ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ– ಯುಜಿಸಿ ಪರೀಕ್ಷೆ: ಏಕೆ ಈ ತಾರತಮ್ಯ?

ಈ ಫಲಿತಾಂಶದಲ್ಲಿ ಕನ್ನಡ ಅಭ್ಯರ್ಥಿಗಳ ಸ್ಥಿತಿ ಶೋಚನೀಯವಾಗಿದೆ
Last Updated 6 ಮಾರ್ಚ್ 2022, 21:30 IST
ಅಕ್ಷರ ಗಾತ್ರ

ಈ ಬಾರಿಯ ಎನ್‍ಇಟಿ/ ಜೆಆರ್‌ಎಫ್ ಪರೀಕ್ಷೆಯಲ್ಲಿ ಕನ್ನಡ ಸ್ನಾತಕೋತ್ತರ ಪದವೀಧರರು ಎದುರಿಸಿದ ಸಮಸ್ಯೆಗಳು ತೀವ್ರ ಸ್ವರೂಪದವು. ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಹಿಂದಿ ಪ್ರಶ್ನೆಗಳು ಬಂದವು, ಕೆಲವು ಅಭ್ಯರ್ಥಿಗಳಿಗೆ ಕಂಪ್ಯೂಟರ್ ಪರದೆಯಲ್ಲಿ ಪ್ರಶ್ನೆಪತ್ರಿಕೆಯೇ ತೆರೆದುಕೊಳ್ಳಲಿಲ್ಲ, ಯುಜಿಸಿಯು ಹಲವು ಕನ್ನಡದ ವಿದ್ಯಾರ್ಥಿಗಳಿಗೆ ಮರುಪರೀಕ್ಷೆಯ ಅವಕಾಶವನ್ನು ನಿರಾಕರಿಸಿತು, ಕೊನೆಗೆ ಪ್ರಕಟವಾದ ಕೀ ಉತ್ತರಗಳಲ್ಲೂಸಮಸ್ಯೆ ಉಂಟಾಯಿತು.

ಈ ಸಮಸ್ಯೆಯ ಕುರಿತು ಬರಗೂರು ರಾಮಚಂದ್ರಪ್ಪ ಅವರು ಯುಜಿಸಿಗೆ ಪತ್ರ ಬರೆದು ಗೊಂದಲವನ್ನು ಬಗೆಹರಿಸಲು ಕೋರಿದರು. ಎಲ್.ಹನುಮಂತಯ್ಯ ಅವರು ಪ್ರಕರಣವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಆದರೆ ಈ ಎಲ್ಲ ವಿನಂತಿಗಳನ್ನು ನಿರ್ಲಕ್ಷಿಸಿದ ಯುಜಿಸಿಯು ಫೆ. 19ರಂದು ಫಲಿತಾಂಶವನ್ನು ಪ್ರಕಟಿಸಿತು. ಈ ಫಲಿತಾಂಶದಲ್ಲಿ ಕನ್ನಡ ಅಭ್ಯರ್ಥಿಗಳ ಸ್ಥಿತಿ ಶೋಚನೀಯ. ಕನ್ನಡದಲ್ಲಿ 100 ಅಭ್ಯರ್ಥಿಗಳು ಬೋಧನೆಯ ಅರ್ಹತೆ ಗಳಿಸಿದರೆ, ಕೇವಲ 15 ಅಭ್ಯರ್ಥಿಗಳು ಫೆಲೊಶಿಪ್‌ಗೆ ಆಯ್ಕೆಯಾಗಿದ್ದಾರೆ.

ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟ ಸತತ ಎರಡು ಪರೀಕ್ಷೆಗಳ ನಂತರ ಈ ಬಾರಿ ಪರೀಕ್ಷೆ ನಡೆದುದರಿಂದ ಸಹಜವಾಗಿಯೇ ಪರೀಕ್ಷೆ ಬರೆದವರ ಸಂಖ್ಯೆಯೂ ಹೆಚ್ಚಾಗಿತ್ತು. ತಾರ್ಕಿಕವಾಗಿ ಯುಜಿಸಿ ಕೊಡುವ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗುವವರ ಸಂಖ್ಯೆಯೂ ದುಪ್ಪಟ್ಟಾಗಿರಬೇಕಿತ್ತು. ಆದರೆ ಫಲಿತಾಂಶ ವ್ಯತಿರಿಕ್ತವಾಗಿದೆ. ಕಳೆದ ಸಲ ಹಿಂದಿ ವಿಷಯದಲ್ಲಿ 816 ಅಭ್ಯರ್ಥಿಗಳು ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿದ್ದರೆ, ಈ ಬಾರಿ 819 ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. ಸಂಸ್ಕೃತ ಅಭ್ಯರ್ಥಿಗಳ ಸಂಖ್ಯೆ 126ರಿಂದ 212ಕ್ಕೆ ಏರಿದೆ. ಅಲ್ಲದೆ, ಜೆಆರ್‌ಎಫ್‍ಗೆ ಆಯ್ಕೆಯಾದ ಮಿಕ್ಕ ಭಾಷೆಗಳ ಅಭ್ಯರ್ಥಿಗಳ ಸಂಖ್ಯೆಯೂ ಏರಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ತಮಿಳು 20ರಿಂದ 84ಕ್ಕೆ, ತೆಲುಗು 34ರಿಂದ 44ಕ್ಕೆ, ಬೆಂಗಾಲಿ 41ರಿಂದ 86ಕ್ಕೆ ಏರಿಕೆ ಕಂಡಿವೆ. ವಸ್ತುಸ್ಥಿತಿ ಹೀಗಿದ್ದಾಗ ಯಾವ ಕಾರಣಕ್ಕಾಗಿ ಕನ್ನಡ ಅಭ್ಯರ್ಥಿಗಳ ಆಯ್ಕೆ ಸಂಖ್ಯೆಯನ್ನು ಇಳಿಸಲಾಯಿತು ಎನ್ನುವುದನ್ನು ಯುಜಿಸಿ ಸ್ಪಷ್ಟಪಡಿಸಬೇಕಿದೆ.

ಈ ತಾರತಮ್ಯ ಧೋರಣೆಯು ಈ ಬಾರಿಯ ಪರೀಕ್ಷೆಗಷ್ಟೇ ಸಂಬಂಧಿಸಿದ್ದಲ್ಲ. 2018ರ ಡಿಸೆಂಬರ್‌ನಿಂದ ಇಲ್ಲಿಯವರೆಗೂ ಒಟ್ಟು 5 ಬಾರಿ ಎನ್‍ಇಟಿ/ಜೆಆರ್‌ಎಫ್ ಪರೀಕ್ಷೆ ನಡೆದಿದೆ. ಪ್ರತೀ ಪರೀಕ್ಷೆಯಲ್ಲಿ ಜೆಆರ್‌ಎಫ್‍ಗೆ ಆಯ್ಕೆಯಾದ ಹಿಂದಿ ಅಭ್ಯರ್ಥಿಗಳ ಸಂಖ್ಯೆ ಕ್ರಮವಾಗಿ 278, 283, 389, 816 ಹಾಗೂ 819, ಸಂಸ್ಕೃತ ಅಭ್ಯರ್ಥಿಗಳ ಸಂಖ್ಯೆ 54, 137, 142, 126 ಹಾಗೂ 212 ಆಗಿದೆ. ಆದರೆ ಆಯ್ಕೆಯಾದ ಕನ್ನಡ ಅಭ್ಯರ್ಥಿಗಳ ಸಂಖ್ಯೆ 48, 34, 50, 30 ಮತ್ತು 15 ಆಗಿದೆ.

ವರ್ಷದಿಂದ ವರ್ಷಕ್ಕೆ ಹಿಂದಿ ಮತ್ತು ಸಂಸ್ಕೃತ ಅಭ್ಯರ್ಥಿಗಳ ಆಯ್ಕೆಯಲ್ಲಿ ಗಣನೀಯ ಏರಿಕೆ ಕಂಡುಬಂದರೆ, ಕನ್ನಡ ಅಭ್ಯರ್ಥಿಗಳ ಆಯ್ಕೆಯಲ್ಲಿ ಆಶ್ಚರ್ಯಕರ ಇಳಿಕೆ ಇದೆ. ಇದು ಕನ್ನಡದ ದುರ್ದೈವ ಮಾತ್ರವಲ್ಲ. ಆಯ್ಕೆಯಾದ ತಮಿಳು ಅಭ್ಯರ್ಥಿಗಳ ಸಂಖ್ಯೆ ಕಳೆದ ಬಾರಿಗಿಂತ ಈ ಬಾರಿ ಬಹಳಷ್ಟು ಉತ್ತಮವಾಗಿದ್ದರೂ 2018ರ ಡಿಸೆಂಬರ್‌ನಿಂದ 2020ರ ಜೂನ್‍ವರೆಗೆ ತಮಿಳಿನಲ್ಲಿ ಆಯ್ಕೆಯಾದವರು ಕ್ರಮವಾಗಿ 41, 36, 38 ಮತ್ತು 20ರಷ್ಟು. ಬಂಗಾಲಿಯಲ್ಲಿ ಆಯ್ಕೆಯಾದವರು 16, 29, 29 ಮತ್ತು 41 ಮಂದಿ.

ಮುಖ್ಯ ಸಂಗತಿಯೆಂದರೆ, ಪ್ರಸಕ್ತ ಸಾಲಿನಲ್ಲಿ ಹಿಂದಿ ಭಾಷೆಗೆ ಅಂದಾಜು ₹ 182 ಕೋಟಿ ಹಾಗೂ ಸಂಸ್ಕೃತ ಭಾಷೆಗೆ ಅಂದಾಜು ₹ 47 ಕೋಟಿ ಫೆಲೊಶಿಪ್ ಅನ್ನು ಯುಜಿಸಿ ಮೀಸಲಿಟ್ಟಿದ್ದರೆ, ಕನ್ನಡ ಭಾಷೆಗೆ ಕೇವಲ ₹ 3.3 ಕೋಟಿಯನ್ನು ಮೀಸಲಿಟ್ಟಿದೆ. ಅಲ್ಲದೆ, ಎನ್‍ಇಟಿ ಕಟ್ಆಫ್ ಅನ್ನು ದಾಟಿದ ಸಾಮಾನ್ಯ ವರ್ಗದ ಹಿಂದಿ ಅಭ್ಯರ್ಥಿಗಳಲ್ಲಿ ಶೇ 14.96 ಜನರನ್ನೂ ಸಂಸ್ಕೃತಅಭ್ಯರ್ಥಿಗಳಲ್ಲಿ ಶೇ 13.24ರಷ್ಟು ಜನರನ್ನೂ ಫೆಲೊಶಿಪ್‍ಗೆ ಆಯ್ಕೆ ಮಾಡಿದ್ದರೆ ಕನ್ನಡದಲ್ಲಿ ಶೇ 7.14ರಷ್ಟು ಮಂದಿಯನ್ನಷ್ಟೇ ಆಯ್ಕೆ ಮಾಡಲಾಗಿದೆ.

ಏಕೆ ಈ ತಾರತಮ್ಯ? ವ್ಯವಸ್ಥಿತವಾದ ಸಾಂಸ್ಕೃತಿಕ ರಾಜಕಾರಣವೇ ಇದು? ಕನ್ನಡವೂ ಸೇರಿದಂತೆ ಇತರ ದೇಶಭಾಷೆಗಳ ಅಧ್ಯಯನಗಳ ಅವಕಾಶಗಳನ್ನು ಹೀಗೆ ಮುಚ್ಚುತ್ತಾ ಬರುತ್ತಿರುವುದು ಒಕ್ಕೂಟ ವ್ಯವಸ್ಥೆಗೆ ಮಾಡುತ್ತಿರುವ ಹಾನಿಯೇ ಆಗಿದೆ.

ವಿಶ್ವವಿದ್ಯಾಲಯವೊಂದರಲ್ಲಿ ನಡೆಯುವ ಸಂಶೋಧನೆಯ ಕೆಲಸಗಳು ಆ ವಿಶ್ವವಿದ್ಯಾಲಯದ ಮೌಲ್ಯಾಂಕನವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಯುಜಿಸಿಯಿಂದ ಕನ್ನಡ ಸಂಶೋಧನೆಗೆ ಪ್ರೋತ್ಸಾಹವೇ ಇಲ್ಲವಾದಲ್ಲಿ ಸಹಜವಾಗಿಯೇ ಕರ್ನಾಟಕದ ವಿಶ್ವವಿದ್ಯಾಲಯಗಳ ಮೌಲ್ಯಾಂಕನವೂ ಕುಸಿದು, ಯುಜಿಸಿಯಿಂದ ಬರುವ ಧನಸಹಾಯವೂ ಕಡಿಮೆಯಾಗಿ ವಿಶ್ವವಿದ್ಯಾಲಯಗಳು ದುರ್ಬಲಗೊಳ್ಳುತ್ತವೆ. ಕನ್ನಡದ ಪಾಲಿನ ಶೈಕ್ಷಣಿಕ ಪ್ರಾತಿನಿಧ್ಯವನ್ನು ಯುಜಿಸಿ ಕಡಿಮೆ ಮಾಡುತ್ತಿರುವುದು ಕರ್ನಾಟಕದ ಜ್ಞಾನಸೃಷ್ಟಿಯ ಕೇಂದ್ರಗಳನ್ನು ನಿಧಾನವಾಗಿ ನಿಸ್ತೇಜಗೊಳಿಸುತ್ತಿರುವುದರ ದ್ಯೋತಕವಲ್ಲವೇ? ನ್ಯಾಯಸಮ್ಮತ ಪಾಲಿಗಾಗಿ ಕರ್ನಾಟಕವು ಈಗ ಹಕ್ಕೊತ್ತಾಯ ಮಾಡಲೇಬೇಕಿದೆ. ಯುಜಿಸಿಯಂತಹ ಸಂಸ್ಥೆಗಳು ಸಾಂಸ್ಕೃತಿಕ ರಾಜಕಾರಣದ ಮಧ್ಯವರ್ತಿಗಳಂತೆ ಕೆಲಸ ಮಾಡದೆ ಒಕ್ಕೂಟದ ಎಲ್ಲ ಭಾಗೀದಾರರ ಹಿತಾಸಕ್ತಿಗಳನ್ನು ಕಾಯುವ ಧರ್ಮ ಪಾಲಿಸಬೇಕಾಗಿದೆ.

ಕೊನೆಯಲ್ಲಿ ಕೇಳಬೇಕಾದ ಮುಖ್ಯಪ್ರಶ್ನೆ ಇದು. ನಮ್ಮ ರಾಜ್ಯದಿಂದ ಆರಿಸಿ ಹೋದ ಸಂಸದರು ಇಂತಹ ವಿಷಯಗಳ ಬಗ್ಗೆ ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡಬೇಕು. ಆದರೆ ಅದು ಆಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT