ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕಾ ಮಟ್ಟ ಖಾತರಿ: ಹಲವು ದಾರಿ

ಯಾವುದೇ ಹಂತದ ಪರೀಕ್ಷೆಯನ್ನು ಪಬ್ಲಿಕ್ ಪರೀಕ್ಷೆಯಾಗಿ ಪರಿವರ್ತಿಸಿದಾಕ್ಷಣ ಮಕ್ಕಳ ಕಲಿಕೆಯಲ್ಲಿ ಖಾತರಿಯುಂಟಾಗುತ್ತದೆ ಎಂದು ಹೇಳಲಾಗದು
Last Updated 9 ಜನವರಿ 2020, 20:00 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸದೇ ಇರುವ ನಿರ್ಧಾರವು (ಪ್ರ.ವಾ., ಜ. 8) ಸೂಕ್ತವಾಗಿದೆ. ಪಬ್ಲಿಕ್ ಪರೀಕ್ಷೆಗಳು ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಖಾತರಿಪಡಿಸುತ್ತವೆ ಎಂಬ ಮನೋಭಾವ ಇತ್ತೀಚೆಗೆ ಎಲ್ಲೆಡೆ ಹರಡಿದೆ. ಮಕ್ಕಳು ಕಲಿಯಬೇಕೆಂದಲ್ಲಿ ಒಂದಷ್ಟು ಹೆಚ್ಚಿನ ಪರೀಕ್ಷಾ ಭಯವನ್ನು ಹೊಂದಿರಲೇಬೇಕು ಎಂಬ ತೀರ್ಮಾನಕ್ಕೆ ಹೆಚ್ಚಿನವರು ಬಂದಂತಿದೆ. ಪರೀಕ್ಷೆಯು ಪಬ್ಲಿಕ್ ಇದ್ದರೆ ಒಳಿತೋ ಅಥವಾ ಶಾಲಾ ಹಂತದಲ್ಲಿ ನಡೆದರೆ ಒಳಿತೋ ಎಂಬ ಕುರಿತ ಬಿಸಿ ಚರ್ಚೆಯು ಕಲಿಕೆಯನ್ನು ಪ್ರಭಾವಿಸುವ, ಖಾತರಿಪಡಿಸುವ ಇನ್ನಿತರ ಅಂಶಗಳ ಕುರಿತ ಚರ್ಚೆಯನ್ನು ಹಿನ್ನೆಲೆಗೆ ಸರಿಸುವ ಅಪಾಯವಿರುತ್ತದೆ. ಯಾವುದೇ ಹಂತದ ತರಗತಿಯ ಪರೀಕ್ಷೆಯನ್ನು ಪಬ್ಲಿಕ್ ಪರೀಕ್ಷೆಯಾಗಿ ಪರಿವರ್ತಿಸಿದಾಕ್ಷಣ ಮಕ್ಕಳ ಕಲಿಕೆಯಲ್ಲಿ ಖಾತರಿಯುಂಟಾಗುತ್ತದೆ ಎಂದು ಹೇಳಲಾಗದು.

ಹೆಚ್ಚಿನ ದೇಶಗಳಲ್ಲಿ ಪಬ್ಲಿಕ್ ಪರೀಕ್ಷೆಗಳು ವಿದ್ಯಾರ್ಥಿಯ 15 ಅಥವಾ 16ನೇ ವಯಸ್ಸಿನಲ್ಲಿ ಪ್ರಾರಂಭ ಆಗುತ್ತವೆ. ಫಿನ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ 18ನೇ ವಯಸ್ಸಿಗೆ ಪಬ್ಲಿಕ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಜಪಾನ್ ಹಾಗೂ ಕೊರಿಯಾದಲ್ಲಿ ಶಾಲಾ ಹಂತದಲ್ಲಿಯೇ ಶಿಕ್ಷಣ ಬೋರ್ಡ್‌ಗಳ ಮೇಲುಸ್ತುವಾರಿ ಯಲ್ಲಿ ಪ‍ಬ್ಲಿಕ್‌ ಪರೀಕ್ಷೆ ನಡೆಯುತ್ತದೆ. ಆದಾಗ್ಯೂ ಪದವಿ ಅಥವಾ ಪದವಿಪೂರ್ವ ಹಂತದ ಶಿಕ್ಷಣದ ದಾಖಲಾತಿಗೆ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ.

ಶಾಲೆಗಳಲ್ಲಿ ಭೌತಿಕ ಸೌಲಭ್ಯಗಳನ್ನು ಒದಗಿಸು ವಿಕೆಯು ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಶಾಲಾ ಕಟ್ಟಡ, ಶಿಕ್ಷಕರು, ಪಠ್ಯಪುಸ್ತಕ ಹಾಗೂ ಇನ್ನಿತರ ಸೌಲಭ್ಯಗಳ ಖಾತರಿಪಡಿಸುವಿಕೆಯು ಶೈಕ್ಷಣಿಕ ಗುಣಮಟ್ಟವನ್ನು ಖಾತರಿಪಡಿಸುವ ಮೊದಲ ಮೆಟ್ಟಿಲಾಗುತ್ತದೆ. ಶಾಲೆಗಳಲ್ಲಿನ ಬೋಧನಾ– ಕಲಿಕಾ ಪ್ರಕ್ರಿಯೆಗಳು ಸಂಪದ್ಭರಿತ ಹಾಗೂ ಪರಿಣಾಮಕಾರಿ ಆಗಿರಬೇಕಿರುವುದು ಇನ್ನೊಂದು ಪ್ರಮುಖ ಅಂಶವಾಗಿದೆ. ಈ ಎರಡು ಪ್ರಮುಖ ಅಂಶಗಳ ನಂತರವಷ್ಟೇ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಮಾಪನ ಮಾಡಲು ಪರೀಕ್ಷೆಗಳು ನೆರವಾಗುತ್ತವೆ.

ಶಿಕ್ಷಕರ ಬೋಧನೆಯ ಪರಿಣಾಮ ಯಾವ ರೀತಿ ಇದೆ ಹಾಗೂ ವಿದ್ಯಾರ್ಥಿಗಳ ಕಲಿಕೆಯ ಮಟ್ಟ ಎಷ್ಟಿದೆ ಎಂಬುದನ್ನು ಕಂಡುಕೊಳ್ಳುವುದು ಶಿಕ್ಷಣದ ಗುಣಮಟ್ಟ ಖಾತರಿಯ ಮಹತ್ವದ ಘಟ್ಟ. ತರಗತಿಯ ಗೋಡೆಗಳೊಳಗೆ ನಡೆಯುವ ಚಟುವಟಿಕೆಗಳ ಕುರಿತು ಶಾಲೆಯಾಚೆ ಇರುವವರಿಗೆ ತಿಳಿಯುವುದು ಸ್ವಲ್ಪ ಕಠಿಣವೇ ಎನ್ನಬಹುದು. ಇದನ್ನು ಕಂಡುಕೊಳ್ಳಲು ಶಿಕ್ಷಣ ಅಧಿಕಾರಿ, ಮೇಲುಸ್ತುವಾರಿ ಸಿಬ್ಬಂದಿ ಕೈಗೊಳ್ಳುವ ಶಾಲಾ ಭೇಟಿಗಳು ನೆರವಾಗುತ್ತವೆ. ಈ ಭೇಟಿಗಳು ವ್ಯವಸ್ಥಿತವಾಗಿದ್ದಲ್ಲಿ ಪರಿಣಾಮ ಅಧಿಕವಾಗುತ್ತದೆ. ಶಿಕ್ಷಕರು ಬೋಧನಾ ಕಾರ್ಯದಲ್ಲಿ ಯಾವ ರೀತಿ ತೊಡಗಿಸಿಕೊಂಡಿದ್ದಾರೆ ಹಾಗೂ ವಿದ್ಯಾರ್ಥಿಗಳ ಕಲಿಕಾ ಮಟ್ಟ ಯಾವ ರೀತಿ ಇದೆ ಎಂಬುದನ್ನು ಗುರುತಿಸಿ, ಸುಧಾರಣೆಗೆ ಸಲಹೆ ನೀಡುವುದು ಶಾಲಾ ಭೇಟಿಗಳ ಪ್ರಮುಖ ಉದ್ದೇಶ. ಶಾಲೆಯ ಉತ್ತಮ ಅಂಶಗಳು ಹಾಗೂ ಶಿಕ್ಷಕರ ಪರಿಣಾಮಕಾರಿ ಪ್ರಯತ್ನಗಳನ್ನು ಗುರುತಿಸಿ, ಪ್ರಶಂಸಿಸಿ, ಸುಧಾರಣೆಗೆ ಅಗತ್ಯವಿರುವ ಅಂಶಗಳನ್ನು ಶಿಫಾರಸು ರೂಪದಲ್ಲಿ ದಾಖಲಿಸಿದಲ್ಲಿ ಶಾಲಾ ಭೇಟಿಗಳು ಪರಿಣಾಮಕಾರಿ ಆಗುತ್ತವೆ. ನಂತರದ ಶಾಲಾ ಭೇಟಿಗಳಲ್ಲಿ ಹಿಂದಿನ ಭೇಟಿಗಳಲ್ಲಿ ನೀಡಿದ ಶಿಫಾರಸುಗಳ ಅನುಪಾಲನೆಯನ್ನು ಪರಿಶೀಲಿಸಿ, ಮೇಲುಸ್ತುವಾರಿಗೆ ಒಳಪಡಿಸುವ ಕಾರ್ಯ ಪ್ರಮುಖವಾಗುತ್ತದೆ.

ಶಾಲೆಗೆ ಭೇಟಿ ನೀಡಿದ ಮೇಲುಸ್ತುವಾರಿ ತಂಡವನ್ನು ಸತ್ಕರಿಸಿ, ಉಪಚರಿಸುವ ಮತ್ತು ಸನ್ಮಾನಿಸುವ ಕಾರ್ಯಗಳು ಕೆಲವೊಮ್ಮೆ ನಡೆಯುತ್ತವೆ. ಇವು ಶಾಲಾ ಭೇಟಿಯ ಉದ್ದೇಶವನ್ನೇ ಮಸುಕು ಮಾಡಿಬಿಡುತ್ತವೆ. ಶಾಲಾ ಭೇಟಿಯು ಶಿಕ್ಷಕರಲ್ಲಿ ಭಯ ಹುಟ್ಟಿಸುವಂತಿರದೆ, ವಿಶ್ವಾಸದಾಯಕ, ಸಕಾರಾತ್ಮಕ ಹಾಗೂ ಪ್ರೇರಣಾದಾಯಕ ಆಗಿರಬೇಕು. ಶಾಲೆಯಲ್ಲಿ ನಿರ್ಲಕ್ಷ್ಯದ ಧೋರಣೆ ಕಂಡುಬಂದರೆ ಅದನ್ನು ಗುರುತಿಸಿ, ಶಿಸ್ತಿಗೊಳಪಡಿಸುವ ಅಧಿಕಾರಿಗಳಿಗೆ ಸ್ಥಳೀಯ ರಾಜಕಾರಣ ಕೆಲವೊಮ್ಮೆ ಅಡ್ಡಿ ಉಂಟು ಮಾಡುವ ಮೂಲಕ ವ್ಯವಸ್ಥೆಯು ಸಡಿಲಗೊಳ್ಳುವಂತೆ ಮಾಡುವ ಪ್ರಕರಣಗಳು ವರದಿಯಾಗುತ್ತವೆ. ಇಂತಹ ಸನ್ನಿವೇಶಗಳಿಗೆ ಅವಕಾಶವಿರದಂತೆ ಮಾಡುವ ವ್ಯವಸ್ಥೆಯನ್ನು ಸಂಬಂಧಿಸಿದ ಎಲ್ಲ ಭಾಗೀದಾರರ ಸಹಕಾರದಿಂದಲೇ ಜಾರಿಗೊಳಿಸಬೇಕಿದೆ.

ಶಾಲಾ ಭೇಟಿಗಳು ನಿರಂತರ, ಪಾರದರ್ಶಕ ಹಾಗೂ ವ್ಯವಸ್ಥಿತವಾಗಿದ್ದಲ್ಲಿ ಹೆಚ್ಚು ಪರಿಣಾಮಕಾರಿಯಾಗುತ್ತವೆ. ಭೇಟಿ ನೀಡುವ ತಂಡಕ್ಕೆ, ಶಿಕ್ಷಕರಿಗೆ ಸರಿಯಾದ ಮಾರ್ಗದರ್ಶನ ನೀಡುವ ತಜ್ಞತೆ ಇರುವುದೂ ಅಗತ್ಯವಾದ ಅಂಶ. ಶಾಲಾ ಭೇಟಿಗಳ ಮೂಲಕ ವಸ್ತುನಿಷ್ಠವಾಗಿ ಕಂಡುಕೊಂಡ ಅಂಶಗಳನ್ನು ಸಮುದಾಯ ಹಾಗೂ ಸಾರ್ವಜನಿಕರಿಗೆ ತಿಳಿಯುವಂತೆ ಮಾಡುವ ಪಾರದರ್ಶಕ ವ್ಯವಸ್ಥೆಯನ್ನು ರೂಪಿಸಿದಲ್ಲಿ ಅದೊಂದು ಕಣ್ಗಾವಲಿನಂತೆ ಕೆಲಸ ಮಾಡುತ್ತದೆ ಎನ್ನಬಹುದು.

ವಿದ್ಯಾರ್ಥಿಗಳ ವ್ಯಕ್ತಿತ್ವದ ಬೆಳವಣಿಗೆ ಹಾಗೂ ಕಲಿಕಾ ಗುಣಮಟ್ಟಕ್ಕೆ ಸಂಬಂಧಿಸಿದ ಪ್ರಗತಿ ಪರಿಶೀಲನೆಯು ಶಿಕ್ಷಣ ಇಲಾಖೆಯ ಎಲ್ಲಾ ಹಂತದ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಆದ್ಯತೆಯ ಅಂಶವಾಗಬೇಕಿದೆ.

ಯಾವುದಕ್ಕೆ ನಾವು ಬೇಡಿಕೆ ಇಡುತ್ತೇವೋ ಅದನ್ನೇ ಪಡೆಯುವುದು ನಿಸರ್ಗದ ನಿಯಮ. ಈ ನಿಟ್ಟಿನಲ್ಲಿ ಮಕ್ಕಳ ಕಲಿಕಾ ಮಟ್ಟವನ್ನು ಖಾತರಿಪಡಿಸುವ ಅಂಶಗಳ ಕಡೆ ಗಮನ ಕೇಂದ್ರೀ ಕರಿಸುವಂತೆ ವ್ಯವಸ್ಥೆಯನ್ನು ಸಜ್ಜುಗೊಳಿಸುವುದು ಪರಿಣಾಮಕಾರಿ ಆಗಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT