ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಹಕ್ಕಿ ಹಾರಲಿ, ಜೇನ್ನೊಣ ಝೇಂಕರಿಸಲಿ!

ಶಾಲೆಗಳು ಬದುಕಿನ ಕೌಶಲ ಕಲಿಯಲು ನಾಂದಿಯಾಗಬೇಕು. ವೈವಿಧ್ಯಮಯವಾದ ಹಾಗೂ ಮಕ್ಕಳನ್ನು ಒಳಗೊಳ್ಳುವ ಪಠ್ಯಕ್ರಮ ಇರಬೇಕು. ಇಂತಹದ್ದೊಂದು ಆಗ್ರಹ ಪೋಷಕರದ್ದಾಗಿರಬೇಕು
Published 8 ಮೇ 2024, 0:30 IST
Last Updated 8 ಮೇ 2024, 0:30 IST
ಅಕ್ಷರ ಗಾತ್ರ

ಈಗ ಕಂಡಕಂಡಲ್ಲಿ ಕುಪ್ಪಳಿಸುತ್ತಿರುವ ಮಕ್ಕಳು ಇನ್ನೇನು ಇನ್ನೊಂದು ತಿಂಗಳು ಕಳೆಯುವುದರೊಳಗೆ ಶಾಲೆಗೆ ಮರಳುತ್ತಾರೆ. ಒಂದು ನಿವೇಶನವನ್ನೊ, ವಾಹನವನ್ನೊ ಅಥವಾ ಉಪಕರಣವನ್ನೊ ನಮ್ಮದಾಗಿಸಿಕೊಳ್ಳುವಾಗ ಅದೆಷ್ಟು ಬಾರಿ ವಿಚಾರಿಸುತ್ತೇವೆ, ಅದರ ಸಾಧಕ ಬಾಧಕಗಳ ವಿವರ ಪಡೆಯುತ್ತೇವೆ. ಸಂತೆಗೆ ಹೋಗುವವರಿಗೆ ಅಲ್ಲಿಂದ ಏನೇನು ತರುವ ಅಗತ್ಯವಿದೆ ಎನ್ನುವುದರ ಕಲ್ಪನೆಯಿರುತ್ತದೆ. ಅಂತೆಯೆ ಯಾವ ಉದ್ದೇಶಕ್ಕಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದೇವೆ ಎನ್ನುವುದರ ನಿಖರ ಚಿತ್ರಣ ಪೋಷಕರಿಗೆ ಇರಬೇಕು.

1950ರ ದಶಕದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ದೊಡ್ಡಬಳ್ಳಾಪುರ ತಾಲ್ಲೂಕನ್ನು ಪ್ರತಿನಿಧಿಸಿದ್ದ ಶಾಂಪುರ್ ಆರ್. ಗುರುಲಿಂಗಯ್ಯನವರು ಹೇಳುತ್ತಿದ್ದ ಅನುಭವ ಇಂದಿಗೆ ಹೆಚ್ಚು ಪ್ರಸ್ತುತವಾಗಿದೆ. ಅವರು ಮದನಪಲ್ಲಿ ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡುವಾಗ ಒಮ್ಮೆ ಒಂದು ತರಗತಿಯಲ್ಲಿ ಮಕ್ಕಳ ಬದಲಿಗೆ ಪೋಷಕರೇ ಕುಳಿತು ಹೊಸ ಅಧ್ಯಾಪಕರ ಆಗಮನವನ್ನು ನಿರೀಕ್ಷಿಸುತ್ತಿದ್ದರಂತೆ. ಅಧ್ಯಾಪಕರು ಬರುತ್ತಿದ್ದಂತೆ ಎಲ್ಲರೂ ಎದ್ದು ನಿಂತು ‘ನಿರಾಳರಾಗಿರಿ, ನಾವು ಈ ತರಗತಿಯಲ್ಲಿ ಕಲಿಯುವ ಮಕ್ಕಳ ಪೋಷಕರು. ನೀವು ಹೇಗೆ ಬೋಧಿಸುವಿರಿ, ವಿಧಾನ ಹೇಗೆ... ತಿಳಿಯಲು ಬಂದಿದ್ದೇವೆ’ ಎಂದರಂತೆ. ಪೋಷಕರಿಂದ ಬಂದ ಒಂದಷ್ಟು ಸಲಹೆಗಳಿಗೆ ಆ ಅಧ್ಯಾಪಕರು ವಿನಮ್ರವಾಗಿ ಸಮ್ಮತಿಸಿದ್ದರು. ಈಗ ಪೋಷಕತನ ಮತ್ತಷ್ಟು ಬೆಳೆದಿದೆ. ಬರೀ ತಮ್ಮ ಮಕ್ಕಳ ತೇರ್ಗಡೆ, ಗ್ರೇಡ್, ಅಂಕಗಳ ಬಗ್ಗೆ ಚಿಂತಿಸದೆ ಅದರಾಚೆಗೂ ಗುಣಾತ್ಮಕ ಶಿಕ್ಷಣವನ್ನು ಪಾಲಕರು ನಿರೀಕ್ಷಿಸುತ್ತಾರೆ.

ಶಿಕ್ಷಣವು ಬರೀ ಬಡತನದಿಂದ ಪಾರು ಮಾಡುವ ಅಸ್ತ್ರ ಎಂದು ಅವರು ಭಾವಿಸುವುದಿಲ್ಲ. ಇಂದು ಕಲಿತದ್ದು ನಾಳೆ ಇನ್ನಷ್ಟು, ಮತ್ತಷ್ಟು ಕಲಿಕೆಗೆ ಅವಕಾಶಗಳನ್ನು ಕಲ್ಪಿಸುವುದೆಂದು ಆಶಿಸುವಷ್ಟು ಅವರು ಪ್ರಬುದ್ಧರಾಗಿದ್ದಾರೆ. ಶಾಲೆಯಲ್ಲಿ ನಿರಾತಂಕ ಹಾಗೂ ಸುರಕ್ಷಿತ ವಾತಾವರಣ ಇರಬೇಕು, ತಮ್ಮ ಮಕ್ಕಳು ಬೆದರಿಕೆ, ಥಳಿತ, ನಿಂದನೆಯಿರದ ಪರಿಸರದಲ್ಲಿ ಕಲಿಯಬೇಕೆಂದು ಪೋಷಕರು ಬಯಸುತ್ತಾರೆ. ಯಾವುದೇ ವಿಷಯದಲ್ಲಿ ಎಳೆಯರು ಹಿರಿಯರ ಸೆಡವು, ಸಿಟ್ಟು ಅಥವಾ ಏರುಧ್ವನಿಗೆ ಬಗ್ಗರು. ಪ್ರೀತಿ, ಮಮತೆಯಿಂದಲೇ ಅವರು ತಿದ್ದಿಕೊಳ್ಳಬಲ್ಲರು. ಗದರಿದರೆ ಪ್ರಯತ್ನಿಸುವುದನ್ನೇ ಬಿಡುತ್ತಾರೆ, ಶಾಲೆ ತೊರೆಯುತ್ತಾರೆ. ಪೋಷಕರಿಗೆ ತಾವು ಶಾಲೆಯಿಂದ ಏನೇನನ್ನು ನಿರೀಕ್ಷಿಸುತ್ತಿದ್ದೇವೆ ಎಂಬುದರ ಬಗ್ಗೆ ಸ್ಪಷ್ಟತೆ ಇರಬೇಕು. ಅವರು ಶಾಲೆಯಿಂದ ಅವಾಸ್ತವಿಕ ನಿರೀಕ್ಷೆಗಳನ್ನು ಎದುರು ನೋಡದೆ ಪ್ರಾಯೋಗಿಕವಾಗಿ ಚಿಂತಿಸಬೇಕು.

ಅಬ್ರಹಾಂ ಲಿಂಕನ್ ತಮ್ಮ ಮಗನನ್ನು ಶಾಲೆಗೆ ಸೇರಿಸುವಾಗ ಅಲ್ಲಿನ ಮುಖ್ಯೋಪಾಧ್ಯಾಯರಿಗೆ ಹೀಗೆ ಹೇಳಿದ್ದರು: ‘ನಿಮ್ಮ ಬೋಧನೆಯಲ್ಲಿ ಪುಸ್ತಕವಲ್ಲದೆ ಹಾರುವ ಹಕ್ಕಿಗಳ, ಝೇಂಕರಿಸುವ ಜೇನ್ನೊಣಗಳ ಮತ್ತು ಅರಳುವ ಹೂವುಗಳ ಅದ್ಭುತಗಳೂ ಇರಲಿ...’

ತಮ್ಮ ಮಕ್ಕಳಿಗೆ ವೈವಿಧ್ಯಮಯ ಹಾಗೂ ಒಳಗೊಳ್ಳುವ ಪಠ್ಯಕ್ರಮ ಇರಲೆಂದು ಪೋಷಕರು ಒತ್ತಾಯಿಸಬೇಕಲ್ಲವೇ? ಪಠ್ಯದಲ್ಲಿ ಸ್ವಚಿಂತನೆ ಪ್ರಚೋದಿಸುವ ಅಧ್ಯಾಯಗಳಿರಲಿ ಎಂಬ ಪ್ರಸ್ತಾಪಕ್ಕೆ ಅವರೇ ತಕ್ಕವರು. ಬದುಕಿನ ಕೌಶಲ ಕಲಿಯಲು ಶಾಲೆ ನಾಂದಿಯಾಗುವ ದಿಸೆಯಲ್ಲಿ ಇರಬೇಕು. ಕಂಪ್ಯೂಟರ್‌ ಸಜ್ಜಿತ ಗ್ರಂಥಾಲಯ, ಆಟೋಟಗಳಿಗೆ ತಕ್ಕಮಟ್ಟಿನ ವಿಶಾಲ ಕ್ರೀಡಾಂಗಣ, ಶುದ್ಧ ಕುಡಿಯುವ ನೀರು ಮತ್ತು ಸ್ವಚ್ಛ ಶೌಚಾಲಯವು ಪೋಷಕರಿಗೆ ನೆಮ್ಮದಿಯನ್ನು ಕಟ್ಟಿಕೊಡುವ ಅಂಶಗಳು. ಕಲಿಕೆಯು ವಿದ್ಯಾರ್ಥಿಕೇಂದ್ರಿತವೂ ಸಾಮಾಜಿಕವೂ ಮತ್ತು ಭಾವನಾತ್ಮಕವೂ ಆಗಿದ್ದರೆ ಪಾಲಕರ ಹಿಗ್ಗಿಗೆ ಪಾರವೇ ಇರದು. ‘ನಮ್ಮ ಮಗ ಇಂತಹ ತರಗತಿಯಲ್ಲಿ ಓದುತ್ತಿದ್ದಾನೆ... ಒಂದು ಕಣ್ಣಿರಲಿ’ ಎಂದು ಪೋಷಕರು ಅಧ್ಯಾಪಕರಲ್ಲಿ ಹೇಳುವುದು ಸಹಜ. ‘ಒಂದೇ ಅಳತೆ ಎಲ್ಲರಿಗೂ ಸರಿಹೊಂದದು’ ಎಂಬ ನುಡಿಗಟ್ಟಿದೆ. ಪೋಷಕರ ಈ ಉದ್ಗಾರದಲ್ಲಿ ಶಿಕ್ಷಣವನ್ನು ವೈಯಕ್ತೀಕರಿಸಬೇಕೆಂಬ ಇಂಗಿತವಿದೆ. ಮಗುವಿನ ಮಟ್ಟ ನೋಡಿ ಬೋಧಿಸಿ ಎಂಬ ಸೂಚನೆಯಿದೆ.

ನಿಗದಿತ ವಂತಿಗೆ, ಶುಲ್ಕ ನೀಡಿ, ಇನ್ನು ಶಾಲೆ ಉಂಟು, ತಮ್ಮ ಮಕ್ಕಳುಂಟು ಎಂದು ಪೋಷಕರು ಸಮಾಧಾನಪಟ್ಟುಕೊಂಡರೆ ಆಗದು. ವಿದ್ಯಾಸಂಸ್ಥೆಯಿಂದ ಪೋಷಕರು ತಮ್ಮ ಮಕ್ಕಳ, ತನ್ಮೂಲಕ ಸಮಾಜದ ಹಿತದೃಷ್ಟಿಯಿಂದ ಕೆಲವು ಖಾತರಿಗಳನ್ನು ಪಡೆದುಕೊಳ್ಳಬೇಕು. ಅಂದಹಾಗೆ, ಪೋಷಕರು ಉತ್ತಮವೆಂದು ಭಾವಿಸುವ ಶಾಲೆಗಳು ಮನೆಯ ಹತ್ತಿರವೇ ಇರಬಹುದು. ಗುರುತಿಸುವ ವ್ಯವಧಾನ ಇರಬೇಕಷ್ಟೆ. ತಂದೆ, ತಾಯಿ ತನ್ನ ಶಾಲೆಯ ಬಗ್ಗೆ ಉತ್ಸಾಹ ತೋರುತ್ತಾರೆ ಎಂಬ ಸಂಗತಿಯೇ ಮಗುವಿನಲ್ಲಿ ಹರ್ಷ ಮೂಡಿಸುತ್ತದೆ. ಹೇಳಿಕೇಳಿ ಇವು ವಿದ್ಯುನ್ಮಾನ ದಿನಮಾನಗಳು. ಪೋಷಕರಿಗೆ ತಮ್ಮ ಮಕ್ಕಳ ಶ್ರೇಯಸ್ಸಿನಲ್ಲಿ ಸಹಭಾಗಿಗಳಾಗಲು ಹಿಂದೆ ಇದ್ದುದಕ್ಕಿಂತ ಹೆಚ್ಚಿನ ಆಯ್ಕೆಗಳಿವೆ. ಬೆರಳಂಚಿನಲ್ಲಿ ವಿದ್ಯಾಸಂಸ್ಥೆಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು. ಅಂತರ್ಜಾಲದ ಮುಖೇನವೂ ಸಭೆಗಳಲ್ಲಿ ಭಾಗವಹಿಸಬಹುದು.

ಒಂದು ವೈರುಧ್ಯವನ್ನು ಹೇಳಬೇಕಿದೆ. ತಮ್ಮ ಮಗ ಅಥವಾ ಮಗಳು ಈಗಾಗಲೇ ಮುಂದಿನ ತರಗತಿಯ ಪಠ್ಯವನ್ನು ಅಭ್ಯಸಿಸುತ್ತಿದ್ದು, ತರಗತಿಗೆ ಹೋಗುವ ಅಗತ್ಯವೇ ಇಲ್ಲವೆನ್ನುವಂತೆ ಕೆಲವು ಪೋಷಕರು ಬೀಗುವುದುಂಟು. ಆ ಸಂಬಂಧ ಮುಂಚಿತವಾಗಿಯೇ ಮುಂದಿನ ತರಗತಿಗೆ ‘ಟ್ಯೂಷನ್’ಗೆ ಸೇರಿಸುವ ಉತ್ಸಾಹ! ಆತ್ಮವಿಶ್ವಾಸ ದಿಕ್ಕೆಟ್ಟರೂ ಅಪಾಯವೆ.

ಶಿಸ್ತಿನ ಪ್ರಾಮುಖ್ಯ ಮತ್ತು ಗೆಲುವಿನ ಇನ್ನೊಂದು ಮುಖವೇ ಸೋಲೆಂಬ ದಿಟವು ಮಕ್ಕಳಿಗೆ ತರಗತಿಯ ಪಾಠವಾಗಬೇಕಿದೆ. ಪೋಷಕರ ಪಾಲಿಗೆ ಅವರು ಶಾಲೆಯಿಂದ ಬಯಸುವ ಗ್ಯಾರಂಟಿಗಳು ತಕ್ಕಮಟ್ಟಿಗಾದರೂ ಈಡೇರಿದವು ಅನ್ನಿ. ಇನ್ನು ಅವರ ಮಕ್ಕಳಿಗೆ ‘ಟ್ಯೂಷನ್’ ಬೇಡವೆಂಬ ಗ್ಯಾರಂಟಿ ಶಾಲೆಯಿಂದ ಲಭಿಸಿದಂತೆಯೇ ಅಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT