ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ| ‘ಕೊರೊನಾ ಬ್ಯಾಚ್‌’ ಕಲಿಗಳು!

ಸುಸೂತ್ರ ಪರೀಕ್ಷೆಯ ನಿರೀಕ್ಷೆಯಲ್ಲಿದೆ ವಿದ್ಯಾರ್ಥಿ– ಪೋಷಕ ವೃಂದ
ಅಕ್ಷರ ಗಾತ್ರ

ಈ ಬಾರಿಯ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹಿಂದೆಂದೂ ಕಂಡಿರದ ಸಂದಿಗ್ಧ ಸ್ಥಿತಿಯನ್ನು ಎದುರಿಸುತ್ತಿದ್ದಾರೆ.‌ ಎಲ್ಲಾ ಪರೀಕ್ಷೆಗಳು ಮುಂದೂಡಲ್ಪಟ್ಟು ಕಲಿಕಾ ಏಕತಾನತೆಯಿಂದ ದೂರ ಸರಿದಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಒಂದೆಡೆಯಾದರೆ, ಐದು ವಿಷಯಗಳನ್ನು ಬರೆದು, ಇನ್ನೇನು ಪರೀಕ್ಷೆ ಮುಗಿದೇ ಹೋಯಿತು ಎನ್ನುವಾಗ, ಕೊನೇ ಕ್ಷಣದಲ್ಲಿ ಒಂದು ವಿಷಯ ಬಾಕಿ ಉಳಿದು, ನಾನಾ ಊಹಾಪೋಹಗಳ ನಡುವೆ ಕಲಿಕಾ ಗಂಭೀರತೆಯನ್ನು ಕಳೆದುಕೊಂಡ ಪಿಯುಸಿ ವಿದ್ಯಾರ್ಥಿಗಳು ಇನ್ನೊಂದೆಡೆ. ಎಲ್ಲಾ ಮೂರು (ಕಲಾ, ವಾಣಿಜ್ಯ, ವಿಜ್ಞಾನ) ವಿಭಾಗಗಳ ಸುಮಾರು ಆರೂವರೆ ಲಕ್ಷದಷ್ಟು ವಿದ್ಯಾರ್ಥಿಗಳು ಇಂಗ್ಲಿಷ್‌ ಭಾಷಾ ಪರೀಕ್ಷೆಯ ನಿರೀಕ್ಷೆಯಲ್ಲಿದ್ದಾರೆ.

ಈ ಬಾರಿಯ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಮಾರ್ಚ್ ನಾಲ್ಕರಿಂದ ಇಪ್ಪತ್ತಮೂರರ
ವರೆಗೆ ನಿಗದಿಯಾಗಿತ್ತು. ಪರೀಕ್ಷೆಯು ಅರ್ಧ ಹಾದಿಯನ್ನು ಕ್ರಮಿಸಿದ್ದಾಗಲೇ ಕೊರೊನಾ ಸೋಂಕಿನ ಆತಂಕ ಹೆಚ್ಚಾಗುತ್ತಾ ಹೋಯಿತು. ಈ ಹಂತದಲ್ಲೇ, ಕೊನೆಯ ವಾರಕ್ಕೆ ಇಂಗ್ಲಿಷ್‌ ಭಾಷಾ ಪರೀಕ್ಷೆಯನ್ನು ಹಿಂದೂಡಿ ವೇಳಾಪಟ್ಟಿಯನ್ನು ತುರ್ತಾಗಿ ಪರಿಷ್ಕರಿಸಿದ್ದರೆ ಅಥವಾ ಇಂಗ್ಲಿಷ್‌ ಭಾಷೆಯ ಬದಲಿಗೆ, ಕನಿಷ್ಠ ಸಂಖ್ಯೆಯ ಅಭ್ಯರ್ಥಿಗಳು ಆಯ್ದುಕೊಳ್ಳುವ ವಿಷಯದ ಪರೀಕ್ಷೆಯನ್ನು ಕೊನೆಗೆ ಇಟ್ಟುಕೊಂಡಿದ್ದರೆ ಬಹುಪಾಲು ವಿದ್ಯಾರ್ಥಿಗಳು ಇಂದು ನಿರಾಳರಾಗಿ ಇರುತ್ತಿದ್ದರು.

ಈ ಬಾರಿಯ ವೇಳಾಪಟ್ಟಿಯಲ್ಲಿ ಕೆಲವು ವಿಷಯಗಳ ಪರೀಕ್ಷೆಗಳ ನಡುವೆ ಗರಿಷ್ಠ ಏಳು ದಿನಗಳವರೆಗೆ ಅಂತರವಿದ್ದದ್ದು ಉತ್ತಮ ಬೆಳವಣಿಗೆ ಎನ್ನಲಾಗದು. ಹೀಗೆ ಅಂತರ ಹೆಚ್ಚು ಇದ್ದಷ್ಟೂ ಇಂದಿನ‌ ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಕಡಿಮೆಯಾಗುವುದು ಗಮನಾರ್ಹ. ಒಂದೆರಡು ದಿನ, ಇಲ್ಲವೇ ಕಠಿಣ ವಿಷಯಗಳಿಗೆ ಗರಿಷ್ಠ ಮೂರು ದಿನಗಳವರೆಗಿನ ಅಂತರವಿದ್ದರಷ್ಟೇ
ವಿದ್ಯಾರ್ಥಿಗಳು ಗಂಭೀರವಾಗಿ ಕಲಿಕೆಯಲ್ಲಿ ತೊಡಗಬಲ್ಲರು.

ಇದೀಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಜೂನ್‌ನಲ್ಲಿ ನಡೆಸಲು ಸಿದ್ಧತೆ ನಡೆಯತ್ತಿದೆ. ಪೋಷಕರು ಓದುವಂತೆ ಮಕ್ಕಳಿಗೆ ಎಷ್ಟು ಹೇಳಿದರೂ ಅನೇಕ ಬಾರಿ ಸ್ನೇಹಿತರು ಅಥವಾ ಸಾಮಾಜಿಕ ಜಾಲತಾಣದ ಸುದ್ದಿಕರ್ತರು ಹರಿಯಬಿಡುವ ಊಹಾಪೋಹಗಳಿಗೇ ಅವರು ಜೋತುಬೀಳುತ್ತಾರೆ. ಈ ಬಾರಿಯ ವಿಚಿತ್ರ ಸನ್ನಿವೇಶದಲ್ಲಂತೂ ಪರೀಕ್ಷೆಯ ಗೊಂದಲ ಸಾಕಷ್ಟು ಬಾರಿ ವಿದ್ಯಾರ್ಥಿಗಳನ್ನು ಕಾಡಿದೆ. ಒಟ್ಟು ವಿದ್ಯಾರ್ಥಿಗಳ ಪೈಕಿ ಅರ್ಧಕ್ಕಿಂತ ಹೆಚ್ಚಿನವರು ಗ್ರಾಮೀಣ ಪ್ರದೇಶಕ್ಕೆ ಸೇರಿರುವುದರಿಂದ ಮತ್ತು ಅವರ ಬಹುಪಾಲು ಪೋಷಕರು ತಮ್ಮ ಹಳಿ ತಪ್ಪಿದ ಬದುಕಿನ‌ ಬಗ್ಗೆಯೇ ಚಿಂತಿತರಾಗಿರುವಾಗ, ಮಕ್ಕಳ‌ ಪರೀಕ್ಷೆ ಬಗ್ಗೆ ಗಮನ ನೀಡಲು ಅವರಿಗೆ ಎಷ್ಟು ಸಾಧ್ಯವಾಗಿದೆ ಎನ್ನುವುದು ನಮಗೆ ಮನದಟ್ಟಾಗುತ್ತದೆ.

ಈ ಎಲ್ಲದರ ನಡುವೆ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯು ಆನ್‌ಲೈನ್ ಪುನರಾವರ್ತನಾ ಪಾಠಗಳನ್ನು ಆರಂಭಿಸಿರುವುದು ಸಣ್ಣಮಟ್ಟಿನ ಕಲಿಕಾ ಚುರುಕು ಮುಟ್ಟಿಸಿದಂತಾಗಿದೆ. ಈ ಬಾರಿಯ ಎಸ್ಎಸ್ಎಲ್‌ಸಿ ವಿದ್ಯಾರ್ಥಿಯ ಪೋಷಕನಾಗಿ ನಾನು, ನನ್ನ ಮನೆಯಲ್ಲಿನ ಅಭ್ಯರ್ಥಿಗೆ ಆ ಕಲಿಕಾ ಹಳಿಯಿಂದ, ಪುಸ್ತಕಗಳ ಸಂಪರ್ಕದಿಂದ ವಿಮುಖವಾಗದಂತೆ ಮಾಡಲು ದಿನಾ ಎಚ್ಚರಿಸಬೇಕಾಗಿ ಬಂದಿದೆ. ಸುದೀರ್ಘವಾದ ಅಂತರದಿಂದಾಗಿ ವಿದ್ಯಾರ್ಥಿಗಳು ಸಹಜವಾಗಿಯೇ ತಮ್ಮ ಆರಂಭಿಕ ಹಂತದಲ್ಲಿದ್ದ ಆಸಕ್ತಿಯನ್ನು ಈಗ ಹೊಂದಿಲ್ಲದಿರುವುದೂ ಗಮನಾರ್ಹ ಅಂಶ. ತಮ್ಮನ್ನು ತಾವು ‘ಕೊರೊನಾ ಬ್ಯಾಚ್’ ಎಂದು ತಮಾಷೆಯಿಂದ ಅವರು ಕರೆದುಕೊಳ್ಳಲಾರಂಭಿಸಿದ್ದಾರೆ.

ಇಂತಹ ಅಪರೂಪದ ಸನ್ನಿವೇಶವನ್ನು ಎದುರಿಸುತ್ತಾ ಮನೆಗಳಲ್ಲಿ ಒತ್ತಾಯಪೂರ್ವಕವಾಗಿ ಇರಬೇಕಾಗಿ ಬಂದಿರುವ ವಿದ್ಯಾರ್ಥಿಗಳನ್ನು ಮುಂದೂಡಲ್ಪಟ್ಟ ಪರೀಕ್ಷೆಗೆ ಅಣಿಗೊಳಿಸಬೇಕಾದ ಒತ್ತಡವು ಶಿಕ್ಷಕರು ಹಾಗೂ ಇಲಾಖೆಗಿಂತ ಪೋಷಕರಿಗೇ ಹೆಚ್ಚಾಗಿದೆ ಎನಿಸುತ್ತದೆ. ಈ ಎಲ್ಲ ಕಾರಣಗಳಿಂದ, ಎಸ್ಎಸ್ಎಲ್‌ಸಿ ಪರೀಕ್ಷೆಯ ವೇಳಾಪಟ್ಟಿಯು ಹಳೆಯ ವೇಳಾಪಟ್ಟಿಯಂತೆ ಸುದೀರ್ಘ ಅಂತರವಿಲ್ಲದೆ ಚಲನಶೀಲವಾಗಿರುವಂತೆ ಇಲಾಖೆಯು ನೋಡಿಕೊಳ್ಳಬೇಕಾಗಿದೆ.

ಸರಳ ವಿಷಯಗಳಿಗೆ ಒಂದು ದಿನದ ಕಲಿಕಾ ಅಂತರ ‌ಮತ್ತು ಕಠಿಣ ವಿಷಯಗಳಿಗೆ ಎರಡು ದಿನದ ಕಲಿಕಾ ಅಂತರವಿರುವಂತೆ ಮಾಡಬೇಕಿದೆ. ನಡುವೆ ಸಾರ್ವತ್ರಿಕ ರಜಾ ಅವಧಿ ಬಂದರೆ ಅದನ್ನು ಕಲಿಕಾ ಅಂತರವೆಂದು ಪರಿಗಣಿಸುವುದು ಮತ್ತು ಪರೀಕ್ಷೆ ಮುಗಿದ ತಕ್ಷಣದ ಎರಡು ಮೂರು ದಿನಗಳನ್ನು ಅನಿವಾರ್ಯ ಸಂದರ್ಭಕ್ಕಾಗಿ ವೇಳಾಪಟ್ಟಿಯಲ್ಲೇ ಮೀಸಲಿಟ್ಟು, ನಡುವೆ ಪರೀಕ್ಷೆ ನಡೆಯದ ಸಂದರ್ಭ ಬಂದಲ್ಲಿ, ಮೊದಲೇ ಮೀಸಲಿಟ್ಟ ದಿನಗಳನ್ನು ಪರೀಕ್ಷೆ ಅಥವಾ ಮರುಪರೀಕ್ಷೆಗೆ ಬಳಸುವುದು ಒಳ್ಳೆಯದು.

ಪರೀಕ್ಷಾ ಕೇಂದ್ರಗಳು ಬದಲಾಗುವ ಸಂದರ್ಭಇದ್ದಲ್ಲಿ ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆಯ ಮೂಲಕ ಅಂತರ್ಜಾಲದಲ್ಲೇ ಮಾಹಿತಿ ಪಡೆಯುವಂತೆ ಮಾಡಬೇಕು. ಅಭ್ಯರ್ಥಿಗಳು, ಪರೀಕ್ಷಾ ಮೇಲ್ವಿಚಾರಕರು, ಮುಖ್ಯಸ್ಥರು ಕಡ್ಡಾಯವಾಗಿ ಮಾಸ್ಕ್, ಕೈಗವಸು ಧರಿಸುವಂತೆ ನೋಡಿಕೊಳ್ಳಬೇಕು. ಸುಸೂತ್ರ ಪರೀಕ್ಷೆಯ ಹಿತದೃಷ್ಟಿಯಿಂದ, ಪರೀಕ್ಷೆ ಮುಗಿದಮೇಲೆ ವಿದ್ಯಾರ್ಥಿಗಳು ಕೈ ತೊಳೆದುಕೊಳ್ಳಲು ನೀರು ಹಾಗೂ ಸ್ಯಾನಿಟೈಸರ್ ವ್ಯವಸ್ಥೆಯಂತಹ ಉಪಕ್ರಮಗಳು ಅಗತ್ಯ. ಈ ಮೂಲಕ, ವಿದ್ಯಾರ್ಥಿಗಳನ್ನು ಆತಂಕದಿಂದ ಹೊರತಂದು, ಅವರಲ್ಲಿ ಹೊಸ ಹುರುಪು ತುಂಬುವಲ್ಲಿ ಶಿಕ್ಷಣ ಇಲಾಖೆ ಯಶಸ್ವಿಯಾಗಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT