ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮರಣ; ಏಕಿಷ್ಟು ವೈಭವೀಕರಣ?

ಮರಣವೆಂಬ ನೈಸರ್ಗಿಕ ವಿದ್ಯಮಾನ ನಮ್ಮನ್ನು ಅತಿಯಾಗಿ ಕಾಡಬಾರದು
Published 28 ಮಾರ್ಚ್ 2024, 21:35 IST
Last Updated 28 ಮಾರ್ಚ್ 2024, 21:35 IST
ಅಕ್ಷರ ಗಾತ್ರ

ಸಾವು ಎಂಬುದು ಬದುಕಿನ ಸ್ವಾಭಾವಿಕ ಕ್ರಿಯೆ. ಹುಟ್ಟಿದ್ದೆಲ್ಲ ಒಂದಿಲ್ಲೊಂದು ದಿನ ಗತಿಸಲೇಬೇಕು. ಹೀಗಿದ್ದೂ ಮರಣವೆಂಬ ನೈಸರ್ಗಿಕ ವಿದ್ಯಮಾನ ನಮ್ಮನ್ನೇಕೆ ಈ ಪರಿ ಕಾಡಬೇಕು? ಸಹಜವಾದದ್ದರ ಬಗ್ಗೆ ಭಯಪಡುವುದು ಅಸಹಜ. ಪ್ರೀತಿಪಾತ್ರರಾದವರ ಮೃತ್ಯು ನಮ್ಮ ಪಾಲಿಗೆ ನಿರ್ಭಾಗ್ಯ ಅನುಭವ ಆಗಬೇಕಿಲ್ಲ. ನಮ್ಮ ಆಪ್ತೇಷ್ಟರು ಕಾಲವಶರಾದರೆ ಅದಕ್ಕೂ ಅನಾಹುತ, ಕೇಡು ಮತ್ತೊಂದಿಲ್ಲ ಎನ್ನುವಂತೆ ತಲ್ಲಣ, ತಳಮಳಗಳಿಗೆ ಸಿಲುಕಿರುತ್ತೇವಲ್ಲ. ಇದು ಅನಿವಾರ್ಯವೇ?

ನಾವು ದುರಂತಕ್ಕಿಂತ ಗಟ್ಟಿ ಎನ್ನುವ ತಥ್ಯ ಸವಕ ಲಾಗಬಾರದು. ‘ತುಂಬಲಾಗದ ನಷ್ಟ’, ‘ಜಗತ್ತೇ ಶೂನ್ಯವಾಗಿದೆ’, ‘ವಿಧಿ ಅದೆಷ್ಟು ನಿರ್ದಯಿ’ ಎಂದೆಲ್ಲ, ಕಾಲವಶರಾದವರ ಬಗ್ಗೆ ಸ್ಥಾಪಿತ ಅಂಬೋಣಗಳು. ನೆಂಟರಿಷ್ಟರ ಅಗಲಿಕೆ ಅವರನ್ನು ಮರೆಯಲು ಕಾರಣ ಆಗಬೇಕಿಲ್ಲ. ಇಷ್ಟಾದರೂ ಸ್ಮಾರಕ ನಿರ್ಮಾಣಕ್ಕೆ ಒತ್ತಾಯ. ಸಾರ್ವಜನಿಕ ರಸ್ತೆಗೊ, ಕಟ್ಟಡಕ್ಕೊ ಇಲ್ಲವೆ ಸೇತುವೆಗೊ ಮೃತರ ಹೆಸರನ್ನಿಡುವಂತೆ ಮನವಿಗಳ ಮಹಾಪೂರ. ಅವು ಚಳವಳಿಗಳಾಗಿ ಹಿಂಸಾರೂಪ ತಳೆಯುವುದೂ ಉಂಟು.

ನಿರಾಳ, ಸಂರಚಿತ ಹಾಗೂ ಕ್ರಮಬದ್ಧವಾದ ಸಾವು ನಮ್ಮನ್ನು ಬೆದರಿಸದು, ನಾವು ಅದಕ್ಕೆ ಬೆದರುತ್ತೇವೆ ಅಷ್ಟೆ! ಸಾವಿನ ವಾಸ್ತವ ಅರಿತರೆ ನಮಗೆ ಶೋಕ ಎನ್ನುವುದಿರದು. ದುಃಖವು ಸಂಬಂಧವನ್ನು ಕುರಿತದ್ದು. ಬುದ್ಧಿಗಿಂತ ಭಾವಕ್ಕೆ ಹೆಚ್ಚು ಮಹತ್ವ ನೀಡುತ್ತೇವೆ. ನಾವೆಂದೂ ಭೇಟಿಯೇ ಆಗಿಲ್ಲದಿರುವವರು
ಮರಣಿಸಿದಾಗಲೂ ವ್ಯಥೆ ಆವರಿಸಿರುತ್ತದೆ. ಆತ್ಮೀಯರಾದವರ ಅಗಲಿಕೆಯ ನೋವನ್ನು ಸಹಿಸಲಾಗದೆ ಆತ್ಮಹತ್ಯೆಗೆ ಶರಣಾಗುವ ಪ್ರಸಂಗಗಳಂತೂ ಅದೆಷ್ಟು ದಾರುಣ. ತಮಗೂ ವರ್ತಮಾನವಿದೆ, ಬದುಕಿದೆ, ಅದನ್ನು ಮೌಲಿಕವಾಗಿ ನಿರ್ವಹಿಸಬೇಕೆಂಬ ಪ್ರಬುದ್ಧತೆಯ ಕೊರತೆ ಇಂತಹ ವಿಪರ್ಯಾಸಗಳಿಗೆ ಹಾದಿಯಾಗುತ್ತದೆ.

ಕೊರಗು ಆತ್ಮವಿಶ್ವಾಸವನ್ನು ಕಸಿಯುತ್ತದೆ. ನಮಗೆ ಮುಖ್ಯರೆನಿಸಿದ್ದವರ ನಿಧನಕ್ಕೆ ನಾವು ಸಲ್ಲಿಸುವ ಸಂತಾಪವು ಒಂದು ನೈಜ ಪ್ರಕ್ರಿಯೆ. ತಂತಾನೇ ಶಮನಗೊಳ್ಳುವ ಬೇಸರ, ಬೇನೆಗೆ ಅಲ್ಲೋಲಕಲ್ಲೋಲದ ಹಣೆಪಟ್ಟಿ ಕಟ್ಟಿ ಮತ್ತಷ್ಟು ದುಗುಡ ಹೇರಿ ಕೊಳ್ಳುತ್ತೇವೆ. ಬಂಧುಮಿತ್ರರನ್ನು ಕಳೆದುಕೊಂಡ ದುಃಖವನ್ನು ಅವರೊಂದಿಗೆ ಕಳೆದ ಸವಿ ನೆನಪುಗಳೇ ಮಸುಕಾಗಿಸುತ್ತವೆ. ಕಾಲಕ್ಕಿಂತ ಸಮರ್ಥ ಚಿಕಿತ್ಸಕ ಇನ್ನೊಂದಿಲ್ಲ. ಅಂತೂ ಸಾವು ಸಂಭವಿಸುವತನಕ ಬದುಕಿದ್ದರಲ್ಲ ಎನ್ನುವ ದಿಟವೇ ನಮ್ಮನ್ನು ಸಾಂತ್ವನಗೊಳಿಸಲು ಸಾಕು. ಯಾರಿಗೂ, ಎಂದೂ ಆಗಬಾರದ ಅವಘಡ ಈಗ ಆಗಿಲ್ಲವೆಂಬ ಸಮಾಧಾನ ಮೂಡುತ್ತದೆ.

ಅಮರತ್ವ ಒಂದು ಕಳಂಕಿತ ಅಸ್ತಿತ್ವ. ಸಾವಿರದೆ ಯಾರೂ ಇರಲಾರರು. ರಾಜನು ಕೈಗೊಂಡ ದೀರ್ಘ ಕಠಿಣ ತಪಸ್ಸು ಫಲಿಸಿ ದೈವ ಪ್ರತ್ಯಕ್ಷ ಆಗುತ್ತದೆ. ಮೃತ್ಯುಂಜಯನಾಗು ಅಂತ ಅದು ಹರಸುತ್ತದೆ. ಒಡನೆಯೆ ತಪಸ್ವಿ ‘ಖಂಡಿತ ಒಲ್ಲೆ. ನನ್ನ ಕಣ್ಮುಂದೆಯೇ ನನ್ನ ಮಕ್ಕಳು, ಮರಿಮಕ್ಕಳು, ಪರಿವಾರ ಅಸುನೀಗುವುದು ಕೂಡದು’ ಎನ್ನುವನು. ನಮ್ಮ ಪುರಾಣ ಕಥೆಗಳಲ್ಲಿ ಇಂತಹ ವೃತ್ತಾಂತಗಳು ಅನೇಕ. ಡೆನ್ಮಾರ್ಕ್‌ನ  ಮಕ್ಕಳ ಸಾಹಿತಿ ಗ್ಲೆನ್‍ರಿಂಗ್ ಟಿವಿಡ್ ಪ್ರಶ್ನಿಸುವಂತೆ, ಮರಣವೇ ಇಲ್ಲದಿದ್ದರೆ ಜೀವನಕ್ಕೇನು ಬೆಲೆ? ಮಳೆ ಎನ್ನುವುದಿರದಿದ್ದರೆ ಸೂರ್ಯನನ್ನು ಹೊಗಳುವವರೇ ಇರರು. ಜಗತ್ತು ಸಾಗಿಬಂದಿರುವುದೇ ಜನನ ಮತ್ತು ಮರಣದಿಂದ. ರಾಮಾಯಣದಲ್ಲಿ ಭರತನನ್ನು ಸಂತೈಸುವ ಋಷಿಗಳು ‘ಪ್ರತಿಯೊಬ್ಬರೂ ಒಂದು ದಿನ ತಮ್ಮ ತಂದೆಯನ್ನು ಕಳೆದುಕೊಳ್ಳಲೇಬೇಕಲ್ಲ’ ಎನ್ನುತ್ತಾರೆ. ಸಾವಿರದ ಮನೆಯಿಲ್ಲ. ಮರಣವನ್ನು ಶಪಿಸುವುದು ಪರಿಸರವನ್ನು ಹಳಿದಂತೆ, ನಿಸರ್ಗದ ನಾಜೂಕು ಮತ್ತು ಶಿಸ್ತನ್ನು ನಿರಾಕರಿಸಿದಂತೆ.

ವೇದವ್ಯಾಸರು ತಮ್ಮ ಮಹಾಭಾರತದ ವನಪರ್ವದಲ್ಲಿ ‘ಬದುಕು ಅಶಾಶ್ವತ, ಒಂದಿಲ್ಲೊಂದು ದಿನ ಅಳಿಯುತ್ತೇವೆಂದು ಸಕಲರಿಗೂ ತಿಳಿದೇ ಇದೆ. ಆದರೂ ತಾನು ಮಾತ್ರ ಅಳಿಯೆನು ಎಂದು ಮನುಷ್ಯ ಭಾವಿಸಿದ್ದಾನೆ. ಇದಕ್ಕಿಂತ ಅಚ್ಚರಿಯಿಲ್ಲ’ ಎನ್ನುತ್ತಾರೆ. ಸಾವಿಗೆ ದೇಶ, ಗಡಿ, ವರ್ಗ, ಪಂಗಡ, ಜಾತಿ, ಭಾಷೆ ಎನ್ನುವ ಭೇದವಿಲ್ಲ. ಅದಕ್ಕೆ ಸಕಾಲಿಕ, ಅಕಾಲಿಕ ಎನ್ನುವುದೂ ಅಪ್ರಸ್ತುತ. ಹಾಗಿದ್ದರೂ ಇಂತಹ ಪದ್ಧತಿಯಂತೆ, ಇಂತಹ ಕ್ರಮದಂತೆ ಅಂತ್ಯವಿಧಿ ನೆರವೇರಲಿದೆ ಎಂಬ ಉದ್ಗಾರ ಎಷ್ಟು ಸಮಂಜಸ?

ಗತಿಸಿದವರ ಕುರಿತು ದುಃಖಪಡುವ ಬದಲಿಗೆ ಅವರ ಒಳ್ಳೆಯ ಗುಣಗಳನ್ನು ನಮ್ಮ ಬದುಕಿಗೆ ತಂದುಕೊಳ್ಳುವುದರಲ್ಲಿ ಅರ್ಥವಿದೆ. ಕೆ.ಶಿವರಾಮ ಕಾರಂತರು ತಮ್ಮ ‘ಅಳಿದ ಮೇಲೆ’ ಕಾದಂಬರಿಯಲ್ಲಿ ಮನೋಜ್ಞವಾದ ಸಂದೇಶವೊಂದನ್ನು ನೀಡಿದ್ದಾರೆ. ಸತ್ತಮೇಲೆ ಪುನರ್ಜನ್ಮ ಉಂಟೋ ಇಲ್ಲವೋ ತಿಳಿಯದು. ಮೃತರ ದಿವ್ಯಾದರ್ಶಗಳಿಗೆ ಕಟಿಬದ್ಧರಾದರೆ, ಅವರ ಸದಾಶಯಗಳನ್ನು ಕಾರ್ಯರೂಪಕ್ಕೆ ತಂದರೆ ಅದೇ ಅಗಲಿದವರ ಪುನರ್ಜನ್ಮ. ನಮ್ಮ ಜನಪದರ ಹಾಡು, ಹಸೆಗಳಲ್ಲಿ ಇದೇ ಧೋರಣೆಗಳು ವ್ಯಾಪಕವಾಗಿ ಅನಾವರಣಗೊಂಡಿವೆ. ‘ಸತ್ಯವುಳ್ಳ ಧರ್ಮರು ಸತ್ತರೆನ್ನಬೇಡಿ, ಬಿತ್ತು ಹೋಗವ್ರೆ ಅವರೇಯ’ ಎಂಬ ಧ್ವನಿಪೂರ್ಣ ಪದವೊಂದು ನಮ್ಮನ್ನು ಸೆಳೆಯುತ್ತದೆ. 

ಸ್ಮರಣಾರ್ಥ ಸ್ಥಾವರಗಳು ಕಾಲಪ್ರವಾಹಕ್ಕೆ ತತ್ತರಿಸಿ ನಲುಗುತ್ತವೆ. ಆದರೆ ಜಂಗಮಕ್ಕೆ ಮರಣವಿರದು. ತಮ್ಮ ಜೀವಿತದಲ್ಲಿ ಅಗಲಿದವರು ಅಳವಡಿಸಿ
ಕೊಂಡಿದ್ದ ಸನ್ನಡತೆಗಳ ಪೈಕಿ ಒಂದಾದರೂ ಸರಿಯೆ ಪಾಲಿಸುವಂತಾಗಬೇಕು. ಸ್ಮಾರಕಗಳು, ನಾಮಕರಣಗಳು ಕಟ್ಟಿಕೊಡದವನ್ನು ಅದು ತುಂಬಿರುತ್ತದೆ. ಸಾಧು, ಸಂತ, ಸಾಧಕರು ಆ ಮೂಲಕ ಮತ್ತೆ ಹುಟ್ಟಿಬಂದಿರುತ್ತಾರೆ. ಉಪದೇಶ ಮಾಡಬೇಡಿ ಬದುಕಿ ತೋರಿಸಿ ಎಂದರು ಕಾರಂತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT