ಬುಧವಾರ, ಏಪ್ರಿಲ್ 8, 2020
19 °C
ಸಮಾಜದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವುದರಲ್ಲೇ ತಮ್ಮ ಹಿತ ಅಡಗಿದೆ ಎನ್ನುವ ಆಳುವವರ ಧೋರಣೆಗೆ ಅನುವು ಮಾಡಿಕೊಡುವುದು ಸಮಂಜಸವೇ?

ದ್ವೇಷದ ನಂಜು ಬಿತ್ತಿ...

ಎಚ್.ಕೆ.ಶರತ್ Updated:

ಅಕ್ಷರ ಗಾತ್ರ : | |

ಎಂಜಿನಿಯರಿಂಗ್ ಪದವಿಯ ಮೊದಲ ಎರಡು ಸೆಮಿಸ್ಟರ್‌ಗಳಲ್ಲಿ ಉತ್ತಮ ಫಲಿತಾಂಶ ಪಡೆದಿದ್ದ ವಿದ್ಯಾರ್ಥಿಯೊಬ್ಬ, ಮೂರನೇ ಸೆಮಿಸ್ಟರ್‌ನಲ್ಲಿ ಆರು ವಿಷಯಗಳ ಪೈಕಿ ನಾಲ್ಕರಲ್ಲಿ ಫೇಲ್ ಆಗಿದ್ದ. ಇದೀಗ ನಾಲ್ಕನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಆತನನ್ನು ಕರೆದು, ‘ಯಾಕೋ, ಏನಾಯ್ತೋ ನಿಂಗೆ?’ ಅಂತ ವಿಚಾರಿಸಿದೆ. ಸಾಮಾನ್ಯವಾಗಿ ಚೆನ್ನಾಗಿ ಓದುವ ವಿದ್ಯಾರ್ಥಿಗಳು ಹೀಗೆ ಇದ್ದಕ್ಕಿದ್ದಂತೆ ಫೇಲ್ ಆಗಲು, ಓದಿನಲ್ಲಿ ನಿರಾಸಕ್ತಿ ಮೂಡುವುದು ಅಥವಾ ಆರೋಗ್ಯ ಸಮಸ್ಯೆಯ ಪೈಕಿ ಯಾವುದೋ ಒಂದು ಅಂಶ ಕಾರಣವಾಗಿರ
ಬಹುದು ಎಂದೇ ಭಾವಿಸಿದ್ದೆ. ಆದರೆ ಆತ ತಾನು ಫೇಲ್ ಆಗಲು ರಾಜಕೀಯ ವಿದ್ಯಮಾನಗಳು ಕಾರಣ ಎಂದ. ಇಂತಹದ್ದೊಂದು ಉತ್ತರದ ನಿರೀಕ್ಷೆಯಲ್ಲಿರದ ನನಗೆ ಅಚ್ಚರಿಯಾಯಿತು. ನನ್ನೊಳಗೆ ಮೂಡಿದ ‘ಏಕೆ ಹೀಗೆ ಹೇಳ್ತಿದ್ದಾನೆ’ ಎಂಬ ಪ್ರಶ್ನೆಗೆ ಅವನ ಹೆಸರಿನ ಮೂಲಕವೇ ತಿಳಿದುಕೊಳ್ಳಬಹುದಾಗಿದ್ದ ಧರ್ಮವೇ ಉತ್ತರ ಹೇಳುತ್ತಿತ್ತು.

ಕಳೆದ ಕೆಲ ವರ್ಷಗಳಲ್ಲಿ ನಮ್ಮ ನಡುವೆ ಎದ್ದು ನಿಂತಿರುವ ಧಾರ್ಮಿಕ ವೈಷಮ್ಯದ ಗೋಡೆಗಳು, ಓದುವ ವಿದ್ಯಾರ್ಥಿಗಳನ್ನೂ ಹೇಗೆಲ್ಲ ಬಾಧಿಸತೊಡಗಿವೆ ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನವಾಗಿ ಗೋಚರಿಸಿತು.

‘ಇನ್ನು ಮುಂದೆ ಇಂಥದ್ದಕ್ಕೆಲ್ಲ ತಲೆಕೆಡಿಸಿಕೊಳ್ಳದೆ ಮೊದಲಿನ ಹಾಗೆ ಓದು. ಕೆಲ ದಿನಗಳಲ್ಲಿ ಎಲ್ಲವೂ ಸರಿಹೋಗುತ್ತದೆ’ ಎಂದು ಸಂತೈಸಲು ಮುಂದಾದ ನನ್ನ ಮಾತಿಗೆ ತಡೆ ಒಡ್ಡಿದ ಆ ಹುಡುಗ, ‘ಸರ್, ಕಾಲೇಜಿನಲ್ಲಿ ನನ್ನೊಂದಿಗೆ ಆತ್ಮೀಯವಾಗಿಯೇ ಇರುವ ಸ್ನೇಹಿತರ ವಾಟ್ಸ್‌ಆ್ಯಪ್- ಫೇಸ್‌ಬುಕ್ ಪ್ರೊಫೈಲ್ ನೋಡಿದ್ರೆ ನನಗೆ ತುಂಬಾ ಬೇಜಾರಾಗುತ್ತೆ. ಅವರೆಲ್ಲ ನಮ್ಮ ಧರ್ಮದವರ ಮೇಲೆ ಅದೆಷ್ಟು ದ್ವೇಷ ಕಾರುತ್ತಾರೆ ಮತ್ತು ಬೆನ್ನ ಹಿಂದೆ ಹೇಗೆಲ್ಲ ಮಾತಾಡ್ತಾರೆ ಅನ್ನೋದು ನಿಮಗೂ ಗೊತ್ತಿದೆ. ಇಂಥದ್ದನ್ನೆಲ್ಲ ಸಹಿಸಿಕೊಂಡು ನನ್ನ ಪಾಡಿಗೆ ನಾನಿರಲು ಸಾಧ್ಯವಾಗುತ್ತಲೇ ಇಲ್ಲ’ ಎಂದು ಅಳಲು ತೋಡಿಕೊಂಡ.

ಇಂತಹ ಧರ್ಮದ್ವೇಷದ ಸ್ಟೇಟಸ್ಸು, ಸಂದೇಶಗಳ ಫಾರ್ವರ್ಡ್‌ಗಳಲ್ಲಿ ಮುಳುಗಿರುವ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಸಮೂಹದ ನಡುವೆಯೇ ನಾನೂ ಇರುವುದರಿಂದ, ಇವೆಲ್ಲ ಸದ್ಯಕ್ಕಂತೂ ಬದಲಾಗುವ ಯಾವುದೇ ಭರವಸೆ ಇರದಿದ್ದರೂ, ಕೋಮುವಾದದ ನಂಜು ಬಿತ್ತುವವರ ನಡುವೆಯೂ ಮಾನವೀಯತೆ ಉಳಿಸಿಕೊಂಡಿರುವವರ ಉದಾಹರಣೆ ನೀಡಿ, ಎಲ್ಲವೂ ಸರಿಹೋಗಲಿವೆಸಸ ಎನ್ನುವ ಆಶಾಭಾವ ಹೊಂದುವಂತೆ ಸಲಹೆ ನೀಡಿದೆ.

ಕೋಮುದ್ವೇಷದಿಂದ ಜರುಗುವ ಗಲಭೆಗಳಲ್ಲಿ ಮೃತಪಟ್ಟವರು ಮತ್ತು ಗಾಯಗೊಂಡವರ ಲೆಕ್ಕ ನಮಗೆ ಸಿಗಬಹುದಾದರೂ, ಅದು ಎಷ್ಟು ಮಂದಿಯನ್ನು ಮಾನಸಿಕ ಯಾತನೆಗೆ ದೂಡಿದೆ ಎಂಬ ಲೆಕ್ಕಾಚಾರದ ಕುರಿತು ಆಳುವವರಿಗೆ ಹಾಗೂ ನಮಗೆ ಅಷ್ಟೇನೂ ಕಾಳಜಿ ಇದ್ದಂತಿಲ್ಲ. ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಅಗತ್ಯವಿರುವ ಗುಣಮಟ್ಟದ ಶಿಕ್ಷಣ ಮತ್ತು ಅರ್ಹತೆಗೆ ತಕ್ಕ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಗಳ ಮೇಲೆ ಒತ್ತಡ ಹೇರಲು ಮುತುವರ್ಜಿ ತೋರಬೇಕಿದ್ದ ಯುವ ಸಮುದಾಯ, ಆಳುವವರನ್ನು ಈ ಕುರಿತು ಪ್ರಶ್ನಿಸುವ ಬದಲಿಗೆ, ಅವರು ಹೊದಿಸುತ್ತಿರುವ ವಿಸ್ಮೃತಿಯ ಮುಸುಕಿನೊಳಗೆ ತೂರಿಕೊಳ್ಳಲು ಇನ್ನಿಲ್ಲದ ಉತ್ಸಾಹ ತೋರುತ್ತಿರುವುದು ವಿಪರ್ಯಾಸ.

ರಾಜಕೀಯ ಲಾಭಕ್ಕಾಗಿ ಪಕ್ಷಗಳು ಬಿತ್ತುತ್ತಾ ಹೋಗುತ್ತಿರುವ ಧಾರ್ಮಿಕ ಅಸಹಿಷ್ಣುತೆಯ ನಂಜು ಸೃಷ್ಟಿಸುತ್ತಿರುವ ಬಿಕ್ಕಟ್ಟು ಕೇವಲ ಕೋಮು ದಳ್ಳುರಿಗಳಲ್ಲಷ್ಟೇ ಹೊರಹೊಮ್ಮುತ್ತಿಲ್ಲ. ನಮ್ಮ ದೈನಂದಿನ ಬದುಕಿಗೂ ವ್ಯಾಪಿಸಿದೆ. ಸಾಮರಸ್ಯವನ್ನು ಬಲಿ ಕೊಟ್ಟಾದರೂ ಸರಿ, ಸಾಮ್ರಾಜ್ಯ ವಿಸ್ತರಣೆಯನ್ನು ಮುಂದುವರಿಸಿಯೇ ತೀರುತ್ತೇವೆ ಎಂಬ ತೀರಾ ಅಪಾಯಕಾರಿಯಾದ ಧೋರಣೆ ಹೊಂದಿರುವ ರಾಜಕೀಯ ಪಕ್ಷಗಳು ಆತ್ಮವಿಮರ್ಶೆ ಮಾಡಿಕೊಳ್ಳುವ ಸ್ಥಿತಿಯಲ್ಲಂತೂ ಇಲ್ಲ. ಆದರೆ, ಜನಸಾಮಾನ್ಯರಾದ ನಾವು, ಆಳುವವರ ಆದ್ಯತೆ ಯಾವುದಾಗಿರಬೇಕು ಎಂಬುದನ್ನು ನಿರ್ದೇಶಿಸದೆ, ಅವರು ಬಿತ್ತುತ್ತಿರುವ ದ್ವೇಷದ ನಂಜು ಹರಡಲು ನೆರವಾಗು
ವುದರಲ್ಲೇ ಸಾರ್ಥಕತೆ ಕಂಡುಕೊಳ್ಳಲು ಮುಂದಾದರೆ, ಸಮಾಜದ ಅಧಃಪತನದ ಹೊಣೆಯನ್ನು ನಾವೇ ಹೊರಬೇಕಾಗುವುದು.

ಧಾರ್ಮಿಕ ವಿಚಾರಗಳನ್ನು ಹಿನ್ನೆಲೆಗೆ ಸರಿಸಿ, ಆಳುವವರಿಗೆ ತಾವು ನಿರ್ವಹಿಸಬೇಕಿರುವ ಹೊಣೆಗಾರಿಕೆಯನ್ನು ನೆನಪಿಸಬೇಕಿದೆ. ಕೊರೊನಾ ವೈರಸ್‌ ತಂದೊಡ್ಡುತ್ತಿರುವ ಬವಣೆಯ ಅರಿವು ನಮ್ಮೆಲ್ಲರಿಗೂ ಇದ್ದೇ ಇದೆ. ಮೊದಲೇ ಸಂಕಷ್ಟದಲ್ಲಿದ್ದ ದೇಶದ ಆರ್ಥಿಕತೆಗೆ ಕೊರೊನಾ ನೀಡಬಹುದಾದ ಹೊಡೆತ ಅಗಾಧವಾದುದು. ಇದರಿಂದ ಚೇತರಿಸಿ ಸಿಕೊಳ್ಳುವುದು ಹೇಗೆಂದು ಚಿಂತಿಸಬೇಕಿರುವ ಈ ಸಂದರ್ಭದಲ್ಲಿ, ತುರ್ತಾಗಿ ಗಮನಹರಿಸಬೇಕಿರುವ ವಿಷಯಗಳನ್ನೆಲ್ಲ ಬದಿಗಿರಿಸಿ, ಅನಗತ್ಯ ಗೊಂದಲ ಸೃಷ್ಟಿಸುವುದರಲ್ಲೇ ತಮ್ಮ ಹಿತ ಅಡಗಿದೆ ಎನ್ನುವ ಧೋರಣೆಗೆ ಅಂಟಿಕೊಳ್ಳಲು ಆಳುವವರಿಗೆ ಅನುವು ಮಾಡಿಕೊಡುವುದು ಸಮಂಜಸವೇ? ದ್ವೇಷದ ನಂಜು ಬಿತ್ತಿ ಉತ್ತಮ ಸಮಾಜ ರೂಪಿಸಿದ ನಿದರ್ಶನ ಎಲ್ಲಾದರೂ ಉಂಟೆ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)