ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ವೃತ್ತಿಗೌರವ ಮತ್ತು ಅನುಚಿತ ವರ್ತನೆ

ವಿದ್ಯಾರ್ಥಿಗಳೊಂದಿಗೆ ಕೆಲವು ಶಿಕ್ಷಕರ ಅನುಚಿತ ವರ್ತನೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವುದಕ್ಕೆ ಕಾರಣ ಏನು?
Last Updated 21 ಡಿಸೆಂಬರ್ 2022, 22:15 IST
ಅಕ್ಷರ ಗಾತ್ರ

ನರಗುಂದ ತಾಲ್ಲೂಕಿನಲ್ಲಿ ಶಿಕ್ಷಕನೊಬ್ಬ ಹತ್ತು ವರ್ಷದ ಬಾಲಕನ ಮೇಲೆ ಕಬ್ಬಿಣದ ಸಲಾಕೆಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದನ್ನು ತಿಳಿದು ದಿಗ್ಭ್ರಮೆಯಾಯಿತು. ‘ತಮಸೋಮಾ ಜ್ಯೋತಿರ್ಗಮಯ’ ಎಂದು ವಿದ್ಯಾರ್ಥಿಗಳನ್ನು ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆ ಕೈಹಿಡಿದು ಕರೆದೊಯ್ದು ಮಾದರಿಯಾಗಬೇಕಾದ ಶಿಕ್ಷಕನೇ ಕ್ರೌರ್ಯ ಮೆರೆದು ಇಡೀ ಶಿಕ್ಷಕ ಸಮೂಹಕ್ಕೆ ಕಳಂಕ ತಂದಿದ್ದಾನೆ. ಶಿಕ್ಷಕರ ಇಂತಹ ಅಸಂಗತ ವರ್ತನೆಗಳು ಮಾಧ್ಯಮಗಳಲ್ಲಿ ಆಗಾಗ ಪ್ರಕಟವಾಗುತ್ತಿವೆ.

ಕಾಮುಕ ಶಿಕ್ಷಕ ಕುಡಿದ ಮತ್ತಿನಲ್ಲಿವಿದ್ಯಾರ್ಥಿನಿಯರ ವಸತಿಗೃಹಕ್ಕೆ ಹೋಗಿ ಏಟುತಿಂದ ಪ್ರಕರಣ ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ, ದೈಹಿಕವಾಗಿ ಹಿಂಸಿಸುವುದು, ಅಸಭ್ಯ ಮಾತುಗಳನ್ನಾಡುವಂಥ ವರ್ತನೆಗಳು ಇತ್ತೀಚಿನ ದಿನಗಳಲ್ಲಿ ಶಿಕ್ಷಕರಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ.

‘ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ’ ಎಂದು ಗುರುವನ್ನು ಅತೀ ಎತ್ತರದ ಸ್ಥಾನದಲ್ಲಿ ಕೂಡಿಸಿ ಹಾಡಿದ ನಾಡಿದು. ‘ಮುಂದೆ ಗುರಿ ಇರಲು ಹಿಂದೆ ಗುರುವಿರಲು ನಡೆ ಮುಂದೆ ನುಗ್ಗಿ ನಡೆ ಮುಂದೆ’ ಎಂದು ಗುರುವಿನ ಮೇಲೆ ಅಪರಿಮಿತ ವಿಶ್ವಾಸವಿರಿಸಿದ ನೆಲವಿದು. ಹರ ಮುನಿದರೂ ಗುರು ಕಾಯುವನು ಎನ್ನುವಷ್ಟು ನಂಬಿಕೆ ಗುರುವಿನ ಮೇಲೆ.

ರಾಜ ಮಹಾರಾಜರು ತಮ್ಮ ಮಕ್ಕಳನ್ನು ಸುಖ ವೈಭೋಗದಿಂದ ದೂರವಾಗಿಸಿ ಗುರುಗಳ ಆಶ್ರಯದಲ್ಲಿ ಬಿಡುತ್ತಿದ್ದರು. ಕರ್ಣ, ಏಕಲವ್ಯನಂಥ ಮಹಾಯೋಧರು ವಿದ್ಯೆಗಾಗಿ ಗುರುವನ್ನು ಹುಡುಕುತ್ತ ಅಲೆದದ್ದು ಗುರುವಿನ ಪ್ರಾಮುಖ್ಯಕ್ಕೊಂದು ಉದಾಹರಣೆ.

ಸರ್ವಜ್ಞ ‘ವಿದ್ಯೆ ಕಲಿಸದ ಗುರು, ಬುದ್ಧಿ ಹೇಳದ ತಂದೆ, ಬಿದ್ದಿರಲು ಬಂದು ನೋಡದ ತಾಯಿ ಶುದ್ಧ ವೈರಿಗಳು’ ಎಂದು ಗುರುವಿಗೆ ತಂದೆ-ತಾಯಿಯಷ್ಟೇ ಮಹತ್ವದ ಜವಾಬ್ದಾರಿ ನೀಡಿರುವುದು ಶಿಕ್ಷಕ ವೃತ್ತಿಯ ಘನತೆಗೊಂದು ದೃಷ್ಟಾಂತ. ಹಿಂದೆಲ್ಲ ಗುರುವಿಗೆ ತನ್ನ ಶಿಷ್ಯನ ಶ್ರೇಯೋಭಿವೃದ್ಧಿಯೇ ಮುಖ್ಯವಾಗಿರುತ್ತಿತ್ತು. ಗುರುವಾದವನಿಗೆ ಶಿಷ್ಯ ತನ್ನನ್ನೂ ಮೀರಿ ಬೆಳೆಯಬೇಕೆಂಬ ಉತ್ಕಟ ಹಂಬಲ. ಗುರು-ಶಿಷ್ಯ ಪರಂಪರೆ ಈ ನೆಲದ ಉತ್ಕೃಷ್ಟ ಸಂಸ್ಕೃತಿ. ಈ ಪರಂಪರೆ ಅನೇಕ ದೇಶಗಳಿಗೆ ಮಾದರಿಯಾಗಿದೆ.

ಬದುಕಿನ ಕಹಿಯನ್ನು ಮನದಾಳದಲ್ಲಿ ಉಳಿಸಿಕೊಂಡು ಕೇಡು ಬಯಸುವ ವ್ಯಕ್ತಿಯಾಗಬಾರದು ಶಿಕ್ಷಕ. ಬದುಕಿನ ಸಿಹಿಯನ್ನು ಸಂತೋಷದಿಂದ ಹಂಚಿಕೊಳ್ಳುವ ಮನಸ್ಸು ಶಿಕ್ಷಕನದ್ದಾಗಿರಬೇಕು. ಅಗ್ರಹಾರ ಕೃಷ್ಣಮೂರ್ತಿ ‘ನನ್ನ ಮೇಷ್ಟ್ರು’ ಲೇಖನದಲ್ಲಿ ಆದರ್ಶ ಶಿಕ್ಷಕರಾಗಿ ಜಿ.ಎಸ್.ಶಿವರುದ್ರಪ್ಪನವರ ವ್ಯಕ್ತಿತ್ವವನ್ನು ಬಹಳ ಸುಂದರವಾಗಿ ಚಿತ್ರಿಸಿರುವರು. ಕೃಷ್ಣಮೂರ್ತಿ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ ಅಂತಿಮ ವರ್ಷದಲ್ಲಿದ್ದಾಗ ಒಂದು ಘಟನೆ ನಡೆಯಿತು. ಆಗ ಶಿವರುದ್ರಪ್ಪನವರು ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿದ್ದ ಅವಧಿ. ಶೈಕ್ಷಣಿಕ ಪ್ರವಾಸಕ್ಕೆ ಸಂಬಂಧಿಸಿದಂತೆ ಕೃಷ್ಣಮೂರ್ತಿ ಮತ್ತು ಜಿ.ಎಸ್.ಎಸ್. ನಡುವೆ ಸಣ್ಣ ಜಗಳವಾಯಿತು. ಶಿವರುದ್ರಪ್ಪನವರಿಗೆ ನೋವಾಗುವಂತೆ ಅಗ್ರಹಾರ ವರ್ತಿಸಿದರು. ಇದರಿಂದ ಕೃಷ್ಣಮೂರ್ತಿ ಎಂ.ಎ. ಪದವಿ ಗಳಿಸುವುದಿಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಈ ಕುರಿತು ಕೃಷ್ಣಮೂರ್ತಿ ಅವರಿಗೂ ಹೆದರಿಕೆ ಇತ್ತು. ಆದರೆ ಪರೀಕ್ಷೆಯ ಫಲಿತಾಂಶ ಬಂದಾಗ ಅವರು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದರು.

ಅದಾದ ಎಷ್ಟೋ ತಿಂಗಳುಗಳ ನಂತರ ಗುರುಗಳಿಗೆ ಕೃಷ್ಣಮೂರ್ತಿ ಪತ್ರ ಬರೆದು, ತಮ್ಮ ಅಂದಿನ ಅವಿವೇಕದ ವರ್ತನೆಯನ್ನು ಪ್ರಸ್ತಾಪಿಸಿ ಕ್ಷಮೆ ಕೇಳಿದ್ದರು. ಆಗ ಶಿವರುದ್ರಪ್ಪನವರಿಂದ ಬಂದ ಉತ್ತರ ಹೀಗಿತ್ತು: ‘ನೀವು ನಿಮ್ಮ ವಿದ್ಯಾರ್ಥಿ ಜೀವನದ ಅವಿವೇಕದ ವರ್ತನೆಗಳ ಬಗ್ಗೆ ಪ್ರಸ್ತಾಪಿಸಿದ್ದೀರಿ. ನನಗೆ ಅವೆಲ್ಲ ನೆನಪಿನಲ್ಲೇ ಇಲ್ಲ. ನೀವು ಯಾವ ತಪ್ಪನ್ನೂ ಮಾಡಿಲ್ಲ. ಒಂದು ವಯಸ್ಸಿನಲ್ಲಿ ಒಂದೊಂದು ರೀತಿಯಿಂದ ನಡೆದುಕೊಳ್ಳುವುದು ತೀರಾ ಸಹಜ. ವೈಪರೀತ್ಯಗಳು, ವೈವಿಧ್ಯಗಳು ಇದ್ದರೇ ಅದು ಜೀವಂತಿಕೆಯ ಲಕ್ಷಣ’.

ಶಿಕ್ಷಕ ವೃತ್ತಿಯ ಘನತೆಯನ್ನು ಎಸ್‌.ಎಲ್‌.ಭೈರಪ್ಪನವರು ಆತ್ಮಕಥೆಯಲ್ಲಿ ವಿವರಿಸುವುದು ಹೀಗೆ: ‘ಅಧ್ಯಾಪಕತನವೂ ಒಂದು ವೃತ್ತಿ ನಿಜ. ಬ್ಯಾಂಕ್ ನೌಕರನು, ರೈಲ್ವೆ ನೌಕರನು, ಫ್ಯಾಕ್ಟರಿ ಎಂಜಿನಿಯರನು ನನ್ನ ಕೆಲಸದ ವೇಳೆಯ ನಂತರ ನಾನೇನು ಮಾಡುತ್ತೇನೆಂದು ಕೇಳುವ ಅಧಿಕಾರ ನಿನಗಿಲ್ಲ ಎಂದರೂ ನಡೆದೀತು. ಆದರೆ ಇದೇ ಮಾತನ್ನು ಹೇಳುವ ಅಧಿಕಾರ ಅಧ್ಯಾಪಕನಿಗಿಲ್ಲ. ವಿದ್ಯಾರ್ಥಿಗಳಿಗೆ ಪರೋಕ್ಷವಾಗಿಯಾದರೂ ತಿಳಿದು ಅವರ ಚಾರಿತ್ರ್ಯಕ್ಕೆ ಕೆಟ್ಟ ಮಾದರಿಯಾಗುವ ಯಾವ ಕೆಲಸವನ್ನೂ ಖಾಸಗಿಯಲ್ಲಿ ಕೂಡ ಮಾಡುವುದು ಅಧ್ಯಾಪಕನಿಗೆ ಸಲ್ಲುವುದಿಲ್ಲ. ಅಂಥವನು ಆ ವೃತ್ತಿಯನ್ನು ಬಿಟ್ಟುಬಿಡಬೇಕು ಎಂದು ನಾನು ದೃಢವಾಗಿ ನಂಬಿದವನು. ಉಪಾಧ್ಯಾಯನ ಘನತೆ ಇರುವುದು ಅವನ ಸಂಬಳದಿಂದಲ್ಲ. ವಿದ್ವತ್ತು, ಚಾರಿತ್ರ್ಯದಿಂದ ಕೂಡಿದ ಸ್ವಾತಂತ್ರ್ಯ ಮತ್ತು ಬೋಧನಾ ಶಕ್ತಿಯಿಂದ’.

ಇಂದು ಕೆಲವು ಮಂದಿ ಅಪ್ರಾಮಾಣಿಕರು ಮತ್ತು ಅನೀತಿವಂತರಿಂದ ಶಿಕ್ಷಕ ವೃತ್ತಿ ಸಮಾಜದಲ್ಲಿ ಗೌರವವನ್ನು ಕಳೆದುಕೊಳ್ಳುತ್ತಿದೆ. ವಿದ್ಯಾರ್ಥಿಗಳೊಡನೆ ಅನುಚಿತವಾಗಿ ವರ್ತಿಸುತ್ತ ಶಿಕ್ಷಕ ಸ್ಥಾನಕ್ಕೆ ಕಪ್ಪುಮಸಿ ಬಳಿಯುತ್ತಿದ್ದಾರೆ. ಆದರ್ಶ ಶಿಕ್ಷಕರು ಇಲ್ಲವೆಂದಲ್ಲ. ಆದರೆ ಅಂಥವರ ಸಂಖ್ಯೆ ಗಣನೀಯವಾಗಿ ಇಳಿಮುಖ ವಾಗುತ್ತಿರುವುದು ಇಂದಿನ ಶಿಕ್ಷಣ ಕ್ಷೇತ್ರದ ಬಹುಮುಖ್ಯ ಸಮಸ್ಯೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT