ಶುಕ್ರವಾರ, ಜುಲೈ 1, 2022
27 °C
ಮಕ್ಕಳ ಮೌಲ್ಯಮಾಪನದಂತೆ ಪ್ರತಿವರ್ಷವೂ ಶಿಕ್ಷಕರ ಮೌಲ್ಯಮಾಪನವೂ ಆಗಬೇಕು

ಕಲಿಯುತ್ತಲೇ ಇರಬೇಕು ಕಲಿಸುವವರೂ!

ಮಲ್ಲಿಕಾರ್ಜುನ ಹೆಗ್ಗಳಗಿ Updated:

ಅಕ್ಷರ ಗಾತ್ರ : | |

Prajavani

ಕೋವಿಡ್ ಕಾರಣಕ್ಕೆ ಎರಡು ವರ್ಷ ಭೌತಿಕ ತರಗತಿಗಳು ನಡೆಯದೆ ಮಕ್ಕಳ ಶಿಕ್ಷಣಕ್ಕೆ ಉಂಟಾಗಿರುವ ಹಿನ್ನಡೆ ಸರಿದೂಗಿಸಲು ಶಿಕ್ಷಣ ಇಲಾಖೆ ದೇಶದಲ್ಲಿಯೇ ಮೊದಲ ಬಾರಿಗೆ ಜಾರಿಗೊಳಿಸಿರುವ ‘ಕಲಿಕಾ ಚೇತರಿಕೆ’ ಯೋಜನೆ ಇನ್ನೇನು ಶುರುವಾಗಲಿದೆ. ಹಾಗೆಯೇ ಶಿಕ್ಷಕರ ಬೋಧನಾ ಚೇತರಿಕೆ ಹೇಗಿದೆ?

ಕೆಲವು ದಿನಗಳ ಹಿಂದೆ ಶಿಕ್ಷಕರೊಬ್ಬರು ತಮ್ಮ ಮೇಲಿನ ಅಧಿಕಾರಿಗೆ ಬರೆದ ಪತ್ರದಲ್ಲಿ ಹತ್ತೆಂಟು ತಪ್ಪುಗಳಿದ್ದವು. ‘ಕಲಿಸುವ ನೀವೇ ಇಷ್ಟೊಂದು ತಪ್ಪು ಮಾಡಿರುವಾಗ ಹೇಗೆ ಕಲಿಸುವಿರಿ?’ ಎಂದು ಅಧಿಕಾರಿ ಕೇಳಿದ್ದರು. ಶಿಕ್ಷಕರ ಬರಹ ಶುದ್ಧವಾಗಿರಬೇಕು. ಮಾತನಾಡುವ ಭಾಷೆ ಪರಿಣಾಮಕಾರಿಯಾಗಿರಬೇಕು. ವಿಷಯಜ್ಞಾನ ಸ್ಪಷ್ಟವಾಗಿರಬೇಕು. ಇದು ಸತತ ಅಧ್ಯಯನದಿಂದ ಮಾತ್ರ ಸಾಧ್ಯ.

ಕಲಿಸುವ ಶಿಕ್ಷಕರು ಕಲಿಯುವುದನ್ನು ಎಂದೋ ನಿಲ್ಲಿಸಿಬಿಟ್ಟಿದ್ದಾರೆ ಎಂಬ ಮಾತು ಆಗಾಗ ಕೇಳಿಬರುತ್ತದೆ. ಶಿಕ್ಷಕ ಸದಾ ವಿದ್ಯಾರ್ಥಿಯೂ ಆಗಿರಬೇಕು. ಹೊಸ ಸಂಶೋಧನೆಗಳು, ಬೆಳವಣಿಗೆಗಳು ಓದಿನಿಂದ ಮಾತ್ರ ಅರಿವಿಗೆ ಬರುತ್ತವೆ. ಉರಿಯುವ ದೀಪ ತಾನು ಉರಿಯದೇ ಬೆಳಕು ಕೊಡುವುದಾದರೂ ಹೇಗೆ?

ನೀವು ಅಪ್‌ಡೇಟ್ ಆಗಬೇಕು, ಹೊಸದನ್ನು ಕಲಿಯಬೇಕು ಅನ್ನುವ ಹೇಳಿಕೆಗಳನ್ನು ಕೆಲವು ಶಿಕ್ಷಕರು ಸಕಾರಾತ್ಮಕವಾಗಿ ಸ್ವೀಕರಿಸುವ ಮನಃಸ್ಥಿತಿಯಲ್ಲಿ ಇಲ್ಲ. ಸಮಯವೇ ಇಲ್ಲ, ಕಚೇರಿಯ ಕ್ಲಾರ್ಕ್ ಆಗಿದ್ದೇವೆ ಎಂದೆಲ್ಲ ಹೇಳಿ ಜಾರಿಕೊಳ್ಳುತ್ತಿದ್ದಾರೆ.

ಅನೇಕ ಮಕ್ಕಳಿಗೆ ಸರಿಯಾಗಿ ಓದಲು- ಬರೆಯಲು ಬರುವುದಿಲ್ಲ ಎಂಬ ದೂರಿದೆ. ಎಸ್‌ಎಸ್‌ಎಲ್‌ಸಿ ಪಾಸಾದ ಮಗು ತಪ್ಪಿಲ್ಲದೆ ಬರೆಯಲು ಹೆಣಗಾಡುತ್ತದೆ. ಆದರೆ ಪ್ರತಿಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮವಾಗಿಯೇ ಬರುತ್ತದೆ. ಪರೀಕ್ಷೆಯಲ್ಲಿ ಎಲ್ಲಾ ಶಾಲೆಗಳು ‘ಎ’ ಗ್ರೇಡ್ ಪಡೆಯುತ್ತವೆ. ಅದು ಹೇಗೆ ಸಾಧ್ಯ? ಇದು ಖಂಡಿತ ಯೋಚಿಸಬೇಕಾದ ಸಂಗತಿ.

ಮಕ್ಕಳ ಮೌಲ್ಯಮಾಪನದಂತೆ ಪ್ರತಿವರ್ಷವೂ ಶಿಕ್ಷಕರ ಮೌಲ್ಯಮಾಪನವೂ ಆಗಬೇಕು. ಒಂದು, ಮಕ್ಕಳ ಕಡೆಯಿಂದ ಮತ್ತು ಇನ್ನೊಂದು, ಇಲಾಖೆಯ ಕಡೆಯಿಂದ. ಶಿಕ್ಷಕರನ್ನು ಮಕ್ಕಳು ಪರೀಕ್ಷಿಸುವ ಪರಿಪಾಟ ತುಂಬ ವಿಶೇಷವಾದದ್ದು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವೊಂದನ್ನೇ ಆಧರಿಸಿ ಶಿಕ್ಷಕರ ಮೌಲ್ಯಮಾಪನ ನಿರ್ಧರಿಸುವ ಕ್ರಮ ಬಿಡಬೇಕು. ಅವರ ಓದುವಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ, ಸಾಮಾಜಿಕ ಸ್ಪಂದನೆ ಇವುಗಳನ್ನು ಗಮನಿಸಬೇಕು.

ಶಿಕ್ಷಕರು ಬೋಧಿಸುವ ವಿಷಯದ ಬಗೆಗೆ ಇಲಾಖೆ ಆಗಾಗ ಕಡ್ಡಾಯವಾಗಿ ಮೌಲ್ಯಮಾಪನ ಮಾಡಬೇಕು. ಶಿಕ್ಷಕರ ಕಲಿಸುವ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ಅಳೆದು, ನ್ಯೂನತೆ ಇರುವ ಕಡೆ ಕಡ್ಡಾಯ ತರಬೇತಿ ಆಯೋಜಿಸಬೇಕು ಮತ್ತು ತರಬೇತಿಗೆ ತಜ್ಞರು, ಅನುಭವಿಗಳು, ವಿಶೇಷ ಸಾಧಕರು ಮಾರ್ಗದರ್ಶನ ಮಾಡಬೇಕು.

ಇಬ್ಬರು ಶಿಕ್ಷಕರಿದ್ದರೆ ಮೂರು ದಿನ ಒಬ್ಬರು, ಇನ್ನು ಮೂರು ದಿನ ಇನ್ನೊಬ್ಬರು ಬರುತ್ತಾರೆ. ಶಾಲೆಗೆ ಯಾವಾಗಲೋ ಬಂದು ಹೋಗುತ್ತಾರೆ. ತರಗತಿಯಲ್ಲಿ ಏನೂ ಕಲಿಸದೆ ಪುಸ್ತಕದಲ್ಲಿ ಇದ್ದದ್ದನ್ನು ಗಿಳಿಪಾಠದಂತೆ ಮಾಡಿ ಹೋಗುತ್ತಾರೆ. ಅವರ ಸ್ವಂತ ಮಕ್ಕಳು ಖಾಸಗಿ ಶಾಲೆಯಲ್ಲಿ ಕಲಿಯುತ್ತಾರೆ. ತಮ್ಮ ಮಕ್ಕಳ ಮೇಲೆ ಇರುವಷ್ಟು ಕಾಳಜಿಯನ್ನು ತಮ್ಮ ಬಳಿ ಓದುವ ವಿದ್ಯಾರ್ಥಿಗಳ ಬಗ್ಗೆ ತೋರುವುದಿಲ್ಲ. ಇಂತಹ ನೂರೆಂಟು ದೂರುಗಳು ಶಿಕ್ಷಕರ ಮೇಲಿವೆ. ಶಿಕ್ಷಕರು ಇಂತಹ ದೂರುಗಳಿಂದ ತಪ್ಪಿಸಿಕೊಳ್ಳಬೇಕು. ತಮ್ಮ ವೃತ್ತಿಯ ಘನತೆಯನ್ನು ಪ್ರಾಮಾಣಿಕತೆಯಿಂದ ಕಾಪಾಡಬೇಕು.

ಹಾಗಾದರೆ ಎಲ್ಲ ಶಿಕ್ಷಕರೂ ಹೀಗೆಯೇ? ಖಂಡಿತ ಇಲ್ಲ. ಅನೇಕ ಶಿಕ್ಷಕರು ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಹೊಂದಿದ್ದಾರೆ. ಮಗು ಬಯಸುವುದಕ್ಕಿಂತ ಹೆಚ್ಚಿನದನ್ನು ಕೊಡಲು ಹಗಲೂ ರಾತ್ರಿ ಶ್ರಮಿಸುತ್ತಿದ್ದಾರೆ. ತಮ್ಮ ಕೈಯಿಂದಲೇ ಹಣ ಖರ್ಚು ಮಾಡುತ್ತಿದ್ದಾರೆ. ಹೆಚ್ಚಿನ ತರಗತಿಗಳನ್ನು ತೆಗೆದುಕೊಂಡು ಕಲಿಸುತ್ತಿದ್ದಾರೆ. ಓದಿಕೊಂಡು ಹೋಗಿ ಮಕ್ಕಳ ಮುಂದೆ ನಿಲ್ಲುತ್ತಾರೆ. ಮಕ್ಕಳಿಂದ ಏನಾದರೂ ಹೊಸದನ್ನು ಹೊರತೆಗೆಯಲು ಪ್ರಯತ್ನಿಸುತ್ತಾರೆ. ತಮ್ಮ ಎಲ್ಲಾ ಶ್ರಮವನ್ನು ಮಕ್ಕಳಿಗಾಗಿ ಧಾರೆಯೆರೆಯುತ್ತಾರೆ. ಅಂತಹವರಿಂದಲೇ ಇಂದು ಕೆಲವು ಶಾಲೆಗಳು ಉಸಿರಾಡುತ್ತಿವೆ.

ಶಿಕ್ಷಣ ಇಲಾಖೆಯು ಪಾಠಕ್ಕೆ ಸಂಬಂಧಿಸದ ಅತಿ ಭಾರದ ಕಾರ್ಯಗಳನ್ನು ಶಿಕ್ಷಕರ ಮೇಲೆ ಹೇರುತ್ತಿದೆ. ಚುನಾವಣೆ ಉಸ್ತುವಾರಿ, ಜನಗಣತಿ, ಸರ್ಕಾರಿ ಯೋಜನೆಗಳ ಪ್ರಚಾರ ಉಸ್ತುವಾರಿ, ಗಣ್ಯರ ಸ್ವಾಗತಕ್ಕೆ ವಿದ್ಯಾರ್ಥಿಗಳನ್ನು ದಿನವಿಡೀ ನಿಲ್ಲಿಸುವುದು ಶಿಕ್ಷಕರ ಹೊಣೆಗಾರಿಕೆಯಾಗಿದೆ. ಸರ್ಕಾರ ಇದಕ್ಕೆ ಬೇರೆ ವ್ಯವಸ್ಥೆ ಮಾಡಿ, ಶಿಕ್ಷಕರು ಕಲಿಸುವ ಧ್ಯಾನದಲ್ಲಿಯೇ ತೊಡಗುವಂತೆ ಬದಲಾಗುವುದು ಕೂಡ ಅವಶ್ಯವಿದೆ.

ಮಕ್ಕಳೇ ಭವಿಷ್ಯದ ಸಂಪತ್ತು. ಅವರನ್ನು ಪರಿಪೂರ್ಣ ವ್ಯಕ್ತಿಗಳನ್ನಾಗಿ ಅರಳಿಸುವುದು ಮುಖ್ಯ. ಶಾಲೆ ಹೇಗೋ ನಡೆದರೆ ಮುಗಿಯಿತು ಅನ್ನುವ ಧೋರಣೆ ಬಹಳ ಅಪಾಯಕಾರಿ.

ಕೋವಿಡ್ ಹಿನ್ನೆಲೆಯಲ್ಲಿ 2020-21 ಮತ್ತು 21-22ನೇ ಸಾಲಿನಲ್ಲಿ ಬಹುತೇಕ ದಿನಗಳಲ್ಲಿ ಶಾಲೆಗಳು ಮುಚ್ಚಿದ್ದವು. ಮಕ್ಕಳಿಗೆ ಆನ್‍ಲೈನ್ ಮೂಲಕ ಕಲಿಸಲಾಗಿದೆಯಾದರೂ ತರಗತಿಯಲ್ಲಿ ಕಲಿಸಿದಷ್ಟು ಪರಿಣಾಮಕಾರಿಯಾಗಿಲ್ಲ. ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು, ಸ್ವತಃ ಅಧ್ಯಯನಶೀಲರಾಗಿ ಮಕ್ಕಳನ್ನು ಸಜ್ಜುಗೊಳಿಸುವುದು ಶಿಕ್ಷಕರ ಹೊಣೆಗಾರಿಕೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.