ಭಾನುವಾರ, ಮೇ 29, 2022
20 °C
ನಷ್ಟದ ಹೊರೆ ತಾಳಲಾರದೆ ಸ್ಥಗಿತಗೊಂಡಿದ್ದ ಸಕ್ಕರೆ ಕಾರ್ಖಾನೆಗಳಿಗೆ ಹೊಸ ರೀತಿಯಲ್ಲಿ ಜೀವ ತುಂಬಿದ ನಿದರ್ಶನ...

ಸಂಗತ | ಸಕ್ಕರೆ ಕಾರ್ಖಾನೆ: ಪುನಶ್ಚೇತನದ ಮಾರ್ಗ

ಮಲ್ಲಿಕಾರ್ಜುನ ಹೆಗ್ಗಳಗಿ Updated:

ಅಕ್ಷರ ಗಾತ್ರ : | |

Prajavani

ಮುಧೋಳ ತಾಲ್ಲೂಕಿನ ರನ್ನ ನಗರದ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯು ಎರಡು ವರ್ಷಗಳಿಂದ ಬಾಗಿಲು ಮುಚ್ಚಿದೆ. ಉದ್ಯೋಗ ಕಳೆದುಕೊಂಡಿದ್ದರಿಂದ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೆಲವರು ಖಿನ್ನತೆಗೆ ಈಡಾಗಿದ್ದಾರೆ. ಕಬ್ಬು ಪೂರೈಸಿದ ರೈತರು ಬಾಕಿ ಹಣ ಬಾರದೆ ತೊಂದರೆ ಅನುಭವಿಸುತ್ತಿದ್ದಾರೆ. ಈ ಕಾರ್ಖಾನೆಯ ಸುತ್ತಮುತ್ತ ಕಬ್ಬು ಬೆಳೆದ ರೈತರು ತಮ್ಮ ಕಬ್ಬು ದೂರದ ಕಾರ್ಖಾನೆಗಳಿಗೆ ಸಾಗಿಸುವುದಕ್ಕೆ ಪರದಾಡುತ್ತಿದ್ದಾರೆ. ಆತಂಕದ ಸಂಗತಿ ಎಂದರೆ ಕಾರ್ಮಿಕರ ಹಾಗೂ ಕಬ್ಬು ಬೆಳೆಗಾರರ ಹೆಸರಿನಲ್ಲಿ ಬ್ಯಾಂಕಿನಲ್ಲಿ ಕಾರ್ಖಾನೆಯ ಆಡಳಿತ ಮಂಡಳಿ ಸಾಲ ಪಡೆದಿದೆ. ಈ ಸಾಲದ ಮರುಪಾವತಿಗೆ ಬ್ಯಾಂಕ್‌ಗಳು ನೋಟಿಸ್ ನೀಡತೊಡಗಿವೆ.

ಕಾರ್ಖಾನೆಯ ಪುನರಾರಂಭದ ಬಗ್ಗೆ ಸರ್ಕಾರ ಹಾಗೂ ಆಡಳಿತ ಮಂಡಳಿ ಮೌನ ವಹಿಸಿವೆ. ಇನ್ನು ಒಂದೆರಡು ವರ್ಷ ಕಾರ್ಖಾನೆ ಸ್ಥಗಿತಗೊಂಡರೆ ಯಂತ್ರೋಪಕರಣಗಳು ತುಕ್ಕು ಹಿಡಿದು ಹಾಳಾಗುತ್ತವೆ. ತಾಲ್ಲೂಕಿನ ಆರ್ಥಿಕ ಶಕ್ತಿಯಾಗಿದ್ದ ಕಾರ್ಖಾನೆಯೊಂದು ಹೀಗೆ ಕಳೆದುಹೋಗುವುದು ನಿಜಕ್ಕೂ ನೋವಿನ ಸಂಗತಿ.

ರಾಜ್ಯದಲ್ಲಿ 11 ಸಕ್ಕರೆ ಕಾರ್ಖಾನೆಗಳು ಸ್ಥಗಿತ ಗೊಂಡಿವೆ. ಸರ್ಕಾರಿ ಸ್ವಾಮ್ಯಕ್ಕೆ ಸೇರಿದ ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆ, ಭದ್ರಾವತಿಯ ಎಂ.ಪಿ.ಎಂ. ಕಾರ್ಖಾನೆ, ಖಾಸಗಿ ವಲಯದ ಸಾವರಿನ್ ಕಾರ್ಖಾನೆ ಮತ್ತು ಸಹಕಾರಿ ರಂಗದ 8 ಕಾರ್ಖಾನೆಗಳು ಸ್ಥಗಿತಗೊಂಡಿವೆ. ಇಲ್ಲಿಯ ಕಾರ್ಮಿಕರಿಗೆ ಹಾಗೂ ಕಬ್ಬು ಬೆಳೆಗಾರರಿಗೆ ವಿಪರೀತ ತೊಂದರೆಯಾಗಿದೆ.

ಉತ್ತರಪ್ರದೇಶದಲ್ಲಿ ಬಾಗಿಲು ಮುಚ್ಚಿದ್ದ 30 ಸಕ್ಕರೆ ಕಾರ್ಖಾನೆಗಳು ಪುನಃ ಕಾರ್ಯಾರಂಭಿಸಿವೆ. ಅಲ್ಲಿನ ಸರ್ಕಾರವು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಈ ದಿಸೆಯಲ್ಲಿ ಮುತುವರ್ಜಿ ವಹಿಸಿ ಈ ಕಾರ್ಖಾನೆಗಳು ಮತ್ತೆ ಕಬ್ಬು ನುರಿಸುವಂತೆ ಮಾಡಿದೆ. ಕರ್ನಾಟಕ ಸರ್ಕಾರ ಈ ಬೆಳವಣಿಗೆಯನ್ನು ಅಧ್ಯಯನ ಮಾಡಿ, ರಾಜ್ಯದಲ್ಲಿ ಬಂದ್ ಆಗಿರುವ ಕಾರ್ಖಾನೆಗಳನ್ನು ಪುನಃ ಆರಂಭ ಮಾಡಿಸುವುದು ತೀರಾ ಅವಶ್ಯವಿದೆ.

ಉತ್ತರಪ್ರದೇಶ ಸರ್ಕಾರವು ಸಕ್ಕರೆ ತಂತ್ರಜ್ಞರು ಹಾಗೂ ಕಬ್ಬು ಅಭಿವೃದ್ಧಿ ವಿಜ್ಞಾನಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿ ರಚಿಸಿ, ಅದರಿಂದ ಅಧ್ಯಯನ ವರದಿ ಪಡೆದುಕೊಂಡಿತು. ಈ ಸಮಿತಿಯು ಸರ್ಕಾರಕ್ಕೆ ಒಂದು ನೂತನ ಸಲಹೆ ನೀಡಿತು. ಲೀಜ್ ಅಥವಾ ಮಾರಾಟ ಎಂಬ ಸಿದ್ಧ ಮಾದರಿಗಳಿಗೆ ಬದಲಾಗಿ ಚೆನ್ನಾಗಿ ಕಾರ್ಯನಿರ್ವಹಿಸುತ್ತಿರುವ ಸಮೀಪದ ಮತ್ತೊಂದು ಕಾರ್ಖಾನೆಯೊಂದಿಗೆ ಜೋಡಿಸಿ ನಡೆಸುವ ಸರಳ ವಿಧಾನ ಅನುಸರಿಸುವಂತೆ ಸಲಹೆ ಮಾಡಿತ್ತು. ಕಾರ್ಖಾನೆಯ ಆಡಳಿತದಲ್ಲಿ ಹಿರಿಯ ಕಾರ್ಮಿಕರಿಗೆ ಸಹಭಾಗಿತ್ವ ನೀಡಬೇಕು. ವೆಚ್ಚದ ವ್ಯವಹಾರಗಳಿಗೆ ಕಾರ್ಖಾನೆಯ ಮುಖ್ಯ ತಂತ್ರಜ್ಞರ ಮತ್ತು ಹಣಕಾಸು ತಜ್ಞರ ಲಿಖಿತ ಒಪ್ಪಿಗೆ ಕಡ್ಡಾಯವಾಗಿ ಪಡೆಯಬೇಕು. ಪ್ರತೀ ತಿಂಗಳು ಮಾಡಬೇಕಾಗಿರುವ ಖರ್ಚಿನ ಬಜೆಟ್ ಅನ್ನು ಮೊದಲೇ ಮಂಡಿಸಿ ಸಂಬಂಧ ಪಟ್ಟವರಿಂದ ಒಪ್ಪಿಗೆ ಪಡೆಯಬೇಕು. ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು. ಸಮಯ ಪಾಲನೆ ಬದ್ಧತೆಗೆ ಆದ್ಯತೆ ನೀಡಬೇಕು. ತಜ್ಞರ ಉನ್ನತ ಸಮಿತಿ ಶಿಫಾರಸು ಮಾಡಿದ ಮುಖ್ಯ ಅಂಶಗಳಿವು. ಇದರ ಆಧಾರದ ಮೇಲೆ ಕಾರ್ಖಾನೆಗಳನ್ನು ನಡೆಸುವ ವಿಧಾನ ಮತ್ತು ಗುರಿಯನ್ನು ಸರ್ಕಾರ ನಿಗದಿಪಡಿಸಿತು. ಸಕ್ಕರೆ ಕೈಗಾರಿಕೆಯ ಪ್ರಮುಖರು ಇದಕ್ಕೆ ಒಪ್ಪಿಗೆ ನೀಡಿದರು. ಈಗ ಈ ಯೋಜನೆ ಯಶಸ್ವಿಯಾಗಿ ಜಾರಿಯಾಗಿದ್ದು ಸ್ಥಗಿತಗೊಂಡ ಕಾರ್ಖಾನೆಗಳಲ್ಲಿ ನಗೆ ಅರಳಿದೆ.

ಗುಜರಾತ್ ರಾಜ್ಯದ ಒಂದು ಸಹಕಾರಿ ಸಕ್ಕರೆ ಕಾರ್ಖಾನೆಯು ನಷ್ಟದಿಂದ ಕಳೆದ ವರ್ಷ ಬಾಗಿಲು ಮುಚ್ಚಿತ್ತು. ಅಲ್ಲಿಯ ಎಲ್ಲ ಸಹಕಾರಿ ಸಕ್ಕರೆ ಕಾರ್ಖಾನೆಗಳು ಒಗ್ಗಟ್ಟಿನಿಂದ ಉತ್ತರಪ್ರದೇಶ ಮಾದರಿಯಲ್ಲಿ ಈ ಕಾರ್ಖಾನೆಯನ್ನು ಪುನಃ ಆರಂಭವಾಗುವಂತೆ ಮಾಡಿರುವುದು ಮೆಚ್ಚತಕ್ಕ ಸಂಗತಿಯಾಗಿದೆ.

ಮಂಡ್ಯದ ಮೈಶುಗರ್ ಕಾರ್ಖಾನೆಯನ್ನು ಸರ್ಕಾರವೇ ನಡೆಸಬೇಕು ಎಂದು ಸ್ಥಳೀಯರು ಧ್ವನಿ ಎತ್ತಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆ ಭಾಗದ ಪ್ರಮುಖರ ಸಭೆ ನಡೆಸಿ, ಈ ಕಾರ್ಖಾನೆಯನ್ನು ಸರ್ಕಾರವೇ ನಡೆಸಲಿದೆ ಎಂದು ಪ್ರಕಟಿಸಿದ್ದಾರೆ. ಎರಡು ತಿಂಗಳು ಕಳೆದರೂ ಕಾರ್ಖಾನೆ ಪುನರಾರಂಭದ ಕೆಲಸ ನಡೆದಂತೆ ತೋರುತ್ತಿಲ್ಲ. ಮಂಡ್ಯ ಕಾರ್ಖಾನೆಗೆ ಸರ್ಕಾರ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ₹ 504 ಕೋಟಿ ಅನುದಾನ ನೀಡಿದೆ. ಅದರಿಂದ ಕಾರ್ಖಾನೆಯ ಆರೋಗ್ಯವೇನೂ ಸುಧಾರಿಸಲಿಲ್ಲ ಎಂಬುದು ವಿಷಾದದ ಸಂಗತಿ.

ಸಕ್ಕರೆ ಕೈಗಾರಿಕೆಯು ಕೃಷಿ ಆಧಾರಿತ ಗ್ರಾಮೀಣ ಭಾಗದ ಆರ್ಥಿಕ ಉನ್ನತಿಗೆ ಬಲ ತುಂಬುವ ಉದ್ದಿಮೆಯಾಗಿದೆ. ಸಕ್ಕರೆ ಕಾರ್ಖಾನೆಗಳನ್ನು ಆಡಳಿತ ಮಂಡಳಿಗಳು ಬದ್ಧತೆಯಿಂದ ನಿರ್ವಹಿಸಿದರೆ ನಷ್ಟ ಆಗುವುದಕ್ಕೆ ಅವಕಾಶಗಳು ಕಡಿಮೆ. ಸಕ್ಕರೆ ಕೈಗಾರಿಕೆಯು ಶಿಸ್ತಿನಿಂದ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿಸಿದರೆ ಅದು ನಿಜಕ್ಕೂ ಚಿನ್ನದ ಮೊಟ್ಟೆ ಇಡುವ ಕೋಳಿ. ಅದರ ಹೊಟ್ಟೆ ಬಗೆಯದೇ ಮೊಟ್ಟೆ ಮಾತ್ರ ಪಡೆಯಬೇಕು.

ಲೇಖಕ: ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು