ಶನಿವಾರ, ಫೆಬ್ರವರಿ 4, 2023
17 °C
ಗ್ರಹಣಕ್ಕೆ ಸಂಬಂಧಿಸಿದ ಮೂಢನಂಬಿಕೆಗಳನ್ನು ಹೊಡೆದೋಡಿಸಬೇಕು. ಜನರಲ್ಲಿ ತಿಳಿವಳಿಕೆ ಮೂಡಿಸುವುದೇ ಅದಕ್ಕಿರುವ ಮಾರ್ಗ

ನೆರಳು ಬೆಳಕಿನಾಟ: ನೋಡಲೇನಡ್ಡಿ?

ಬಿ.ಎಸ್.ಶೈಲಜಾ Updated:

ಅಕ್ಷರ ಗಾತ್ರ : | |

Prajavani

‘ಪತ್ರಿಕೆಗಳ ಮುಖಪುಟದ ಸುದ್ದಿಯಾದ ಇತ್ತೀಚಿನ ಕಂಕಣ ಗ್ರಹಣ ಎಷ್ಟು ಜನರನ್ನು ಆಕರ್ಷಿಸಿತು’ ಎಂಬ ಪ್ರಶ್ನೆಗೆ ಅದೇ ಪತ್ರಿಕೆಗಳ ಚಿತ್ರಗಳೇ ಉತ್ತರ ಹೇಳುತ್ತವೆ. ಖಾಲಿ ರಸ್ತೆಗಳು, ಮುಚ್ಚಿದ ಅಂಗಡಿಗಳು, ನಿಶ್ಶಬ್ದವಾದ ಬಸ್ ನಿಲ್ದಾಣಗಳು...

ಬೆಂಗಳೂರಿನಲ್ಲಿ ಮೋಡಗಳು ಆಸಕ್ತರನ್ನು ನಿರಾಶೆಗೊಳಿಸಿದವು. ತಾರಾಲಯದಲ್ಲಿ ಸೇರಿದ್ದ ಜನ, ಎರಡು– ಮೂರು ಬಾರಿ ಮಿಂಚಿ ಮಾಯವಾದ ರೇಖಾ ಸೂರ್ಯನನ್ನು ಕಂಡು ಹೋ ಎಂದು ಕೂಗು ಹಾಕಿದರು. ಚಟುವಟಿಕೆಗಳನ್ನು ಮಾಡಲು ಸೇರಿದ್ದ ಮಕ್ಕಳು, ಬೇರೆ ಊರಿನಿಂದ ದೊರಕಿಸಿಕೊಟ್ಟ ಚಿತ್ರಗಳ ಮೇಲೆ ಲೆಕ್ಕಗಳನ್ನು ಮಾಡಿ ತೃಪ್ತಿಪಟ್ಟರು. ಇದಕ್ಕಾಗಿ ವಿಶೇಷ ದೂರದರ್ಶಕ ತಯಾರಿಸಿ, ಮಕ್ಕಳಿಗೆ ಕಮ್ಮಟವನ್ನು ನಡೆಸಿ ಎಲ್ಲ ವಿವರಣೆಗಳನ್ನೂ ಕೊಟ್ಟಿದ್ದು ಕೇವಲ ಪಠ್ಯಪುಸ್ತಕದ ತಿಳಿವಳಿಕೆಯಾಗಿಯೇ ಉಳಿದುಹೋಯಿತು. ಆದರೆ ಆ ಮಕ್ಕಳು ಮುಂದಿನ ಗ್ರಹಣಕ್ಕಾಗಿ ಈಗಾಗಲೇ ಸಿದ್ಧವಾಗತೊಡಗಿದ್ದಾರೆ ಎಂಬುದೊಂದೇ ಸಮಾಧಾನದ ವಿಷಯ.

ಜನಸಾಮಾನ್ಯರಲ್ಲಿ ಹೆಚ್ಚಿನವರು ಬಾಗಿಲು ಹಾಕಿ ಮನೆಯಲ್ಲಿ ಕುಳಿತದ್ದೇಕೆ? ಇನ್ನೂ ಭಯ ಬಿಟ್ಟಿಲ್ಲ ಎನ್ನಬಹುದೇ? ಭಯ ಏಕೆ? ಇದೊಂದು ನೆರಳು ಬೆಳಕಿನ ಆಟ ಎಂಬುದನ್ನು ಪ್ರಾಥಮಿಕ ಶಾಲೆಯಲ್ಲಿಯೇ ಕಲಿಸಿರುತ್ತಾರಷ್ಟೇ. ಆದರೂ ಹೊರಗೆ ತಲೆ ಇಡಲೂ ಹೆದರುವುದೇಕೆ? ಸೂರ್ಯನನ್ನು ನೋಡಬೇಡಿ ಎಂದು ಕೊಡುವ ಎಚ್ಚರಿಕೆಗಳ ಪರಿಣಾಮ ಇದು ಎನ್ನುವ ಅಭಿಪ್ರಾಯವೂ ಇದೆ. ಸೂರ್ಯನನ್ನು ದಿನವೂ ಯಾರೂ ನೋಡುವುದಿಲ್ಲ. ಗ್ರಹಣ ಇರಲಿ, ಇಲ್ಲದಿರಲಿ ಸೂರ್ಯನನ್ನು ನೋಡಿದರೆ ಕುರುಡುತನ ಕಟ್ಟಿಟ್ಟದ್ದೇ. ಹಾಗಾದರೆ ದಿನವೂ ಆ ಎಚ್ಚರಿಕೆ ಕೊಡಲೇಬೇಕಲ್ಲವೇ? ಅದು ಅವಶ್ಯಕವಿಲ್ಲ ಎಂದಾದರೆ ಮಕ್ಕಳನ್ನು ಮನೆಯೊಳಗೇ ಆಡಿಕೊಳ್ಳಲು ಬಿಡಬಹುದು. ಶಾಲೆಗಳಲ್ಲಿ ಗ್ರಹಣವನ್ನು ಸುರಕ್ಷಿತವಾಗಿ ತೋರಿಸಿ ದಿನನಿತ್ಯದ ಚಟುವಟಿಕೆಗಳನ್ನು ಮುಂದುವರಿಸಲು ಏನು ಅಡ್ಡಿ?

2016ರ ಮಾರ್ಚ್‌ನಲ್ಲಿ ಇಂಡೊನೇಷ್ಯಾದ ಮೂಲಕ ನೆರಳು ಹಾದು ಹೋದಾಗ ಹೀಗಾಯಿತು. ಹೀಗೆಯೇ- ಬೆಳಗಿನ 7.30ಕ್ಕೆ ಪೂರ್ಣ ಕತ್ತಲಾಯಿತು. ತಂತಮ್ಮ ಶಾಲೆಗಳಲ್ಲಿ 12- 14 ವಯಸ್ಸಿನ ಮಕ್ಕಳು ಪ್ರಯೋಗನಿರತರಾಗಿದ್ದರು. ಪುಟ್ಟ ಮಕ್ಕಳು ಊರಿನ ಕ್ರೀಡಾಂಗಣಕ್ಕೆ ಬಂದಿದ್ದರು. ಅಲ್ಲಿ ತಿಂಡಿ ತಿನಿಸು, ಬಲೂನುಗಳ ಮಾರಾಟ ಜೋರಾಗಿ ನಡೆದಿತ್ತು. ಸಂತೆ ಎನ್ನಬಹುದು. 7.30ಕ್ಕೆ ಪೂರ್ಣ ಕತ್ತಲಾದೊಡನೆ ಎಲ್ಲರೂ ಕುಣಿದಾಡಿ ಸಂತೋಷಪಟ್ಟರು. 7.40ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಒಂಬತ್ತು ಗಂಟೆಗೆ ಮಕ್ಕಳು ಎಂದಿನಂತೆ ಶಾಲೆಗೆ ಹೋದರು.

ಇದೀಗ ಗ್ರಹಣ ಎಂಬುದು ಪ್ರವಾಸಿ ಆಕರ್ಷಣೆಯಾಗುತ್ತಿದೆ. ಹೊರ ದೇಶಗಳಲ್ಲಿ ಸುಮಾರು ಎರಡು– ಮೂರು ವರ್ಷಗಳ ಮುಂಚೆಯೇ ಸಿದ್ಧತೆ ನಡೆಯುತ್ತದೆ. ನೆರಳಿನ ಪಟ್ಟಿಯಲ್ಲಿ ಇರುವ ಊರುಗಳಲ್ಲಿ ವಿಶೇಷ ಸಂಭ್ರಮ. ಜಾಹೀರಾತುಗಳು ಇಂಟರ್‌ನೆಟ್‌ನಲ್ಲಿ ರಾರಾಜಿಸುತ್ತವೆ. ಸಮಯ ಸಮೀಪವಾದಂತೆ ಸಮೀಪದ ಬಸ್ ನಿಲ್ದಾಣಗಳಲ್ಲಿ, ವಿಮಾನ ನಿಲ್ದಾಣಗಳ ಟರ್ಮಿನಲ್‌ಗಳಲ್ಲಿ ಜಾಹೀರಾತುಗಳು, ನೀರಿನ ಬಾಟಲಿಗಳು, ಖಾದ್ಯಗಳ ಕವರ್‌ಗಳ ಮೇಲೆ ‘ಗ್ರಹಣ ನೋಡಿ’ ಎಂದು ಉತ್ತೇಜನ ನೀಡುವ ಜೊತೆಯಲ್ಲಿ, ಎಚ್ಚರಿಕೆಯನ್ನೂ ನೀಡುವ ಬರಹಗಳು ಕಾಣಿಸಿಕೊಳ್ಳುತ್ತವೆ. ವೀಸಾದಲ್ಲಿ ಕೆಲವೊಮ್ಮೆ ವಿನಾಯಿತಿ ಅಥವಾ ಪೂರ್ಣ ಮನ್ನಾ ಕೂಡ ಸಿಗುತ್ತದೆ.

ಈಗಾಗಲೇ ವಾಟ್ಸ್‌ ಆ್ಯಪ್‌ಗಳಲ್ಲಿ ಹರಿದಾಡು ತ್ತಿರುವ ಮೊನ್ನೆಯ ಗ್ರಹಣದ ಇತರ ದೇಶಗಳ ತುಣುಕುಗಳಲ್ಲಿ ಅರೇಬಿಯಾದಲ್ಲಿ ಸೂರ್ಯೋದಯದಲ್ಲಿ ಗ್ರಹಣ, ಚಿಲಿಯಲ್ಲಿ ಸೂರ್ಯಾಸ್ತದಲ್ಲಿ ಗ್ರಹಣ ಇವೆ. ಅಲ್ಲಿ ಸೇರಿರುವ ಜನಸ್ತೋಮ, ಅವರ ಸಂಭ್ರಮ ಇವನ್ನೂ ಗಮನಿಸಬಹುದು.

ಇನ್ನಾರು ತಿಂಗಳಿಗೆ ಜೂನ್ 20ಕ್ಕೆ ನಡೆಯುವ (ಭಾರತದ ಮೂಲಕ ನೆರಳು ಹಾದು ಹೋಗುವ) ಇನ್ನೊಂದು ಗ್ರಹಣವೂ ಹೀಗೆ ಕಂಕಣ ಗ್ರಹಣವೇ. ಆ ಹೊತ್ತಿಗಾದರೂ ಜನ ಎಚ್ಚೆತ್ತು ಅವಕಾಶದ ಸದುಪಯೋಗ ಮಾಡಿಕೊಳ್ಳಬಹುದಲ್ಲವೇ? ಶಾಲೆಗಳು ವಿಶೇಷ ತಯಾರಿ ನಡೆಸಿ ಒಂದು ಸಣ್ಣ ಗುಂಪನ್ನಾದರೂ ಕರೆದೊಯ್ದು, ಜೀವಮಾನದಲ್ಲಿ ಒಮ್ಮೆಯಾದರೂ ಗ್ರಹಣವನ್ನು ಪ್ರಯೋಗಶಾಲೆಯನ್ನಾಗಿ ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಿಕೊಡಬಹುದಲ್ಲವೇ? ಮೂಢನಂಬಿಕೆಗಳನ್ನು ಹೊಡೆದೋಡಿಸುವುದಕ್ಕೆ ತಿಳಿವಳಿಕೆ ನೀಡುವುದೇ ಮೂಲಮಂತ್ರ.

ಪಾರ್ಥೇನಿಯಂ ಬೀಜದಂತೆ!
ಮೌಢ್ಯಕ್ಕೆ ಎಲ್ಲೆ ಇರುವುದಿಲ್ಲ. ಅದು ಪಾರ್ಥೇನಿಯಂ ಗಿಡದಂತೆ. ಒಂದು ಬೀಜ ಬಿತ್ತಿದರೆ ಕಾಡಿನಂತೆ ಹರಡುತ್ತದೆ. ನಿತ್ಯ ಮುಂಜಾನೆ ರಾಶಿಫಲ, ಗ್ರಹ ದೋಷಗಳ ಮೂಲಕ ಜನಸಾಮಾನ್ಯರಲ್ಲಿ ಮೌಢ್ಯ ಬಿತ್ತುತ್ತಿರುವ ಜ್ಯೋತಿಷಿಗಳು ಈ ಪಾರ್ಥೇನಿಯಂ ಬೀಜಗಳ ವಾರಸುದಾರರಾಗಿದ್ದಾರೆ. ಫಲಿತಾಂಶ ಒಂದೇ. ಜನರು ಮೌಢ್ಯಕ್ಕೆ ದಾಸರಾಗುತ್ತಾರೆ. ಕಲಬುರ್ಗಿಯಲ್ಲಿ ತಿಪ್ಪೆಯಲ್ಲಿ ಹೂತಿಟ್ಟ ಮಕ್ಕಳು ಗ್ರಹಣ ಬಿಟ್ಟ ಮೇಲೆ ಹೊರಬಂದರು. ಆದರೆ ಸಮಾಜದಲ್ಲಿ ಜ್ಯೋತಿಷಿಗಳು ಬಿತ್ತುತ್ತಿರುವ ಮೌಢ್ಯದಿಂದ ಜನರು ಹೊರಬರುವುದು ಅಷ್ಟು ಸುಲಭವಲ್ಲ.
-ನಾ. ದಿವಾಕರ, ಮೈಸೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.