನ್ನು ಕಟ್ಟಬೇಕಿದೆ. 

ನಾವು ಒಂದಾಗಿ ಬಾಳಲು ಕಾರಣವಾಗಬೇಕಿದ್ದ ನಮ್ಮ ಸ್ವಾತಂತ್ರ್ಯ ಈಗ ಅದರ ದುರ್ಬಳಕೆಯಿಂದ ಮನುಷ್ಯ, ಮನುಷ್ಯರನ್ನು ದೂರ ಮಾಡುತ್ತಿದೆ. ತಪ್ಪು ಇರುವುದು ಸ್ವಾತಂತ್ರ್ಯದಲ್ಲಿ ಅಲ್ಲ. ನಾವು ಅದನ್ನು ಸ್ವೇಚ್ಛೆಯಾಗಿ ಬಳಸುತ್ತಿರುವುದರಲ್ಲಿ. ಜಾತಿ, ಧರ್ಮ, ಭಾಷೆ, ಲಿಂಗ, ವರ್ಗದಂತಹವುಗಳಿಗೆ ನೀಡಲಾದ ದತ್ತಕ ಸ್ವಾತಂತ್ರ್ಯವೇ ಇಂದು ಒಬ್ಬೊಬ್ಬರನ್ನು ಒಂದೊಂದು ದ್ವೀಪವನ್ನಾಗಿ ಮಾಡಿಹಾಕಿದೆ. ನಾವು ಸ್ವಾತಂತ್ರ್ಯವನ್ನು ಅರ್ಥೈಸಿಕೊಳ್ಳಲು ಎಡವಿದ್ದೇವೆ.

ಒಂದು ಅಗಳನ್ನು ಕಂಡರೂ ತನ್ನ ಬಳಗವನ್ನು ಕೂಗಿ ಕರೆಯುವ ಕಾಗೆಯ ಅಂತಃಕರಣ ಮನುಷ್ಯನಿಗೆ ಇಲ್ಲವಾಗಿದೆ. ಸರಿಯಾದ ಶಿಕ್ಷಣ ಮಾತ್ರ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ಸರಿದಾರಿಯಲ್ಲಿ ನಡೆಸಬಲ್ಲದು ಎಂದ ಅಂಬೇಡ್ಕರ್ ಅವರ ಮಾತು ಈಗ ಹೆಚ್ಚು ನೆನಪಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT