ಶುಕ್ರವಾರ, ಸೆಪ್ಟೆಂಬರ್ 30, 2022
26 °C
ಆತ್ಮಪರೀಕ್ಷೆ ಮತ್ತು ಆತ್ಮವಿಮರ್ಶೆಗೆ ಒಳಗಾಗದ ಸಮಾಜದಲ್ಲಿ...

ಸಂಗತ| ಸಾವು: ಮಾರಾಟಕ್ಕಿಟ್ಟ ಸರಕು?

ರಾಜಕುಮಾರ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಬದುಕಿನಲ್ಲಿ ಲೋಕಾಂತ ಮತ್ತು ಏಕಾಂತಗಳೆಂಬ ಎರಡು ಅವಸ್ಥೆಗಳಿರುತ್ತವೆ ಎಂದಿದ್ದಾರೆ ತಿಳಿದವರು. ಸದಾಕಾಲ ಲೋಕಾಂತದಲ್ಲೇ ಬದುಕುತ್ತಿರುವ ಮನುಷ್ಯನಿಗೆ ಏಕಾಂತವನ್ನು ಪ್ರವೇಶಿಸು ವಷ್ಟು ತಾಳ್ಮೆಯಾಗಲೀ ಪುರಸತ್ತಾಗಲೀ ಇಲ್ಲ. ಇಂದಿನ ವೈಭವದ ಆಧುನಿಕ ಜೀವನಶೈಲಿ ಯಿಂದಾಗಿ ನಿಶ್ಶಬ್ದ ಮತ್ತು ನೀರವ ವಾತಾವರಣ ದಲ್ಲಿ ಒಬ್ಬಂಟಿಯಾಗಿ ಕುಳಿತು ಮನಸ್ಸನ್ನು ನಿಗ್ರಹಿಸಿ ಕೊಳ್ಳುತ್ತ ಏಕಾಂತವನ್ನು ಹೊಕ್ಕು ತನ್ನ ವರ್ತನೆಯನ್ನು ವಿಮರ್ಶಿಸಿಕೊಳ್ಳುವ ಆತ್ಮಾವಲೋಕನದ ಗುಣವನ್ನು ಮನುಷ್ಯ ಕಳೆದುಕೊಂಡಿದ್ದಾನೆ. ಆತ್ಮಪರೀಕ್ಷೆ, ಆತ್ಮವಿಮರ್ಶೆಗೆ ಇಂದು ಅವನು ಒಳಗಾಗುತ್ತಿಲ್ಲ. ಸಮಾಜದಲ್ಲಿ ಕ್ರೌರ್ಯ ಮತ್ತು ಹಿಂಸೆ ವಿಜೃಂಭಿಸುತ್ತಿವೆ. ಅದಕ್ಕೆಂದೇ ಇಲ್ಲಿ ಸಾವು ಕೂಡ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟ ಸರಕಿನಂತೆ ಗೋಚರಿಸುತ್ತಿದೆ.

ಇತ್ತೀಚೆಗೆ ಒಂದು ವಾರದ ಅವಧಿಯಲ್ಲಿ ನನ್ನ ಅನುಭವಕ್ಕೆ ಬಂದ ಎರಡು ಪ್ರಸಂಗಗಳು ಇದನ್ನು ಸಾಕ್ಷೀಕರಿಸುವಂತಿವೆ. ಬೆಳಗಿನ ವಾಕಿಂಗ್‍ನಲ್ಲಿ ಆಗಾಗ ಭೇಟಿಯಾಗುವ ಪರಿಚಯದ ಹಿರಿಯರೊಬ್ಬರು ಕೆಲ ದಿನಗಳಿಂದ ಕಾಣಿಸದೇ ಇದ್ದವರು ದಿಢೀರೆಂದು ಪ್ರತ್ಯಕ್ಷರಾದರು. ಅಷ್ಟು ದಿನಗಳ ಅನುಪಸ್ಥಿತಿಗೆ ಕಾರಣ ಕೇಳಿದಾಗ ಅವರು ಹೇಳಿದ್ದಿಷ್ಟು- ‘ಎರಡು ವಾರಗಳ ಹಿಂದೆ ಇದ್ದಕ್ಕಿದ್ದಂತೆ ಕಾಯಿಲೆಯಿಂದ ಆರೋಗ್ಯದಲ್ಲಿ ಏರುಪೇರಾಗಿ ಸಾವಿನ ಭಯ ಮನಸ್ಸನ್ನು ಆವರಿಸಿತು. ಬದುಕಿನಲ್ಲಿ ಇನ್ನೂ ಅನುಭವಿಸಬೇಕಾದದ್ದು ಬಹಳಷ್ಟಿದೆ. ಸಾವಿನ ಭೀತಿಯಿಂದ ಪಾರಾಗಲು ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿ ಕಾಣಿಕೆ ಸಮರ್ಪಿಸಿದೆ. ಹನುಮಪ್ಪನಿಗೆ ಗದೆ, ಫಕೀರಪ್ಪನಿಗೆ ಹೂವಿನ ಬುಟ್ಟಿ, ಮಾರಮ್ಮನಿಗೆ ಸೀರೆ ಸಲ್ಲಿಸಿ ಮನೆಯಲ್ಲಿ ಹೋಮ ಹವನಗಳನ್ನು ಮಾಡಿದ್ದಾಯಿತು. ಜೊತೆಗೆ ಆಸ್ಪತ್ರೆಯ ಖರ್ಚು ಬೇರೆ. ಲಕ್ಷಾಂತರ ರೂಪಾಯಿ ಕೈಬಿಟ್ಟು ಹೋದರೂ ಚಿಂತೆಯಿಲ್ಲ ಸಾವಿನ ಭಯ ಈಗ ದೂರವಾಗಿದೆ’.

ಎರಡನೆಯದು ಮೇಲಿನದಕ್ಕೆ ಭಿನ್ನವಾದ ಅನುಭವ. ನನ್ನ ಪಕ್ಕದ ಮನೆಯ ವಯಸ್ಸಾದ ಹಿರಿಯರು ಎದೆನೋವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿದ್ದಾರೆ. ಅವರ ಆರೋಗ್ಯ ವಿಚಾರಿಸಲೆಂದು ಹೋದಾಗ ಅವರು ಹೇಳಿದ್ದು ಹೀಗೆ- ‘ಈಗೀಗ ಸಾವು ಯಾವ ಸಮಯದಲ್ಲಾದರೂ ಬರಬಹುದೆಂದು ಅನಿಸಲಾರಂಭಿಸಿದೆ. ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವಾಗ ಬದುಕಿನ ಸತ್ಯದರ್ಶನವಾಯಿತು. ನಾನು ಇದುವರೆಗೂ ಬದುಕಿನಲ್ಲಿ ಸಾಧಿಸಿರುವುದೇನು ಎಂದು ಅನಿಸಲಾರಂಭಿಸಿದೆ. ಇದುವರೆಗಿನ ಆಯುಷ್ಯವನ್ನು ಸ್ವಂತದ ಬದುಕು ಕಟ್ಟಿಕೊಳ್ಳುವುದರಲ್ಲೇ ಕಳೆದದ್ದಾಯಿತು. ಈಗ ಉಳಿದಿರುವ ಆಯುಷ್ಯದಲ್ಲಿ ಬೇರೆಯವರಿಗಾಗಿ ಬದುಕಬೇಕೆನ್ನುವ ಪ್ರಜ್ಞೆ ಮೂಡಿದೆ. ದುಡಿದು ಗಳಿಸಿದ್ದರಲ್ಲಿ ಒಂದಿಷ್ಟನ್ನು ಸಮಾಜಕ್ಕೆ ನೀಡಬೇಕೆನ್ನುವ ಬಯಕೆಪ್ರಬಲವಾಗುತ್ತಿದೆ’.

‘ಜಾತಸ್ಯ ಮರಣಂ ಧ್ರುವಂ’ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಹುಟ್ಟು ಆಕಸ್ಮಿಕ ಆದರೆ ಸಾವು ಅನಿವಾರ್ಯ ಎಂದಿರುವರು ಚಿಂತಕರು. ‘ಮೋಹದ ಹೆಂಡತಿ ತೀರಿದ ಬಳಿಕ ಮಾವನ ಮನೆಯ ಹಂಗಿನ್ಯಾಕೋ’ ಎಂದು ಕವಿಗಳು ಸಾವಿನ ಅನಿವಾರ್ಯವನ್ನು ತಿಳಿಸಿಕೊಟ್ಟಿರುವರು. ‘ನೆಚ್ಚದಿರು ಸಂಸಾರ ನೆಲೆಯಲ್ಲವೀ ಕಾಯ’ ಎಂದು ಹಾಡಿರುವರು ಕನಕದಾಸರು. ಇಷ್ಟೆಲ್ಲ ಹಿನ್ನೆಲೆಯಿದ್ದೂ ಮನುಷ್ಯ ಚಿರಂಜೀವಿತ್ವದ ಭಾವನೆಯಿಂದ ಸೇಡು, ದ್ವೇಷ, ಕ್ರೌರ್ಯ, ಶೋಷಣೆಯ ಗುಣಗಳನ್ನು ಮೈಗೂಡಿಸಿಕೊಂಡು ಮೃಗೀಯವರ್ತನೆ ತೋರುತ್ತಿ ದ್ದಾನೆ. ಅಮರತ್ವದ ಭಾವನೆ ಮುನ್ನೆಲೆಗೆ ಬಂದು ಬದುಕಿನ ಕ್ಷಣಿಕತೆಯ ಅರಿವು ಹಿನ್ನೆಲೆಗೆ ಸರಿದಿದೆ.

ವಿಮರ್ಶಕ ಜಿ.ಎಸ್.ಆಮೂರ ಅವರು ಹೇಳಿದಂತೆ, ಮನುಷ್ಯ ನಾಗರಿಕನಾಗಿ ಎಷ್ಟೇ ಮುಂದುವರಿದರೂ ಅವನ ಮೂಲಪ್ರವೃತ್ತಿಗಳಾದ ಕಾಮ, ಕ್ರೋಧ ಮತ್ತು ದ್ವೇಷಗಳಿಂದ ಬಿಡುಗಡೆ ಹೊಂದಲು ಇವತ್ತಿಗೂ ಸಾಧ್ಯವಾಗುತ್ತಿಲ್ಲ. ಒಟ್ಟಾರೆ ನ್ಯಾಯ-ಅನ್ಯಾಯ, ಸತ್ಯ-ಸುಳ್ಳು, ಅಹಿಂಸೆ-ಹಿಂಸೆ, ನೈತಿಕ-ಅನೈತಿಕ ಇವುಗಳ ನಡುವಣ ಗೆರೆ ಬಹಳ ತೆಳುವಾಗುತ್ತಿದ್ದು ಮನುಷ್ಯ ಸಾವಿನ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಿದ್ದಾನೆ.

ಸಾವು ಬರಹಗಾರರು ಮತ್ತು ಚಿಂತಕರನ್ನು ನಿರಂತರವಾಗಿ ಕಾಡಿದ ವಸ್ತುವಾಗಿದೆ. ಕತೆ, ಕಾದಂಬರಿ, ಆತ್ಮಕಥೆಗಳಲ್ಲಿ ಸಾವು ಮತ್ತೆ ಮತ್ತೆ ಗಾಢವಾಗಿ ಚರ್ಚೆಗೊಳಗಾಗಿದೆ. ಪಿ.ಲಂಕೇಶ್ ತಮ್ಮ ಆತ್ಮಚರಿತ್ರೆ ‘ಹುಳಿಮಾವಿನ ಮರ’ದಲ್ಲಿ ಸಾವಿನ ಕುರಿತು ಹೀಗೆ ಹೇಳಿಕೊಂಡಿದ್ದಾರೆ– ‘ನನ್ನ ಗಾಢ, ದುಗುಡದ ವೇಳೆಯಲ್ಲಿ ಸಾವಿನ ಹತ್ತಿರ ಇದ್ದಂತಿದ್ದಾಗ ಮುತ್ಸದ್ದಿತನ, ಹೊಂದಾಣಿಕೆ, ಖ್ಯಾತಿ, ಪ್ರಶಸ್ತಿ ಮುಂತಾದವೆಲ್ಲ ಬದುಕಿನೆದುರು, ಸಾವಿನೆದುರು ಗೌಣ ಅನ್ನಿಸುತ್ತಿದ್ದಾಗ ನನ್ನ ಬರವಣಿಗೆಯ ರೀತಿಯೂ ಬದಲಾಯಿತು. ಸಾವು ಇನ್ನು ಮೇಲೆ ನನಗೆ ಕೇವಲ ಕತೆಯಾಗದೆ, ಬದುಕುವ ಅಂತ್ಯ ಎಂಬ ಸತ್ಯ ಮಾತ್ರವಾಗದೆ ನನ್ನ ಉಳಿದ ದಿನಗಳಲ್ಲಿ, ಬರೆದ ಸಾಲುಗಳಲ್ಲಿ ನೆಲೆಸಿ ಎಚ್ಚರಿಸುವ ಛಾಯೆ ಅನ್ನಿಸತೊಡಗಿತು’.

ಸಾವಿನ ನೆನಪು ಬದುಕನ್ನು ಅರ್ಥಪೂರ್ಣವಾಗಿಸಿದೆ ಎಂದು ಸಕಾರಾತ್ಮಕವಾಗಿ ಯೋಚಿಸು ವವರೂ ನಮ್ಮ ನಡುವೆ ಇದ್ದಾರೆ. ಮನುಷ್ಯ ಸಾಯದೇ ಇದ್ದರೆ ಈ ಜಗತ್ತು ಎಷ್ಟೊಂದು ಅಸಹ್ಯವಾಗಿರುತ್ತಿತ್ತು ಎಂದು ಚಿಂತಿಸಿದ ಅನಂತಮೂರ್ತಿ ಅವರ ಮಾತಿನಲ್ಲಿ ಸಾವಿನಪ್ರಜ್ಞೆ ಇದೆ. ಸಾವಿಲ್ಲದ ಮನೆಯ ಸಾಸಿವೆಕಾಳು ತರಲು ಹೇಳಿ ಕಿಸಾಗೌತಮಿಗೆ ಸಾವಿನ ಅಸ್ತಿತ್ವದ ಅರಿವು ಮೂಡಿಸಿದ ಬುದ್ಧನ ನಾಡಿನಲ್ಲಿ ಸಾವು ನಮ್ಮನ್ನು ಎಚ್ಚರಿಸುವ ಪ್ರಜ್ಞೆಯಾಗಬೇಕು. ಮೌಲ್ಯಗಳು ಅಪಮೌಲ್ಯಗೊಳ್ಳುತ್ತ ಅನೈತಿಕತೆ, ಅಪ್ರಾಮಾಣಿಕತೆಗಳು
ವಿಜೃಂಭಿಸುತ್ತಿರುವಾಗ ಸಾವಿನ ಪ್ರಜ್ಞೆಯಲ್ಲಿ ಬದುಕು ಅರಳಬೇಕಿರುವುದು ಇಂದಿನ ತುರ್ತು ಅಗತ್ಯವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು