ಶನಿವಾರ, ಸೆಪ್ಟೆಂಬರ್ 18, 2021
26 °C
ಸರ್ಕಾರದ ವಿವಿಧ ಯೋಜನೆಗಳಿಗೆ ಗುತ್ತಿಗೆ ಆಧಾರದ ಮೇಲೆ ಭೂಮಿ ಪಡೆಯುವುದರಿಂದ ರೈತರಿಗೆ ಹೆಚ್ಚು ನೋವಾಗುವುದಿಲ್ಲ, ಅವರ ನಿರಂತರ ಆದಾಯಕ್ಕೆ ದಾರಿಯಾಗುತ್ತದೆ

ಸಂಗತ| ಸಂಘರ್ಷರಹಿತ ಸರಳ ಮಾರ್ಗ

ಮಲ್ಲಿಕಾರ್ಜುನ ಹೆಗ್ಗಳಗಿ Updated:

ಅಕ್ಷರ ಗಾತ್ರ : | |

Prajavani

ಕಾಲಕ್ಕೆ ವಿಚಿತ್ರ ಶಕ್ತಿಯಿದೆ ಎನಿಸುತ್ತದೆ. ತುಮಕೂರು ಜಿಲ್ಲೆಯ ಪಾವಗಡ ಕೆಲವು ವರ್ಷಗಳ ಹಿಂದೆ ತೋಳಗಳ ದಾಳಿಗೆ ಕುಖ್ಯಾತಿ ಗಳಿಸಿತ್ತು. ಈಗ ಅಲ್ಲಿ ವಿಶ್ವದ ಅತಿದೊಡ್ಡ, ದಿನಕ್ಕೆ 2,000 ಮೆಗಾವಾಟ್‌ ಸೌರವಿದ್ಯುತ್ ಉತ್ಪಾದಿಸುವ ಸಾಮರ್ಥ್ಯದ ಪಾರ್ಕ್ ಆರಂಭವಾಗಿ ಜಗತ್ತಿನ ಗಮನ ಸೆಳೆಯತೊಡಗಿದೆ.

ಈ ಯೋಜನೆಗೆ ದೊಡ್ಡ ಪ್ರಮಾಣದಲ್ಲಿ (12,700 ಎಕರೆ) ಭೂಮಿ ಬೇಕಾಗಿತ್ತು. ಸರ್ಕಾರವು ರೈತರಿಂದ ಭೂಮಿ ವಶಪಡಿಸಿಕೊಳ್ಳುವ ಬದಲಾಗಿ ಗುತ್ತಿಗೆ ಆಧಾರದ ಮೇಲೆ ಪಡೆದುಕೊಂಡಿರುವುದು ವಿಶೇಷ. ಭೂಮಿ ಪಡೆಯುವುದಕ್ಕಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆ ಯಲ್ಲಿ ಸಮಿತಿಯೊಂದನ್ನು ರಚಿಸಲಾಯಿತು. ಕೃಷಿ ಅಧಿಕಾರಿಗಳು ಸಮಿತಿಯ ಸದಸ್ಯರಾಗಿದ್ದರು. ಈ ಭಾಗದ ರೈತರು ವರ್ಷಕ್ಕೆ ಒಂದು ಎಕರೆಗೆ ಎಷ್ಟು ಆದಾಯ ಪಡೆಯುತ್ತಾರೆ ಎಂಬುದನ್ನು ವೈಜ್ಞಾನಿಕವಾಗಿ ಲೆಕ್ಕ ಹಾಕಲಾಯಿತು. ಇದರ ಆಧಾರದ ಮೇಲೆ ಪ್ರತೀ ಎಕರೆಗೆ ಪ್ರತೀ ವರ್ಷ ₹ 21 ಸಾವಿರ ಕೊಡುವ ಒಪ್ಪಂದ ಮಾಡಿಕೊಳ್ಳಲಾಗಿದೆ. ಎರಡು ವರ್ಷಗಳಿಗೊಮ್ಮೆ ಶೇ 5ರಷ್ಟು ಹೆಚ್ಚಿಸಲು ಅವಕಾಶವಿದೆ. ಕಳೆದ ಎರಡು ವರ್ಷಗಳಿಂದ ರೈತರು ಹಣ ಪಡೆಯುತ್ತಿದ್ದಾರೆ. 25 ವರ್ಷಗಳ ನಂತರ ಒಪ್ಪಂದದ ಮರುಪರಿಶೀಲನೆ ಮಾಡಬಹುದಾಗಿದೆ.

ಯಾವುದೇ ವಿವಾದ ಇಲ್ಲದೆ ರೈತರು ಸಂತೋಷ ದಿಂದ ಭೂಮಿ ನೀಡಿದ್ದಾರೆ. ಅವರ ಮಾಲೀಕತ್ವದ ಹಕ್ಕು ಉಳಿದಿದೆ. ಭೂಮಿ ನೀಡಿದ್ದಕ್ಕೆ ನಿರಂತರ ಆದಾಯದ ಗ್ಯಾರಂಟಿ ದೊರೆತಿದೆ.

ವಿಜಯಪುರ ಜಿಲ್ಲೆಯ ಕೂಡಗಿ ವಿದ್ಯುತ್‌ ಸ್ಥಾವರ ನಿರ್ಮಾಣಕ್ಕೆ ಭೂಮಿ ವಶಪಡಿಸಿಕೊಳ್ಳುವ ಸಂದರ್ಭದಲ್ಲಿ (2008- 2012) ಸರ್ಕಾರ ಮತ್ತು ರೈತರ ಮಧ್ಯೆ ಒಂದು ರೀತಿಯ ಯುದ್ಧವೇ ನಡೆಯಿತು. ರೈತರ ಪ್ರತಿಭಟನೆಯ ಕಾಲಕ್ಕೆ ಗುಂಡು ಹಾರಿಸಲಾಯಿತು. ರೈತರು ಕೋರ್ಟ್‌, ಪೊಲೀಸ್‌ ಠಾಣೆಗಳಿಗೆ ಅಲೆಯುತ್ತಿದ್ದಾರೆ. ಭೂಮಿಯ ಜೊತೆಗೆ ನೆಮ್ಮದಿಯನ್ನೂ ಕಳೆದುಕೊಂಡು ಮರುಗುತ್ತಿದ್ದಾರೆ.

ಸರ್ಕಾರಿ ಯೋಜನೆಗಳಿಗೆ, ಕೈಗಾರಿಕೆಗಳಿಗೆ ಭೂಮಿ ವಶಪಡಿಸಿಕೊಳ್ಳುವುದು ತೀರಾ ಕಠಿಣವಾದ ಕೆಲಸ. ಒಂದು ಪ್ರದೇಶದಲ್ಲಿ ಕೈಗಾರಿಕೆ ಬರುತ್ತದೆ ಎಂದು ಗೊತ್ತಾಗುತ್ತಲೇ ಅಲ್ಲಿ ಏಜೆಂಟರು, ಸಮಯಸಾಧಕರು, ಹೋರಾಟಗಾರರು, ಮೋಜು ನೋಡುವವರು ಹುಟ್ಟಿಕೊಳ್ಳುತ್ತಾರೆ. ಮಾರಲು ಭೂಮಾಲೀಕರ ಬಳಿ ಸರಿಯಾದ ದಾಖಲೆಗಳಿರುವುದಿಲ್ಲ. ಮೂರ್ನಾಲ್ಕು ತಲೆಮಾರುಗಳಿಂದ ವಾರಸಾ ಆಗಿರುವುದಿಲ್ಲ. ಸಹೋ ದರರ ನಡುವೆ ಮೌಖಿಕವಾಗಿ ಭೂಮಿ ಹಂಚಿಕೆಯಾಗಿರುತ್ತದೆ. ಆದರೆ ಅದನ್ನು ಭೂಮಿ ಕೇಂದ್ರದಲ್ಲಿ ದಾಖಲಿಸಿರುವುದಿಲ್ಲ. ಬಹಳಷ್ಟು ರೈತರು ಭೂಮಿಯ ಆಧಾರದ ಮೇಲೆ ಬ್ಯಾಂಕುಗಳಲ್ಲಿ ಸಾಲ ಪಡೆದಿರುತ್ತಾರೆ. ಅದು ಕೆಲವು ಸಂದರ್ಭದಲ್ಲಿ ಕುಟುಂಬದ ಇತರ ಸದಸ್ಯರಿಗೆ ತಿಳಿದಿರುವುದಿಲ್ಲ. ಭೂಮಿಯ ಕ್ಷೇತ್ರಮಾಹಿತಿ ಸರಿ ಯಾಗಿ ಇರುವುದಿಲ್ಲ. ಕೋರ್ಟಿನಲ್ಲಿ ವ್ಯಾಜ್ಯಗಳಿರು ತ್ತವೆ. ಇವುಗಳನ್ನೆಲ್ಲ ಸರಿಪಡಿಸಿದ ನಂತರವೇ ಭೂಮಿ ಖರೀದಿಗೆ ಒಪ್ಪಿಗೆ ದೊರೆಯುತ್ತದೆ. ಇವನ್ನೆಲ್ಲ ನಿಭಾ ಯಿಸುವಲ್ಲಿ ಉದ್ದಿಮೆ ಸ್ಥಾಪಿಸುವವರ ಉತ್ಸಾಹ ಕುಗ್ಗಿ ಹೋಗುತ್ತದೆ. ಬಹಳ ಸಮಯವೂ ವ್ಯರ್ಥವಾಗುತ್ತದೆ.

ದೇಶದಲ್ಲಿ ಈಗ ಸ್ಥಾಪಿಸಲು ಉದ್ದೇಶಿಸಿರುವ ಎಲ್ಲ ಸಣ್ಣ ಹಾಗೂ ದೊಡ್ಡ ಕೈಗಾರಿಕೆಗಳು ಹಾಗೂ ಯೋಜನೆಗಳು ಸೇರಿ ಬೇಕಾಗುವ ಜಮೀನು ಶೇ 0.02ರಷ್ಟು ಭಾಗ ಮಾತ್ರ (ಅಂದರೆ 10 ಸಾವಿರ ಎಕರೆಗೆ 2 ಎಕರೆ). ದೇಶದ ಒಟ್ಟು ಸಾಗುವಳಿ ಕ್ಷೇತ್ರಕ್ಕೆ ಹೋಲಿಸಿದರೆ ಇದು ಅತಿ ಅಲ್ಪ. ಆಹಾರ ಭದ್ರತೆಗೆ ಯಾವುದೇ ತೊಂದರೆ ಇಲ್ಲ ಮಾತ್ರವಲ್ಲ, ಕೃಷಿಗೂ ಅನೇಕ ರೀತಿಯಲ್ಲಿ ನೆರವಾಗುತ್ತದೆ.

ಭೂಮಿ ವಶಪಡಿಸಿಕೊಂಡು ಖರೀದಿಸಲು ಒಮ್ಮೆಲೇ ಸಾವಿರಾರು ಕೋಟಿ ರೂಪಾಯಿ ಹೂಡಬೇಕಾಗುತ್ತದೆ. ಗುತ್ತಿಗೆ ಪಡೆಯುವುದರಿಂದ ಸರ್ಕಾರಕ್ಕೆ ಹಾಗೂ ಕೈಗಾರಿಕಾ ಸಂಸ್ಥೆಗಳಿಗೆ ದೊಡ್ಡ ಪ್ರಮಾಣದಲ್ಲಿ ಹಣ ಹೊಂದಿಸುವ ಭಾರ ಕಡಿಮೆಯಾಗುತ್ತದೆ.

ಉತ್ತರ ಕರ್ನಾಟಕ ಭಾಗದ ಕೃಷ್ಣಾ ಮೇಲ್ದಂಡೆ ಅತ್ಯಂತ ದೊಡ್ಡ ನೀರಾವರಿ ಯೋಜನೆ. ಇದಕ್ಕೆ ಎರಡು ಹಂತಗಳಲ್ಲಿ ಭೂಮಿ ವಶಪಡಿಸಿಕೊಳ್ಳಲಾಗಿದೆ. ಬೆಲೆ ನಿಗದಿ, ಪರಿಹಾರ ಹಣದ ಬಗ್ಗೆ ಬಹಳಷ್ಟು ಗೊಂದಲಗಳಿವೆ. ಈಗ ಮೂರನೇ ಹಂತಕ್ಕಾಗಿ ಸುಮಾರು 20 ಸಾವಿರ ಎಕರೆ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆ ಬಿರುಸಿನಿಂದ ಆರಂಭವಾಗಿದೆ. ರೈತರು ಪ್ರತಿರೋಧ ಒಡ್ಡುತ್ತಿದ್ದಾರೆ. ಹೋರಾಟ ಉಗ್ರ ರೂಪ ಪಡೆಯುತ್ತಿದೆ.

ರೈತವರ್ಗಕ್ಕೆ ಭೂಮಿಯ ಬಗ್ಗೆ ಅಪಾರ ಪ್ರೀತಿ, ಭಕ್ತಿ ಇರುತ್ತದೆ. ಭೂಮಿಯನ್ನು ಭೂಮಾತೆ ಎಂದು ಪೂಜಿಸುತ್ತಾರೆ. ಭೂಮಿ ರೈತರ ಪಾಲಿಗೆ ಭೌತಿಕ ನೆಲವಲ್ಲ. ಅದು ಭಾವನ್ಮಾತಕ ಸಂಬಂಧ ಹೊಂದಿದ ಸಂಪತ್ತು. ರಾಜ್ಯದಲ್ಲಿ ಮಲಪ್ರಭಾ, ಘಟಪ್ರಭಾ, ಮಹದಾಯಿ, ಕಾವೇರಿ ನೀರಾವರಿ ಯೋಜನೆಗಳನ್ನು ವಿಸ್ತರಿಸುವ ಕಾರ್ಯ ನಡೆಯುತ್ತಿದೆ.

ಇದಕ್ಕೆಲ್ಲ ಸರ್ಕಾರ ಭೂಮಿ ವಶಪಡಿಸಿಕೊಳ್ಳುವುದನ್ನು ಬಿಟ್ಟು, ಪಾವಗಡ ಮಾದರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಪಡೆದುಕೊಂಡರೆ ಸಮಸ್ಯೆ ಸರಳವಾಗಿ ಬಗೆಹರಿಯುತ್ತದೆ. ಭೂಮಿ ತಮ್ಮ ಹೆಸರಲ್ಲೇ ಉಳಿಯುವುದರಿಂದ ರೈತರಿಗೆ ಅಷ್ಟು ನೋವಾಗುವುದಿಲ್ಲ. ಹೀಗಾಗಿ, ಗುತ್ತಿಗೆ ಆಧಾರದ ಮೇಲೆ ಎಲ್ಲ ಯೋಜನೆಗಳಿಗೆ ಭೂಮಿ ಪಡೆಯುವುದು ಸರಳ ಮಾರ್ಗವಾಗಿದೆ. ರೈತರ ನಿರಂತರ ಆದಾಯಕ್ಕೂ ದಾರಿಯಾಗುತ್ತದೆ.

ಕೈಗಾರಿಕೆಗಳನ್ನು ಕಟ್ಟುವವರು ಕೂಡ ಈ ನೂತನ ವಿಧಾನ ಅನುಸರಿಸಲು ಮುಂದೆ ಬರಬೇಕು. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯೂ (ಕೆಐಎಡಿಬಿ) ಇತ್ತ ಗಮನ ಹರಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು