ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ಶ್‌... ರೇವ್‌ಪಾರ್ಟಿ ನಡೆಯುತ್ತಿದೆ!

ಯುವಜನರಿಗೆ ರೇವ್‍ಪಾರ್ಟಿಗಳು ಆಕರ್ಷಕ ಎನಿಸುತ್ತಿವೆಯಾದರೂ ಅವುಗಳಲ್ಲಿ ಪಾಲ್ಗೊಳ್ಳುವುದರಿಂದ ಆಗುವ ಅಪಾಯಗಳ ಪಟ್ಟಿ ದೊಡ್ಡದು
Published 30 ಮೇ 2024, 23:33 IST
Last Updated 30 ಮೇ 2024, 23:33 IST
ಅಕ್ಷರ ಗಾತ್ರ

ಸಿಲಿಕಾನ್ ಸಿಟಿ ಎಂದೇ ಪ್ರಸಿದ್ಧಿಯಾಗಿದ್ದ ಬೆಂಗಳೂರಿಗೆ ಇದೀಗ ಹೊಸದೊಂದು ಬಿರುದು ರೇವ್‍ಪಾರ್ಟಿ ಸಿಟಿ! ದೇಶವಿದೇಶಗಳಿಂದ ಶಿಕ್ಷಣ, ವೃತ್ತಿ, ಉದ್ಯಮಕ್ಕಾಗಿ ಬಂದ ಎಷ್ಟೋ ಜನ ಇಲ್ಲಿನ ಅನುಕೂಲಕರ ವಾತಾ ವರಣ, ಆಧುನಿಕ ಸೌಲಭ್ಯಗಳನ್ನು ಮನಗಂಡು ಇಲ್ಲೇ ನೆಲಸಿರುವುದು ಬೆಂಗಳೂರಿನ ಹಿರಿಮೆಗೆ ಸಾಕ್ಷಿಯಾಗಿದೆ. ಆದರೆ ಅದರೊಂದಿಗೆ ಬದಲಾದ ಜೀವನಶೈಲಿಯ ಕಾರಣದಿಂದಾಗಿ ಉಂಟಾಗುತ್ತಿರುವ ಸಮಸ್ಯೆಗಳೂ ಹಲವಾರು. ಅವುಗಳಲ್ಲೊಂದು ಈ ರೇವ್‍ಪಾರ್ಟಿ.

ರೇವ್ ಎಂದರೆ ಅತ್ಯುತ್ಸಾಹದಲ್ಲಿ ಇರುವುದು ಎಂದರ್ಥ. ಅಬ್ಬರದ ಸಂಗೀತ, ತೀವ್ರಗತಿಯ ನೃತ್ಯದಲ್ಲಿ ಒಟ್ಟಾಗಿ ಅತ್ಯುತ್ಸಾಹದಿಂದ ಪಾಲ್ಗೊಳ್ಳುವ ಸಂತೋಷಕೂಟಗಳಿವು. 90ರ ದಶಕದ ಆರಂಭದಲ್ಲಿ ಇಂಗ್ಲೆಂಡಿನಲ್ಲಿ ರೇವ್‍ಪಾರ್ಟಿಗಳು ಆರಂಭವಾದವು. ಸಾಂಪ್ರದಾಯಿಕ ಕ್ಲಬ್‌ಗಳಲ್ಲಿ ದುಬಾರಿ ಶುಲ್ಕ ತೆತ್ತು, ನಿರ್ದಿಷ್ಟ ಉಡುಪು ಧರಿಸಿ, ಸಂಗೀತ-ನೃತ್ಯವನ್ನು ಸೀಮಿತ ವರ್ಗದ ಜನ ಆನಂದಿಸುತ್ತಿದ್ದ ಪಾರ್ಟಿಗಳಿಗೆ ಇವು ಪರ್ಯಾಯವಾಗಿದ್ದವು. ಗ್ಯಾರೇಜ್, ಮನೆಯ ಅಂಗಳ, ನೆಲಮಾಳಿಗೆಯಂಥ ಸ್ಥಳಗಳಲ್ಲಿ ಆಯೋಜನೆಗೊಂಡು, ಎಲ್ಲರೂ ಮುಕ್ತವಾಗಿ ಭಾಗವಹಿಸಬಹುದಾದ, ಯಾವುದೇ ನಿರ್ಬಂಧವಿಲ್ಲದೆ ತಮಗಿಷ್ಟ ಬಂದಂತೆ ಆನಂದಿಸಬಹುದಾದ ಪಾರ್ಟಿಗಳಾಗಿದ್ದವು. ಶಾಂತಿ, ಪ್ರೀತಿ, ಏಕತೆ ಮತ್ತು ಗೌರವ ಈ ನಾಲ್ಕು ಧ್ಯೇಯಗಳನ್ನು ಹೊಂದಿದ ಚಳವಳಿ ಎಂದೇ ಇವನ್ನು ಕರೆಯಲಾಗುತ್ತಿತ್ತು. ಆದರೆ ಸಂಗೀತ, ನೃತ್ಯದ ಜತೆ ಮದ್ಯ-ಮಾದಕ ವಸ್ತುಗಳ ಬಳಕೆ ಈ ರೇವ್‍ಪಾರ್ಟಿಗಳ ಸ್ವರೂಪವನ್ನು ಬದಲಿಸಿತು! ಕ್ರಮೇಣ ಇವು ಕಾನೂನುಬಾಹಿರ ಚಟುವಟಿಕೆಗಳು ಗೋಪ್ಯವಾಗಿ ನಡೆಯುವ ತಾಣಗಳಾದವು.

ಭಾರತದಲ್ಲಿ ಹಿಪ್ಪಿಗಳು ಗೋವಾದ ಬೀಚ್‍ಗಳಲ್ಲಿ ರೇವ್‍ಪಾರ್ಟಿಯನ್ನು ಮೊದಲು ಆರಂಭಿಸಿದರೂ ನಂತರ ಮಹಾನಗರಗಳಿಗೆ ಹಬ್ಬಲು ತಡವಾಗಲಿಲ್ಲ. ಈಗಂತೂ ಸಣ್ಣಪುಟ್ಟ ನಗರಗಳಲ್ಲೂ ರೇವ್‍ಪಾರ್ಟಿಗಳು ಜನಪ್ರಿಯ ಮಾತ್ರವಲ್ಲ, ಪ್ರತಿಷ್ಠೆಯ ಸಂಕೇತವೂ ಆಗಿವೆ! ಪರಿಚಯಸ್ಥರಿಗೆ ಮಾತ್ರ ಪ್ರವೇಶ, ದುಬಾರಿ ದರ, ಕೋಡ್ ಮೂಲಕ ಆಹ್ವಾನ, ಅಪರಿಚಿತ ಸ್ಥಳ... ಹೀಗೆ ರೇವ್‍ಪಾರ್ಟಿಗಳು ನಿಗೂಢವಾಗುತ್ತಿವೆ. ಈ ಪಾರ್ಟಿಗಳಲ್ಲಿ ಮಾದಕವಸ್ತುಗಳ ಸೇವನೆ ನಡೆಯುತ್ತಿದೆ ಎಂಬುದು ಗುರುತರ ಆರೋ‍ಪ.  

ಅನೇಕ ರೀತಿಯ ಮಾದಕದ್ರವ್ಯಗಳು ಅವರವರ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಸುಲಭವಾಗಿ ಲಭ್ಯವಾಗುತ್ತವೆ. ಮಾದಕವಸ್ತುಗಳ ಸೇವನೆಯಿಂದ ನರವಾಹಕಗಳು ಪ್ರಚೋದನೆಗೊಂಡು ಆನಂದದ ಅನುಭವದ ಜೊತೆಗೆ ಎಲ್ಲ ಹಿಂಜರಿಕೆಗಳು ಮಾಯ ವಾಗಿ ಆತಂಕ ಕಡಿಮೆಯಾಗುತ್ತದೆ. ಆತ್ಮವಿಶ್ವಾಸ ಹೆಚ್ಚಿ ಏನನ್ನಾದರೂ ಮಾಡಬಲ್ಲೆ ಎನಿಸುತ್ತದೆ. ಆದರೆ ಇದೆಲ್ಲವೂ ಕ್ಷಣಿಕವಾದ ಅನುಭವ. ವಾಸ್ತವಕ್ಕೆ ಮರಳಿದ ನಂತರ ಮನಸ್ಸು ಮತ್ತೆ ಆ ಅನುಭವಕ್ಕಾಗಿ ಹಾತೊರೆಯುತ್ತದೆ. ಮತ್ತಷ್ಟು, ಇನ್ನಷ್ಟು ಹೀಗೆ ಮಾದಕವಸ್ತು ಸೇವನೆಯ ವಿಷವರ್ತುಲ ಮುಂದುವರಿ ಯುತ್ತದೆ. ಹೀಗಾಗಿ, ರೇವ್‍ಪಾರ್ಟಿ ಎಂದರೆ ಡ್ರಗ್ಸ್‌ ಸರಬರಾಜು ಮಾಡುವ ಪೆಡ್ಲರ್‌ಗಳಿಗೆ ಸುಗ್ಗಿ!

ರೇವ್‍ಪಾರ್ಟಿಗಳಲ್ಲಿ ಮೊಳಗುವ ತೀವ್ರಗತಿಯ ಎಲೆಕ್ಟ್ರಾನಿಕ್ ಸಂಗೀತ ಮನಸ್ಸನ್ನು ಉದ್ದೀಪನಗೊಳಿಸಿದರೆ, ಅದಕ್ಕೆ ಜೊತೆಯಾಗಿ ಆಧುನಿಕ ತಂತ್ರಜ್ಞಾನದಿಂದ ಲಯಬದ್ಧವಾದ ಶಬ್ದ, ಕಣ್ಣು ಕೋರೈಸುವ ಚಿತ್ರವಿಚಿತ್ರ ಬೆಳಕು, ಕನಸಿನ ಲೋಕವನ್ನು ನಿರ್ಮಿಸುತ್ತವೆ. ಮಾದಕವಸ್ತು– ಮದ್ಯ ಸೇವನೆ ಉನ್ಮಾದವನ್ನು ಸೃಷ್ಟಿಸಿ ದೇಹ ಮತ್ತು ಮನಸ್ಸಿನ ನಿಯಂತ್ರಣ ತಪ್ಪುತ್ತದೆ. ಕೇಳುವವರು ಹೇಳುವವರು ಯಾರೂ ಇಲ್ಲದೆ ಸಮೂಹಸನ್ನಿಗೆ ಒಳಗಾದಂಥ ಸನ್ನಿ ವೇಶ ರಾತ್ರಿಯಿಡೀ ನಡೆಯುತ್ತದೆ. ಹಾಗಾಗಿಯೇ ಯುವಜನರು ಈ ರೇವ್‍ಪಾರ್ಟಿಗಳನ್ನು ‘ತಮ್ಮಿಷ್ಟದಂತೆ ಅಲಂಕರಿಸಿಕೊಂಡು, ಮಿತಿಮೀರಿ ಕುಡಿದು ಕುಣಿಯುವ ಅವಕಾಶ, ದಿನನಿತ್ಯದ ಒತ್ತಡ ಕಳೆಯುವ ಸ್ಟ್ರೆಸ್ ಬಸ್ಟರ್, ದೂರದ-ಅಜ್ಞಾತ ಸ್ಥಳಗಳಲ್ಲಿ ನಡೆಯುವುದರಿಂದ ಥ್ರಿಲ್ಲಿಂಗ್ ಎಕ್ಸ್‌ಪೀರಿಯನ್ಸ್…’ ಎಂದೆಲ್ಲಾ ಬಣ್ಣಿಸುತ್ತಾರೆ.

ಯುವಜನರಿಗೆ ರೇವ್‍ಪಾರ್ಟಿ ಆಕರ್ಷಕ ಎನಿಸುತ್ತದಾದರೂ ಇದರಲ್ಲಿರುವ ಅಪಾಯಗಳ ಪಟ್ಟಿ ದೊಡ್ಡದು. ತಾಸುಗಟ್ಟಲೇ ಕಿವಿಗೆ ಅಪ್ಪಳಿಸುವ ಸಂಗೀತದಿಂದ ಶ್ರವಣಶಕ್ತಿಯಲ್ಲಿ ದೋಷ ಉಂಟಾಗಬಹುದು. ಜನದಟ್ಟಣೆಯ ನಡುವೆ ಮಂದ ಬೆಳಕಿನಲ್ಲಿ ಸತತವಾಗಿ ಕುಣಿಯುವಾಗ ಬಿದ್ದು ಪೆಟ್ಟಾಗುವ ಸಾಧ್ಯತೆ ಹೆಚ್ಚು. ಮತ್ತಿನಲ್ಲಿರುವಾಗ ಗಲಾಟೆ, ಹೊಡೆದಾಟದ ಸಂಭವ ಇರುತ್ತದೆ. ಅನೇಕ ಕಡೆ ಲೈಂಗಿಕ ದೌರ್ಜನ್ಯದ ಪ್ರಕರಣಗಳೂ ನಡೆದಿರುವ ಉದಾಹರಣೆ ಇದೆ.

ಕೆಲವು ಯುವಜನರಿಗಂತೂ ಇದು ವಾರಾಂತ್ಯದ ಜೀವನಕ್ರಮವೇ ಆಗಿದೆ. ಅವರಿಂದ ಪ್ರಭಾವಿತರಾಗಿ ಹದಿಹರೆಯದ ಮಕ್ಕಳೂ ರೇವ್‌ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದಾರೆ. ಕುತೂಹಲ, ಖುಷಿಗಾಗಿ ಆರಂಭವಾದದ್ದು ಜೀವನವಿಡೀ ಮುಂದುವರಿಯುತ್ತದೆ. ಹೊಸವರ್ಷ, ರಜಾಕಾಲದಲ್ಲಂತೂ ಈ ರೇವ್‍ಪಾರ್ಟಿಗಳು ಅತ್ಯಧಿಕವಾಗಿದ್ದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿವೆ. ಅಕ್ರಮವಾಗಿ ನಡೆಯುವ ಬಗ್ಗೆ ಸುಳಿವು ಸಿಕ್ಕಿ ದಾಳಿ ನಡೆಸಿದರೂ ಪ್ರತಿಷ್ಠಿತ ವ್ಯಕ್ತಿಗಳು, ಅವರ ಮಕ್ಕಳು ಭಾಗಿಯಾಗುವುದರಿಂದ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಅಧಿಕಾರಿಗಳ ಬೇಸರದ ಮಾತು. ಈ ರೇವ್‌ಪಾರ್ಟಿಗಳಿಗೆ ಸರ್ಕಾರ ಕಡಿವಾಣ ಹಾಕಬೇಕು.

ಪಾರ್ಟಿ ಮಾಡುವುದು ತಪ್ಪಲ್ಲ, ಆದರೆ ಆ ನೆಪದಲ್ಲಿ ಮಾದಕವಸ್ತು ಸೇವಿಸಿದರೆ ಮತ್ತು ಅದಕ್ಕೆ ದಾಸರಾದರೆ ಬದುಕೇ ನಾಶವಾದೀತು ಎಂಬ ಎಚ್ಚರ ನಮ್ಮಲ್ಲಿ ಇರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT