ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಮೊಬೈಲ್: ಮೂಲಮೂರ್ತಿ ಮಂಕಾಗಿದೆ!

Published 7 ಸೆಪ್ಟೆಂಬರ್ 2023, 22:15 IST
Last Updated 7 ಸೆಪ್ಟೆಂಬರ್ 2023, 22:15 IST
ಅಕ್ಷರ ಗಾತ್ರ

ಮಾದಕದ್ರವ್ಯ, ಮೊಬೈಲ್ ವ್ಯಸನ ಕುರಿತಾಗಿ ಪ್ರೌಢಶಾಲೆಯೊಂದರಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಪ್ರಶ್ನೆಯ ಮೇಲೆ ಪ್ರಶ್ನೆ ಕೇಳುತ್ತಾ ತನ್ನ ಅರಿವನ್ನು ವಿಸ್ತರಿಸಿಕೊಳ್ಳುತ್ತಿದ್ದ ಆ ಬಾಲಕಿಯ ಚುರುಕುತನ ಗಮನ ಸೆಳೆಯುವಂತಿತ್ತು. ಕಾರ್ಯ ಕ್ರಮದ ನಂತರ ಹೆಡ್‍ಮಾಸ್ಟರ್ ಬಳಿ ಅವಳ ಬಗ್ಗೆ ವಿಚಾರಿಸಿದಾಗ ತಿಳಿದ ವಿಷಯ ಆಶ್ಚರ್ಯ ತಂದಿತ್ತು!

ದೂರದ ಊರಿಂದ ಈ ಶಾಲೆಗೆ ಪೋಷಕರು ಸೇರಿಸಿದ್ದರು. ಅಲ್ಲಿಯೇ ಖ್ಯಾತನಾಮ ವಿದ್ಯಾಸಂಸ್ಥೆಗಳಿರುವಾಗ ಇಷ್ಟು ದೂರದ ಈ ಶಾಲೆಯನ್ನು ಏಕೆ ಆಯ್ದುಕೊಂಡರೆಂಬ ಪ್ರಶ್ನೆಗೆ ಶಿಕ್ಷಕರು ಕೊಟ್ಟ ಕಾರಣ ಆಕೆಯ ಮೊಬೈಲ್ ಹುಚ್ಚು. ಎಷ್ಟೊತ್ತಿಗೂ ಮೊಬೈಲ್‍ಗೆ ಅಂಟಿಕೊಂಡು ಆಟ, ಪಾಠ, ದಿನಚರಿಯ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದ, ಬುದ್ಧಿಮಾತಿಗೆ ಸಿಡಿದೇಳುತ್ತಿದ್ದ ಅವಳ ಹಟಮಾರಿ ಧೋರಣೆಯನ್ನು ಬದಲಾಯಿಸಲಾಗದೆ ಹೆತ್ತವರು ಹಾಸ್ಟೆಲ್ ಸೌಕರ್ಯವಿದ್ದ ಈ ಶಾಲೆಗೆ ಸೇರಿಸಿದ್ದರು.

‘ನಮ್ಮಲ್ಲಿ ಮೊಬೈಲ್‍ಗೆ ನಿಷೇಧವಿದೆ. ವಾರಕ್ಕೊಮ್ಮೆ ಆಫೀಸ್ ಫೋನಲ್ಲಿ ಮನೆಯವರೊಂದಿಗೆ ಚುಟುಕು ಮಾತಿಗೆ ಮಾತ್ರ ಅವಕಾಶ. ಪಠ್ಯದ ಜೊತೆಗೆ ಶಿಸ್ತಿನ ವಿಚಾರದಲ್ಲೂ ತುಂಬಾ ಕಟ್ಟುನಿಟ್ಟಾಗಿ ಇರುವುದರಿಂದ ನಮ್ಮಲ್ಲಿ ದೂರದೂರುಗಳ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು’ ಎನ್ನುವಾಗ ಹೆಡ್‍ಮಾಸ್ಟರ್ ಮೊಗದಲ್ಲಿ ಹೆಮ್ಮೆಯ ಜೊತೆಗೆ ಗರ್ವವೂ ಇಣುಕುತ್ತಿತ್ತು! ‘ಮೊದಮೊದಲು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲಾಗದೆ ಬಹಳ ಒದ್ದಾಡಿದಳು. ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡು ಖಿನ್ನತೆಗೂ ಜಾರಿದ್ದಳು. ಆಪ್ತಸಮಾಲೋಚನೆಯ ಮೂಲಕ ಸಾಂತ್ವನ ಹೇಳಿದ ನಂತರವಷ್ಟೇ ಅವಳು ಚೇತರಿಸಿಕೊಂಡಿದ್ದು. ಈಗ ತುಂಬಾ ಚುರುಕಾಗಿದ್ದಾಳೆ. ಓದುವುದರ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸದಾ ಮುಂದು’ ಎಂದಾಗ ಅವಳ ಈ ಸಕಾರಾತ್ಮಕ ಪರಿವರ್ತನೆಗೆ ಹೃದಯ ಭೇಷ್ ಎಂದಿತ್ತು!

ವಯಸ್ಸಿನ ಭೇದವಿಲ್ಲದೆ ಎಲ್ಲ ವಯೋಮಾನದ ವರಲ್ಲೂ ಮೊಬೈಲ್ ಗೀಳು ಆತಂಕಕಾರಿಯಾಗಿ ಏರುತ್ತಿದೆ. ಅದರಲ್ಲೂ ಹೆಚ್ಚಿನ ಕೆಡುಕು ಕಾಣಿಸುತ್ತಿರು ವುದು ಮಕ್ಕಳಲ್ಲಿ. ಒಂಟಿತನ, ಕೋಪ, ಖಿನ್ನತೆ, ಆತಂಕ, ಉದ್ವೇಗ, ಹಟ, ಆಟ-ಪಾಠಗಳಿಂದ ವಿಮುಖತೆ, ಕುಂಠಿತ ಪ್ರಗತಿಯಿಂದಾಗಿ ಹೆತ್ತವರು ಹೈರಾಣಾಗಿದ್ದಾರೆ. ಹಟಮಾರಿತನ, ಸೂಕ್ಷ್ಮಮನಸ್ಸಿನ ಕಾರಣದಿಂದಾಗಿ ಗದರಿ, ಬುದ್ಧಿ ಹೇಳಿ ಸರಿದಾರಿಗೆ ತರಲಾಗದ ಅಸಹಾಯಕತೆ. ಹಾಗಾಗಿ ಮೊಬೈಲ್ ವ್ಯಸನದಿಂದ ಮಕ್ಕಳನ್ನು ಹೊರತಂದು ಉತ್ತಮ ಶೈಕ್ಷಣಿಕ ಸಾಧನೆಗಾಗಿ ಅನಿವಾರ್ಯವಾಗಿ ಕಠಿಣ ಕಟ್ಟಲೆಗಳಿರುವ ವಸತಿ ಶಾಲೆಗಳಿಗೆ ದಾಖಲಿಸಿ ನಿಟ್ಟುಸಿರು ಬಿಡುತ್ತಿದ್ದಾರೆ!

ಪೋಷಕರ ಈ ಪರಿಯ ಆತಂಕದ ಮನಃಸ್ಥಿತಿಯನ್ನು ನಗದೀಕರಿಸಿಕೊಳ್ಳುತ್ತಿರುವ ಹಲವು ಶಾಲೆಗಳು ಶಿಸ್ತು, ಗುಣಮಟ್ಟದ ಶೈಕ್ಷಣಿಕ ಪ್ರಗತಿ, ಸನ್ನಡತೆಯ ಭರವಸೆಯೊಂದಿಗೆ ಅಧಿಕ ಶುಲ್ಕ ಸೆಳೆಯುತ್ತಾ ತಮ್ಮ ಸಂಸ್ಥೆಗಳಲ್ಲಿ ಪ್ರವೇಶ ನೀಡುತ್ತಿವೆ.

ಮಕ್ಕಳನ್ನು ಮೊಬೈಲ್ ಫೋನುಗಳಿಂದ ಸಂಪೂರ್ಣವಾಗಿ ದೂರವಿರಿಸುವ, ಅವರ ಓಡಾಟವನ್ನು ಪೂರ್ಣವಾಗಿ ಪ್ರತಿಬಂಧಿಸಿ ಪಠ್ಯಕ್ಕೆ ಸೀಮಿತಗೊಳಿಸುವ, ಉಜ್ವಲ ಭವಿಷ್ಯದ ಹೆಸರಲ್ಲಿ ಬೇರೆ ಬೇರೆ ಕೋರ್ಸುಗಳಿಗೆ ಎರಡು, ಮೂರು ವರ್ಷಗಳ ಮೊದಲೇ ಕೋಚಿಂಗ್ ವ್ಯವಸ್ಥೆ ಮಾಡುವ, ಶಿಸ್ತಿನ ಹೆಸರಲ್ಲಿ ವರ್ಷಕ್ಕೊಮ್ಮೆ ಮಾತ್ರ ಅತ್ಯಲ್ಪ ರಜೆಯ ಮೇರೆಗೆ ಮನೆಗೆ ಕಳುಹಿಸುವ ಶಾಲಾ, ಕಾಲೇಜುಗಳಿಗೀಗ ಭಾರಿ ಬೇಡಿಕೆ. ಅಲ್ಲಿನ ಬಿಡುವೇ ಇಲ್ಲದ ಕಟ್ಟುನಿಟ್ಟಿನ ದಿನಚರಿ, ಒಮ್ಮೆಲೇ ಹೆತ್ತವರಿಂದ, ಸ್ನೇಹಿತರಿಂದ, ಇಷ್ಟದ ವಸ್ತುಗಳಿಂದ ದೂರವಾಗುವ ಕಾರಣದಿಂದ ಹುಟ್ಟಿಕೊಳ್ಳುವ ಒತ್ತಡ, ಆತಂಕ, ಹತಾಶೆ, ಖಿನ್ನತೆ ಎಳೆಯ ಮನಗಳಿಗೆ ತೀವ್ರ ಗಾಸಿ ಮಾಡುತ್ತಿದೆ. ಸಕಾಲಕ್ಕೆ ಸರಿಯಾದ ಸಾಂತ್ವನ ಸಿಗದೇ ಇದ್ದಾಗ ಮಾನಸಿಕವಾಗಿ ಮತ್ತಷ್ಟು ಮುದುಡುವ ಮಕ್ಕಳು ಬದುಕಿಗೆ ಹಾನಿ ಮಾಡಿಕೊಳ್ಳುತ್ತಿರುವ ಪ್ರಕರಣಗಳು  ಏರಿಕೆಯಾಗುತ್ತಿರುವುದು ಎಚ್ಚರಿಕೆಯ ಗಂಟೆ ಮೊಳಗಿಸುತ್ತಿದೆ!

ಹೌದು, ಎಳೆಯರನ್ನು ಮಾನಸಿಕ, ಶಾರೀರಿಕ, ಸಾಮಾಜಿಕ ಸ್ವಾಸ್ಥ್ಯ ಕದಡುವ ದುರಭ್ಯಾಸಗಳಿಂದ ದೂರವಿರಿಸಲು ಕಠಿಣ ನಿಯಮಗಳಿಗಿಂತ ಮನಃ ಪರಿವರ್ತನೆಯೇ ಮದ್ದು. ಮಕ್ಕಳಿಗೆ ಮೊದಮೊದಲಿಗೆ ಪೋಷಕರೇ ಪ್ರೇರಣೆ, ಅವರದ್ದೇ ಅನುಸರಣೆ. ಹಾಗಾಗಿ ಮಗುವಿನಲ್ಲಿ ಬದಲಾವಣೆ ತರಬೇಕಿದ್ದಲ್ಲಿ ಹೆತ್ತವರು ಮೊದಲು ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕು. ಯಾವುದನ್ನೂ ಬಲಾತ್ಕಾರವಾಗಿ ಹೇರದೆ ಕೆಡುಕುಗಳ ಬಗ್ಗೆ ಆಗಾಗ್ಗೆ ತಾಳ್ಮೆಯಿಂದ ತಿಳಿಹೇಳಬೇಕು. ಆರೋಗ್ಯಕರ ಹವ್ಯಾಸ, ಚಟುವಟಿಕೆ ಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರ ಜೊತೆಗೆ ಚಿಕ್ಕವರನ್ನೂ ಭಾಗವಹಿಸುವಂತೆ ಹುರಿದುಂಬಿಸಿದಾಗ ಮಾತ್ರ ಸಕಾರಾತ್ಮಕ ಬದಲಾವಣೆ ಸಾಧ್ಯ. ಅವರ ವಯೋಸಹಜ ಸ್ವಾತಂತ್ರ್ಯಕ್ಕೆ ಭಂಗ ತಾರದ ರೀತಿಯಲ್ಲಿ ಮಕ್ಕಳ ನಡತೆಯ ಮೇಲೆ ಒಂದು ಕಣ್ಣಿಟ್ಟಿರುವುದೂ ಅಗತ್ಯ. ಹೆತ್ತವರ ಅಸಡ್ಡೆಗೆ ಗುರಿಯಾದ, ಪ್ರೀತಿ ವಂಚಿತ, ಸೂಕ್ತ ನಿಗಾ ಇಲ್ಲದ, ಪೋಷಕರ ಒಡನಾಟವಿಲ್ಲದ ಮಕ್ಕಳೇ ದಾರಿ ತಪ್ಪುವ, ದುರಭ್ಯಾಸಗಳಿಗೆ ದಾಸರಾಗುವ ಸಂಭವ ಹೆಚ್ಚು ಎಂಬುದು ಸದಾ ನೆನಪಿನಲ್ಲಿ ಇಡಬೇಕಾದ ಅಂಶ.

ಮೊಬೈಲ್ ಫೋನ್ ಎಲ್ಲರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಅದಿಲ್ಲದೆ ಯಾವ ಕೆಲಸಗಳೂ ಸುಸೂತ್ರವಾಗಿ ಸಾಗದಿರುವ ಹಂತದಲ್ಲಿ ನಾವಿದ್ದೇವೆ. ಎಲ್ಲ ಪ್ರಮುಖ ವ್ಯವಹಾರಗಳಿಗೂ ಅನಿವಾರ್ಯವಾಗಿರುವ ಈ ಸಾಧನದ ಒಳಿತಿನ ಮೂಲಮೂರ್ತಿ ಮಂಕಾಗಿ, ಕೆಡುಕೆಂಬ ಉತ್ಸವಮೂರ್ತಿಯೇ ವಿಜೃಂಭಿಸುತ್ತಿರುವುದು ಸದ್ಯದ ವಾಸ್ತವ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT