ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮಣ್ಣಿನ ಆರೋಗ್ಯ ರಕ್ಷಿಸೋಣ

ಮಹದುಪಕಾರಿ ಮಣ್ಣಿನ ಮಹತ್ವದ ಅರಿವು ನಮಗಿದೆಯೇ?
Last Updated 4 ಡಿಸೆಂಬರ್ 2020, 21:15 IST
ಅಕ್ಷರ ಗಾತ್ರ

ಆರೋಗ್ಯಕರ ಮಣ್ಣಿನ ಮಹತ್ವದ ಬಗ್ಗೆ ಗಮನಹರಿಸುವ ಮತ್ತು ಮಣ್ಣಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗೆ ಸಲಹೆ ನೀಡುವ ಸಲುವಾಗಿ ‘ವಿಶ್ವ ಮಣ್ಣಿನ ದಿನ’ವನ್ನು ಪ್ರತಿವರ್ಷ ಡಿಸೆಂಬರ್ 5ರಂದು ಆಚರಿಸಲಾಗುತ್ತದೆ. ಈ ವರ್ಷದ ದಿನಾಚರಣೆಯ ಘೋಷವಾಕ್ಯ ‘ಮಣ್ಣನ್ನು ಜೀವಂತವಾಗಿ ಇರಿಸಿಕೊಳ್ಳಿ ಮತ್ತು ಮಣ್ಣಿನ ಜೀವವೈವಿಧ್ಯವನ್ನು ರಕ್ಷಿಸಿ’.

ಮಣ್ಣಿನ ನಿರ್ವಹಣೆಯ ಬಗ್ಗೆ ಹೆಚ್ಚುತ್ತಿರುವ ಸವಾಲುಗಳನ್ನು ಎದುರಿಸುವ ಮೂಲಕ ಆರೋಗ್ಯಕರ ಪರಿಸರ ವ್ಯವಸ್ಥೆ ಮತ್ತು ಮಾನವ ಯೋಗಕ್ಷೇಮವನ್ನು ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ವಿಶ್ವಸಂಸ್ಥೆ ಹೊಂದಿದೆ.

ಮಣ್ಣೇ ಮನುಷ್ಯನ ನಾಗರಿಕತೆ. ನಿಸರ್ಗದಲ್ಲಿ ಒಂದು ಇಂಚು ದಪ್ಪದ ಮಣ್ಣಿನಪದರ ಬೆಳೆಯುವುದಕ್ಕೆ ಕನಿಷ್ಠ 10 ಸಾವಿರ ವರ್ಷಗಳು ಬೇಕಾಗುತ್ತವೆ. ಮಣ್ಣಿನ ಅವನತಿಯನ್ನು ತಡೆಯಲು ವಿಫಲವಾಗಿದ್ದರಿಂದ, ಜಗತ್ತಿನ ಎಷ್ಟೋ ದೊಡ್ಡದೊಡ್ಡ ನಾಗರಿಕತೆಗಳೇ ಅಳಿದುಹೋಗಿವೆ. ಮಣ್ಣಿನ ಫಲವತ್ತತೆಯು ಜೈವಿಕ, ಭೌತಿಕ ಮತ್ತು ಸಾಮಾಜಿಕ ಆಸ್ತಿಯಾಗಿದೆ. ಆದರೆ ಆಧುನಿಕ ಕೃಷಿ ಮತ್ತು ಮಾನವಜನ್ಯ ಚಟುವಟಿಕೆಗಳು ಮಣ್ಣಿನ ಫಲವತ್ತತೆಯನ್ನು ಹೊಸಕಿ ಹಾಕುತ್ತಿವೆ. ಆರ್ಥಿಕ ಬೆಳೆಗಳಿಗೆ ಉಪಯೋಗಿಸುವ ವಿಷಕಾರಿ ಕೀಟನಾಶಕಗಳು, ಗಣಿಗಾರಿಕೆ, ಕಾರ್ಖಾನೆಗಳು ಚೆಲ್ಲುವ ರಾಸಾಯನಿಕಗಳು, ಸೋರಿಹೋಗುವ ತೈಲ, ನಗರಗಳಲ್ಲಿ ಉತ್ಪತ್ತಿಯಾಗುವ ಅಪಾರ ತ್ಯಾಜ್ಯ, ಕಾಳ್ಗಿಚ್ಚು-ಅರಣ್ಯನಾಶ, ವಾಹನಗಳಿಂದ ಬಿಡುಗಡೆಯಾಗುವ ವಿಷಕಾರಕಗಳು ಮಣ್ಣನ್ನು ಮಲಿನಗೊಳಿಸಿ ಅದರ ಫಲವತ್ತತೆಯನ್ನು ನಾಶಗೊಳಿಸುತ್ತಿವೆ.

ಒಂದು ನಿರ್ದಿಷ್ಟ ಸ್ಥಳದಲ್ಲಿ ವಾಸಿಸುವ ಜನಾಂಗೀಯ ಗುಂಪಿನ ಸಂಸ್ಕೃತಿ ಮತ್ತು ನಾಗರಿಕತೆಯೊಂದಿಗೆ ಮಣ್ಣು ನಿಕಟ ಸಂಪರ್ಕ ಹೊಂದಿರುತ್ತದೆ. ಅದರಲ್ಲಿ ಜೀವನೋಪಾಯ ಮತ್ತು ಆರೋಗ್ಯ ಸೇರಿರುತ್ತವೆ. ಹೀಗಾಗಿ, ‘ಪರಿಸರ ಮಾಲಿನ್ಯ, ನೆರೆ-ಪ್ರವಾಹಗಳಿಂದ ನಷ್ಟವಾಗುತ್ತಿರುವ ಮಣ್ಣಿನ ಫಲವತ್ತತೆ ಮತ್ತು ಜೀವವೈವಿಧ್ಯ ನಷ್ಟದ ವಿರುದ್ಧ ಹೋರಾಡಬೇಕು, ಮಣ್ಣಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ತುರ್ತು ಕೆಲಸವನ್ನು ಎಲ್ಲರೂ ಮಾಡಬೇಕು’ ಎಂದು ವಿಶ್ವಸಂಸ್ಥೆ ಕೇಳಿಕೊಂಡಿದೆ.

ತತ್ವಶಾಸ್ತ್ರ ಮತ್ತು ಧರ್ಮಗಳಲ್ಲಿ ಮಣ್ಣಿನ ಸ್ಥಾನ, ಮಣ್ಣು– ಆತ್ಮದ ನಡುವಿನ ಸಂಬಂಧ ಮತ್ತು ಸಾಂಸ್ಕೃತಿಕವಾಗಿ ಮಣ್ಣಿನ ಜ್ಞಾನವನ್ನು ಚರ್ಚಿಸಲಾಗಿದೆ. ‘ಮಣ್ಣು ದಣಿದಿದೆ, ಅನಾರೋಗ್ಯವಾಗಿದೆ ಅಥವಾ ಮಣ್ಣಿಗೆ ಶೀತವಾಗಿದೆ, ಅದು ಚೇತರಿಸಿಕೊಳ್ಳುವವರೆಗೂ ಹಾಗೇ ಬಿಟ್ಟುಬಿಡಬೇಕು’ ಎಂದು ರೈತರು
ಹೇಳುತ್ತಿದ್ದುದುಂಟು.

20ನೇ ಶತಮಾನದ ಮಧ್ಯಭಾಗದಲ್ಲಿ, ಮಣ್ಣು ಮತ್ತು ಸಸ್ಯಗಳಲ್ಲಿನ ಕೊರತೆಗಳನ್ನು ಪತ್ತೆ ಹಚ್ಚಿದ ರಾಸಾಯನಿಕ ಉದ್ಯಮಗಳು ಜಾಗತಿಕ ಕೃಷಿಯನ್ನು ಸರಿಪಡಿಸಲು ಹೊರಟವು. ಇದರಿಂದ ಆಹಾರ ಉತ್ಪಾದನೆಯಲ್ಲಿ ಅಭೂತಪೂರ್ವ ಸಾಧನೆ ಮಾಡಲಾಯಿತು. ಆದರೆ, ಅದರ ಜೊತೆಜೊತೆಗೆ ಜಾಗತಿಕ ತಾಪಮಾನಕ್ಕೆ ಕೊಡುಗೆ ನೀಡುವುದರ ಜೊತೆಗೆ ಮಾಲಿನ್ಯವೂ ಹೆಚ್ಚಾಯಿತು. ಇದು, ಅಂತರ್ಜಲ, ನದಿಗಳು, ಸರೋವರಗಳು ಮತ್ತು ಕಡಲದಂಡೆಗಳ ಪರಿಸರವನ್ನು ಹಾಳುಗೆಡವಿತು. ಪ್ರಸ್ತುತ ಕೃಷಿ ಚಟುವಟಿಕೆಗಳು ಮೂರನೇ ಒಂದು ಭಾಗದಷ್ಟು ಹಸಿರುಮನೆ ಅನಿಲಗಳಿಗೆ ಕಾರಣವಾಗಿವೆ.

ಜನಸಂಖ್ಯೆಗೆ ತಕ್ಕಂತೆ ಆಹಾರ ಮತ್ತು ಪರಿಸರ ಸುರಕ್ಷತೆಯನ್ನು ಸಾಧಿಸಲು, ಮಣ್ಣಿನ ಪರಿಸರವನ್ನು ಆರೋಗ್ಯಕರವಾಗಿ ಉಳಿಸಿಕೊಳ್ಳಬೇಕಿದೆ. ಇಲ್ಲವೆಂದರೆ ಜನಸಮುದಾಯಗಳು ಮತ್ತು ದೇಶಗಳ ಮಧ್ಯೆ ಆಹಾರಕ್ಕಾಗಿ ಪ್ರಕ್ಷುಬ್ಧತೆ ಮತ್ತು ಯುದ್ಧಗಳೇ ನಡೆಯಬಹುದು.

ಡಾ. ಎಂ.ವೆಂಕಟಸ್ವಾಮಿ, ಬೆಂಗಳೂರು

***

ಬೇಕಾಗಿದೆ ಭೂಸ್ನೇಹಿ ಕೃಷಿ

ಯಾವ ಋಣವನ್ನಾದರೂ ತೀರಿಸಬಹುದು, ಆದರೆ ಮಣ್ಣಿನ ಋಣವನ್ನು ತೀರಿಸಲಾಗದು ಎಂಬ ಮಾತಿದೆ. ಮಣ್ಣು ಇಲ್ಲದೆ ಜೀವಸಂಕುಲವಿಲ್ಲ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯ ಪ್ರಕಾರ, ಸವೆತದ ಮೂಲಕ ಜಾಗತಿಕವಾಗಿ ಶೇ 33ರಷ್ಟು ಮಣ್ಣು ಈಗಾಗಲೇ ಅಳಿದುಹೋಗಿದೆ. ಭಾರತದಲ್ಲಿ ಮಣ್ಣಿನ ಸವಕಳಿಯಿಂದಾಗಿ ಪ್ರತಿವರ್ಷ ಕೋಟ್ಯಂತರ ಟನ್‌ಗಳಷ್ಟು ಮೇಲ್ಮಣ್ಣು ನದಿಗಳ ಮೂಲಕ ಅಣೆಕಟ್ಟು, ಸಮುದ್ರವನ್ನು ಸೇರುತ್ತಿದೆ.

ಆಹಾರದಲ್ಲಿ ಪೌಷ್ಟಿಕಾಂಶ ಇರಬೇಕೆಂದರೆ ಮಣ್ಣಿನಲ್ಲಿ ಸತ್ವ ಇರಬೇಕು. ಜಗತ್ತಿನ ಸುಮಾರು 200 ಕೋಟಿ ಜನರಿಗೆ ಬೇಕಾಗುವಷ್ಟು ಸತ್ವಯುತ ಮತ್ತು ಪೌಷ್ಟಿಕಾಂಶಯುಕ್ತ ಆಹಾರ ಈಗ ಲಭಿಸುತ್ತಿಲ್ಲ. ಮಣ್ಣನ್ನು ಸಂರಕ್ಷಿಸುವ ಮೂಲಕ ನಾವು ಇಂತಹ ಅಪಾಯದ ತೀವ್ರತೆಯನ್ನು ತಗ್ಗಿಸಬಹುದು. ನಿರಂತರವಾಗಿ ಒಂದರ ನಂತರ ಒಂದು ಬೆಳೆ ಹಾಕುವುದು, ಕಸ ಸುಡುವುದು ಹಾಗೂ ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಉತ್ಪಾದಕ ಭೂಮಿ ಮುಂದಿನ ದಿನಗಳಲ್ಲಿ ಗಣನೀಯ ಪ್ರಮಾಣದಲ್ಲಿ ನಿರುಪಯುಕ್ತವಾಗಲಿದೆ ಎಂದು ಅಂದಾಜಿಸಲಾಗಿದೆ.

ಮಣ್ಣಿನ ಸವಕಳಿಯನ್ನು ತಡೆಯಲು ರೈತರು ಇಳಿಜಾರಿಗೆ ಅಡ್ಡವಾಗಿ ಉಳುಮೆ ಮಾಡುವುದು, ಬದುಗಳ ನಿರ್ಮಾಣದಂತಹ ಕ್ರಮಗಳನ್ನು ಕೈಗೊಳ್ಳಬೇಕು. ಮಕ್ಕಳಿಗೆ ಮಣ್ಣಿನ ಮಹತ್ವದ ಬಗ್ಗೆ ತಿಳಿಸಬೇಕು. ಅರಣ್ಯ ನಾಶ, ಪ್ಲಾಸ್ಟಿಕ್ ಮತ್ತು ಮಾರಕ ರಾಸಾಯನಿಕಗಳು ಮಣ್ಣಿನೊಳಗೆ ಸೇರುವುದನ್ನು ತಡೆಗಟ್ಟಲು ಪ್ರತಿಯೊಬ್ಬ ಪ್ರಜೆಯೂ ಕೈಜೋಡಿಸಬೇಕು. ಕೃತಕ ಗೊಬ್ಬರಗಳ ಬಳಕೆ ಬಿಟ್ಟು ಸಾವಯವ ಮತ್ತು ಭೂಸ್ನೇಹಿ ಕೃಷಿ ನಮ್ಮದಾಗಬೇಕು.

ಮನುಕುಲದ ಭವಿಷ್ಯದ ದೃಷ್ಟಿಯಿಂದ ಮಣ್ಣನ್ನು ರಕ್ಷಿಸುವುದು ಅತ್ಯಗತ್ಯ. ಮಣ್ಣಿನ ರಕ್ಷಣೆಯು ವಿಶ್ವದ ಪ್ರತಿಯೊಬ್ಬ ನಾಗರಿಕನ ಧ್ಯೇಯವಾಗಬೇಕು.

ಬಿ.ಎಸ್.ಚೈತ್ರ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT