ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನ: ಗ್ರಾಮೀಣ ಮಕ್ಕಳಿಗೆ ವರದಾನ

ಕಂಪ್ಯೂಟರ್ ಆಧಾರಿತ ಶಿಕ್ಷಣವು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮಿತಿಗಳ ನಡುವೆಯೂ ವಿಶಾಲ ಜಗತ್ತಿಗೆ ತೆರೆದುಕೊಳ್ಳುವ ಪ್ರಬಲ ಸಾಧ್ಯತೆಗಳನ್ನು ಹೊಂದಿದೆ
Last Updated 9 ಮಾರ್ಚ್ 2020, 23:34 IST
ಅಕ್ಷರ ಗಾತ್ರ

ಕಂಪ್ಯೂಟರ್ ಮೂಲಕ ಶಿಕ್ಷಣ ಹಾಗೂ ಇಂಗ್ಲಿಷ್ ಭಾಷಾ ಬೋಧನೆಯು ಮಕ್ಕಳನ್ನು ಶಾಲೆಗಳತ್ತ ಸೆಳೆಯಲು ಇರುವ ಪ್ರಮುಖ ಕಾರ್ಯತಂತ್ರಗಳು. ಹೆಚ್ಚಿನ ಖಾಸಗಿ ಶಾಲೆಗಳು ಇವುಗಳನ್ನು ಪರಿಣಾಮಕಾರಿಯಾಗಿ ಬಳಸಿ, ಮಕ್ಕಳನ್ನು ಸೆಳೆಯುತ್ತಿವೆ. ಸರ್ಕಾರಿ ಶಾಲೆಗಳೂ ಈ ಕಾರ್ಯತಂತ್ರಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಸ್ಪಷ್ಟ ಹೆಜ್ಜೆಗಳನ್ನು ಇಡುತ್ತಿವೆ. ಜಾತಿ, ವರ್ಗ, ಅಂತಸ್ತು, ಲಿಂಗತ್ವ, ಪ್ರಾದೇಶಿಕತೆ ಇತ್ಯಾದಿ ಗಳಲ್ಲಿ ಇರಬಹುದಾದ ಅಂತರ, ಅಸಮಾನತೆಯನ್ನು ಕುಗ್ಗಿಸುವ ಕಾರ್ಯವನ್ನು ತಂತ್ರಜ್ಞಾನವು ಯಶಸ್ವಿಯಾಗಿ ಮಾಡಬಲ್ಲದು. ಸ್ಮಾರ್ಟ್‌ಫೋನ್‍ಗಳು ಕುಗ್ರಾಮಗಳನ್ನು ತಲುಪಿ, ಆ ಮೂಲಕ ಅಲ್ಲಿಯ ಜನರಿಗೆ ಒಂದಷ್ಟು ವಿನೂತನ ಸಾಧ್ಯತೆಗಳನ್ನು ಒದಗಿಸಿವೆ. ಆದಾಗ್ಯೂ ಕಂಪ್ಯೂಟರ್ ಆಧಾರಿತ ಶಿಕ್ಷಣವನ್ನು ಯಶಸ್ವಿ ಯಾಗಿ ಒದಗಿಸಿದಲ್ಲಿ, ಗ್ರಾಮೀಣ ವಿದ್ಯಾರ್ಥಿಗಳ ಬದುಕಿನಲ್ಲಿ ಬೆಳ್ಳಿರೇಖೆಗಳು ಮೂಡುವುದರಲ್ಲಿ ಸಂಶಯವಿಲ್ಲ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ 6 ಜಿಲ್ಲೆಗಳಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ಕಂಪ್ಯೂಟರ್ ಪ್ರಯೋಗಾಲಯದ ಅವಲೋಕನ ಕ್ಕಾಗಿ ಬಳ್ಳಾರಿ ಜಿಲ್ಲೆ ಹಾಗೂ ಕೊಪ್ಪಳ ಜಿಲ್ಲೆಯ ಕೆಲವು ಸರ್ಕಾರಿ ಪ್ರೌಢಶಾಲೆಗಳಿಗೆ ಭೇಟಿ ನೀಡಿದ್ದೆ. ಈ ಸಂದರ್ಭದಲ್ಲಿ, ಭಾಗೀದಾರರಾದ ಶಾಲಾ ಶಿಕ್ಷಕರು, ಪೋಷಕರು, ಎಸ್.ಡಿ.ಎಂ.ಸಿ. ಪದಾಧಿಕಾರಿಗಳು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದೆ. ಕಂಪ್ಯೂಟರ್ ಪ್ರಯೋಗಾಲಯ ಸ್ಥಾಪನೆಯಾಗಿರುವುದಕ್ಕೆ ಭಾಗೀದಾರರಲ್ಲಿ ಸಂತಸ, ಖುಷಿ ಮನೆ ಮಾಡಿದೆ. ಪೂರೈಕೆಯಾದ ಕಂಪ್ಯೂಟರ್‌ಗಳು ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗುತ್ತವೆ ಎಂಬ ಅಭಿಪ್ರಾಯವನ್ನು ಹೆಚ್ಚಿನವರು ಹೊಂದಿದ್ದಾರೆ.

ಕಂಪ್ಯೂಟರ್‌ನ ಪರಿಚಯ ಇರುವ ಬಗ್ಗೆ ಕುತೂಹಲಕ್ಕಾಗಿ ವಿದ್ಯಾರ್ಥಿಗಳನ್ನು ಪ್ರಶ್ನಿಸಿದೆ. ಹೆಚ್ಚಿನ ಗ್ರಾಮಗಳ ವಿದ್ಯಾರ್ಥಿಗಳು ಕಂಪ್ಯೂಟರ್‌ ಅನ್ನು ನೋಡಿರಲಿಲ್ಲ, ಮುಟ್ಟಿರಲಿಲ್ಲ. ಕೆಲವು ವಿದ್ಯಾರ್ಥಿಗಳು ತಮ್ಮದೇ ಊರಿನ ಗ್ರಾಮ ಪಂಚಾಯಿತಿಯಲ್ಲಿರುವ ಕಂಪ್ಯೂಟರ್ ಅನ್ನು ಮಾತ್ರ ನೋಡಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ಚಲನಚಿತ್ರ, ಟಿ.ವಿ., ಪಠ್ಯಪುಸ್ತಕಗಳಲ್ಲಿ ಮಾತ್ರ ಕಂಪ್ಯೂಟರ್‌ಗಳನ್ನು ನೋಡಿದ್ದಾರೆಯೇ ವಿನಾ ಸ್ವತಃ ಬಳಸಿದ ಅನುಭವ ಹೊಂದಿಲ್ಲ. ಇಂತಹ ಸನ್ನಿವೇಶದಲ್ಲಿ ಕಂಪ್ಯೂಟರ್‌ಗಳ ಮೂಲಕ ಪಾಠದ ಪರಿಕಲ್ಪನೆಗಳನ್ನು ಅರ್ಥೈಸಿಕೊಂಡು ಕಲಿಯಲು ಅವರಲ್ಲಿ ಆಸಕ್ತಿ, ಉತ್ಸಾಹ ಇರುವುದನ್ನು ಗಮನಿಸಿದೆ. ಕಂಪ್ಯೂಟರ್‌ಗಳನ್ನು ವಿದ್ಯಾರ್ಥಿಗಳ ಬಳಕೆಗೆ ಹೆಚ್ಚು ಅನುವು ಮಾಡಿಕೊಡಲು ಶಿಕ್ಷಕರಿಗೆ ಮನವಿ ಮಾಡಿದೆ. ಕಂಪ್ಯೂಟರ್‌ ಬಳಸಿ, ಅದರಲ್ಲಿ ಪೂರ್ವಭಾವಿಯಾಗಿ ಅಳವಡಿಸಿರುವ ಸಂಪನ್ಮೂಲಗಳನ್ನು ಪರಿಚಯಿಸಿ, ಪಾಠ ಬೋಧನೆಯನ್ನು ಪರಿಣಾಮಕಾರಿಯಾಗಿ ಮಾಡಲು ಕೇಳಿಕೊಂಡೆ.

‘ಡಯಟ್’ ಉಪನ್ಯಾಸಕಮಿತ್ರರು ಆಸಕ್ತಿಕರ ವಿಷಯವೊಂದನ್ನು ಹಂಚಿಕೊಂಡರು. ಈಗಾಗಲೇ ಕಂಪ್ಯೂಟರ್ ಅಳವಡಿಸಿದ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳು ವಿವಿಧ ಖಾಸಗಿ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ತಿಳಿಸಿದರು. ಕೆಲವರು ಅರೆಕಾಲಿಕವಾಗಿ ಕೆಲಸ ಮಾಡುತ್ತಾ ತಮ್ಮ ವಿದ್ಯಾಭ್ಯಾಸವನ್ನೂ ಮುಂದುವರಿಸುತ್ತಿರುವುದನ್ನು ವಿವರಿಸಿದರು. ಈ ದಿಸೆಯಲ್ಲಿ, ಕಂಪ್ಯೂಟರ್ ಆಧಾರಿತ ಶಿಕ್ಷಣವು ಅನೇಕ ಮಿತಿಗಳ ನಡುವೆಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿಶಾಲ ಜಗತ್ತಿಗೆ ತೆರೆದುಕೊಳ್ಳುವ ಪ್ರಬಲ ಸಾಧ್ಯತೆಗಳನ್ನು ಹೊಂದಿದೆ.

2001ರಲ್ಲಿ ರಾಜ್ಯದಲ್ಲಿ ಮಾಹಿತಿ ಸಿಂಧು ಯೋಜನೆಯ ಮೂಲಕ ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆಯ ಪ್ರಯತ್ನಗಳು ಆರಂಭವಾದವು. 2016-17ನೇ ಸಾಲಿನಿಂದ ತಂತ್ರಜ್ಞಾನ ಬೆಂಬಲಿತ ಕಾರ್ಯಕ್ರಮವನ್ನು ಮರುವಿನ್ಯಾಸಗೊಳಿಸಿ, ಅನುಷ್ಠಾನ
ಗೊಳಿಸಲಾಗುತ್ತಿದೆ. ಕಂಪ್ಯೂಟರ್ ಬಳಕೆ ಕುರಿತು ಶಿಕ್ಷಕರಿಗೆ 10 ದಿನಗಳ ಬುನಾದಿ ತರಬೇತಿಯನ್ನು ಎನ್.ಸಿ.ಇ.ಆರ್.ಟಿ.ಯ ಸಹಭಾಗಿತ್ವದಲ್ಲಿ ನೀಡಲಾಗು ತ್ತಿದೆ. ಬುನಾದಿ ತರಬೇತಿ ಪಡೆದ ಶಿಕ್ಷಕರಿಗೆ ನಂತರದ ವರ್ಷಗಳಲ್ಲಿ 10 ದಿನಗಳ ಪುನಶ್ಚೇತನ ತರಬೇತಿಯನ್ನೂ ನೀಡಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ 26,354 ಶಿಕ್ಷಕರಿಗೆ ಕಂಪ್ಯೂಟರ್ ಬಳಕೆ ಕುರಿತು ಬುನಾದಿ ತರಬೇತಿ ಹಾಗೂ 9,629 ಶಿಕ್ಷಕರಿಗೆ ಪುನಶ್ಚೇತನ ತರಬೇತಿಯನ್ನು ನೀಡಲಾಗಿದೆ. ಈವರೆಗೆ ನಿಯೋಜಿತ ಕಾರ್ಯಗಳನ್ನು ಯಶಸ್ವಿಯಾಗಿ ಪೂರೈಸಿದ 25,947 ಶಿಕ್ಷಕರಿಗೆ ಪ್ರಮಾಣಪತ್ರವನ್ನು ವಿತರಿಸಲಾಗಿದೆ.

ಕಂಪ್ಯೂಟರ್ ಬಳಕೆಯ ತರಬೇತಿ ಪಡೆದ ಶಿಕ್ಷಕರು ಸ್ವತಃ ವಿಡಿಯೊ ಹಾಗೂ ಇನ್ನಿತರ ಡಿಜಿಟಲ್ ಸಂಪನ್ಮೂಲಗಳನ್ನು ಸಿದ್ಧಪಡಿಸಿ, ಶಾಲೆಗಳಲ್ಲಿ ಬಳಸುತ್ತಿದ್ದಾರೆ. ಶಿಕ್ಷಕರು ಬಳಸಿದ ಸಂಪನ್ಮೂಲಗಳ ಗುಣಮಟ್ಟವನ್ನು ಪರಿಶೀಲಿಸಿ, ಉತ್ತಮವಾದವುಗಳನ್ನು ದೀಕ್ಷಾ ಪೋರ್ಟಲ್‍ಗೆ (diksha.gov.in) ಅಪ್‍ಲೋಡ್ ಮಾಡಲಾಗುತ್ತಿದ್ದು, 4,000ಕ್ಕೂ ಅಧಿಕ ಇ-ಸಂಪನ್ಮೂಲಗಳು ಬಳಕೆಗೆ ಲಭ್ಯವಿವೆ. ಖಾನ್‍ ಅಕಾಡೆಮಿ, ಇಂಡಿಯಾ ಲಿಟರೆಸಿ ಪ್ರಾಜೆಕ್ಟ್‌ ನಂತಹ ಸ್ವಯಂಸೇವಾ ಸಂಸ್ಥೆಗಳೂ ಸರ್ಕಾರದ ಜೊತೆಗೂಡಿ ಸಂಪನ್ಮೂಲಗಳನ್ನು ಸೃಜಿಸಲು ನೆರವಾಗುತ್ತಿವೆ. ಇದರಿಂದ, ಶಾಲಾ ಹಂತದಲ್ಲಿ ಕಂಪ್ಯೂಟರ್ ಬೆಂಬಲಿತ ಕಲಿಕಾ ಕಾರ್ಯಕ್ರಮದ ಯಶಸ್ವಿ ಅನುಷ್ಠಾನವು ಗ್ರಾಮೀಣ ಭಾಗದ ಮಕ್ಕಳಿಗೆ ವರದಾನವಾಗಬಲ್ಲದು ಎಂಬುದು ಸ್ಪಷ್ಟವಾಗುತ್ತದೆ.

ಲೇಖಕ: ಹಿರಿಯ ಸಹಾಯಕ ನಿರ್ದೇಶಕ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT