ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಕಸವಲ್ಲ; ಅದು ಸಂಪನ್ಮೂಲ

ನಾವು ಬಿಸಾಕುವ ಕಸ ನಮ್ಮ ಪರಿಸರವನ್ನು ಕೆಡಿಸುತ್ತಿದೆ. ಅದನ್ನು ಪರಿವರ್ತಿಸಿ, ಪುನಃ ಬಳಸಲು ಹೇರಳ ಅವಕಾಶಗಳಿವೆ
Published 25 ಸೆಪ್ಟೆಂಬರ್ 2023, 23:31 IST
Last Updated 25 ಸೆಪ್ಟೆಂಬರ್ 2023, 23:31 IST
ಅಕ್ಷರ ಗಾತ್ರ

ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ಅಮೆರಿಕದ ವರ್ಲ್ಡ್‌ ಟ್ರೇಡ್ ಸೆಂಟರ್‌ನ ಕಟ್ಟಡಗಳ ಮೇಲಿನ ವಿಮಾನ ದಾಳಿಯ ಕೃತ್ಯ ಯಾರಿಗೆ ತಾನೆ ನೆನಪಿಲ್ಲ. ಎರಡು ವಿಮಾನಗಳು ನುಗ್ಗಿ ಬೃಹತ್ ಕಟ್ಟಡದ ಬಹುಭಾಗ ನೆಲಸಮವಾದಾಗ ಧ್ವಂಸಗೊಂಡ ಕಟ್ಟಡಗಳಿಂದ ಅಪಾರ ಪ್ರಮಾಣದ ದೂಳು, ಬೆಲೆಬಾಳುವ ಉಕ್ಕು, ತಾಮ್ರ, ಸಿಮೆಂಟು, ಗಾಜು, ಕರಗಿದ ಪ್ಲಾಸ್ಟಿಕ್ಕು, ಸೀಸ, ಫೈಬರ್‌ಗ್ಲಾಸು, ಪಾದರಸ, ಮುರಿದ ಪಿವಿಸಿ ಪೈಪು, ಅಲ್ಯುಮಿನಿಯಂ ತುಂಡು ಹೀಗೆ ಕಟ್ಟಡದೆತ್ತರದ ಕಸದ ರಾಶಿಯೇ ಸೃಷ್ಟಿಯಾಗಿತ್ತು. ಅದನ್ನು ಎತ್ತಿ ಎಲ್ಲಿಗಾದರೂ ದೂರ ಸಾಗಿಸಬೇಕಲ್ಲವೇ? ಅಮೆರಿಕದ ಐವತ್ತು ರಾಜ್ಯಗಳ ಯಾವ ಊರಿನವರೂ ಕಸ ಸ್ವೀಕರಿಸಲು ತಯಾರಿರಲಿಲ್ಲ. ಖುಷಿಯಿಂದ ಸ್ವೀಕರಿಸಲು ಅದೇನು ಉಡುಗೊರೆಯೇ? ‘ನಮಗೆ ಬೇಡ’ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿಬಿಟ್ಟವು. ಮತ್ತೆ ಆ ಕಸ ಕೊನೆಗೆ ಹೋದದ್ದೆಲ್ಲಿಗೆ?

ಅಲ್ಲೆಲ್ಲೂ ಹೋಗದೆ ಸೀದಾ ಹಡಗುಗಳ ಮೂಲಕ ನಮಗೇ ಬಂತು. ಸ್ವಲ್ಪಭಾಗ ಚೀನಾ, ಕೊರಿಯಾಕ್ಕೂ ಹೋಯಿತು. ಕಡಿಮೆ ರೇಟಿಗೆ ನಾವೇ ಅದನ್ನು ಖರೀದಿಸಿ, ಒಂದೊಂದನ್ನೂ ಬೇರ್ಪಡಿಸಿ, ಕೆಲವನ್ನು ಇಡಿ ಇಡಿಯಾಗಿ, ಇನ್ನು ಕೆಲವನ್ನು ಮೂಟೆಗಟ್ಟಲೆ ಮಾರಿ ಹೆಚ್ಚಿನ ಲಾಭ ಮಾಡಿಕೊಂಡೆವು, ಕಸ ಬರೀ ಕಸವಲ್ಲ ಅದೊಂದು ಸಂಪನ್ಮೂಲ ಎಂಬ ಮಾತು ಅಕ್ಷರಶಃ ನಿಜವಾಗಿತ್ತು.

ಕೃಷಿ, ಕಟ್ಟಡ, ಇ-ತ್ಯಾಜ್ಯ, ಬಾಹ್ಯಾಕಾಶ, ಅಡುಗೆ- ತರಕಾರಿ, ಕೇಶಮುಂಡನ, ಕ್ಷೌರ, ಪ್ಲಾಸ್ಟಿಕ್ ಕಂಪ್ಯೂಟರ್ ಕಸ, ಸಿ.ಡಿ-ಡಿವಿಡಿ, ಕೇಬಲ್, ಆಸ್ಪತ್ರೆ, ಪ್ಯಾಕಿಂಗ್ ಉದ್ಯಮ, ಶಾಲೆ, ಕಲ್ಯಾಣಮಂಟಪ, ಆಟದ ಮೈದಾನ, ದೇವಸ್ಥಾನ, ದಾಸೋಹ ಕ್ಷೇತ್ರ, ಹಾಸ್ಟೆಲ್‌, ಅಂಗಡಿ, ಹೋಟೆಲ್, ಬಂದರು, ಬಸ್– ರೈಲು ನಿಲ್ದಾಣ, ಕೈಮಗ್ಗ, ಗಾರ್ಮೆಂಟ್, ಔಷಧ ಕಾರ್ಖಾನೆ, ಆ್ಯಸಿಡ್ ಬ್ಯಾಟರಿ, ಸೋಲಾರ್ ಪ್ಯಾನೆಲ್, ನ್ಯೂಕ್ಲಿಯರ್ ಘಟಕ, ಗೃಹೋಪಯೋಗಿ ಉತ್ಪನ್ನ ತಯಾರಿಕೆ, ಡಿಸ್ಟಿಲರೀಸ್, ತಂಪುಪಾನೀಯ ತಯಾರಿಕೆ, ಸಿಮೆಂಟು, ಕಾಂಕ್ರೀಟು, ಮರದ ಉತ್ಪನ್ನ, ಗಣಿಗಾರಿಕೆ, ರಸ್ತೆ ನಿರ್ಮಾಣ, ವಿದ್ಯುತ್ ಸ್ಥಾವರ ಹೀಗೆ ಮನುಷ್ಯಕೇಂದ್ರಿತ ಪ್ರತಿ ಕೆಲಸದಿಂದಲೂ ಕಸ ಸೃಷ್ಟಿಯಾಗುತ್ತದೆ. ಮೃತ ಕಳೇವರ, ಪ್ರಾಣಿಗಳ ತುಪ್ಪಳ, ಹಿಕ್ಕೆ, ಸಗಣಿ, ಮನುಷ್ಯನ ಮಲ–ಮೂತ್ರ ಕಸ ಅನುದಿನವೂ ಹೆಚ್ಚುತ್ತಿದೆ.

ನೀರು, ನೆಲಕ್ಕಷ್ಟೇ ಅಲ್ಲ, ಸುತ್ತಲಿನ ಗಾಳಿಗೂ ಕಸ ತುಂಬುತ್ತಿದ್ದೇವೆ. ನಾವು ಪ್ರತಿ ಗಂಟೆಗೆ ಹನ್ನೊದು ಲಕ್ಷ ಕೆ.ಜಿ. ತೂಕದ ಪ್ಲಾಸ್ಟಿಕ್‌ ಅನ್ನು ಸಮುದ್ರದ ತಳಕ್ಕೆ ತಳ್ಳುತ್ತಿದ್ದೇವೆ. ನ್ಯಾನೊ ಹಾಗೂ ಮೈಕ್ರೊ ಪ್ಲಾಸ್ಟಿಕ್ ಕಸ ಭೂಮಿ, ಆಕಾಶ, ಗಾಳಿ, ನೀರು, ಆಹಾರವನ್ನು ಸೇರುತ್ತಿವೆ. ಹಡಗುಗಳಿಂದ ಸೋರುವ ತೈಲ, ನಾವು ಬಿಸಾಕಿರುವ ಪ್ಲಾಸ್ಟಿಕ್ ಕಸಗಳು ಸಾಗರಜೀವಿ ಮತ್ತು ಸಮುದ್ರಹಕ್ಕಿಗಳ ಪಾಲಿಗೆ ಮಾರಣಾಂತಿಕವಾಗಿವೆ. ಸ್ವಚ್ಛಭಾರತ ಅಭಿಯಾನವು ನಗರಗಳ ರಸ್ತೆ, ಸುಸಜ್ಜಿತ ಬಡಾವಣೆಗಳಿಗೆ ಮಾತ್ರ ಸೀಮಿತವಾಗಿದೆ. ಊರೊಳಗಿನ ಕಸ ಹೊರವಲಯಕ್ಕೆ ಬಂದು ಬೀಳುತ್ತಿದೆ.

ಪರಿಸರ ಸಚಿವಾಲಯದ ಮಾಹಿತಿಯಂತೆ ದೇಶ ವರ್ಷಕ್ಕೆ 6.2 ಕೋಟಿ ಟನ್ ಕಸ ಉತ್ಪತ್ತಿ ಮಾಡುತ್ತದೆ ಮತ್ತೆ ಅದರ ಪ್ರಮಾಣ ಶೇ 4 ರಷ್ಟು ಪ್ರತಿವರ್ಷ ಹೆಚ್ಚುತ್ತಿದೆ. ಪ್ರಸ್ತುತ ನಾವು ಹೊಮ್ಮಿಸುತ್ತಿರುವ ನಗರ ಘನ ತ್ಯಾಜ್ಯದ ಪ್ರಮಾಣದಲ್ಲಿ ಶೇ 20ರಷ್ಟು ಮಾತ್ರ ಸಂಸ್ಕರಣಗೊಳ್ಳುತ್ತದೆ, ಉಳಿದದ್ದು ಭೂಭರ್ತಿತಾಣ ಮತ್ತು ನದಿ–ಸಾಗರಗಳಿಗೆ ಸೇರುತ್ತದೆ. ಭಾರತದ ಕಸ ಸಂಸ್ಕರಣೆ ಉದ್ಯಮಗಳಿಗೆ 1,500 ಕೋಟಿ ಡಾಲರ್‌ಗಳ ವ್ಯವಹಾರ ಸಾಧ್ಯವಿದೆ. ವಿಶ್ವ ಕಸ ಸಂಸ್ಕರಣೆ ಉದ್ಯಮದ ವಹಿವಾಟು ಕಳೆದ ವರ್ಷ 6,300 ಕೋಟಿ ಡಾಲರ್‌ನಷ್ಟಿತ್ತು.

ಉತ್ಪತ್ತಿಯಾಗುವ ಒಟ್ಟು ಕಸದಲ್ಲಿ ಕಾಲು ಭಾಗ ಒಣಕಸವಾಗಿದ್ದು ಅದನ್ನು ಸಂಸ್ಕರಿಸಿ ಮರುಬಳಕೆ ಮಾಡಬಹುದಾಗಿದೆ. ವಾರ್ಷಿಕ 20 ಲಕ್ಷ ಟನ್ ಇ– ತ್ಯಾಜ್ಯ ನಮ್ಮಲ್ಲಿ ಉತ್ಪತ್ತಿಯಾಗುತ್ತಿದ್ದು ಇದರಲ್ಲಿ ಅರ್ಧದಷ್ಟನ್ನು ನೇರವಾಗಿ ಮರುಬಳಕೆ ಮಾಡಬಹುದು. ಮೂರು ವರ್ಷಗಳ ಹಿಂದೆ ₹ 8,100 ಕೋಟಿ ಮೌಲ್ಯದ ಪೇಪರ್ ಮತ್ತದರ ತಿರುಳಿನ ತ್ಯಾಜ್ಯವನ್ನು ಆಮದು ಮಾಡಿಕೊಂಡಿದ್ದೆವು. ಅದಕ್ಕಿಂತ ಹೆಚ್ಚು ತ್ಯಾಜ್ಯ ನಮ್ಮಲ್ಲೇ ಉತ್ಪತ್ತಿಯಾಗುತ್ತದೆ. ಆದರೆ ಶೇ 20ರಷ್ಟು ಮಾತ್ರ ಸಂಗ್ರಹಗೊಳ್ಳುತ್ತದೆ. ಉಳಿದದ್ದು ಭೂಭರ್ತಿ ತಾಣಕ್ಕೆ ಸೇರುತ್ತದೆ. ಗಾಜು ಮತ್ತು ಲೋಹದ ತ್ಯಾಜ್ಯಕ್ಕೂ ಇದೇ ಗತಿಯಾಗುತ್ತದೆ. ಬಾಹ್ಯಾಕಾಶದ ಉಪಗ್ರಹಗಳ ಕಸ ತೆಗೆಯಲು ‘ನಾಸಾ’ ಟ್ರಾನ್ಸ್ ಅಸ್ತ್ರ ಎಂಬ ಕಂಪನಿಯೊಂದಿಗೆ ಕರಾರು ಮಾಡಿಕೊಂಡಿದೆ.

ಮನುಷ್ಯ– ಪ್ರಾಣಿ– ಕ್ರಿಮಿ– ಕೀಟಗಳಿಂದ ಹೊಮ್ಮುವ ಎಲ್ಲ ಬಗೆಯ ಕಸವನ್ನೂ ಪರಿವರ್ತಿಸಿ ಪುನರ್ ಬಳಕೆಗೆ ಯೋಗ್ಯವನ್ನಾಗಿಸುವ ಅನೇಕ ಉದ್ಯಮಗಳು ವಿಶ್ವದಾದ್ಯಂತ ಇವೆ. ಕಸವನ್ನೇ ರಸವನ್ನಾಗಿ ಪರಿವರ್ತಿಸುವವರ ಸಂಖ್ಯೆ ಅಗಾಧವಾಗಿದೆ. ರೀ ಸೈಕಲಿಂಗ್ ಘಟಕಗಳು ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹೂಡಿ ಅಷ್ಟೇ ದೊಡ್ಡ ಲಾಭವನ್ನೂ ಗಳಿಸುತ್ತಿವೆ. ಶಾಲೆ– ಕಾಲೇಜಿನ ವಿದ್ಯಾರ್ಥಿಗಳು, ಗೃಹಿಣಿಯರು, ಸ್ವತಂತ್ರ ಚಿಂತಕರು ವಿನೂತನ ರೀತಿಯಲ್ಲಿ ಯೋಚಿಸಿ, ಬಿಸಾಡಿದ ಕಸಕ್ಕೆ ಮರುಜೀವ ನೀಡಿದ್ದಾರೆ. ಫಿಲಿಫೀನ್ಸ್‌ನಂತಹ ಚಿಕ್ಕ ದೇಶದಲ್ಲಿ ಕೊಳವೆಬಾವಿ ಪೈಪುಗಳನ್ನೇ ಬಳಸಿ ಕಸದ ರಾಶಿಯಿಂದ ನೇರವಾಗಿ ಮೀಥೇನ್ ಅನಿಲ ಪಡೆದು ಅದನ್ನೇ ಅಡುಗೆ ಮನೆಗಳಲ್ಲಿ ಬಳಸಲಾಗುತ್ತಿದೆ. ವಿಜ್ಞಾನ ತಂತ್ರಜ್ಞಾನದಲ್ಲಿ ಬಹಳಷ್ಟು ಸಾಧನೆ ಮಾಡುತ್ತಿರುವ ನಮಗೆ ಇದೇಕೆ ಹೊಳೆಯುವುದಿಲ್ಲ? ಅಂದಹಾಗೆ, ಸೆ. 26, ವಿಶ್ವ ಪರಿಸರ ಆರೋಗ್ಯ ದಿನ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT