ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ಕೌಶಲ ಕರಗತ: ಬೋಧನೆ ಸುಲಲಿತ

ಸೂಕ್ಷ್ಮ ಮನಃಸ್ಥಿತಿ ಹೊಂದಿರುವ ಮಕ್ಕಳನ್ನು ನಾಜೂಕಾಗಿ ನಿಭಾಯಿಸುವ ಕೌಶಲಗಳನ್ನು ಕರಗತ ಮಾಡಿಕೊಳ್ಳಬೇಕಾದುದು ಶಿಕ್ಷಕರಿಗೆ ಅನಿವಾರ್ಯ
Published : 10 ಆಗಸ್ಟ್ 2024, 0:04 IST
Last Updated : 10 ಆಗಸ್ಟ್ 2024, 0:04 IST
ಫಾಲೋ ಮಾಡಿ
Comments

ಅದು ಶಿಕ್ಷಕರ ಕೌಶಲಾಭಿವೃದ್ಧಿ ತರಬೇತಿ ಕಾರ್ಯಕ್ರಮ. ಸಂವಾದದಲ್ಲಿ ಭಾಗವಹಿಸಿದ್ದ ಶಿಕ್ಷಕಿ
ಯೊಬ್ಬರು ತಮ್ಮ ಸಮಸ್ಯೆಯನ್ನು ಮುಂದಿಟ್ಟರು. ‘ಐದನೇ ತರಗತಿಯ ಹುಡುಗಿಯೊಬ್ಬಳು ಯಾವುದೇ ಹೋಮ್‌ವರ್ಕ್‌ ಕೊಟ್ಟರೂ ಮಾಡಿಕೊಂಡು ಬರುವುದಿಲ್ಲ. ಹೋಮ್‌ವರ್ಕ್ ಮಹತ್ವವನ್ನು ಆಕೆಗೆ ತಿಳಿಸಿ ಹೇಳಿದ್ದಾಯ್ತು, ಗದರಿಸಿಯೂ ಆಯ್ತು. ಅವಳ ತಾಯಿಗೂ ವಿಷಯ ತಿಳಿಸಿದೆ. ಆಕೆಯ ವರ್ತನೆಯಲ್ಲಿ ಏನೂ ಬದಲಾವಣೆಯಿಲ್ಲ. ಮನೆಯಲ್ಲಿ ಮಗುವಿಗೆ ಅಭ್ಯಾಸ ಮಾಡಿಸಿ ಎಂದು ಅವಳ ತಾಯಿಗೆ ಹಲವು ಸಲ ಹೇಳಿ ನೋಡಿದೆ. ನೀವು ಶಿಕ್ಷಕರು, ನೀವೇ ಅವಳಿಗೆ ಹೇಳಿ ಮಾಡಿಸಬೇಕು. ಇದೆಲ್ಲಾ ನಿಮ್ಮ ಜವಾಬ್ದಾರಿ, ನಮ್ಮದಲ್ಲ ಎನ್ನುತ್ತಾರೆ’ ಎಂದರು.

ಮುಂದುವರಿದ ಅವರು, ‘ಹಾಗಂತ ಆ ಹುಡುಗಿ ದಡ್ಡಿ ಅಂತಲ್ಲ. ಟಿ.ವಿ. ಧಾರಾವಾಹಿಗಳ ಹೆಸರು, ಅದರ ಕತೆಯನ್ನೆಲ್ಲಾ ಪಟಪಟನೆ ಹೇಳ್ತಾಳೆ. ಮೊಬೈಲ್‌ ಬಳಕೆಯಲ್ಲೂ ಎಕ್ಸ್‌ಪರ್ಟ್. ಆದರೆ ಓದು, ಬರಹದಲ್ಲಿ ಮಾತ್ರ ಸ್ವಲ್ಪವೂ ಆಸಕ್ತಿ ಇಲ್ಲ. ಅವಳನ್ನು ತಿದ್ದಲು ತುಂಬಾ ಪ್ರಯತ್ನಿಸಿದೆ. ಅಂಕಗಳು ಕಡಿಮೆ ಬಂದಾಗ, ಸರಿಯಾಗಿ ಪಾಠ ಮಾಡುವುದಿಲ್ಲ ಎಂದು ನಮ್ಮನ್ನೇ ದೂರುವುದರಿಂದ ಮನಸ್ಸಿಗೆ ತುಂಬಾ ಹಿಂಸೆಯಾಗುತ್ತದೆ. ಹಾಗಾದರೆ ಇಲ್ಲಿ ಪೋಷಕರ ಜವಾಬ್ದಾರಿ ಏನೂ ಇಲ್ಲವೇ?’ ಎಂದು ಬೇಸರದಿಂದಲೇ ಪ್ರಶ್ನಿಸಿದರು. ಆಗ ಸಹೋದ್ಯೋಗಿಗಳು ತಲೆಯಾಡಿಸುತ್ತಾ ಆ ಶಿಕ್ಷಕಿಯನ್ನು ಬೆಂಬಲಿಸಿದರು!

‘ಆಕೆಯ ಹೆತ್ತವರನ್ನು ಶಾಲೆಗೆ ಕರೆಸಿ ಮಾತನಾಡಿ. ಹೋಮ್‌ವರ್ಕ್‌ ಕೊಡುವ ಉದ್ದೇಶ, ಮನೆಯಲ್ಲಿ ಅಭ್ಯಾಸ ಮಾಡಿಸುವುದರ ಮಹತ್ವವನ್ನು ತಿಳಿ ಹೇಳಿ. ಪೋಷಕರ ಸಹಕಾರ ಇದ್ದಾಗಷ್ಟೇ ಮಗುವಿನ ವರ್ತನೆಯಲ್ಲಿ ಬದಲಾವಣೆ ತರಬಹುದು ಎಂಬುದನ್ನು ಮನದಟ್ಟು ಮಾಡಿಸಿದಾಗ ಮಾತ್ರ ನಿಮ್ಮ ಕಲಿಸುವ ಕೆಲಸ ಹಗುರವಾಗುವುದು’ ಎಂದೆ. ತರಬೇತುದಾರನಾಗಿ ಪಾಲ್ಗೊಂಡಿದ್ದ ನಾನು, ಶಿಕ್ಷಕರು ಆಪ್ತಸಮಾಲೋಚನೆಯ ಕೌಶಲವನ್ನೂ ಕಲಿಯಬೇಕಾದ ಅಗತ್ಯವನ್ನು ಒತ್ತಿ ಹೇಳಿದರೂ ಆ ಶಿಕ್ಷಕಿಯ ಮುಖದಲ್ಲಿ ಅಂತಹ ಸಮಾಧಾನವೇನೂ ಕಾಣಿಸಲಿಲ್ಲ!

ಹೌದು, ಕಲಿಸುವ ಕಾಯಕವನ್ನು ಪ್ರಾಮಾಣಿಕತೆ, ಶ್ರದ್ಧೆ, ನಿಷ್ಠೆಯಿಂದ ಮಾಡುವ ಹಲವು ಶಿಕ್ಷಕರು ತಮ್ಮ ಪರಿಶ್ರಮಕ್ಕೆ ನಿರೀಕ್ಷಿತ ಪ್ರತಿಫಲ ಕಾಣದಾದಾಗ ಹತಾಶರಾಗುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಪೋಷಕರ ಸ್ಪಂದನೆ ಸರಿಯಾಗಿ ಸಿಗದಿರುವುದೇ ನಿರಾಶಾದಾಯಕ ಫಲಿತಾಂಶಕ್ಕೆ ಕಾರಣ. ಮಕ್ಕಳನ್ನು ಶಾಲೆಗೆ ಕಳುಹಿಸುವುದಷ್ಟೇ ತಮ್ಮ ಕೆಲಸ, ಅವರಿಗೆ ಉತ್ತಮ ಶಿಕ್ಷಣ ನೀಡುವ ಸಂಪೂರ್ಣ ಜವಾಬ್ದಾರಿ ಶಿಕ್ಷಕರದ್ದು ಎಂಬ ಮನೋಭಾವ ಹಲವು ಪಾಲಕರಲ್ಲಿದೆ.

ಮನೆಯ ವಾತಾವರಣ ವೇಗವಾಗಿ ಬದಲಾವಣೆ ಹೊಂದುತ್ತಿರುವ ಇಂದಿನ ಕಾಲಘಟ್ಟದಲ್ಲಿ, ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಕಲಿಸುವಲ್ಲಿ ಶಿಕ್ಷಕರು ಹಲವು ತೊಡಕು, ಸವಾಲುಗಳನ್ನು ಎದುರಿಸುತ್ತಿದ್ದಾರೆ. ಹಿಂದೆ ಕೂಡುಕುಟುಂಬದಲ್ಲಿದ್ದ ಶಿಕ್ಷೆ, ರಕ್ಷೆ, ಶಿಸ್ತು, ಸಾಂತ್ವನ, ಪ್ರೀತಿ, ಮಾರ್ಗದರ್ಶನ, ಬೆಂಬಲ ಇಂದಿನ ಸಣ್ಣ ಸಣ್ಣ ಸಂಸಾರಗಳಲ್ಲಿ ಸಂಪೂರ್ಣವಾಗಿ ಕಾಣೆಯಾಗಿದೆ. ಟಿ.ವಿ., ಸಾಮಾಜಿಕ ಜಾಲತಾಣಗಳು ಎಳೆಯರನ್ನು ಸೆಳೆಯುತ್ತಾ ಮಾರ್ಗದರ್ಶಕ ಸ್ಥಾನವನ್ನು ಆಕ್ರಮಿಸಿವೆ. ಇತ್ತ ದುಡಿಮೆಯತ್ತಲೇ ಪೂರ್ಣ ಗಮನ ನೆಟ್ಟಿರುವ ಹೆತ್ತವರಿಗೆ ಮಕ್ಕಳ ಪಾಲನೆ ಆದ್ಯತೆಯ ವಿಷಯವಾಗಿ ಉಳಿದಿಲ್ಲ. ಪಾಲಕರ ದುರಭ್ಯಾಸಗಳೂ ಮಕ್ಕಳನ್ನು ತಪ್ಪುದಾರಿಗೆ ದೂಡುತ್ತಿವೆ. ತಮ್ಮ ಮಕ್ಕಳು ಓದನ್ನು ನಿರ್ಲಕ್ಷಿಸುತ್ತಾ ಸದಾ ಟಿ.ವಿ., ಕಂಪ್ಯೂಟರ್‌, ಮೊಬೈಲ್‌ ಜೊತೆಗೆ ಕಾಲ ಕಳೆಯುತ್ತಾರೆ ಎಂಬುದು ಪೋಷಕರ ಸಾಮಾನ್ಯ ದೂರು. ಆದರೆ, ಮನೆಯಲ್ಲಿ ಹಿರಿಯರು ಈ ಸಾಧನಗಳ ಬಳಕೆ ಕಡಿಮೆ ಮಾಡಿದಾಗಲಷ್ಟೇ ಮಕ್ಕಳು ಅವರನ್ನು ಅನುಕರಿಸುವುದು!

ಈಗಿನ ಮಕ್ಕಳು ಅವಮಾನ ಸಹಿಸರು, ಸವಾಲುಗಳು, ಕಷ್ಟಗಳನ್ನು ಎದುರಿಸುವ ಮನೋಭಾವವೂ ಹೆಚ್ಚಿನ ಎಳೆಯರಿಗಿಲ್ಲ. ತುಂಬಾ ಸೂಕ್ಷ್ಮ ಮನಃಸ್ಥಿತಿ ಹೊಂದಿರುವ ಇವರನ್ನು ನಾಜೂಕಾಗಿ ನಿಭಾಯಿಸುವ ಕೌಶಲಗಳನ್ನು ಕರಗತ ಮಾಡಿಕೊಳ್ಳುವುದು ಶಿಕ್ಷಕರಿಗೆ ಅನಿವಾರ್ಯ. ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಪೋಷಕರೂ ಶಿಕ್ಷಕರೊಟ್ಟಿಗೆ ಸಹಕರಿಸಬೇಕು. ಅವರ ಅನುಚಿತ ವರ್ತನೆಗಳನ್ನು ಗಮನಕ್ಕೆ ತಂದಾಗ ಸೂಕ್ತವಾಗಿ ಸ್ಪಂದಿಸಬೇಕು. ಹೆಚ್ಚಿನ ಸಂದರ್ಭಗಳಲ್ಲಿ ಮಕ್ಕಳ ಕೆಟ್ಟ ನಡವಳಿಕೆಗಳಿಗೆ ಪೋಷಕರ ಅಂತಹ ಚಾಳಿಗಳೇ ಪ್ರಮುಖ ಕಾರಣ. ಹಾಗಾಗಿ, ಹೆತ್ತವರು ತಮ್ಮ ಮಕ್ಕಳ ಹಿತದೃಷ್ಟಿಯಿಂದ ತಮ್ಮನ್ನು ಮೊದಲು ತಿದ್ದಿಕೊಳ್ಳುವುದು ಮುಖ್ಯ.

ಅತಿಯಾಗಿ ಶಿಸ್ತನ್ನು ಹೇರುವ, ಸಣ್ಣಪುಟ್ಟದ್ದಕ್ಕೆಲ್ಲಾ ಶಿಕ್ಷಿಸುವ, ಭಯದಿಂದಲೇ ಎಳೆಯರನ್ನು ಬೆಳೆಸುವ ಸರ್ವಾಧಿಕಾರಿ ಪೋಷಕತ್ವದಂತೆ, ಮಕ್ಕಳಿಗೆ ಯಾವುದೇ ಕೊರತೆ ಕಾಡಬಾರದೆಂದು ಕೇಳಿದ್ದನ್ನೆಲ್ಲಾ ಕೊಡಿಸುವ, ಅವರನ್ನು ಸದಾ ಸುಖದಲ್ಲಿ ಇರಿಸುವ ಉದಾರಿ ಪಾಲಕತ್ವವೂ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತದೆ. ಹಾಗೆಯೇ ಮಕ್ಕಳ ಬೇಕು ಬೇಡಗಳ ಬಗ್ಗೆ ಸ್ವಲ್ಪವೂ ತಲೆಕೆಡಿಸಿಕೊಳ್ಳದ, ಅವರನ್ನು ಸಂಪೂರ್ಣವಾಗಿ ಅಲಕ್ಷಿಸುವ ನಿರ್ಲಕ್ಷ್ಯತನದ ಪೋಷಕತ್ವವೂ ಹಾನಿಕರವೆ.

ಮಕ್ಕಳೊಂದಿಗೆ ಸಮಾಲೋಚಿಸುವ, ಅವರ ಬೆಳವಣಿಗೆ, ಶಿಕ್ಷಣಕ್ಕೆ ಅಗತ್ಯವಾದ ಸೌಕರ್ಯಗಳನ್ನು ಒದಗಿಸುವ, ಶಾಲೆಯೊಂದಿಗೆ ಸದಾಸಂಪರ್ಕದಲ್ಲಿದ್ದು ಎಳೆಯರ ಸರ್ವತೋಮುಖ ವಿಕಾಸಕ್ಕೆ ಪೂರಕ ವಾತಾವರಣ ಕಲ್ಪಿಸಿಕೊಡುವ ವಿಶ್ವಾಸಾರ್ಹ ಪೋಷಕತ್ವ ಸದ್ಯದ ಅಗತ್ಯ ಎಂಬುದನ್ನು ಹೆತ್ತವರು ಮನಗಾಣಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT