ಸಿನಿಮಾ ನಟಿ ಭಾವನಾ ರಾಮಣ್ಣ ಅವರು, ‘ಐವಿಎಫ್’ ತಂತ್ರಜ್ಞಾನದ ಮೂಲಕ ತಾಯಿಯಾಗುವ ತಮ್ಮ ಹಂಬಲ ಪೂರೈಸಿಕೊಳ್ಳಲು ಹೊರಟಿದ್ದಾರೆ. ತಾವು ಅಮ್ಮನಾಗುತ್ತಿರುವ ವಿಷಯವನ್ನು ಸ್ವತಃ ಅವರು ಹೇಳಿಕೊಂಡಿದ್ದಾರೆ. ಅವರು ಸೆಲೆಬ್ರಿಟಿಯಾದ ಕಾರಣದಿಂದಾಗಿ, ಖಾಸಗಿ ವಿಷಯ ದೊಡ್ಡ ಸುದ್ದಿಯಾಗಿದೆ; ಟ್ರೋಲ್ಪ್ರಿಯರಿಗೆ ಆಹಾರವಾಗಿದೆ.

ಭಾವನಾ ಅವರ ತಾಯ್ತನದ ನಿರ್ಧಾರಕ್ಕೆ ಸಂಬಂಧಿಸಿದ ಪ್ರತಿಕ್ರಿಯೆಗಳು ಓರ್ವ ಕಲಾವಿದೆಯ ಬಗ್ಗೆ ಜನರಿಗೆ ಇರುವ ಕುತೂಹಲವನ್ನು ತೋರಿಸುವಂತಿವೆ. ಹೆಣ್ಣಿನ ಬಗ್ಗೆ ಸಮಾಜಕ್ಕೆ ಇರುವ ಪೂರ್ವಗ್ರಹಗಳನ್ನೂ ಸಂಕೇತಿಸುವಂತಿವೆ. ಹೆಚ್ಚಿನ ಪ್ರತಿಕ್ರಿಯೆಗಳು ಭಾವನಾ ಅವರ ನೈತಿಕತೆಯನ್ನು ಮೌಲ್ಯಮಾಪನ ಮಾಡಲು ಹೊರಟಿವೆ. ಧರ್ಮ, ಸಂಸ್ಕೃತಿಯ ಹೆಸರಿನಲ್ಲಿ ವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ನಡೆಸಿವೆ.

‘ತಾಯ್ತನ ಅವರ ಹಕ್ಕು ಎನ್ನುವುದು ನಿಜವಾದರೂ, ಮದುವೆ ಆಗದೆ ಆ ಹಕ್ಕನ್ನು ಅನುಭವಿಸುವುದು ಎಷ್ಟು ಸರಿ? ಐವಿಎಫ್ ಮೂಲಕ ತಾಯಿಯಾಗಲು ಹೊರಟಿರುವ ಅವರು ಸಮಾಜಕ್ಕೆ ಎಂತಹ ಸಂದೇಶ ಕೊಡುತ್ತಿದ್ದಾರೆ? ಇಂಥ ಅನೈಸರ್ಗಿಕ ಪ್ರಯತ್ನಗಳು ಸರಿಯಲ್ಲ...’ ಎನ್ನುವಂಥ ಟೀಕೆ ಟಿಪ್ಪಣಿಗಳು ವ್ಯಕ್ತವಾಗಿವೆ. ಇನ್ನೂ ಕೆಲವರು, ತಂದೆಯ ಅಗತ್ಯ ಮತ್ತು ಸಾಮಾಜಿಕ ಮಹತ್ವವನ್ನು ಪ್ರತಿಪಾದಿಸಿದ್ದಾರೆ. ಭಾವನಾ ಅವರ ರಾಜಕೀಯ ನಿಲುವನ್ನು ಪ್ರಶ್ನಿಸಿ, ಅವರ ತಾಯ್ತನವನ್ನು ಅಪರಾಧ ಮತ್ತು ಅಕ್ಷಮ್ಯ ಎನ್ನುವಂತೆ ನೋಡಿರುವವರೂ ಇದ್ದಾರೆ. ಈ ಪ್ರತಿಕ್ರಿಯೆಗಳು ನಮ್ಮ ಸಮಾಜದ ಮನಃಸ್ಥಿತಿ ಯಾವ ದಿಕ್ಕಿನಲ್ಲಿದೆ ಎನ್ನುವುದರ ಅಧ್ಯಯನಕ್ಕೆ ಸೂಕ್ತವಾಗಿವೆ.

ಶೀಲದ ಅಸ್ತ್ರ ಬಳಸಿ ಮಹಿಳೆಯನ್ನು ನಿಯಂತ್ರಿಸುವ ಪ್ರಕ್ರಿಯೆ ಈಗಂತೂ ಹೆಚ್ಚಾಗಿದೆ. ಬೆಳಗಾವಿ ಚಳಿಗಾಲದ ವಿಧಾನಸಭೆ ಅಧಿವೇಶನದಲ್ಲಿ ಜನಪ್ರತಿನಿಧಿಯೊಬ್ಬರು ಸಚಿವೆಯನ್ನು ಉದ್ದೇಶಿಸಿ ಆಕ್ಷೇಪಾರ್ಹ ಪದ ಬಳಸಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಕಳೆದ ವಾರ ಮತ್ತೊಬ್ಬ ಜನಪ್ರತಿನಿಧಿ, ಐಎಎಸ್ ಅಧಿಕಾರಿಣಿ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿರುವ ಬಗ್ಗೆ ದೂರು ದಾಖಲಾಗಿದೆ. ಹೆಣ್ಣಿನ ಬಗ್ಗೆ ಅವಹೇಳನದಿಂದ ಮಾತನಾಡುವ ಬೆಳವಣಿಗೆಯನ್ನು ವಕೀಲರೂ, ಬುಕರ್ ಪ್ರಶಸ್ತಿ ಪುರಸ್ಕೃತರೂ ಆಗಿರುವ ಬಾನು ಮುಷ್ತಾಕ್ ‘ಗಂಡಾಳ್ವಿಕೆ’ ಎಂದು ಟೀಕಿಸಿದ್ದಾರೆ.

ಪುರುಷನೊಬ್ಬ ತನ್ನ ಕುಟುಂಬದ ಯಾವ ಮಹಿಳೆಯ ಬಗ್ಗೆಯೂ ನಿಂದನೆ ಮತ್ತು ಆಕ್ಷೇಪದ ಮಾತನ್ನು ಆಡುವಂತಿಲ್ಲ. ಹಾಗೇನಾದರೂ ನಿಂದಿಸಿದರೆ, ಆತನನ್ನು ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಸಾರ್ವಜನಿಕವಾಗಿ ಹೆಣ್ಣನ್ನು ನಿಂದಿಸುವವರಿಗೆ ಶಿಕ್ಷೆಗೊಳಪಡಿಸುವ ಕಾನೂನನ್ನೂ ಜಾರಿಗೆ ತರಬೇಕು ಎನ್ನುವುದು ಬಾನು ಮುಷ್ತಾಕ್ ಅವರ ಅಭಿಪ್ರಾಯ. ‘ಯಾರಿಂದಲೂ ಯಾರೂ ನಡತೆಯ ಪ್ರಮಾಣ ಪತ್ರವನ್ನು ಪಡೆಯುವ ಅಗತ್ಯ ಇಲ್ಲ. ಗಂಡಾಳ್ವಿಕೆಯ ಮನಃಸ್ಥಿತಿಯು ಮಾತು, ಸನ್ನೆ, ಕೃತ್ಯ, ಬಲದ ಮೂಲಕ ಹೆಣ್ಣನ್ನು ಅಧೀನ ಮಾಡಿಕೊಳ್ಳುತ್ತಿದೆ. ಅದನ್ನು ಒಪ್ಪಲು ಸಾಧ್ಯವಿಲ್ಲ. ಓರ್ವ ಮಹಿಳೆಯ ಖಾಸಗೀತನವನ್ನು ಪ್ರಶ್ನಿಸುವುದು ತಪ್ಪು’ ಎನ್ನುವ ಅವರ ಮಾತು, ಸಾರ್ವಜನಿಕ ತಿಳಿವಳಿಕೆಯೂ ಆಗಬೇಕಾಗಿದೆ.

ಭಾವನಾ ರಾಮಣ್ಣ ವಿಜ್ಞಾನ ಪದವೀಧರೆ, ಅವಿವಾಹಿತೆ. ತಾಯ್ತನದ ಆಸೆಯನ್ನು ಐವಿಎಫ್ ತಂತ್ರಜ್ಞಾನದ ಮೂಲಕ ಪೂರೈಸಿಕೊಳ್ಳುವ ಅವರ ಪ್ರಯತ್ನದಲ್ಲಿ ಸಮಾಜಕ್ಕೆ ಕೆಡುಕಾಗುವಂತಹದ್ದೇನೂ ಇಲ್ಲ. ವೈಜ್ಞಾನಿಕ ಸವಲತ್ತುಗಳ ಮೂಲಕ ಮಕ್ಕಳನ್ನು ಪಡೆಯುವುದು ಹಾಗೂ ‘ಸಿಂಗಲ್ ಪೇರೆಂಟಿಂಗ್’ ಪರಿಕಲ್ಪನೆ ಹೊಸತೇನೂ ಅಲ್ಲ.

ಬಾಲಿವುಡ್ನ ಕರಣ್ ಜೋಹರ್, ತುಷಾರ್ ಕಪೂರ್ ‘ಸಿಂಗಲ್ ಪೇರೆಂಟಿಂಗ್’ಗೆ ಉದಾಹರಣೆಯಾಗಿದ್ದಾರೆ. ಕನ್ನಡದ ನಿರ್ದೇಶಕಿ ಕವಿತಾ ಲಂಕೇಶ್ ಅವರು ಕೂಡ ‘ಸಿಂಗಲ್ ಪೇರೆಂಟಿಂಗ್’ಗೆ ಮಾದರಿಯಾಗಿದ್ದಾರೆ. ಏಕ ಪೋಷಕತ್ವಕ್ಕೆ ಕಾನೂನಿನಲ್ಲಿಯೂ ಮಾನ್ಯತೆ ಇದೆ. ಮಕ್ಕಳ ಶಾಲಾ ದಾಖಲಾತಿಯಲ್ಲಿ ತಂದೆಯ ಹೆಸರು ಈಗ ಕಡ್ಡಾಯ ಅಲ್ಲ. ಮಕ್ಕಳ ದಾಖಲಾತಿಯಲ್ಲಿ ಅಮ್ಮನ ಹೆಸರಿನ ಸೇರ್ಪಡೆಗೆ ಅವಕಾಶ ಇರುವುದರಿಂದ, ದೇವದಾಸಿ ತಾಯಂದಿರ ಮಕ್ಕಳೂ ವಿದ್ಯಾಭ್ಯಾಸವನ್ನು ಮಾಡಲು ಸಾಧ್ಯ ಆಗಿದೆ.

ಆಧುನಿಕ ಕುಟುಂಬ ವ್ಯವಸ್ಥೆಯಲ್ಲಿ ಏಕ ಪೋಷಕರ ಕುಟುಂಬಗಳು ಅವರವರ ಅನುಕೂಲಕ್ಕೆ ತಕ್ಕಂತೆ ರೂಪಿತ ಗೊಳ್ಳುತ್ತವೆ. ಅಲ್ಲಿ, ತಂದೆ ಅಥವಾ ತಾಯಿ ಜೈವಿಕವಾಗಿ ಗುರುತಿಸಬಹುದಾದ ಅಂತರಲಿಂಗಿ ಸಂಗಾತಿ ಇಲ್ಲದೆಯೇ ಮಗುವನ್ನು ಪಡೆಯುವ ಹಾಗೂ ಒಂಟಿಯಾಗಿಯೇ ಪಾಲನೆ– ಪೋಷಣೆ ಮಾಡುವ ಹಕ್ಕನ್ನು ಹೊಂದಿರುತ್ತಾರೆ. ಕುಟುಂಬದಲ್ಲಿ ತಾಯಿಯೇ ತಂದೆಯ ಪಾತ್ರವನ್ನೂ ನಿರ್ವಹಿಸುವುದು ಇಲ್ಲವೇ ತಾಯಿಯ ಪಾತ್ರವನ್ನು ತಂದೆಯೇ ನಿಭಾಯಿಸುವುದು ಸಹಜ. ಪುರುಷನ ಯಜಮಾನಿಕೆಯಲ್ಲಿ ಇರಲು ಬಯಸದ ಸ್ವತಂತ್ರ ಮನೋಭಾವದ ಯುವತಿಯರು ಅವಿವಾಹಿತರಾಗಿರಲು ಬಯಸುತ್ತಾರೆ. ಅವರು ತಂತ್ರಜ್ಞಾನದ ನೆರವಿನಿಂದ ಮಗು ಪಡೆಯುವ ಅಥವಾ ದತ್ತು ಪಡೆಯುವ ಹಕ್ಕನ್ನು ಹೊಂದಿದ್ದಾರೆ.

ವೃತ್ತಿಪರ ಬದುಕಿನ ಸಾಧನೆಯ ಕನಸಿರುವ ಅನೇಕರು ‘ಸಿಂಗಲ್ ಪೇರೆಂಟ್’ ಮಾದರಿಯ ಕುಟುಂಬವನ್ನು ಬಯಸುವುದಿದೆ. ಅದಕ್ಕೆ ಆಧುನಿಕ ತಂತ್ರಜ್ಞಾನವೂ ಅವಕಾಶ ಮಾಡಿಕೊಟ್ಟಿದೆ. ಕೃತಕ ಗರ್ಭಧಾರಣೆ ಒಬ್ಬರ ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯ. ಅದರ ಮೇಲೆ ನಡೆಯುವ ದಾಳಿ ಅನಾರೋಗ್ಯಕರ ಮನಃಸ್ಥಿತಿಯದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.