ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಕೆಲಸದ ಆಚೆಯೂ ಒಂದು ಬದುಕಿದೆ

ಸತತ ಕೆಲಸಕ್ಕಾಗಿ ಆಯಸ್ಸನ್ನು ಖರ್ಚು ಮಾಡಿದರೆ ನಾವು ಯಾವ ವಯಸ್ಸಿನಲ್ಲಿ ಬದುಕನ್ನು ಸಂಭ್ರಮಿಸಬೇಕು?
Published 20 ಜೂನ್ 2023, 22:01 IST
Last Updated 20 ಜೂನ್ 2023, 22:01 IST
ಅಕ್ಷರ ಗಾತ್ರ

ವೃದ್ಧರೊಬ್ಬರು ಪುಟ್ಟ ಹೋಟೆಲ್ ನಡೆಸುತ್ತಾರೆ. ಬೆಳಿಗ್ಗೆ ಏಳರಿಂದ ಹನ್ನೊಂದು ಮತ್ತು ಸಂಜೆ ನಾಲ್ಕರಿಂದ ಏಳು ಗಂಟೆವರೆಗೆ ಮಾತ್ರ ಅವರು ಹೋಟೆಲ್‌ನ ಬಾಗಿಲು ತೆರೆಯುತ್ತಾರೆ. ವ್ಯಾಪಾರ ಹೆಚ್ಚೇನೂ ಇಲ್ಲ, ಸಮಾಧಾನಕರವಾಗಿದೆ ಅಷ್ಟೆ. ‘ನೀವೇಕೆ ದಿನಪೂರ್ತಿ ಬಾಗಿಲು ತೆರೆದು ಕೂರಬಾರದು? ಹೆಚ್ಚು ವ್ಯಾಪಾರ ನಡೆದು, ಹೆಚ್ಚು ಹಣ ಬರುತ್ತೆ’ ಅಂದೆ. ‘ನಾನು ದುಡಿಯಲು ಬದುಕಿದವನಲ್ಲ, ಬದುಕಲು ದುಡಿಯುವವನು’ ಅನ್ನಬೇಕೆ? ಕೆಲಸ, ಬಿಡುವು, ಬದುಕು, ಖುಷಿ ಇದರ ಬಗ್ಗೆಯೆಲ್ಲಾ ಮಾತಾಡಿದರು.‌ ಕೆಲಸದ ಬಗೆಗೆ ಅವರ ಧೋರಣೆ ಇಷ್ಟವಾಯಿತು.‌

ನಾನು ಹೊಸದಾಗಿ ಕೆಲಸಕ್ಕೆ ಸೇರಿದಾಗ ನನ್ನ ಕರ್ತವ್ಯದ ಅವಧಿ ಮುಗಿದರೂ ಅಲ್ಲೇ ಏನಾದರೂ ಮಾಡುತ್ತಾ ಕೂತಿರುತ್ತಿದ್ದೆ.‌ ಒಬ್ಬನೇ ರೂಮಿನಲ್ಲಿ ಮಾಡುವುದಾದರೂ ಏನು ಎಂಬುದು ನನ್ನ ವಿಚಾರವಾಗಿತ್ತು. ಕೆಲವೊಮ್ಮೆ ಭಾನುವಾರವೂ ಕಚೇರಿ ಕಡೆ ಹೋಗುತ್ತಿದ್ದೆ.‌ ಒಂದು ದಿನ ಮ್ಯಾನೇಜರ್ ಕರೆದು ಹೇಳಿದರು ‘ಈ ಅಭ್ಯಾಸ ಸರಿ ಅಲ್ಲ. ಕೆಲಸದಷ್ಟೇ ವಿರಾಮವೂ ಮುಖ್ಯ. ಕೆಲಸದ ಗೀಳು ಹೀಗೆ ರೂಢಿಯಾಗಿಬಿಟ್ಟರೆ ನಿನಗೂ ಮತ್ತು ಆ ಕಚೇರಿಯ ಬೇರೆಯವರಿಗೂ ಕಿರಿಕಿರಿ. ಸದಾ ದುಡಿಯುತ್ತಾ ಇರೋದು ಒಳ್ಳೆಯ ಜೀವನದ ಲಕ್ಷಣ ಅಲ್ಲ’ ಎಂದರು. ಅಂದಿನಿಂದ ಕೆಲಸದ ಬಗೆಗಿನ ನನ್ನ ಅಭಿಪ್ರಾಯ ಬದಲಾಯಿತು.

ನಾವೀಗ ಹೆಚ್ಚು ದುಡಿಯಬೇಕು, ಸತತವಾಗಿ ದುಡಿಯುಬೇಕು, ಕೆಲಸವೊಂದು ಗೀಳು ಆಗಬೇಕು ಅನ್ನುವ ಕಾಲದಲ್ಲಿದ್ದೇವೆ. ಹೆಚ್ಚು ಹೆಚ್ಚು ದುಡಿದಷ್ಟೂ ಮನುಷ್ಯ ಹೆಚ್ಚು ಸುಖವಾಗಿರಬೇಕಿತ್ತು, ಖುಷಿಯಾಗಿರಬೇಕಿತ್ತು. ಆದರೆ ಅದು ಹಾಗಾಗುತ್ತಿಲ್ಲ. ನಮಗೆ ಎಷ್ಟು ದುಡಿಯಬೇಕು ಎಂಬುದರ ಬಗ್ಗೆ ಅಂದಾಜಿಲ್ಲದ ಕಾರಣ ಮತ್ತೆ ಮತ್ತೆ ದುಡಿಯುತ್ತೇವೆ ಮತ್ತು ಮೊದಲಿನಷ್ಟೇ ತೊಳಲಾಡುತ್ತೇವೆ. ಮೊದಲು ಮನುಷ್ಯ ಕಡಿಮೆ ದುಡಿಯುತ್ತಿದ್ದ ಹೆಚ್ಚು ಖುಷಿಯಾಗಿದ್ದ, ಈಗ ಹೆಚ್ಚು ದುಡಿಯುತ್ತಿದ್ದಾನೆ ಕಡಿಮೆ ಖುಷಿಯಾಗಿದ್ದಾನೆ.

ಕೆಲಸ ಕಡಿಮೆ ಮಾಡಬೇಕು ಅನ್ನುವುದರ ಹಿಂದೆ ವಿರಾಮ ಬೇಕು ಅನ್ನುವ ಅರ್ಥವಿದೆ. ವಿರಾಮ ಅನ್ನುವುದನ್ನು ಸೋಮಾರಿತನ ಎಂದು ಅರ್ಥೈಸಿಕೊಳ್ಳಬಾರದು. ಈ ಎರಡರ ನಡುವೆ ಸೂಕ್ಷ್ಮ ಅರ್ಥವ್ಯತ್ಯಾಸಗಳಿವೆ. ಬಿಡುವನ್ನು ಬಳಸಿಕೊಳ್ಳುವುದರ ಬಗ್ಗೆ ವಿರಾಮ ವ್ಯಾಖ್ಯಾನಿಸುತ್ತದೆ. ವಿರಾಮದಲ್ಲಿ ಬದುಕನ್ನು ಪರಿಣಾಮಕಾರಿಯಾಗಿಸುವ ಬಹಳಷ್ಟು ಅವಕಾಶಗಳಿವೆ.

ಮನುಷ್ಯನ ನಾಗರಿಕತೆಯನ್ನು ಗಮನಿಸಿದರೆ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಯಂತಹವು ಹೇಗೆ ರೂಪುಗೊಂಡವು ಎಂಬುದು ಗೊತ್ತಾಗುತ್ತದೆ. ಅವನು ಬರೀ ದುಡಿದುಕೊಂಡೇ ಇದ್ದರೆ ಕಲೆ ಸಾಧ್ಯವಾಗುತ್ತಿರಲಿಲ್ಲ. ಅವನು ತನಗೆ ಎಷ್ಟು ಬೇಕೊ ಅಷ್ಟು ದುಡಿಯುತ್ತಿದ್ದ. ಉಳಿದ ಸಮಯವನ್ನು ತನಗೆ ಖುಷಿ ಕೊಡುವ ಚಟುವಟಿಕೆಗಳಲ್ಲಿ ಕಳೆಯುತ್ತಿದ್ದ. ಅದು ಅವನ ಜೀವನದ ಗುಣಮಟ್ಟದ ಗುಟ್ಟನ್ನು ಹೇಳುತ್ತದೆ.

ಅರ್ಥಶಾಸ್ತ್ರಜ್ಞ ಜಾನ್ ಮೇನಾರ್ಡ್ ಕೀನ್ಸ್, ನಮ್ಮಲ್ಲಿರುವ ಉತ್ಪಾದಕತೆ ಮತ್ತು ತಂತ್ರಜ್ಞಾನವನ್ನು ಆಧರಿಸಿ ಸುಖವಾಗಿ ಬದುಕಲು ವಾರಕ್ಕೆ ಹದಿನೈದು ಗಂಟೆಗಳ ಕೆಲಸ ಮಾತ್ರ ಸಾಕು ಅಂತ ಸುಮಾರು ತೊಂಬತ್ತು ವರ್ಷದ ಹಿಂದೆಯೇ ಹೇಳಿದ್ದಾನೆ. ನಾವು ವಾರಕ್ಕೆ ಎಷ್ಟು ಗಂಟೆ ದುಡಿಯುತ್ತೇವೆ ಮತ್ತು ಅದೆಷ್ಟು ಖುಷಿಯಾಗಿದ್ದೇವೆ ಯೋಚಿಸಿ. ಇಂದಿಗೂ ಕೆಲವು ಆದಿವಾಸಿಗಳು ವಾರಕ್ಕೆ ಹದಿನೈದು ದಿನ ಕೆಲಸ ಮಾಡಿ ಖುಷಿಯಾಗಿರುವ ಉದಾಹರಣೆಗಳಿವೆ. 

ಬಹುತೇಕ ದೇಶಗಳಲ್ಲಿ ನೌಕರರು ವಾರಕ್ಕೆ ಐದು ದಿನವಷ್ಟೇ ಕೆಲಸ ಮಾಡುತ್ತಾರೆ. ನಮ್ಮಲ್ಲೂ ನೌಕರರಿಗೆ ಐದು ದಿನ ಮಾತ್ರ ಕೆಲಸ ನೀಡುವ ಬಗ್ಗೆ ಚರ್ಚೆಗಳಾಗುತ್ತಿವೆ. ಇದು ಒಳ್ಳೆಯ ಬೆಳವಣಿಗೆ. ಉಳಿದ ಎರಡು ದಿನಗಳಲ್ಲಿ ಅವನು ಸಿನಿಮಾ ನೋಡಬಹುದು, ಪ್ರವಾಸ ಹೊರಡಬಹುದು, ಓದಬಹುದು, ಸಂಗೀತ ಕಲಿಯಬಹುದು, ಆಟ ಆಡಬಹುದು, ಇಲ್ಲವೇ ಚೆನ್ನಾಗಿ ನಿದ್ರಿಸಬಹುದು, ಗೆಳೆಯರೊಂದಿಗೆ ಬೆರೆಯಬಹುದು. ಇಂತಹ ಹತ್ತಾರು ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಅವನ ಬದುಕಿನ ಗುಣಮಟ್ಟವನ್ನು ಹೆಚ್ಚಿಸುತ್ತವೆ. 

ನಿರಂತರ ಕೆಲಸದಿಂದ ದೇಹ ಬಳಲುತ್ತದೆ. ಮನಸ್ಸಿಗೂ ಸುಸ್ತು. ಬೇರೆ ಯಾವುದರ ಕಡೆಗೂ ಆಸಕ್ತಿ ಉಳಿಯುವುದಿಲ್ಲ. ಬರೀ ದುಡಿಮೆಯೊಂದೇ ಬದುಕು ಅಂತ ಆಗಿಬಿಟ್ಟರೆ ಅವನ ಬದುಕಿನ ಗುಣಮಟ್ಟ ಕುಸಿದುಹೋಗುತ್ತದೆ. ಬದುಕು ಸಾಕು ಅನಿಸುತ್ತದೆ. ಕೆಲವರು ದುಡಿಯುವ ವಯಸ್ಸಿನಲ್ಲಿ ದುಡಿಯಬೇಕು ಅನ್ನುತ್ತಾರೆ. ದುಡಿಯುವ ವಯಸ್ಸು ಕೂಡ ಬದುಕು ಸವಿಯುವ ವಯಸ್ಸೇ ಆಗಿರುತ್ತದೆ. ಸತತ ಕೆಲಸಕ್ಕಾಗಿ ಆಯಸ್ಸನ್ನು ಖರ್ಚು ಮಾಡಿದರೆ ನಾವು ಯಾವ ವಯಸ್ಸಿನಲ್ಲಿ ಬದುಕನ್ನು ಸಂಭ್ರಮಿಸಬೇಕು?

ಎಷ್ಟು ಬೇಕೋ ಅಷ್ಟು ಮಾತ್ರ ಕೆಲಸ ಮಾಡಿದವರು ಕಡಿಮೆ ಸಾಧಿಸಿದ್ದಾರೆ, ಹೆಚ್ಚು ಕೆಲಸ ಮಾಡಿದವರು ಹೆಚ್ಚು ಸಾಧಿಸಿದ್ದಾರೆ ಎಂದು ಹೇಳಲು ಯಾವ ಆಧಾರವೂ ಇಲ್ಲ ಎಂದು ಈ ಕುರಿತು ಅಧ್ಯಯನ ಮಾಡಿದ ಬಾಸ್ಟನ್ನಿನ ಪ್ರೊಫೆಸರ್ ಎರಿನ್ ರೀಡ್ ಹೇಳುತ್ತಾರೆ. ಲೇಖಕ ಸುಜ್‍ಮನ್‍ ತನ್ನ ‘ವರ್ಕ್’ ಎಂಬ ಪುಸ್ತಕದಲ್ಲಿ ಕೆಲಸದ ಇತಿಹಾಸದ ಬಗ್ಗೆ ಹೇಳುತ್ತಾ, ಹೆಚ್ಚು ದುಡಿಯುವುದು ಹೇಗೆ ಬದುಕಿನ ಒಳ್ಳೆಯ ಸಮಯವನ್ನು ಕಬಳಿಸುತ್ತದೆ ಎಂಬುದನ್ನು ತುಂಬಾ ಅರ್ಥಗರ್ಭಿತವಾಗಿ ಚರ್ಚಿಸಿದ್ದಾರೆ. 

ಕೆಲವು ಶಿಕ್ಷಕರು ರಜೆಯನ್ನು ಅನುಲಕ್ಷಿಸಿ ಭಾನುವಾರವೂ ದುಡಿಯುತ್ತಾರೆ. ಕಂಪನಿಗಳಲ್ಲಿ ನೌಕರರು ಓ.ಟಿ. ಬೆನ್ನು ಹತ್ತುತ್ತಾರೆ. ರೈತ ಹಗಲು– ರಾತ್ರಿ ಹೊಲದಲ್ಲಿರುತ್ತಾನೆ. ಕೆಲವರಂತೂ ದಿನಕ್ಕೆ ಹದಿನಾರು ಗಂಟೆ ಆಟೊ ಓಡಿಸುತ್ತಾರೆ. ಇನ್ನು ಕೆಲವರದು ಸಮಯವೇ ಇರದ ದುಡಿಮೆ... ಹೀಗೆ ನಾವೆಲ್ಲಾ ಸತತವಾಗಿ ಕೆಲಸದ ಬೆನ್ನು ಹತ್ತಿ, ಪಡೆದುಕೊಂಡಿದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು.

‘ಕತ್ತೆ ದುಡಿದ ಹಾಗೆ ದುಡಿಯುತ್ತಾರೆ, ಆದರೂ ಮೇಲೆ ಬಂದಿಲ್ಲ’ ಎನ್ನುವ ಮಾತನ್ನು ನೀವು ಕೇಳಿರಬಹುದು. ಹೆಚ್ಚಿನ ದುಡಿಮೆ ಬದುಕಿನ ಗುರಿಯ ಮೇಲಿನ ಗಮನವನ್ನು ತಪ್ಪಿಸಬಹುದು. ಮೈ ಬಗ್ಗಿಸಿ ದುಡಿಯುವುದು ಮಾತ್ರವಲ್ಲ, ಯಾಕೆ ಈ ಕೆಲಸ, ಏನು ಉಪಯೋಗ ಎಂದು ಯೋಚಿಸಬೇಕು. ಏಕೆಂದರೆ ಬದುಕು ಎನ್ನುವುದು ಕೆಲಸದ ಆಚೆಯೂ ಇದೆ! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT