ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಮಾರುತ ಸಂಗ್ರಹ: ಜಾಣ್ಮೆಯ ನಡೆ

ಶಕ್ತಿ ಸಂಪನ್ಮೂಲಗಳ ಎಗ್ಗಿಲ್ಲದ ವ್ಯಯವೇ ನಾಗರಿಕತೆಯ ನಾಗಾಲೋಟವಲ್ಲ!
Published 14 ಜೂನ್ 2023, 19:57 IST
Last Updated 14 ಜೂನ್ 2023, 19:57 IST
ಅಕ್ಷರ ಗಾತ್ರ

ಬಿ.ಎಸ್‌.ಭಗವಾನ್‌

ಗಾಳಿಗೂ ತೂಕವುಂಟು ಎನ್ನುವುದು ಶಾಲಾ ವಿದ್ಯಾರ್ಥಿಗಳು ಕಲಿಯುವ ಮೊದಲ ಪ್ರಾಯೋಗಿಕ ಪಾಠ. ಗಾಳಿಯು ನವೀಕರಿಸಬಹುದಾದ ಶಕ್ತಿ ಮೂಲ. ಈ ಪರಿಸರಸ್ನೇಹಿ ನಮಗೆ ಪ್ರಕೃತಿ ನೀಡಿರುವ ಅತ್ಯಮೂಲ್ಯ ಉಡುಗೊರೆ. ಮನುಷ್ಯನನ್ನು ದೋಣಿಗೆ, ಜ್ಞಾನವನ್ನು ಯಾನಕ್ಕೆ, ಚಿಂತನೆಯನ್ನು ಗಾಳಿಗೆ ಹೋಲಿಸುವ ಕವಿವಾಣಿಯಿದೆ. ವಿಮಾನವು ಚಂದ್ರನಲ್ಲಿ ಹಾರಲಾಗದು. ರೆಕ್ಕೆಗಳ ಕೆಳಗೆ ಮೇಲೆತ್ತಲು ಹಾಗೂ ಎಂಜಿನ್ನಿನಲ್ಲಿ ಗ್ಯಾಸೊಲಿನ್ ಉರಿಯಲು ಗಾಳಿ ಬೇಕು. ಗಾಳಿಯ ಹಿರಿಮೆಯನ್ನು ಮನಗಾಣಲು ಈ ಒಂದು ನಿದರ್ಶನವೇ ಸಾಕು.

ಇದೀಗ ಭಾರತದ ಪವನ ವಿದ್ಯುತ್‌ನ ಒಟ್ಟು ಉತ್ಪಾದನಾ ಸಾಮರ್ಥ್ಯ ವರ್ಷಕ್ಕೆ 42,633 ಮೆಗಾವಾಟ್‍ಗಳು. ಜಾಗತಿಕ ಮಟ್ಟದಲ್ಲಿ ಭಾರತ ಈ ದಿಸೆಯಲ್ಲಿ ನಾಲ್ಕನೆಯ ಸ್ಥಾನದಲ್ಲಿದೆ. ಇದು ಹೆಮ್ಮೆಯ ಸಂಗತಿ. ಕರ್ನಾಟಕದಲ್ಲಿ ಪವನ ವಿದ್ಯುತ್ ಘಟಕಗಳಿಂದ ವರ್ಷಕ್ಕೆ 5,500 ಮೆಗಾವಾಟ್‍ಗಳಷ್ಟು ಪ್ರಮಾಣದ ವಿದ್ಯುತ್ ಲಭಿಸುತ್ತಿದೆ. ಜಾಗತಿಕವಾಗಿ ದಿನವಹಿ ಪ್ರವಹಿಸುವ ಗಾಳಿಯಿಂದ ಆಯಾದಿನ ಇಡೀ ಭೂಗ್ರಹ ಬಳಸುವ 35 ಪಟ್ಟು ವಿದ್ಯುಚ್ಛಕ್ತಿ ಉತ್ಪಾದಿಸಲು ಸಾಧ್ಯವಿದೆ.

ಕೊರೊನಾ ಬಾಧಿಸುತ್ತಿದ್ದವರನ್ನು ವೆಂಟಿಲೇಟರ್ ದೊರಕುವತನಕ ಅವರ ಆಪ್ತರು ಟವೆಲ್‍ನಿಂದ ಗಾಳಿ ಬೀಸಿಯೊ ಅಥವಾ ಮೂಗಿನ ಮೂಲಕ ಉಸಿರು ಊದಿಯೊ ಉಪಚರಿಸುತ್ತಿದ್ದ ದೃಶ್ಯ ಕಣ್ಣಿಗೆ ಕಟ್ಟಿದಂತಿದೆ. ಈ ಪರಿಚಾರಿಕೆಗಳ ಫಲಾಫಲಗಳು ಹಾಗಿರಲಿ. ಗಾಳಿಯ ಅಮೂಲ್ಯ ಹಿರಿಮೆಯನ್ನಂತೂ ಅವು ಎತ್ತಿಹಿಡಿಯುತ್ತವೆ. ಬಿಗಡಾಯಿಸುತ್ತಿರುವ ‘ಶಕ್ತಿ ಬಡತನ’ ನೀಗುವ ದಿಸೆಯಲ್ಲಿ ಕಳಕಳಿಯಿಂದ ಗಾಳಿಯ ಬಾಗಿಲು ತಟ್ಟುವುದು ಮಹತ್ವದ ಹೆಜ್ಜೆ. ಬೀಸುವ ಗಾಳಿಯಲ್ಲಿ ನಿಹಿತವಾಗಿರುವ ಚೈತನ್ಯ ವಿಶಿಷ್ಟ. ಇತರ ವಿದ್ಯುಚ್ಛಕ್ತಿ ಮೂಲಗಳಿಗೆ ಇಂಧನ ಅಗತ್ಯ, ಆದರೆ ವಾಯುಶಕ್ತಿಗೆ ಇಂಧನವೂ ಬೇಡ, ಸ್ಥಳೀಯವಾಗಿ ಅದು ಲಭ್ಯವಿರುವುದರಿಂದ ಸಾಗಾಣಿಕೆಯ ಸಮಸ್ಯೆಯೂ ಇಲ್ಲ. ಗಣಿಗಾರಿಕೆಯ ಹಂಗಿಲ್ಲ.

ಮೂಲತಃ ಗಾಳಿಯು ವಾತಾವರಣದಲ್ಲಿರುವ ಅನಿಲಗಳ ಪ್ರವಾಹ. ಉಳಿದ ಶಕ್ತಿ ಮೂಲಗಳಾದ ಪೆಟ್ರೋಲ್, ಕಲ್ಲಿದ್ದಲು, ನೈಸರ್ಗಿಕ ಅನಿಲ, ಕಟ್ಟಿಗೆ ಉರಿಸಿದರೆ ಅಪಾರ ಪ್ರಮಾಣದ ಇಂಗಾಲದ ಡೈಆಕ್ಸೈಡ್ ವಾತಾವರಣವನ್ನು ಸೇರುತ್ತದೆ. ಇಂದಿಗೆ ವಿಶ್ವದ ತೊಂಬತ್ತೊಂದು ದೇಶಗಳು ವಿದ್ಯುಚ್ಛಕ್ತಿಗೆ ಮಾರುತವನ್ನೇ ನಂಬಿವೆ. ಇದರ ಫಲವಾಗಿ, ವರ್ಷಕ್ಕೆ ಕೋಟ್ಯಂತರ ಟನ್ನುಗಳಷ್ಟು ಇಂಗಾಲದ ಡೈ ಆಕ್ಸೈಡ್‌ ವಾತಾವರಣವನ್ನು ಸೇರುವುದು ತಪ್ಪಿದೆ. ಶಕ್ತಿ ಸಂಪನ್ಮೂಲಗಳ ಎಗ್ಗಿಲ್ಲದ ವ್ಯಯವೇ ನಾಗರಿಕತೆಯ ನಾಗಾಲೋಟವಲ್ಲ! ಕಳೆದ ಅರ್ಧ ಶತಮಾನದಲ್ಲಿ ಸರಾಸರಿ ಜಾಗತಿಕ ತಾಪಮಾನದ ಏರಿಕೆ 0.5 ಡಿಗ್ರಿ ಸೆಲ್ಸಿಯಸ್. ಒಟ್ಟು ಬಳಕೆಯಾಗುವ ಶಕ್ತಿ ಸಂಪನ್ಮೂಲಗಳ ಪೈಕಿ ಅರ್ಧದಷ್ಟು ವಾಯುವಿನದೇ ಕಾರುಬಾರಾದರೆ 2050ರ ವೇಳೆಗೆ ಜಾಗತಿಕ ತಾಪಮಾನದ ಏರಿಕೆಯ ಪ್ರಮಾಣವನ್ನು ಶೂನ್ಯಕ್ಕಿಳಿಸಲು ಸಾಧ್ಯ.

ಸೂರ್ಯನು ಭೂಮೇಲ್ಮೈಯನ್ನು ಅಸಮವಾಗಿ ಕಾವೇರಿಸುವುದೇ ವರವಾಗಿ ಗಾಳಿ ಒಂದೆಡೆಯಿಂದ ಇನ್ನೊಂದೆಡೆಗೆ ದೌಡಾಯಿಸುತ್ತದೆ. ಭೂಮೇಲ್ಮೈ ತಲುಪುವ ಸೌರಶಕ್ತಿಯ ಶೇಕಡ 2ರಷ್ಟು ಚಲನಶಕ್ತಿಯಾಗಿ ರೂಪಾಂತರಗೊಳ್ಳುವುದು. ಹಾಗಾಗಿ ವಾಯುಶಕ್ತಿಯು ಸೌರಶಕ್ತಿಯ ರೂಪಾಂತರ. ಕಲ್ಲಿದ್ದಲು, ತೈಲ ನಿಕ್ಷೇಪಗಳಿರದ ಪ್ರದೇಶಗಳಲ್ಲಿ ಜೋರು ಗಾಳಿ ಬೀಸಿದರೆ, ಮರಳುಗಾಡಿನಲ್ಲಿ ಓಯಸಿಸ್ ದೊರಕಿದಷ್ಟೇ ಹಿಗ್ಗು. ನವೀಕರಿಸಬಹುದಾದ ಶಕ್ತಿಗಳಲ್ಲಿ ಅದು ಉತ್ತಮವೂ ಸುಸ್ಥಿರವೂ ಆದ ಆಯ್ಕೆ.

ವಾಸ್ತವವಾಗಿ ವಾಯುಶಕ್ತಿಯ ಬಳಕೆ ಬಹು ಪ್ರಾಚೀನವಾದುದೇ. 5,000 ವರ್ಷಗಳ ಹಿಂದೆಯೇ ಈಜಿಪ್ಟಿಯನ್ನರಿಗೆ ನೈಲ್ ನದಿ ದಾಟಲು ಮಾರುತವೇ ಬಲ, ದಿಕ್ಕು. ಕ್ರಿ.ಪೂ. 2000ರ ಸುಮಾರಿನಲ್ಲಾಗಲೆ ಅಫ್ಗಾನಿಸ್ತಾನದ ಬ್ಯಾಬಿಲಾನಿನಲ್ಲಿ 30 ಅಡಿ ಎತ್ತರದಲ್ಲಿ, 16 ಅಡಿ ಉದ್ದದ ರೆಕ್ಕೆಗಳುಳ್ಳ ಗಾಳಿಗಿರಣಿಗಳನ್ನು ಸ್ಥಾಪಿಸಲಾಗಿತ್ತು. ರೆಕ್ಕೆಗಳ ಆವರ್ತನಗಳು ಕಾಳನ್ನು ಹಿಟ್ಟಾಗಿಸುವ, ಬಟ್ಟೆ, ಪಾತ್ರೆ ತೊಳೆಯುವ ಅಥವಾ ನೀರೆತ್ತಲು, ಹರಿಸಲು ಯಾಂತ್ರಿಕ ಶಕ್ತಿಯಾಗುತ್ತಿದ್ದವು. ನಮ್ಮ ಪರಂಪರೆಯಲ್ಲಿ ಕಾಳಿನಿಂದ ಹೊಟ್ಟು ಬೇರ್ಪಡಿಸಲು ಕೇರುವುದು, ತೂರುವುದು ರೂಢಿಗತವಾಗಿದೆ. ‘ಗಾಳಿ ಬಂದಾಗ ತೂರಿಕೊ’ ಎನ್ನುವುದು ಆಡುನುಡಿ.

2007ರಲ್ಲಿ ‘ಯುರೋಪಿಯನ್ ವಿಂಡ್ ಪವರ್ ಅಸೋಸಿಯೇಷನ್’ ಪ್ರತಿವರ್ಷ ಜೂನ್ 15ನ್ನು ‘ಜಾಗತಿಕ ವಾಯುಶಕ್ತಿ ದಿನ’ ಎಂದು ಸಾರಿತು. ವಾಯುಶಕ್ತಿಯ ಸಾಮರ್ಥ್ಯ ಮಾಪನ ಮತ್ತು ಅದು ಶಕ್ತಿ ಉತ್ಪಾದಕ ವ್ಯವಸ್ಥೆಯನ್ನು ಪುನರ್‌ರೂಪಿಸುವ ಸಾಧ್ಯತೆಗಳ ಮರುಶೋಧ, ಇಂಗಾಲಮುಕ್ತ ಅರ್ಥವ್ಯವಸ್ಥೆ, ಉದ್ಯೋಗಾವಕಾಶಗಳ ಕುರಿತು ಚರ್ಚೆ ನಡೆಸುವುದು ಆಚರಣೆಯ ಉದ್ದೇಶ. 1951ರಲ್ಲೇ ಭಾರತದಲ್ಲಿ ಗಾಳಿಗಿರಣಿಗಳ ಸ್ಥಾಪನೆ ಆರಂಭಗೊಂಡಿತು. 1993ರಲ್ಲಿ ದೇಶದಾದ್ಯಂತ ಒಟ್ಟು ನೀರೆತ್ತುವ 3,000 ಪಂಪ್‌ಸೆಟ್ಟುಗಳಿದ್ದವು. ಕರ್ನಾಟಕದಲ್ಲಿ ಚಿತ್ರದುರ್ಗ, ಗದಗ, ಚಿಕ್ಕಮಗಳೂರು ಜಿಲ್ಲೆಗಳು ಈ ದಿಸೆಯಲ್ಲಿ ಹೆಚ್ಚು ಪ್ರಗತಿ ಸಾಧಿಸಿವೆ.

ಗಾಳಿಗಿರಣಿಗಳ ಯೋಜನೆ ಅಕ್ಷರಶಃ ಪರಿಸರಸ್ನೇಹಿ. ಬೆಟ್ಟ, ಗುಡ್ಡಗಳನ್ನು ನೆಲಸಮ ಮಾಡಬೇಕಿಲ್ಲ. ಮರಗಳನ್ನು ಉರುಳಿಸಬೇಕಿಲ್ಲ, ಸಮುದಾಯಗಳನ್ನು ಗುಳೆಯೆಬ್ಬಿಸುವ ಅಗತ್ಯವಿಲ್ಲ. ಗಾಳಿಗೆ ಕಾಸು ತೆರಬೇಕಿಲ್ಲ. ಪೆಟ್ರೋಲ್, ಡೀಸೆಲ್, ಅನಿಲದ ಏರುಬೆಲೆಗಳನ್ನು ಶಪಿಸುವ ಬದಲು ಸರಳವೂ ಸರಾಗವೂ ಆದ ಮಾರುತ ಸಂಗ್ರಹಕ್ಕೆ ಮತ್ತೂ ಹೆಚ್ಚು ಕಾಳಜಿಯಿಂದ ಮುಂದಾಗುವುದು ಜಾಣತನ.

2020ರ ಅಂಕಿ ಅಂಶದಂತೆ, ಜಗತ್ತಿನಾದ್ಯಂತ ಸ್ಥಾಪಿತ ಗಾಳಿಯಂತ್ರಗಳ ಒಟ್ಟು ಸಾಮರ್ಥ್ಯ 7.40 ಲಕ್ಷ ಮೆಗಾವಾಟ್‌. ಗಾಳಿಗಿರಣಿಯ ರೆಕ್ಕೆಗಳು ವಿದ್ಯುತ್ ಉತ್ಪಾದಿಸುವ ಎಂಜಿನ್ನಿನ ತಿರುಬಾನಿಯನ್ನು ಚಾಲೂಗೊಳಿಸುತ್ತವೆ. ತಿರುಬಾನಿಯ ಆವರ್ತನ ವೇಗ ತಾಸಿಗೆ 300 ಕಿ.ಮೀ. ಭಾರತದಲ್ಲಿ ಸಾಮಾನ್ಯವಾಗಿ ಗಾಳಿಯ ವೇಗ ತಾಸಿಗೆ 5ರಿಂದ 15 ಕಿ.ಮೀ. ತಾಸಿಗೆ 10 ಕಿ.ಮೀ. ವೇಗದಲ್ಲಿ ಬೀಸುವ ಗಾಳಿಯಿಂದ ಒಂದು ಅಶ್ವಶಕ್ತಿಯಷ್ಟು ವಿದ್ಯುಚ್ಛಕ್ತಿ ಉತ್ಪಾದಿಸಬಹುದು.

ಇಷ್ಟಾದರೂ ವಾಯುಶಕ್ತಿ ನೆಚ್ಚುವಲ್ಲಿ ಎರಡು ವಿವಾದಾತ್ಮಕ ಸಂಗತಿಗಳಿವೆ. ರೆಕ್ಕೆಗಳಿಗೆ ಪಕ್ಷಿಗಳು, ಬಾವಲಿಗಳು ಆಕಸ್ಮಿಕವಾಗಿ ಸಿಕ್ಕಿ ಮೃತಪಡುವುದು. ಇನ್ನೊಂದು, ತಿರುಬಾನಿಗಳ ಸದ್ದು. ಅಂದಹಾಗೆ ವಾಯುಶಕ್ತಿಯು ಗಾಳಿಯ ರಭಸವನ್ನು ಅವಲಂಬಿಸುವುದರಿಂದ ಬಿಟ್ಟು ಬಿಟ್ಟು ಅದು ಒದಗುತ್ತದೆ. ಆದ್ದರಿಂದ ನಿರಂತರ ವಿದ್ಯುತ್ ಉತ್ಪಾದನೆಗೆ ಈ ನ್ಯೂನತೆ ತುಂಬಲು ಇನ್ನೊಂದು ಶಕ್ತಿ ಮೂಲದ ಅಗತ್ಯವಿದೆ. ರೈಲೊಂದನ್ನು ಹೊರತುಪಡಿಸಿ ವಿಮಾನವನ್ನು ಒಳಗೊಂಡಂತೆ ಎಲ್ಲ ವಾಹನಗಳ ಚಕ್ರಗಳಿಗೆ ಗಾಳಿಯೇ ಆಧಾರ!

ಗಾಳಿ ಬಿರುಸಾಗಿ ಬೀಸಿ ಕಾಡು ಉರಿಸೀತು, ಮೆಲ್ಲಗೆ ಬೀಸಿ ದೀಪ ಆರಿಸೀತು ಕೂಡ. ಅದನ್ನು ಮಣಿಸುವುದು ನಮ್ಮ ವಿವೇಕಕ್ಕೆ ಬಿಟ್ಟದ್ದು. ಒಂದು ಅರ್ಥದಲ್ಲಿ ವಾಯುಶಕ್ತಿ ಆಚಂದ್ರಾರ್ಕವಾಗಿ ಸಿಗುವಂಥದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT