ಏಕಬಳಕೆಯ ಪ್ಲಾಸ್ಟಿಕ್ ಚೀಲ ನಿಷೇಧಕ್ಕೆ ಒಳಗಾಗುತ್ತಿದ್ದಂತೆ, ಅಂಗಡಿ, ಹೋಟೆಲ್‍ಗಳಿಂದ ಸಾಮಾನು– ತಿಂಡಿ ಪಾರ್ಸಲ್ ತರಲು ಬಟ್ಟೆಯ ಇಲ್ಲವೇ ಪೇಪರ್ ಬ್ಯಾಗ್ ಬಳಸಲೇಬೇಕಾದ ಅನಿವಾರ್ಯ ಜನರಿಗೆ ಎದುರಾಗಿದೆ. ಅಂಗಡಿಯವನು ಸಲೀಸಾಗಿ ಸಾಮಾನು ತುಂಬಿಸಿ ಕೊಡುತ್ತಿದ್ದ ಪ್ಲಾಸ್ಟಿಕ್ ಬ್ಯಾಗುಗಳಿಗೆ ಈಗ ಕಟ್ಟುನಿಟ್ಟಿನ ಕಡಿವಾಣ ಬಿದ್ದಿದೆ. ಕೈ ಬೀಸಿಕೊಂಡು ಅಂಗಡಿಗೆ ಹೋಗುತ್ತಿದ್ದವ
ರಿಗೆ ವಿಪರೀತ ಫಜೀತಿಯಾಗಿದೆ. ಹೋಟೆಲ್‍ನವರು ಪಾರ್ಸಲ್ ಕಟ್ಟಲು ಶೇಖರಿಸಿ ಇಟ್ಟುಕೊಂಡಿದ್ದ ಪ್ಲಾಸ್ಟಿಕ್ ಬ್ಯಾಗುಗಳ ಮೂಟೆಯನ್ನೇನು ಮಾಡುವುದು ಎಂದು ಕಂಗಾಲಾಗಿದ್ದಾರೆ.
ಪ್ಲಾಸ್ಟಿಕ್‍ನ ಜಾಗದಲ್ಲಿ ಪೇಪರ್ ಬ್ಯಾಗ್ ಬಂದು ವರ್ಷಗಳೇ ಕಳೆದಿದ್ದರೂ ಸಾಮಾನ್ಯ ಜನರ ಒಲವು ಆ ಕಡೆ ಹೆಚ್ಚಾಗಿ ಇರಲಿಲ್ಲ. ದೊಡ್ಡ ದೊಡ್ಡ ಶಾಪಿಂಗ್ ಮಾಲ್ ಅಥವಾ ಮೆಗಾಸ್ಟೋರ್‌ಗಳಿಂದ ಸಾಮಾನು ಖರೀದಿಸುವವರ ಕೈಯಲ್ಲಿ ಮಾತ್ರ ಪ್ರತಿಷ್ಠೆಯ ಸಂಕೇತವೆಂಬಂತೆ ಅವು ಕಾಣಿಸುತ್ತಿದ್ದವು. ಇನ್ನು ಮುಂದೆ ಪೇಪರ್ ಬ್ಯಾಗ್‍ಗಳು ಎಲ್ಲರ ಕೈಯಲ್ಲಿ ಇರಲಿವೆ. ಮಾರಕ ಪ್ಲಾಸ್ಟಿಕ್‍ಗಿಂತ ಸಾವಿರ ಪಾಲು ವಾಸಿ ಹಾಗೂ ಪರಿಸರಸ್ನೇಹಿ ಎಂದು ವ್ಯಾಪಕವಾಗಿ ಪ್ರಚಾರಗೊಂಡಿರುವುದರಿಂದ ಪೇಪರ್ ಬ್ಯಾಗ್‍ಗಳಿಗೆ ಬೇಡಿಕೆ ಹೆಚ್ಚಲಿದೆ. ಆದರೆ ಪೇಪರ್ ಬ್ಯಾಗ್‍ಗಳು ಪ್ಲಾಸ್ಟಿಕ್‍ನಷ್ಟೇ ಅಪಾಯಕಾರಿ ಮತ್ತು ಕೆಲವು ಸಲ ಅದಕ್ಕಿಂತ ಹೆಚ್ಚು ಎಂಬುದು ಹಲವು ಅಧ್ಯಯನಗಳಿಂದ ಸಾಬೀತಾಗಿದೆ.
ಪೇಪರ್ ಬ್ಯಾಗುಗಳ ಬಳಕೆ ಶುರುವಾಗಿ ನೂರಾಐವತ್ತು ವರ್ಷಗಳೇ ಕಳೆದಿವೆ. ಅಮೆರಿಕದ ಹವ್ಯಾಸಿ ಸಂಶೋಧಕ ಫ್ರಾನ್ಸಿಸ್‍ವೊಲ್ಲೆ 1852ರಲ್ಲಿ ಪೇಪರ್ ಬ್ಯಾಗ್ ತಯಾರಿಸುವ ಯಂತ್ರ ಕಂಡುಹಿಡಿದಾಗ ಪ್ಲಾಸ್ಟಿಕ್‍ನ ಹಾವಳಿ ಅಷ್ಟಾಗಿ ಇರಲಿಲ್ಲ. ಅದೇ ವರ್ಷ ಜುಲೈ 12ರಂದು ಪೇಟೆಂಟ್ ದೊರೆತದ್ದರಿಂದ ಆ ದಿನವನ್ನು ‘ವರ್ಲ್ಡ್ ಪೇಪರ್ ಬ್ಯಾಗ್ ಡೇ’ ಎಂದು ಕರೆಯಲಾಯಿತು. ಫ್ರಾನ್ಸಿಸ್‍ನ ಯಂತ್ರದಲ್ಲಿ ತಯಾರಾದ ಪೇಪರ್ ಬ್ಯಾಗ್‍ಗಳಿಗೆ ಚೌಕಾಕಾರದ ತಳ ಇರಲಿಲ್ಲವಾದ್ದರಿಂದ ಹೆಚ್ಚು ಜನ
ಪ್ರಿಯವಾಗಲಿಲ್ಲ. ಈ ಮಿತಿಯನ್ನು ಅರಿತಿದ್ದ ಮಾರ್ಗರೆಟ್ ನೈಟ್ ಎಂಬ ಸಂಶೋಧಕಿ, ಚೌಕಾಕಾರದ ತಳವಿರುವ ಪೇಪರ್ ಬ್ಯಾಗ್ ತಯಾರಿಸಬಲ್ಲ ಯಂತ್ರವನ್ನು ನಿರ್ಮಿಸುವಲ್ಲಿ ಯಶಸ್ವಿಯಾದರು. ಆಕೆಯನ್ನು ಗ್ರಾಹಕ ಜಗತ್ತು ‘ಮದರ್ ಆಫ್ ಗ್ರಾಸರಿ ಬ್ಯಾಗ್’ ಎಂದು ಕರೆದು ಗೌರವಿಸಿತು.
ಮರದ ಒಣ ಚಕ್ಕೆಗಳನ್ನು ಹೆಚ್ಚಿನ ಉಷ್ಣಾಂಶಕ್ಕೆ ಒಡ್ಡಿ, ಪುಡಿ ಮಾಡಿ, ನೀರಿನಲ್ಲಿ ತೊಳೆದು, ಬ್ಲೀಚ್ ಮಾಡಿ ಕಂದು ಬಣ್ಣಕ್ಕೆ ತಿರುಗಿಸಿ ಅದರಿಂದ ಹಾಳೆಯನ್ನು ತಯಾರಿಸಲಾಗುತ್ತದೆ. ಇದನ್ನು ಕ್ರಾಫ್ಟ್ ಪೇಪರ್ ಎನ್ನುತ್ತಾರೆ.
ಪೇಪರ್ ಬ್ಯಾಗ್‍ಗಳನ್ನು ಸುಲಭವಾಗಿ ನೂರಕ್ಕೆ ನೂರರಷ್ಟು ರೀಸೈಕಲ್ ಮಾಡಬಹುದು, ಇಲ್ಲವೆ ಮನೆಯಂಗಳದಲ್ಲೇ ಕಾಂಪೋಸ್ಟ್ ಮಾಡಬಹುದು, ಸಣ್ಣ ಮಕ್ಕಳು ತಲೆಯ ಮೇಲಿಂದ ಮುಖ ಮುಚ್ಚಿಕೊಂಡರೆ ಉಸಿರುಗಟ್ಟುವುದಿಲ್ಲ, ಜಾನುವಾರು ಹಾಗೂ ವನ್ಯ
ಪ್ರಾಣಿಗಳಿಗೆ ಅಪಾಯವಿಲ್ಲ, ಭೂಭರ್ತಿ ಮಾಡಿದಾಗ ಬೇಗ ಕೊಳೆತು ಮಣ್ಣಿಗೆ ಸೇರಿಕೊಳ್ಳುತ್ತವೆ ಎಂಬ ಕಾರಣಗಳಿಗೆ ಅವು ಪರಿಸರಸ್ನೇಹಿ ಎಂಬ ಹೆಸರು ಪಡೆದಿವೆ. ಅಲ್ಲದೆ ಪ್ಲಾಸ್ಟಿಕ್‍ಗೆ ಹೋಲಿಸಿದರೆ ಪೇಪರ್ ರೀ ಸೈಕಲ್ ಮಾಡಲು ಕಡಿಮೆ ಶಕ್ತಿ ವ್ಯಯವಾಗುತ್ತದೆ ಎಂಬ ಭಾವನೆ ಸಹ ಇದೆ. ಇದು ಅರ್ಧ ಸತ್ಯವಷ್ಟೇ.
ಉತ್ಪಾದನೆಯಿಂದ ಹಿಡಿದು ಮರುಬಳಕೆಯವರೆಗೆ ಪೇಪರ್ ಬ್ಯಾಗ್‍ಗಳು ಪರಿಸರದ ಮೇಲೆ ಇನ್ನಿಲ್ಲದ ಒತ್ತಡ ಹೇರುತ್ತಿರುವುದು ಪತ್ತೆಯಾಗಿದೆ. ದಿ ಎನ್ವಿರಾನ್‍ಮೆಂಟಲ್ ಲಿಟರಸಿ ಕೌನ್ಸಿಲ್ ವರದಿಯಂತೆ, ಪ್ಲಾಸ್ಟಿಕ್‍ಗಿಂತ ಪೇಪರ್ ಶೇ 70ರಷ್ಟು ಹೆಚ್ಚು ವಾಯು ಹಾಗೂ ಶೇ 50ರಷ್ಟು ಜಲಮಾಲಿನ್ಯ ಉಂಟುಮಾಡುತ್ತದೆ. ಪ್ಲಾಸ್ಟಿಕ್‍ಗಿಂತ ಪೇಪರ್ ಐದಾರು ಪಟ್ಟು ದಪ್ಪ ಮತ್ತು ಭಾರವಾದ್ದರಿಂದ ಸಾಗಾಣಿಕೆಗೂ ಹೆಚ್ಚು ಶಕ್ತಿ ಖರ್ಚಾಗುತ್ತದೆ. 70ಕ್ಕೂ ಹೆಚ್ಚು ವಿಷಕಾರಕಗಳನ್ನು ಹೊರಬಿಡುವ ಪೇಪರ್, ಭೂಮಿಯ ಬಿಸಿಯನ್ನು ಏರಿಸುತ್ತದೆ. ತಯಾರಿಕೆಗೆ ಮರಗಳ ಚಕ್ಕೆ ಬೇಕಾದ್ದರಿಂದ ಏರುತ್ತಿರುವ ಬೇಡಿಕೆ ಪೂರೈಸಲು ಭಾರಿ ಸಂಖ್ಯೆಯ ಮರಗಳ ಹನನವಾಗುತ್ತದೆ. ಪ್ಲಾಸ್ಟಿಕ್‍ಗಿಂತ 5ರಿಂದ 7 ಪಟ್ಟು ಹೆಚ್ಚು ತೂಕ ಹೊಂದಿದ್ದು ಅಷ್ಟೇ ಪ್ರಮಾಣದ ತ್ಯಾಜ್ಯ ಮತ್ತು ಶಾಖವರ್ಧಕ ಅನಿಲಗಳನ್ನು ವಾತಾವರಣಕ್ಕೆ ಹೊಮ್ಮಿಸುತ್ತದೆ.
ರೀ ಸೈಕ್ಲಿಂಗ್ ವಿಷಯದಲ್ಲಿ ಪೇಪರ್‌ಗೆ ಶೇ 80ರಷ್ಟು ಹೆಚ್ಚು ಶಕ್ತಿ ವ್ಯಯವಾಗುತ್ತದೆ ಮತ್ತು ಭೂಭರ್ತಿ ಜಾಗದಲ್ಲಿ ಆಮ್ಲಜನಕ, ಬೆಳಕು ಮತ್ತು ಉಷ್ಣಾಂಶದ ಕೊರತೆಯಿಂದ ಕೊಳೆತು ಮಣ್ಣಾಗುವ ಪ್ರಕ್ರಿಯೆಗೆ ಹೆಚ್ಚೂ ಕಡಿಮೆ ಪ್ಲಾಸ್ಟಿಕ್‍ನಷ್ಟೇ ಸಮಯ ಬೇಕಾಗುತ್ತದೆ. ಪೇಪರ್ ಬ್ಯಾಗ್ ಒಮ್ಮೆ ಒದ್ದೆಯಾದರೆ ಮರುಬಳಕೆ ಸಾಧ್ಯವಿಲ್ಲದ್ದರಿಂದ ಅದು ನೇರವಾಗಿ ಕಸದ ರಾಶಿ ಸೇರುತ್ತದೆ. ಆದರೆ ಪ್ಲಾಸ್ಟಿಕ್‍ನಂತೆ ಅದು ಸಾಗರ, ನೀರಿನ ನಾಲೆಗಳನ್ನು ಸೇರಿ ಜಲಚರಗಳಿಗೆ ಹೆಚ್ಚಿನ ಹಾನಿ ಮಾಡುವುದಿಲ್ಲ ಎಂಬುದಷ್ಟೇ ಸಮಾಧಾನದ ಅಂಶ.
ಪೇಪರ್ ಮತ್ತು ಪ್ಲಾಸ್ಟಿಕ್ ಎರಡನ್ನೂ ಹೊರತುಪಡಿಸಿ ಸೆಣಬಿನ, ಬಟ್ಟೆಯ, ಬಯೊ ಪ್ಲಾಸ್ಟಿಕ್‍ನ ಬ್ಯಾಗ್‍ಗಳ ತಯಾರಿಕೆ ಹಾಗೂ ಬಳಕೆಗೆ ಒತ್ತು ನೀಡಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.