ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಕೊಡ ನೀರಿನ ಹಿಂದಿದೆ ಕಂಬನಿಯ ಕೊಡುಗೆ

Published 3 ಡಿಸೆಂಬರ್ 2023, 23:42 IST
Last Updated 3 ಡಿಸೆಂಬರ್ 2023, 23:42 IST
ಅಕ್ಷರ ಗಾತ್ರ

ರಾಜ್ಯದ ಇತಿಹಾಸದಲ್ಲಿ ಪ್ರತಿ ಮನೆಗೂ ಕುಡಿಯುವ ನೀರು ಸಿಗಬೇಕು ಎಂಬ ಧ್ಯೇಯವನ್ನು ಕಾರ್ಯಗತಗೊಳಿಸಲು ಬಹುಶಃ ನಜೀರ್‌ ಸಾಬ್‌ ಅವರಂತೆ ಶ್ರಮಿಸಿದ ಇನ್ನೊಬ್ಬ ರಾಜಕಾರಣಿ ವಿರಳ ಎನ್ನಬಹುದು. ಗ್ರಾಮ ಪಂಚಾಯಿತಿಗಳ ಮೂಲಕ ಮನೆಮನೆಗೂ ಕುಡಿಯುವ ನೀರು ತಲುಪಲೇಬೇಕೆಂಬ ಗುರಿ ಇರಿಸಿಕೊಂಡು, ಕೊಳವೆಬಾವಿಗಳನ್ನು ಕೊರೆಸಿ ನೀರು ಪೂರೈಸಿದ ಹೆಗ್ಗಳಿಕೆ ಅವರದು. ಅದಕ್ಕಾಗಿಯೇ ಅವರನ್ನು ಜನ ‘ನೀರುಸಾಬ್‌’ ಎಂದು ಕರೆದರು.

ಈಗಲೂ ರಾಜ್ಯದ ಐದೂವರೆ ಸಾವಿರಕ್ಕಿಂತ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲೂ ಕುಡಿಯುವ ನೀರು ಪೂರೈಕೆಯೇ ಪ್ರಮುಖ ಹೊಣೆಯಾಗಿದೆ. ಬಹುತೇಕ ಪಂಚಾಯಿತಿಗಳ ಆದಾಯವೂ ನೀರೆತ್ತುವ ಪಂಪುಗಳ ವಿದ್ಯುತ್‌ ಬಳಕೆಗಾಗಿಯೇ ವೆಚ್ಚವಾಗುತ್ತಿದೆ. ಅನೇಕ ಪಂಚಾಯಿತಿಗಳಿಗೆ ಸರ್ಕಾರ ಕೊಡುವ ಅನುದಾನದಿಂದಲೇ ವಿದ್ಯುತ್‌ ಶುಲ್ಕವನ್ನು ಮುರಿದುಕೊಳ್ಳುತ್ತಿರುವುದರಿಂದ, ಅಲ್ಲಿ ಅಭಿವೃದ್ಧಿ ಎಂಬುದು ಶೂನ್ಯ ಸ್ಥಾನದಲ್ಲಿದೆ. ಸರ್ಕಾರಕ್ಕೆ ನಿಜವಾಗಿ ಜನಪರ ಕಾಳಜಿಯಿರುವುದು ಹೌದಾದರೆ, ಜನರಿಗೆ ನೀರುಣಿಸಲು ಬಳಸುವ ವಿದ್ಯುತ್ತಿನ ಶುಲ್ಕವನ್ನು ಮನ್ನಾ ಮಾಡಬಹುದಿತ್ತು.

ಇನ್ನೊಂದು ವಿಷಾದದ ಸಂಗತಿಯೆಂದರೆ, ಹನಿ ನೀರೂ ಅಮೃತಸಮಾನ, ಚಿನ್ನಕ್ಕಿಂತ ಮೌಲಿಕ ಎಂಬುದನ್ನು ಬಳಕೆದಾರರು ತಿಳಿಯದೇ ಹೋಗಿರುವುದು. ಮನೆಯೊಂದರ ಮುಂದಿರುವ ಸಾರ್ವಜನಿಕ ನಲ್ಲಿಯಲ್ಲಿ ನೀರು ಸೋರುತ್ತಿದ್ದರೆ ಅದನ್ನು ನಿಲ್ಲಿಸಲು ಕಾಳಜಿ ವಹಿಸದ ಮನೆಯವರಿದ್ದಾರೆ. ‘ಯಾಕೆ ಹೀಗೆ ನೀರು ಸೋರಲು ಬಿಟ್ಟಿದ್ದೀರಿ? ನಲ್ಲಿಯ ಬಿರಡೆ ಭದ್ರವಾಗಿ ಹಾಕಿ’ ಎಂದು ಹೇಳಿದರೆ ತಿರುಗಿಬೀಳುತ್ತಾರೆ. ‘ಅದೇನೂ ಧರ್ಮದ ನೀರಲ್ಲ, ನಾವು ಅದಕ್ಕೆ ಹಣ ಕೊಡುತ್ತೇವೆ’ ಎಂದು ದಬಾಯಿಸುತ್ತಾರೆ.

ನಿಜ, ನೀರಿಗಾಗಿ ಎಲ್ಲ ಮನೆಗಳವರೂ ಶುಲ್ಕ ಕೊಡುತ್ತಾರೆ. ಆದರೆ, ಶುಲ್ಕ ಅತ್ಯಲ್ಪ. ಲೀಟರ್‌ಗೆ ಹತ್ತೋ ಹದಿನೈದೋ ರೂಪಾಯಿ ಕೊಟ್ಟು ಪೇಟೆಯ ಬಾಟಲಿ ನೀರು ಕೊಂಡು ಕುಡಿಯುವವರು ಇಲ್ಲಿ ಇಷ್ಟು ಕಡಿಮೆ ಮೊತ್ತಕ್ಕೆ ಸಿಗುವ ನೀರಿನ ಪ್ರಮಾಣ ತಿಳಿದರೆ ಅಚ್ಚರಿಪಡಬಹುದು.

ಕಡಿಮೆ ಬೆಲೆಗೆ ಸಿಗುವ ನೀರಾದ್ದರಿಂದ ಸಾರ್ವಜನಿಕರಿಗೆ ಅದರ ಮಹತ್ವ ತಿಳಿಯದೆ ಹೋಗಿರಲೂಬಹುದು. ಮನೆಗಳಿಗೆ ನೀರು ಸರಬರಾಜು ಮಾಡಲು ರಸ್ತೆಯಲ್ಲಿ ಅಡ್ಡವಾಗಿ ತೋಡಿ ಕೊಳವೆಗಳನ್ನು ಅಳವಡಿಸುವುದುಂಟು. ಕೆಲವೊಮ್ಮೆ ಭಾರವಾದ ವಾಹನಗಳು ಅಲ್ಲಿ ಸಂಚರಿಸಿದಾಗ ಕೊಳವೆ ಒಡೆದು ನೀರಿನ ಪ್ರವಾಹ ಹರಿಯಬಹುದು. ಆಗಲೂ ಅದನ್ನು ತಡೆಯಲು ಯಾರೂ ಮುಂದಾಗುವುದಿಲ್ಲ. ‘ಅದನ್ನು ಸರಿಪಡಿಸುವುದು ನೀರಿನ ನಿರ್ವಾಹಕರ ಜವಾಬ್ದಾರಿ, ನಮ್ಮದಲ್ಲ’ ಎನ್ನುತ್ತಾರೆ. ಆ ನೀರು ಬೇರೆಯವರ ಮನೆಗಳಿಗೆ ಹರಿಯುತ್ತಿದ್ದರೆ, ತಮ್ಮ ಮನೆಗಲ್ಲವಲ್ಲ ಎಂದುಕೊಂಡು ನಿರ್ಲಿಪ್ತರಾಗುತ್ತಾರೆ. ಸಾವಿರಾರು ಲೀಟರ್‌ ನೀರು ವ್ಯರ್ಥವಾದಾಗಲೂ ಜನ ಅದಕ್ಕಾಗಿ ಮರುಗುವುದಿಲ್ಲ.

ಹೆಚ್ಚಿನ ಗ್ರಾಮ ಪಂಚಾಯಿತಿಗಳಲ್ಲಿ ನೀರಿನ ನಿರ್ವಹಣೆ ನೋಡಿಕೊಳ್ಳುವುದಕ್ಕೆ ಒಬ್ಬನೇ ನಿರ್ವಾಹಕ ಇರುತ್ತಾನೆ. ನೂರಾರು ಮನೆಗಳಿಗೆ ಸುಗಮವಾಗಿ ನೀರು ತಲುಪುವಂತೆ ನೋಡಿಕೊಳ್ಳುವುದು ಅವನ ಜವಾಬ್ದಾರಿ. ಬೇಸಿಗೆಯ ದಿನಗಳಲ್ಲಿ ವಿದ್ಯುತ್‌ ಕಡಿತವಿದ್ದರೆ ಎಲ್ಲ ಮನೆಗಳಿಗೂ ನೀರು ತಲುಪಿಸಲು ಅವನಿಗೆ ಸಾಧ್ಯವಾಗದೇ ಹೋದಾಗ ಜನ ಕೆರಳಿ ಅವನ ಮೇಲೆ ಏರಿ ಹೋಗುತ್ತಾರೆ. ಬೆಳಕು ಹರಿಯುವ ಮುನ್ನ ಕೊಳವೆಬಾವಿಯ ಬಳಿಗೆ ಬಂದು, ಪಂಪು ಚಾಲೂ ಮಾಡಿ, ಕೊಳವೆಗಳು ಕೆಟ್ಟುಹೋದಾಗ ತನ್ನದೇ ವೆಚ್ಚದಲ್ಲಿ ಸರಿಪಡಿಸುವ ಈ ಶ್ರಮಜೀವಿಗೆ ಕತ್ತಲಲ್ಲಿ ಹಾವು ಕಡಿದರೂ ಪಂಚಾಯಿತಿ ಯಾವುದೇ ಸುರಕ್ಷೆ ಒದಗಿಸುವುದಿಲ್ಲ. ಅವನಿಗೆ ಸೇವಾ ಬಡ್ತಿಯಿಲ್ಲ. ತಿಂಗಳಿಗೆ ನಿಗದಿತ ಕನಿಷ್ಠ ಸಂಬಳ ಬಿಟ್ಟರೆ ಬೇರೆ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ.

ಪಂಚಾಯಿತಿಯ ನೀರನ್ನು ಕುಡಿಯಲು ಮಾತ್ರ ಉಪಯೋಗಿಸಬೇಕು ಎಂಬ ಕರಾರಿಗೆ ನೀರಿನ ಬಳಕೆದಾರರು ಒಪ್ಪಿಕೊಂಡು ಸಹಿ ಮಾಡುತ್ತಾರೆ. ಆದರೆ ರಾತ್ರಿಯಾದ ಕೂಡಲೇ ನೀರಿನ ಮೀಟರನ್ನು ಸ್ಥಗಿತಗೊಳಿಸಿ, ಇದೇ ನೀರನ್ನು ಮಲ್ಲಿಗೆ, ವೀಳ್ಯದೆಲೆ ಕೃಷಿಗೆ ಬಳಸುವವರಿದ್ದಾರೆ. ಇದನ್ನು ಆಕ್ಷೇಪಿಸಿದ ನೀರು ನಿರ್ವಾಹಕನಿಗೆ ಹೊಡೆದವರೂ ಇದ್ದಾರೆ.

ನಿಜವಾಗಿ ಬಳಕೆದಾರರಿಗೆ ಈ ನೀರು ಪೂರೈಕೆಯ ಉದ್ದೇಶ ಅರಿವಾಗದೇ ಹೋಗಿರುವುದು ದುರ್ದೈವ. ಒಂದು ಕೊಡ ನೀರಿಗಾಗಿ ಮೈಲುಗಟ್ಟಲೆ ದೂರ ಹೋಗಿ, ಕೆರೆಯ ಒದ್ದೆ ಮಣ್ಣನ್ನು ಕೈಯಿಂದ ತೋಡಿ ತೆಗೆದು, ಒಸರುವ ನೀರನ್ನು ಬೊಗಸೆಗಳಲ್ಲಿ ತುಂಬಿ ಕೊಡವನ್ನು ಭರ್ತಿ ಮಾಡಿ ತರುತ್ತಿದ್ದ ನೂರಾರು ಮನೆಗಳ ಹೆಂಗಳೆಯರ ಕಂಬನಿ ಈ ಕೊಡುಗೆಯ ಹಿಂದೆ ಮಡುಗಟ್ಟಿದೆ.

ಒಂದು ಕೊಡ ನೀರು ಸಿಗಲು ತಾಸುಗಟ್ಟಲೆ ಕಾಯಬೇಕು. ಅದನ್ನು ಹೊತ್ತು ಮನೆಗೆ ತರಲು ಅರ್ಧ ದಿನ ಬೇಕು. ಕೂಲಿಗೆ ಹೋಗುವಂತಿಲ್ಲ. ಬಟ್ಟೆ ಒಗೆಯಲು, ಸ್ನಾನ ಮಾಡಲು ನೀರಿಲ್ಲ. ಗಂಟಲೊಣಗದೆ ಜೀವ ಉಳಿಸಿಕೊಳ್ಳಲು ಮಾತ್ರ ಆ ನೀರು ಸಾಕಾಗುತ್ತಿತ್ತು. ಇಂತಹ ಶೋಚನೀಯ ಪರಿಸ್ಥಿತಿಯಿಂದ, ಮುಖ್ಯವಾಗಿ ಹಳ್ಳಿಯ ಮಹಿಳೆಯರನ್ನು ಮುಕ್ತಗೊಳಿಸಲು ನಜೀರ್‌ ಸಾಬ್‌ ಅವರು ಬಳಕೆಗೆ ತಂದ ಯೋಜನೆಯೊಂದರ ಸಾಫಲ್ಯ ಸಾರ್ವಜನಿಕರ ಸದ್ಬಳಕೆ ಮತ್ತು ಜವಾಬ್ದಾರಿಯಿಂದ ಮಾತ್ರ ನೆರವೇರಬಹುದು. ಆದರೆ ಹಾಗಾಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT