ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಬರೀ ಭೂಮಿಯಲ್ಲ, ತರಿ ಭೂಮಿ!

ಜೀವಸಂಕುಲವನ್ನು ಸಲಹುತ್ತಿರುವ ನಿಸರ್ಗಸಹಜ ತರಿ ಭೂಮಿಗಳು ನಾಶವಾಗದಂತೆ ತಡೆಯಬೇಕಾದ ಜರೂರಿದೆ
Last Updated 2 ಫೆಬ್ರುವರಿ 2023, 4:27 IST
ಅಕ್ಷರ ಗಾತ್ರ

ಕರ್ನಾಟಕದ ಪಕ್ಷಿಕಾಶಿ ಎಂದೇ ಖ್ಯಾತವಾಗಿರುವ ರಂಗನತಿಟ್ಟು ಪಕ್ಷಿಧಾಮಕ್ಕೆ ‘ರಾಮ್‍ಸಾರ್ ತಾಣ’ (ರಾಮ್‌ಸಾರ್‌ ಸೈಟ್‌) ಎಂಬ ಅಂತರರಾಷ್ಟ್ರೀಯ ಗೌರವ ಪ್ರಾಪ್ತಿಯಾದ ನಂತರ ಇದೇ ಮೊದಲ ಬಾರಿಗೆ ನೂರಕ್ಕೂ ಹೆಚ್ಚು ಶಾಲಾ ಮಕ್ಕಳು ಪಕ್ಷಿ ಗಣತಿ ಕಾರ್ಯ ಕೈಗೊಳ್ಳಲಿದ್ದಾರೆ. ಅಂತರರಾಷ್ಟ್ರೀಯ ರಾಮ್‌ಸಾರ್‌ ಗೌರವ ಸಂಪಾದಿಸಿರುವ ಕರ್ನಾಟಕದ ಏಕೈಕ ತರಿ ಭೂಮಿಯಲ್ಲಿ ಸಲೀಮ್ ಅಲಿ ಸೆಂಟರ್ ಫಾರ್ ಆರ್ನಿಥಾಲಜಿ ಆ್ಯಂಡ್ ನ್ಯಾಚುರಲ್ ಹಿಸ್ಟರಿ ತಂಡದ ತಜ್ಞರು ಮತ್ತು ಸದಸ್ಯರು ವಿದ್ಯಾರ್ಥಿಗಳಿಗೆ ನೆರವಾಗಲಿದ್ದಾರೆ. ಇಡೀ ದಿನ ನಡೆಯುವ ಗಣತಿ ಮತ್ತು ಸಮೀಕ್ಷಾ ಕಾರ್ಯ ಹಲವು ದಿನಗಳವರೆಗೆ ಮುಂದುವರಿಯಲಿದೆ.

ಸದಾ ನೀರಿನಿಂದ ಕೂಡಿದ ಮತ್ತು ಒದ್ದೆಯಾದ ನೆಲ ಎರಡನ್ನೂ ಒಳಗೊಂಡಿರುವ ಭೂ ಪ್ರದೇಶವನ್ನು ತರಿ ಭೂಮಿ ಎನ್ನುತ್ತೇವೆ. ಕರ್ನಾಟಕದಲ್ಲಿ 682 ತರಿ ಭೂಮಿ (ಜೌಗು) ಪ್ರದೇಶಗಳನ್ನು ಗುರುತಿಸಲಾಗಿದ್ದು, ಅವು ಬಹು ಜಾತಿಯ ಮೀನು ಮತ್ತು ವಲಸೆ ಹಕ್ಕಿಗಳ ತಾಣಗಳೆನಿಸಿವೆ. ರಾಜ್ಯದ 11 ತಾಣಗಳಿಗೆ ರಾಮ್‌ಸಾರ್ ಸೈಟ್ ಮಾನ್ಯತೆ ನೀಡುವಂತೆ ಯುನೆಸ್ಕೊಗೆ ಅರ್ಜಿ ಸಲ್ಲಿಸಿ ಹತ್ತು ವರ್ಷಗಳೇ ಕಳೆದಿದ್ದವು. ಹಿಂದಿನ ವರ್ಷ ಆಚರಿಸಿದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿಗೆ ನಮ್ಮ ರಂಗನತಿಟ್ಟಿಗೆ ರಾಮ್‍ಸಾರ್ ಗೌರವ ದೊರೆತಿದೆ. ಈ ವರ್ಷದ ವಿಶ್ವ ತರಿ ಭೂಮಿ ಆಚರಣೆಯ (ಫೆ. 2) ಧ್ಯೇಯವಾಕ್ಯ ‘ಇಟ್‌ ಈಸ್‌ ಟೈಂ ಫಾರ್ ವೆಟ್‍ಲ್ಯಾಂಡ್ ರೆಸ್ಟೊರೇಷನ್’. ಅಂದರೆ ‘ಇದು ತರಿ ಭೂಮಿಯ ಪುನಃಸ್ಥಾಪನೆಗೆ ಸಮಯ’. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರದ ಬಜೆಟ್ ಭಾಷಣದಲ್ಲಿ ರಾಮ್‌ಸಾರ್ ತಾಣಗಳ ಪ್ರಾಮುಖ್ಯ ಕುರಿತು ಪ್ರಸ್ತಾಪಿಸಿದರು.

ಯಾವುದೇ ತರಿ ಭೂಮಿಯನ್ನು ‘ರಾಮ್‍ಸಾರ್’ ತಾಣ ಎಂದು ಘೋಷಿಸಲು, ಗುರುತಿಸಲು ಅದು 9 ವಿವಿಧ ಅಂತರರಾಷ್ಟ್ರೀಯ ಪಾರಿಸರಿಕ ಮಾನದಂಡಗಳನ್ನು ಪೂರೈಸಬೇಕು. ಯಾವುದೇ ಒಂದು ಜಾತಿಯ ಹಕ್ಕಿಯ ಶೇಕಡ 1ರಷ್ಟನ್ನಾದರೂ ಸಲಹಬೇಕು, ಅತ್ಯಂತ ವಿಶೇಷವೆನಿಸುವ ನೈಸರ್ಗಿಕ ತಾಣವಾಗಿರಬೇಕು. ಆ ಪ್ರದೇಶದ ಜೀವವೈವಿಧ್ಯವನ್ನು ಕಾಪಾಡಿಕೊಳ್ಳುವ ನೈಸರ್ಗಿಕ ಗಿಡ ಮರ, ಕಲ್ಲುಬಂಡೆ, ಪೊದೆಗಳಿರಬೇಕು. ವಿನಾಶದ ಅಂಚಿನಲ್ಲಿರುವ ಪ್ರಾಣಿ ಪಕ್ಷಿ ಪ್ರಭೇದಗಳನ್ನು ಸಂರಕ್ಷಿಸುವ ಸಹಜ ಆವಾಸ ಅಲ್ಲಿರಬೇಕು, ಸತತವಾಗಿ 20,000 ನೀರುಹಕ್ಕಿಗಳನ್ನು ಘೋಷಿಸಬೇಕು ಎಂಬ ವಿವಿಧ ಕಟ್ಟಲೆಗಳಲ್ಲಿ 5ರಿಂದ 6ನ್ನು ಪೂರೈಸುವ ತಾಣಕ್ಕೆ ‘ರಾಮ್‍ಸಾರ್’ ಗೌರವ ದೊರಕುತ್ತದೆ.

ನೈಸರ್ಗಿಕ ತರಿ ಭೂಮಿಗಳು ಸಾವಿರಾರು ಜೀವಿಪ್ರಭೇದಗಳಿಗೆ ನೆಲೆ ನೀಡಿ ಮಳೆ ಪ್ರವಾಹವನ್ನು ತಡೆದು, ನೀರಿಂಗಿಸಿ, ಅಂತರ್ಜಲ ಹೆಚ್ಚಿಸಿ, ಹೆಚ್ಚಿನ ನೀರನ್ನು ಶೇಖರಿಸಿ ಇಟ್ಟುಕೊಂಡು ನದಿಗಳಿಗೆ ನೀರು ಹರಿಸುತ್ತಾ ಮಣ್ಣು ಮತ್ತು ಪೋಷಕಾಂಶ ಸವಕಳಿಯನ್ನು ತಡೆಯುತ್ತವೆ. ಹೊಲ ಗದ್ದೆಗಳಿಂದ ಹರಿದು ಬರುವ ಭಾರವಾದ ಲೋಹ, ಕೆಸರು, ಸಾರಜನಕ, ರಂಜಕಗಳನ್ನು ಸೋಸಿ ತೆಗೆದು ನೀರನ್ನು
ಶುದ್ಧೀಕರಿಸುತ್ತವೆ. ಮಾನವನಿರ್ಮಿತ ಗದ್ದೆ, ಸರೋವರ, ಜಲಾಶಯ, ಅಣೆಕಟ್ಟು, ನೀರು ನಿಲ್ಲುವ ಗಣಿಗುಂಡಿ, ತೋಡುಗಳನ್ನು ಕೃತಕ ತರಿ ಭೂಮಿ ಎನ್ನುತ್ತಾರೆ. ನೈಸರ್ಗಿಕವಾಗಿ ರೂಪುಗೊಂಡ ತರಿ ಭೂಮಿಗಳನ್ನು ‘ರಾಮ್‌ಸಾರ್’ ತಾಣ ಎಂದು ಗುರುತಿಸುತ್ತಾರೆ.

ತರಿಭೂಮಿಗಳನ್ನು ಉಳಿಸಲು 1971ರ ಫೆಬ್ರುವರಿ 2ರಂದು ಇರಾನ್‍ನ ಕ್ಯಾಸ್ಪಿಯನ್ ಸಮುದ್ರ ತೀರದ ‘ರಾಮ್‍ಸಾರ್’ನಲ್ಲಿ ಪ್ರಥಮ ಬಾರಿಗೆ ಒಪ್ಪಂದ
ಏರ್ಪಟ್ಟಿದ್ದರಿಂದ ಆ ಹೆಸರು ಬಂದಿದೆ. ಭಾರತ ದಾದ್ಯಂತ ಗುರುತಿಸಲಾಗಿರುವ ‘ರಾಮ್‍ಸಾರ್’ ತಾಣಗಳ ಸಂಖ್ಯೆ ಕೇವಲ 75.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆಯಂತೆ ಪಕ್ಷಿಧಾಮದ ಬಳಿಯೇ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದ್ದು, ಪರಿಸರ ಪರಿಣಾಮ ಮೌಲ್ಯನಿರ್ಣಯ ವರದಿಗಾಗಿ ಕಾಯಲಾಗುತ್ತಿದೆ. ಹೆದ್ದಾರಿ ನಿರ್ಮಾಣವಾದರೆ ಪಕ್ಷಿಧಾಮಕ್ಕೆ ದೊಡ್ಡ ತೊಂದರೆಯಾಗುತ್ತದೆ ಎಂಬುದು ವನ್ಯಜೀವಿ ತಜ್ಞರು ಹಾಗೂ ಪರಿಸರಪ್ರೇಮಿಗಳ ವಾದ.

ಕರ್ನಾಟಕ ತನ್ನ ಜಲಮೂಲಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ನೀತಿ ಆಯೋಗ ಬಹಳ ಹಿಂದೆಯೇ ವರದಿ ನೀಡಿದೆ. ಬೆಂಗಳೂರಿನ 106 ಕೆರೆಗಳಲ್ಲಿ 78 ಕೆರೆಗಳು ಜನವಸತಿ ಪ್ರದೇಶಗಳಿಂದ ಹೊಮ್ಮುವ ಘನತ್ಯಾಜ್ಯ ಮತ್ತು ಕೊಳಚೆ ನೀರಿನಿಂದ ಶುದ್ಧೀಕರಿಸಲಾರದಷ್ಟು ಹಾಳಾಗಿವೆ ಮತ್ತು ಜಲಚರಗಳ ಸಹಜ ಜೀವನಕ್ಕೆ ಅಡ್ಡಿಯಾಗಿವೆ. ಆಗಾಗ ನೊರೆಯುಬ್ಬಿಸಿ ಬೆಂಗಳೂರಿನ ಮಹಾನಗರ ಪಾಲಿಕೆ ಮತ್ತು ವಿಜ್ಞಾನಿಗಳಿಗೆ ಸವಾಲೊಡ್ಡುವ ಬೆಳ್ಳಂದೂರು ಕೆರೆ, ಕಾಯಿಲೆ ಬಿದ್ದಿರುವ ತರಿ ಭೂಮಿಯ ತಾಜಾ
ಉದಾಹರಣೆಯಾಗಿದೆ. ಸೊಳ್ಳೆಗಳ ನಿರ್ಮೂಲನಕ್ಕೆಂದೇ ಕೆಲವು ಕೆರೆಗಳನ್ನು ವಸತಿ ಸಮುಚ್ಚಯ, ವ್ಯವಸಾಯ ಮತ್ತು ವಾಣಿಜ್ಯ ಚಟುವಟಿಕೆಗಳಿಗಾಗಿ ಬದಲಾಯಿಸಿದ ಉದಾಹರಣೆಗಳೂ ಇವೆ. ಜೀವವೈವಿಧ್ಯದ ಮ್ಯೂಸಿಯಂ ಎಂದೇ ಕರೆಯಲಾಗುವ ತರಿ ಭೂಮಿಗಳ ಮಹತ್ವ ಸಾರುವ ಒಂದೇ ಒಂದು ಪಾಠ ಶಾಲಾ ಪಠ್ಯಪುಸ್ತಕಗಳಲ್ಲಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT