ಸೊಳ್ಳೆಗಳಿಲ್ಲದ ದೇಶ ಎನ್ನುವ ಹೆಗ್ಗಳಿಕೆಯ ಐಸ್ಲೆಂಡ್ನಲ್ಲೂ ಸೊಳ್ಳೆಗಳು ಕಾಣಿಸಿವೆ. ಈ ವಿದ್ಯಮಾನ ಭೂಮಿಯ ಜ್ವರ ತೀವ್ರವಾಗಿರುವುದನ್ನು ಸೂಚಿಸುವಂತಿದೆ.

ಸೊಳ್ಳೆಗಳಿಲ್ಲದ ದೇಶ ಯಾವುದು? ರಸಪ್ರಶ್ನೆ ಕಾರ್ಯಕ್ರಮ ಗಳಲ್ಲಿ ಪುನರಾರ್ತನೆ ಆಗುವ ಈ ಕುತೂಹಲಕಾರಿ ಪ್ರಶ್ನೆಗೆ ಉತ್ತರ: ಐಸ್ಲೆಂಡ್! ಆದರೆ, ಇತ್ತೀಚಿನ ಬೆಳವಣಿಗೆಗಳ ಪ್ರಕಾರ, ಐಸ್ಲೆಂಡ್ ಕೂಡ ಸೊಳ್ಳೆಗಳಿಲ್ಲದ ಸ್ಥಳವಲ್ಲ!

ಈ ವರ್ಷದ ಅಕ್ಟೋಬರ್ 16ರಂದು ಐಸ್ಲೆಂಡ್ನಲ್ಲೂ ಸೊಳ್ಳೆಗಳು ಕಂಡುಬಂದವು. ಆ ಮೂಲಕ ಸೊಳ್ಳೆಗಳ ಜಾಗತೀಕರಣವೂ ಸಾಧ್ಯವಾಗಿದೆ ಎಂದು ವಿನೋದ ಮಾಡಬಹುದು. ಆದರೆ, ಈ ಬೆಳವಣಿಗೆಯೇನೂ ತಮಾಷೆಯ ಸಂಗತಿಯಲ್ಲ.

ಬೊರ್ನ್ ಹಿಜಾಲ್ಸ್ಸನ್ ಎಂಬ ಕೀಟಾಸಕ್ತ ಎಂದಿನಂತೆ ತನ್ನ ಉದ್ಯಾನದಲ್ಲಿ ಅಲ್ಲಲ್ಲಿ ಕೆಂಪುವೈನಿನಲ್ಲಿ ಅದ್ದಿದ ಹಗ್ಗಗಳನ್ನು ತೂಗುಬಿಟ್ಟು, ಯಾವುದಾದರೂ ವಿಶಿಷ್ಟ ಕೀಟಗಳು ಬರಬಹುದೇ ಎಂದು ಕಾಯುತ್ತಿದ್ದರು. ಐಸ್ಲೆಂಡ್ನ ವಿಶಿಷ್ಟ ಪರಿಸರದಲ್ಲಿ ಬದುಕುವ ವಿಭಿನ್ನ ಹಾತೆಗಳಿಗಾಗಿ ಬೊರ್ನ್ ‘ಗಾಳ’ ಹಾಕಿದ್ದರು. ಆದರೆ, ಅವರ ಗಾಳಕ್ಕೆ ಹಾತೆಗಳು ಬೀಳಲಿಲ್ಲ. ಆ ದಿನ, ಸಂಜೆಗತ್ತಲಲ್ಲಿ ಎಲ್ಲಿಂದಲೋ ಹಾರಿಬಂದ ಮೂರು ಸೊಳ್ಳೆಗಳು ಹಗ್ಗದ ಮೇಲೆ ಬಂದು ಕುಳಿತವು. ಅರೆ ಕ್ಷಣದಲ್ಲಿಯೇ ಬೊರ್ನ್ ಅವರಿಗೆ, ಎಂತಹ ವಿಚಿತ್ರ ದೃಶ್ಯವನ್ನು ನೋಡುತ್ತಿರುವೆ ಎಂಬುದರ ಅರಿವಾಯಿತು. ಅಸಾಧಾರಣ ಘಟನೆಯೊಂದು ಐಸ್ಲೆಂಡ್
ನಲ್ಲಿ ಸಂಭವಿಸಿದ್ದಕ್ಕೆ ಅವರು ಸಾಕ್ಷಿಯಾಗಿದ್ದರು.

ಸೊಳ್ಳೆಯೊಂದು ಕಿವಿಯ ಪಕ್ಕದಲ್ಲೇ ಸಶಬ್ದವಾಗಿ ಹಾರಾಡುವುದು ಜಗತ್ತಿನ ಯಾವುದೇ ಭಾಗದ ಜನರಿಗೆ
ಸಾಮಾನ್ಯವಾಗಿ ಆಶ್ಚರ್ಯದ ಸಂಗತಿಯಲ್ಲ. ಸೊಳ್ಳೆಗಳಿಂದಾಗಿ, ಡೆಂಗೆ, ಮಲೇರಿಯಾ, ಚಿಕೂನ್ ಗುನ್ಯಾದಂತಹ ಕಾಯಿಲೆಗಳಿಗೆ ತುತ್ತಾಗಿ ಉಷ್ಣವಲಯದ ಲಕ್ಷಾಂತರ ಜನರು ಜೀವಕಳೆದುಕೊಳ್ಳುವುದು ಏಷ್ಯಾದ ದೇಶಗಳಲ್ಲಿ ಸಾಮಾನ್ಯ ಸಂಗತಿ. ಆದರೆ, ಐಸ್ಲೆಂಡ್ ಕಥೆಯೇ ಬೇರೆ. ಅಲ್ಲಿ ಹಿಂದೆಂದೂ ಸೊಳ್ಳೆಗಳನ್ನು ನೋಡಿದವರಿರಲಿಲ್ಲ. ಸ್ವಲ್ಪವೂ ತಡಮಾಡದೆ ಬೊರ್ನ್ ಆ ಮೂರು ಸೊಳ್ಳೆಗಳನ್ನು ಹಿಡಿದು ಜಾರಿನಲ್ಲಿರಿಸಿದರು. ಕೂಡಲೇ ಐಸ್ಲೆಂಡಿನ ‘ನ್ಯಾಚುರಲ್ ಸೈನ್ಸ್’ ಸಂಸ್ಥೆಯ ಮ್ಯಾಥಿಯಾಸ್ ಆಲ್ಪ್ರೆಡ್ಸನ್ ಅವರಿಗೆ ಕರೆಮಾಡಿದರು. ಕ್ಯುಲಿಸೇಟಾ ಎನ್ಯುಲೇಟಾ ಎಂಬ ಪ್ರಬೇಧಕ್ಕೆ ಸೇರಿರುವ ಆ ಮೂರು ಸೊಳ್ಳೆಗಳನ್ನು ಅವರು ಗುರುತಿಸಿ ಖಾತ್ರಿಪಡಿಸಿದರು. ಐಸ್ಲೆಂಡಿಗೆ ಸೊಳ್ಳೆ ಬಂದಿರುವ ಆಘಾತಕಾರಿ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿದರು.

ಐಸ್ಲೆಂಡಿನಲ್ಲಿ ಸೊಳ್ಳೆ ಕಾಣಿಸಿಕೊಂಡ ಸುದ್ದಿ ಆ ದೇಶಕ್ಕಷ್ಟೇ ಅಲ್ಲ; ಇಡೀ ವಿಶ್ವಕ್ಕೆ ಆಘಾತ ಉಂಟುಮಾಡುವ ವಿದ್ಯಮಾನ. ಆ ಆಘಾತಕ್ಕೆ ಕಾರಣ, ಸೊಳ್ಳೆಗಳು ಅಲ್ಲಿನ ಜನರಿಗೆಲ್ಲ ಕಾಯಿಲೆಗಳನ್ನು ಉಂಟುಮಾಡಬಹುದು ಎಂಬ ಭಯವಲ್ಲ. ಇದುವರೆಗೂ ಅವಶ್ಯಕತೆ ಎನಿಸದಿದ್ದ ಸೊಳ್ಳೆ ನಿರೋಧಕಗಳು ಇನ್ನು ಮುಂದೆ ದಿನಬಳಕೆ ವಸ್ತುವಾಗಬಹುದೆಂಬ ಕಾರಣವೂ ಅಲ್ಲ. ಇನ್ನು ಸೊಳ್ಳೆಪರದೆಯೊಳಗೆ ಮಲಗಬೇಕಾದ ಸ್ಥಿತಿ ತಲೆದೋರಬಹುದು ಎಂಬ ಭಯವೂ ಅಲ್ಲ. ಆಘಾತವಾಗಿರುವುದು, ಮನುಷ್ಯ ಇತಿಹಾಸವು ಎಂದೂ ಕಾಣದ ಇಂತಹ ಸಂದರ್ಭ ಉಂಟಾಗಲು ಕಾರಣ ಆಗಿರುವ ಬದಲಾವಣೆಗಳು ಮತ್ತು ಅದರ ಪರಿಣಾಮಗಳ ಬಗ್ಗೆ.

ಅಭಿವೃದ್ಧಿಯ ಹೆಸರಲ್ಲಿ, ಐಷಾರಾಮದ ನೆಪದಲ್ಲಿ ನಾವು ಸೃಷ್ಟಿಸುತ್ತಿರುವ ಇಂಗಾಲ ಈಗ ಭೂಮಿಯ ವಾತಾವರಣವನ್ನು ಗಾಜಿನ ಮನೆಯಾಗಿಸಿದೆ. ಸೂರ್ಯನ ಕಿರಣಗಳು ಇಲ್ಲಿಗೆ ಪ್ರವೇಶಿಸಿ ಎಲ್ಲವನ್ನೂ ಬೆಚ್ಚಗೆ ಮಾಡುವುದಷ್ಟೇ ಅಲ್ಲ, ಆ ಶಾಖ ಇಲ್ಲೇ ಉಳಿದುಕೊಳ್ಳುತ್ತದೆ. ಭೂಮಿ ಬಿಸಿಯೇರುವ ಈ ವಿದ್ಯಮಾನ ಐಸ್ಲೆಂಡ್ ಅನ್ನೂ ಬಿಟ್ಟಿಲ್ಲ. ಹಾಗೆ ನೋಡಿದರೆ, ಬೇರೆ ಸ್ಥಳಗಳಿಗಿಂತ ಅಲ್ಲಿಗೇ ಹೆಚ್ಚು ತಟ್ಟಿದೆ. ಸಾವಿರಾರು ವರ್ಷಗಳ ಪರ್ಮಾಫ್ರಾಸ್ಟ್ ಶಿಥಿಲಗೊಂಡು ನೆಲ ಕಾಣುತ್ತಿದೆ. ಭೂಮಿ ಬೆಚ್ಚಗಾಗುವ ಜಾಗತಿಕ ಸರಾಸರಿ
ಯನ್ನೂ ಮೀರಿ ಐಸ್ಲೆಂಡ್ ಕ್ಷಿಪ್ರವಾಗಿ ಬೆಚ್ಚಗಾಗುತ್ತಿದೆ. ಸೊಳ್ಳೆಗಳಿಗೆ ಚಕ್ರಾಧಿಪತ್ಯವನ್ನು ಸ್ಥಾಪಿಸಲು ಇನ್ನೊಂದು ಸಾಮ್ರಾಜ್ಯ ಕಾಣಿಸಿದೆ!

ಹೆಸರೇ ಹೇಳುವಂತೆ ಐಸ್ಲೆಂಡ್ನ ಭೂಮಿ ಶಾಶ್ವತ ಹೆಪ್ಪುಗಟ್ಟಿದ ಪರ್ಮಾಫ್ರಾಸ್ಟಿನಿಂದ ಆಚ್ಛಾದಿತ. ಅಲ್ಲಿನ ತಾಪಮಾನವು ಚಳಿಗಾಲದಲ್ಲಿ ಮೈನಸ್ ಎರಡು ಡಿಗ್ರಿ ಸೆಲ್ಸಿಯಸ್ ಇದ್ದರೆ, ಬೇಸಿಗೆಯಲ್ಲಿ ಅಬ್ಬಬ್ಬಾ ಎಂದರೆ ಹತ್ತು ಡಿಗ್ರಿ ಸೆಲ್ಸಿಯಸ್ವರೆಗೆ ಇರುವುದು ಸಾಮಾನ್ಯ. ಅಂಥ ಕೊರೆಯುವ ಚಳಿಯಲ್ಲಿ ಸೊಳ್ಳೆಗಳು ಬದುಕುಳಿಯಲಾರವು. ಆ ಕಾರಣಕ್ಕಾಗಿಯೇ ಅಂಟಾರ್ಟಿಕಾದಂತೆ ಐಸ್ಲೆಂಡಿನಲ್ಲೂ ಇತ್ತೀಚಿನವರೆಗೂ ಸೊಳ್ಳೆಗಳಿರಲಿಲ್ಲ.

ಐಸ್ಲೆಂಡಿನ ಜನಸಂಖ್ಯೆ ಕೇವಲ ನಾಲ್ಕು ಲಕ್ಷ; ನಮ್ಮ ಗದಗ, ದಾವಣಗೆರೆ ಮುಂತಾದ ಸಣ್ಣ ನಗರಗಳ ಜನಸಂಖ್ಯೆಯಷ್ಟು. ವಿಸ್ತೀರ್ಣದಲ್ಲಿ ಅದು ತೆಲಂಗಾಣ ರಾಜ್ಯಕ್ಕಿಂತ ತುಸು ಚಿಕ್ಕದು. ಅಂದಾಜು ಒಂದು ಲಕ್ಷ ಚದರ ಕಿಲೋಮೀಟರಿನ ಪುಟ್ಟ ಭೂಭಾಗವದು. ಆ ದೇಶದ ರಾಷ್ಟ್ರೀಯ ಉತ್ಪನ್ನದ ನೂರಕ್ಕೆ ನಲವತ್ತು ಭಾಗ ಪ್ರವಾಸೋದ್ಯಮದಿಂದ ದೊರೆಯುತ್ತದೆ. ಇಲ್ಲಿನ ವಿಶೇಷ ಭೌಗೋಳಿಕ ಸನ್ನಿವೇಶದ ಕಾರಣಕ್ಕಾಗಿ ಜಗತ್ತಿನ ಬೇರೆ ಬೇರೆ ಭಾಗದ ಜನ ಬರುತ್ತಾರೆ. ಇಲ್ಲಿಗೆ ಜನರು ಎಲ್ಲಿಂದಲೇ ಬರಲಿ, ಅವರೊಡನೆ ಅವರ ಆಪ್ತೇಷ್ಟರನ್ನೂ ಕರೆತರಲಿ, ಸೊಳ್ಳೆಗಳಂತೂ ಇದುವರೆಗೂ ಅಲ್ಲಿಗೆ ಬಂದಿರಲಿಲ್ಲ.

ಈಗಲ್ಲಿ ಸೊಳ್ಳೆಗಳು ಬಂದಿವೆ. ಭೂಮಿಯ ಮೇಲಿರುವ ಸಕಲ ಜೀವಿಗಳಿಗೂ ಗಂಡಾಂತರ ಎದುರಾಗಿದೆ ಎಂಬ ಮತ್ತೊಂದು ಸ್ಪಷ್ಟ ಸೂಚನೆಯನ್ನು ಪ್ರಕೃತಿ ನೀಡಿದೆ. ಆದರೆ, ಇಂತಹ ಸಾವಿರಾರು ಎಚ್ಚರಿಕೆಗಳನ್ನು ಅಲಕ್ಷಿಸಿ ನಾವು ಭೂಮಂಡಲವನ್ನೇ ಅಪಾಯದ ಅಂಚಿಗೆ ತಂದು ನಿಲ್ಲಿಸಿದ್ದೇವೆ. ಹೀಗಿರುವಾಗ ಸೊಳ್ಳೆ ನಮ್ಮನ್ನು ಎಚ್ಚರಿಸುವುದೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.