ಶುಕ್ರವಾರ, ಮೇ 27, 2022
21 °C
ಮಾನವ ಹಕ್ಕುಗಳ ಅನುಭೋಗಕ್ಕೆ ಸ್ವಯಂ ಸಂಚಕಾರವಾಗುವ ವಿಪರ್ಯಾಸ ಮನುಷ್ಯನಿಗೆ!

ಸಂಗತ: ಹಕ್ಕುಗಳು ಮಡುಗಟ್ಟಿದರೆ...

ಬಿ.ಎಸ್.ಭಗವಾನ್ Updated:

ಅಕ್ಷರ ಗಾತ್ರ : | |

Prajavani

ಒಂದು ಪ್ರಬುದ್ಧ ಜನಸಮುದಾಯವು ಮಾನವ ಹಕ್ಕುಗಳ ಅನುಷ್ಠಾನದಲ್ಲಿ ವಿಶ್ವಾಸವಿಡುತ್ತದೆ. ಪ್ರಭುತ್ವ ಎಡವಿದರೆ ಅದನ್ನು ಪ್ರಶ್ನಿಸುವ ಜನರ ಅಧಿಕಾರವನ್ನು ಮಾನ್ಯ ಮಾಡುತ್ತದೆ. ವರ್ಗ, ವರ್ಣ, ಜಾತಿ, ಮತ, ಧರ್ಮ, ಗಡಿ, ಜನಾಂಗೀಯತೆ, ಭಾಷೆ ಮೀರಿದ ಸ್ವಾತಂತ್ರ್ಯ ವಿಜೃಂಭಿಸಬೇಕು. ತೃಪ್ತಿಯುತ, ನೆಮ್ಮದಿಯ ಸಂಪೂರ್ಣ ಜೀವನ ಯಾರ ಕೈಯೂ ತಪ್ಪಬಾರದು. ಪ್ರತಿಯೊಬ್ಬರೂ ಸಮಾನತೆ, ಘನತೆ, ಗೌರವ ಆಧಾರಿತ ಗುಣಮಟ್ಟದ ಜೀವನ ನಡೆಸಬೇಕೆನ್ನುವುದೇ ಆಶಯ.

ಮಾನವ ಹಕ್ಕುಗಳೆಂದರೆ ಬದುಕುವ ಹಕ್ಕುಗಳು, ವ್ಯಕ್ತಿಗೆ ಹುಟ್ಟಿನಿಂದ ಸಾವಿನವರೆಗೆ ಇರಬೇಕಾದ ಮೂಲ ಹಕ್ಕುಗಳು. ಅಂದಹಾಗೆ ಮಾನವ ಹಕ್ಕುಗಳು ಅವಕಾಶವಾಗಲೀ, ಅನುಕಂಪದ ಅನುದಾನವಾಗಲೀ ಅಲ್ಲ. ಅವು ಸಾರ್ವತ್ರಿಕವು ಹಾಗೂ ಹಸ್ತಾಂತರಗೊಳಿಸ ಲಾಗದವು.

ಜಗತ್ತು ವೈವಿಧ್ಯಮಯ ಗುಣಲಕ್ಷಣಗಳುಳ್ಳ ಜನರಿರುವ ಆವಾಸ. ಆದರೇನು, ಸರ್ವರೂ ಸಮಾನರು, ಸಮಾನವಾಗಿ ಪರಿಗಣಿಸಲ್ಪಡಬೇಕಾದವರು. ಉಳ್ಳವರು, ಬಲಾಢ್ಯರು ತಮ್ಮ ಪ್ರಭಾವದಿಂದ ಇತರರನ್ನು ಸಲ್ಲದ ರೀತಿಯಲ್ಲಿ ನಡೆಸಿಕೊಳ್ಳುವ ಪ್ರವೃತ್ತಿ ಅಮಾನವೀಯ. ನಮ್ಮ ನಿತ್ಯ ಬದುಕಿನ ಒಂದಷ್ಟು ನಿದರ್ಶನಗಳನ್ನು ಅವಲೋಕಿಸೋಣ. ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲಿನಲ್ಲಿ ತನ್ಮಯರಾದರೆ ಪರರ ಖಾಸಗಿತನಕ್ಕೆ ಚ್ಯುತಿ. ಅಕ್ಕಪಕ್ಕದವರ ಮನೆ ಮುಂದೆ ಕಾರು ನಿಲ್ಲಿಸಿದರೆ ಅಥವಾ ಇಳಿಜಾರುಂಟೆಂಬ ಕಾರಣಕ್ಕೆ ಕೊಳಾಯಿ ನೀರನ್ನೆಲ್ಲ ಸಂಗ್ರಹಿಸಿದರೆ ಆಸುಪಾಸಿನವರ ಪಾಡು ಎಂಥದ್ದು ಯೋಚಿಸಬೇಕಲ್ಲವೆ?

ಹಕ್ಕುಗಳಿಗೆ ತಕ್ಕಂತೆ ಆಯಾ ಜವಾಬ್ದಾರಿಗಳೂ ಲಗತ್ತಾಗಿರುತ್ತವೆ. ಹಕ್ಕು, ಹೊಣೆಗಾರಿಕೆ ಒಂದೇ ನಾಣ್ಯದ ಎರಡು ಮುಖಗಳು. ನಮ್ಮ ಪರಂಪರೆಯಲ್ಲಿ ಮಾನವ ಹಕ್ಕುಗಳು ವಿಸ್ತೃತವಾಗಿ ಪ್ರಸ್ತಾಪಗೊಂಡಿವೆ. ಪಂಪ ‘ಮನುಷ್ಯಜಾತಿ ತಾನೊಂದೆ ವಲಂ’ ಎಂದು ಮಾನವರ ನಡುವೆ ಭೇದ ಅಸಂಗತ ಎಂದಿದ್ದಾನೆ. ಸರ್ವಜ್ಞ, ತನ್ನಂತೆ ಪರರ ಬಗೆದೊಡೆ ಅಲ್ಲೇ ಕಲ್ಯಾಣ ಎಂದು ಉದ್ಗರಿಸುತ್ತಾನೆ. ಹಳ್ಳದಲ್ಲಿ ಬಿದ್ದ ಕೀಲಿಕೈ ತೆಗೆದುಕೊಳ್ಳಲು ಇನ್ನೊಬ್ಬರ ನೆರವು ಪಡೆಯುವ ಮುನ್ನ ಅವರಿಗೂ ನಮ್ಮಷ್ಟೇ ಅಪಾಯಾಸ್ಪದ ಎನ್ನುವ ಪ್ರಜ್ಞೆ ಮೂಡಿದರೆ ಮಾನವ ಹಕ್ಕನ್ನು ಆದರಿಸುವ ದಿಸೆಯಲ್ಲಿ ಒಂದು ಹೆಜ್ಜೆ ಇರಿಸಿದಂತೆಯೆ.

ಲಾರ್ಡ್ ವಿಲಿಯಂ ಬೆಂಟಿಂಕ್ ಭಾರತದ ಗವರ್ನರ್ ಜನರಲ್ ಆಗಿದ್ದರು. ಸಮಾಜ ಸುಧಾರಕ ರಾಜಾ ರಾಮ್‌ ಮೋಹನ್ ರಾಯ್ ಅವರು ತಾಂಡವ ವಾಡುತ್ತಿದ್ದ ಸಾಮಾಜಿಕ ಮೌಢ್ಯಾಚರಣೆಗಳ ಬಗ್ಗೆ ಬೆಂಟಿಂಕ್‍ರೊಂದಿಗೆ ಚರ್ಚಿಸಿದರು. ಈ ಇಬ್ಬರೂ ಮಹನೀಯರಿಗೆ ‘ಸತಿ’ ಕ್ರೂರ ಪದ್ಧತಿಯನ್ನು ನಿಷೇಧಿಸಲೇಬೇಕೆನ್ನಿಸಿತು. ಸಂಕಲ್ಪಿಸಿದರು, ಹೋರಾಡಿದರು, ಗೆದ್ದರು. ಬಾಲ್ಯವಿವಾಹದ ತಡೆಗೂ ಭದ್ರ ಬುನಾದಿ ಹಾಕಿದರು. ಇತಿಹಾಸದಲ್ಲಿ ಅಸಾಮಾನ್ಯ ತಾರೆಗಳಾದರು.

ಮಾನವ ಹಕ್ಕುಗಳ ಅನುಭೋಗಿಗಳಾದರೆ ಮಾತ್ರ ಸಾಲದು. ಅವರು ತಮ್ಮಂತೆಯೆ ಎಲ್ಲರೂ ಮಾನವ ಹಕ್ಕುಗಳಿಗೆ ಅರ್ಹರೆನ್ನುವುದನ್ನು ಮನಗಾಣಬೇಕು. ಆದರೆ ಸಂಪತ್ತು, ಸವಲತ್ತು ಪ್ರವಹಿಸದೆ ಒಂದೆಡೆಯೇ ಮಡುಗಟ್ಟಿ ‘ಸಿಕ್ಕಿದವರಿಗೆ ಸೀರುಂಡೆ’ ಆಗಿದೆ. ಬಡವರು ಹೆಚ್ಚು ಬಡವರಾಗುತ್ತಿದ್ದಾರೆ, ಸಿರಿವಂತರೂ ಹೆಚ್ಚು ಸಿರಿವಂತರಾಗುತ್ತಿದ್ದಾರೆ. ಅರ್ಥಶಾಸ್ತ್ರದ ಅದೇ ಹಳೆಯ ಪಾಠ! ಸಮ ಸಮಾಜಕ್ಕೆ ಅಡ್ಡಿ.

ಐಷಾರಾಮಿ ಜೀವನಕ್ಕೆ ಅತಿಯಾದ ಇಂಧನ ಸಂಪನ್ಮೂಲಗಳ ಬಳಕೆಯ ಪರಿಣಾಮ ತಿಳಿದದ್ದೆ. ಮಿತಿಮೀರಿದ ಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸೈಡ್ ವಾತಾವರಣ ಸೇರುತ್ತಿದೆ. ಭೂಮಿ ಬಿಸಿಯೇರಿ ಧ್ರುವ ಪ್ರದೇಶಗಳು ಕರಗತೊಡಗಿವೆ. ಒಟ್ಟಾರೆ ಮನುಷ್ಯ ತನ್ನ ಕೈಯಾರೆ ಎಡವಟ್ಟಿಗೆ ಮಣೆ ಹಾಕುತ್ತಿದ್ದಾನೆ. ಮಾನವ ಹಕ್ಕುಗಳ ಅನುಭೋಗಕ್ಕೆ ತನಗೆ ತಾನೆ ಸಂಚಕಾರವಾಗುವ ವಿಪರ್ಯಾಸ ಮನುಷ್ಯನಿಗೆ!

ವಿಶ್ವಸಂಸ್ಥೆಯ ಮಹಾಅಧಿವೇಶನವು 1948ರಲ್ಲಿ ಡಿಸೆಂಬರ್ 10ರಂದು ‘ವಿಶ್ವ ಮಾನವ ಹಕ್ಕುಗಳ ದಿನ’ ಆಚರಿಸಬೇಕೆಂದು ನಿಶ್ಚಯಿಸಿತು. 1948ಕ್ಕೂ ಮುಂಚೆ ಇದ್ದ ಪರಿಸ್ಥಿತಿ ಊಹಿಸಲೂ ಆಗದು. ಜಗತ್ತಿನ ಹಲವೆಡೆ ಅರಾಜಕತೆ. ಯುದ್ಧ, ವರ್ಗ–ವರ್ಣ ಸಂಘರ್ಷ, ಹಿಂಸೆ, ನಿಂದನೆ, ತಾರತಮ್ಯ, ಕಾರಣವಿಲ್ಲದೆ ಯಾರೇ ಯಾರನ್ನಾದರೂ ಬಂಧಿಸುವ ದಬ್ಬಾಳಿಕೆ, ಗುಲಾಮಗಿರಿ... ಒಂದೆರಡಲ್ಲ. ಗಾಬರಿ ಹುಟ್ಟಿಸುವ, ಗದರಿಕೆಯ ರುದ್ರ ತಾಂಡವ.

ವಿಶ್ವಸಂಸ್ಥೆ ‘ಇನ್ನು ಇದು ನಡೆಯದು, ಸಾಕು’ ಎಂದು ಸಾರಿತು. ಎಲ್ಲರೂ ಎಲ್ಲರಿಗಾಗಿ ಮನುಜರಂತೆ ಸಮಾನ ಹಕ್ಕು ಮತ್ತು ಹೊಣೆಗಾರಿಕೆಗಳ ಪ್ರಜ್ಞೆಯಿಂದ ನೆಮ್ಮದಿಯ ಬದುಕು ಅರಸಬೇಕೆಂದು ಕರೆಯಿತ್ತಿತು, ಜಾಗೃತಿ ಮೂಡಿಸಿತು.

ಈ ಬಾರಿಯ ಘೋಷಣಾ ವಾಕ್ಯ ‘ಮಾನವ ಹಕ್ಕುಗಳಿಗಾಗಿ ಎದ್ದು ನಿಲ್ಲಿ’. ಜಗತ್ತಿನಲ್ಲಿ ಪ್ರಜಾ
ಪ್ರಭುತ್ವಗಳು ಸಮರ್ಥಗೊಂಡಂತೆ ಮಾನವ ಹಕ್ಕುಗಳು ಸುಸ್ಥಿರಗೊಳ್ಳುತ್ತವೆ. ಶೋಷಣೆ, ಅವಹೇಳನ,
ಭ್ರಷ್ಟಾಚಾರದಂತಹ ಸಾಮಾಜಿಕ ಅನಿಷ್ಟಗಳ ವಿರುದ್ಧ ಸೆಟೆದು ನಿಲ್ಲುವ ಮನೋಸ್ಥೈರ್ಯ ತುಂಬುತ್ತವೆ. ವಿಶೇಷವಾಗಿ ಮಾನವ ಹಕ್ಕುಗಳು ಸರ್ಕಾರಗಳ ಉತ್ತರದಾಯಿತ್ವಕ್ಕೆ ಸರ್ವಮಾನ್ಯ ಮಾಪನ ಒದಗಿಸುತ್ತವೆ. ಶುದ್ಧ ನೀರು, ಸ್ವಚ್ಛ ಗಾಳಿ, ತಾಜಾ ಮಣ್ಣು ಮನುಷ್ಯನಿಗೆ ಇತರೆ ಹಕ್ಕುಗಳಷ್ಟೇ ಮುಖ್ಯ. ತಂತ್ರಜ್ಞಾನ, ಆವಿಷ್ಕಾರಗಳು ವರವೇ. ಅವುಗಳಿಂದ ಆತಂಕವೇನಿಲ್ಲ. ಏನಿದ್ದರೂ ಅವನ್ನು ಬಳಸುವ ಮನುಷ್ಯನಿಂದ!

ಸಾರಾಂಶ ಸ್ಪಷ್ಟವಿದೆ. ಗಣಕಗಳು ಮನುಷ್ಯರಂತೆ ಆಲೋಚಿಸಲು ಕಲಿಯಲಿ, ಆದರೆ ಮನುಷ್ಯರು ಗಣಕಗಳ ಹಾಗೆ ಆಲೋಚಿಸುವುದು ಬೇಡ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.