ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ| ಸೋಲು, ನಿರಾಸೆಯನ್ನೂ ಉಣಬಡಿಸಿ!

ಸಾಲಸೋಲ ಮಾಡಿಯಾದರೂ ಮಕ್ಕಳ ಆಸೆಗಳನ್ನು ಪೂರೈಸಲೇಬೇಕೆಂಬ ಮನಃಸ್ಥಿತಿಯಲ್ಲಿ ಪೋಷಕರು ಬದಲಾವಣೆ ತಂದುಕೊಳ್ಳಬೇಕಾಗಿದೆ
Last Updated 23 ಜೂನ್ 2022, 19:31 IST
ಅಕ್ಷರ ಗಾತ್ರ

ಎಂಜಿನಿಯರಿಂಗ್ ಓದುತ್ತಿದ್ದ ವಿದ್ಯಾರ್ಥಿಯೊಬ್ಬ, ಪೋಷಕರು ಬೈಕ್ ಕೊಡಿಸಲಿಲ್ಲ ಎನ್ನುವ ಕಾರಣಕ್ಕೆ ಇತ್ತೀಚೆಗೆ ತನ್ನ ಕೈ ಮೇಲೆ ಕಾರಣ ಬರೆದು, ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಹೆಚ್ಚು ಸದ್ದು ಮಾಡಿತು. ಅದಕ್ಕೂ ಕೆಲ ದಿನಗಳ ಹಿಂದೆ ಪೋಷಕರು ಅವನಿಗೆ ತಿಂಗಳ ಇಎಮ್‍ಐ ಮೇಲೆ ಐಫೋನ್ ಕೊಡಿಸಿದ್ದರು. ಹಾಗಾಗಿ, ಇನ್ನು ಸ್ವಲ್ಪ ದಿನ ಬಿಟ್ಟು ಬೈಕ್‌ ಕೊಡಿಸುತ್ತೇವೆ ಎಂದು ಆಶ್ವಾಸನೆ ಕೊಟ್ಟಿದ್ದರೂ, ಅವನು ತಾಳ್ಮೆಯಿಲ್ಲದೆ ಸಾವಿಗೆ ಕೊರಳೊಡ್ಡಿದ. ‘ಪುತ್ರಶೋಕಂ ನಿರಂತರಂ’ ಎನ್ನುವಂತೆ, ಇದ್ದ ಏಕೈಕ ಪುತ್ರನನ್ನು ಕಳೆದುಕೊಂಡ ಪೋಷಕರ ಮನಃಸ್ಥಿತಿ ಹೇಗಾಗಿರಬಹುದು ಎಂದು ಯೋಚಿಸಿದರೆ ಸಂಕಟವಾಗುತ್ತದೆ.

ಕಾಲೇಜಿನಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಪ್ರಾಂಶುಪಾಲರು, ‘ದಯವಿಟ್ಟು ಇಂತಹ ಹುಚ್ಚು ಕೆಲಸಗಳನ್ನು ಮಾಡಿ ಹೆತ್ತವರು ಜೀವನಪೂರ್ತಿ ಕಣ್ಣೀರು ಹಾಕುವ ಹಾಗೆ ಮಾಡಬೇಡಿ. ನಿಮಗೋಸ್ಕರ ಎಷ್ಟೆಲ್ಲ ಕಷ್ಟಪಟ್ಟಿರುತ್ತಾರೆ ಅವರು. ತಮ್ಮ ಜೀವನವನ್ನೇ ನಿಮಗಾಗಿ ಮುಡಿಪಿಟ್ಟಿರುತ್ತಾರೆ. ಅವರ ಕಷ್ಟಗಳನ್ನೂ ಅರ್ಥಮಾಡಿಕೊಳ್ಳಿ’ ಎಂದು ಹಿತನುಡಿಗಳನ್ನು ಹೇಳಿದರಂತೆ. ಅದನ್ನು ಎಷ್ಟು ವಿದ್ಯಾರ್ಥಿಗಳು
ಅಳವಡಿಸಿಕೊಳ್ಳುತ್ತಾರೋ ಬಿಡುತ್ತಾರೋ ದೇವರಿಗೇ ಗೊತ್ತು.

ಏಕೆಂದರೆ ಬರೀ ಜೋಶ್ ತುಂಬಿಕೊಂಡಿರುವ ವಯಸ್ಸದು. ಇಲ್ಲಿ ಆ ಹುಡುಗನ ಆತ್ಮಹತ್ಯೆಗೆ ಕಾರಣ ಏನೇ ಇರಲಿ, ಒಂದು ಸಂಗತಿಯಂತೂ ಖಚಿತವಾಗಿ ಮನದಟ್ಟಾಗುತ್ತದೆ. ಅದು ಈಗಿನ ಪೀಳಿಗೆಯ ಬಹುತೇಕ ಮಕ್ಕಳ ಮನಸ್ಸಿಗೆ ‘ಇಲ್ಲ’, ‘ಆಗೋಲ್ಲ’ ಎನ್ನುವಂತಹ ನಕಾರಾತ್ಮಕ ಮಾತುಗಳನ್ನು ತಡೆದುಕೊಳ್ಳುವ ಶಕ್ತಿಯೇ ಇಲ್ಲ. ಕೇಳಿದ ತಕ್ಷಣ ಆ ವಸ್ತು ಕೈಗೆ ಬರಲೇಬೇಕು. ಈಗಿನ ವಿಭಕ್ತ ಕುಟುಂಬಗಳಲ್ಲಿ ಒಬ್ಬರೋ ಇಬ್ಬರೋ ಮಕ್ಕಳಿದ್ದರೆ ಹೆಚ್ಚು. ಅದರಲ್ಲೂ ಒಬ್ಬ ಮಗಳೋ ಮಗನೋ ಇದ್ದರಂತೂ ಮುಗಿಯಿತು. ಕೊಡಿಸದಿದ್ದರೆ ಎಲ್ಲಿ ಮಗು ಕೊರಗಿ ಸಪ್ಪೆ ಮುಖ ಮಾಡಿಕೊಂಡುಬಿಡುತ್ತದೆಯೋ ಎಂದು ಅದರ ಆಸೆಯನ್ನು ಶಕ್ತಿಮೀರಿ ಪೂರೈಸಲು ಮುಂದಾಗುತ್ತಾರೆ. ಅದು ಕೇಳುವುದಕ್ಕೆ ಮುಂಚೆಯೇ ಎಲ್ಲವನ್ನೂ ತಂದು ಗುಡ್ಡೆ ಹಾಕುತ್ತಾರೆ. ಕೇಳಿದ್ದಕ್ಕಿಂತ ಹೆಚ್ಚಿಗೆಯೇ ಕೊಡಿಸುತ್ತಾರೆ. ಹೀಗೆ ಸುಲಭವಾಗಿ ಸಿಕ್ಕಾಗ ಅವುಗಳ ಬೆಲೆ ಮಕ್ಕಳಿಗೆ ತಿಳಿಯುವುದೇ ಇಲ್ಲ. ಜೊತೆಗೆ ಬಹುಬೇಗ ಅವುಗಳಲ್ಲಿ ಆಸಕ್ತಿ ಕಳೆದುಕೊಂಡು ಬಿಡುತ್ತಾರೆ. ಮತ್ತೆ ಯಾವುದೋ ಹೊಸದು ಅವರನ್ನು ಆಕರ್ಷಿಸುತ್ತಿರುತ್ತದೆ. ಅದೂ ಕೈಗೆ ಬರುವ ತನಕ ಮಾತ್ರ ಆ ಹುಚ್ಚು ಜೀವಂತ.

ಚಿಕ್ಕವರಿದ್ದಾಗ ಅವರ ಬೇಡಿಕೆಗಳನ್ನೇನೋ ಈಡೇರಿಸಬಹುದು. ಆದರೆ ದೊಡ್ಡವರಾಗುತ್ತಾ ಆಗುತ್ತಾ ಅವರ ಖರ್ಚು ನಿಭಾಯಿಸುವಂತಹ ಶಕ್ತಿ ಇದ್ದರೇನೋ ಸರಿ, ಇಲ್ಲದಿದ್ದರೆ ಅಂತಹ ಪೋಷಕರನ್ನು ಭಗವಂತನೇ ಕಾಪಾಡಬೇಕು.

ಸಾಲಸೋಲ ಮಾಡಿಯಾದರೂ ಮಕ್ಕಳ ಆಸೆಗಳನ್ನು ಪೂರೈಸಲೇಬೇಕೆಂಬ ಪೋಷಕರ ಮನಃಸ್ಥಿತಿಯಲ್ಲಿ ಮೊದಲು ಬದಲಾವಣೆ ತಂದುಕೊಳ್ಳ ಬೇಕಾದ ಅವಶ್ಯಕತೆ ಮೊದಲಿಗಿಂತಲೂ ಈಗ ಹೆಚ್ಚಾಗಿದೆ. ಚಿಕ್ಕಂದಿನಿಂದಲೇ ಮಕ್ಕಳಿಗೆ ಮನೆಯ ಆರ್ಥಿಕ ಪರಿಸ್ಥಿತಿಯ ಬಗ್ಗೆ ತಿಳಿಸುತ್ತಾ ಬರುವುದು ಒಳ್ಳೆಯದು. ನಿಮ್ಮ ದುಡಿಮೆ ಎಷ್ಟು, ಮನೆಯ ಖರ್ಚು, ಸಾಲಕ್ಕೆ ಕಟ್ಟುವ ಕಂತುಗಳು, ಉಳಿತಾಯ ಎಲ್ಲವನ್ನೂ ಅವರಿಗೆ ವಿವರವಾಗಿ ತಿಳಿಸಿ. ಹಟ ಹಿಡಿದರೆ, ‘ಆಗುವುದಿಲ್ಲ, ಹಣ ಇದ್ದಾಗ ಕೊಡಿಸುತ್ತೇವೆ’ ಎಂದು ನಯವಾಗಿ ಆದರೆ ಸ್ಪಷ್ಟವಾಗಿ ಬುದ್ಧಿ ಹೇಳಿ. ಅವರೇ ತಿಳಿದು ತಿದ್ದಿಕೊಳ್ಳುತ್ತಾರೆ. ಇನ್ನು ನಾವು ಕಷ್ಟಪಟ್ಟ ಹಾಗೆ ಮಕ್ಕಳು ಪಡಬಾರದು ಎಂದು ಎಲ್ಲಾ ಅನುಕೂಲಗಳನ್ನು ಮಾಡಿಕೊಡುವುದರಲ್ಲಿ ತಪ್ಪೇನಿಲ್ಲ. ಆದರೆ ಸುಖದ ಜೀವನವನ್ನು ಮಾತ್ರ ತೋರಿಸುವ ಬದಲು ಜೀವನದ ಮತ್ತೊಂದು ಮಗ್ಗುಲನ್ನೂ ಪರಿಚಯಿಸಿ. ಕಾರು, ಬೈಕಿನಲ್ಲಿ ಮಾತ್ರವಲ್ಲ ಸಾರ್ವಜನಿಕ ಸಾರಿಗೆ, ಕಾಲ್ನಡಿಗೆಯನ್ನೂ ಪ್ರೋತ್ಸಾಹಿಸಿ. ಆಗ ಮಕ್ಕಳಿಗೆ ಕಾಯುವ ಅನಿವಾರ್ಯ, ಸಾರ್ವಜನಿಕ ನಡವಳಿಕೆ, ಹೊಂದಾಣಿಕೆ, ಸಾಮಾನ್ಯ ಜ್ಞಾನ ಎಲ್ಲದರ ಅರಿವೂ ಮೂಡುತ್ತದೆ. ತಮ್ಮ ಸುತ್ತಮುತ್ತಲಿನ ಜಗತ್ತಿನಲ್ಲಿ ಕಂಡುಬರುವ ಬಡತನ, ಸಿರಿತನ, ಕಷ್ಟ ಸುಖ ಎಲ್ಲದರ ಪರಿಚಯವಾಗುತ್ತದೆ.

ಒಮ್ಮೆ ಹಳ್ಳಿ ಮಕ್ಕಳನ್ನು ಗಮನಿಸಿ ನೋಡಿದರೆ ಅರಿವಾಗುತ್ತದೆ, ಜಗತ್ತಿನಲ್ಲಿ ಎಲ್ಲಿ ಬಿಟ್ಟರೂ ಗೆದ್ದು ಬರುವ ಛಾತಿಯನ್ನು ಅವರಿಗೆ ಬದುಕೇ ಕಲಿಸಿ ಕೊಟ್ಟಿರುತ್ತದೆ. ಪೇಟೆಯ ಮಕ್ಕಳದು ಎಲ್ಲದಕ್ಕೂ ತುತ್ತು ಉಣಿಸಿಕೊಳ್ಳುವ ಮನೋಭಾವ.

‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ’ ಎನ್ನುವ ಗಾದೆ ಮಾತಿನಂತೆ, ಚಿಕ್ಕಂದಿನಿಂದಲೇ ಸೋಲು, ನಿರಾಸೆಯ ರುಚಿಯನ್ನು ಅವರಿಗೆ ತೋರಿಸದೆ, ಬೆಳೆದುನಿಂತ ಮೇಲೆ ‘ನಾವು ಅಷ್ಟು ಕಷ್ಟಪಟ್ಟಿದ್ವಿ, ನಮಗೆ ನೆಟ್ಟಗೆ ಹಾಕಿಕೊಳ್ಳಲು ಚೊಣ್ಣ ಸಹಿತ ಇರಲಿಲ್ಲ, ಎರಡು ಪ್ಯಾಂಟು ಶರ್ಟುಗಳಲ್ಲೇ ಡಿಗ್ರಿ ಮುಗಿಸಿದ್ವಿ, ತಿನ್ನೋಕೆ ಅನ್ನ ಗತಿ ಇರಲಿಲ್ಲ, ನಿಮಗೆ ಇಷ್ಟೆಲ್ಲಾ ಮಾಡಿಕೊಟ್ಟರೂ ಉಪಯೋಗ ಇಲ್ಲ’ ಅಂತೆಲ್ಲಾ ಶಂಖ ಊದುತ್ತಾ ಕೂತರೆ, ಮಕ್ಕಳು ‘ಅದು ನಿಮ್ಮ ಕರ್ಮ’ ಎಂದು ಉತ್ತರಿಸುತ್ತಾರೆಯೇ ವಿನಾ ತಮ್ಮ ವರ್ತನೆಯ ಬಗ್ಗೆ ಎಂದೂ ಪಶ್ಚಾತ್ತಾಪಪಡುವುದಿಲ್ಲ.

ಇವುಗಳ ಬಗ್ಗೆಯೆಲ್ಲ ಪಾಠ ಮಾಡುವುದು ಗೋರ್ಕಲ್ಲಿನ ಮೇಲೆ ಮಳೆಗರೆದಂತೆ. ಹಾಗಾಗಿ, ಮೊದಲೇ ಎಚ್ಚೆತ್ತುಕೊಂಡರೆ ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT