ಮಂಗಳವಾರ, ಜೂನ್ 2, 2020
27 °C
‘ಬಾಯ್ಸ್ ಲಾಕರ್ ರೂಮ್’ ಪ್ರಕರಣ, ಅಸ್ವಸ್ಥ ಸಮಾಜದ ಗುಣಲಕ್ಷಣವೇ?

ಸಂಗತ | ಹದಿಹರೆಯ ಮತ್ತು ಅಸಾಮಾನ್ಯ ತಂತ್ರಜ್ಞಾನ

ಡಾ. ಸತ್ಯಪ್ರಕಾಶ್ ಎಂ.ಆರ್. Updated:

ಅಕ್ಷರ ಗಾತ್ರ : | |

Prajavani

‘ಬಾಯ್ಸ್ ಲಾಕರ್ ರೂಮ್’ ಎಂಬ ದೆಹಲಿಯ ಶಾಲಾ ಬಾಲಕರ ಇನ್‌ಸ್ಟಾಗ್ರಾಂ ಗ್ರೂಪ್ ಒಂದರಲ್ಲಿ ಹದಿಹರೆಯದ ಬಾಲಕರು ಇತ್ತೀಚೆಗೆ ಬಾಲಕಿಯರ ಅಶ್ಲೀಲ ಚಿತ್ರಗಳು ಮತ್ತು ವಿಡಿಯೊಗಳನ್ನು ಪೋಸ್ಟ್ ಮಾಡಿದ್ದಲ್ಲದೆ, ಹರೆಯದ ಬಾಲಕಿಯರನ್ನು ಲೈಂಗಿಕ ಹಿಂಸೆಗೆ ಗುರಿಪಡಿಸುವುದು ಮತ್ತು ಸಾಮೂಹಿಕ ಅತ್ಯಾಚಾರ ಎಸಗುವುದರ ಬಗ್ಗೆ ತೀರಾ ಸಾಮಾನ್ಯ ಎಂಬಂತೆ ಚಾಟ್ ಮಾಡಿರುವುದು ಬೆಳಕಿಗೆ ಬಂದಿದೆ.

ಸಮಾಜದ ಎಲ್ಲ ವರ್ಗಗಳನ್ನೂ ಆತಂಕಕ್ಕೆ ಈಡುಮಾಡಬೇಕಾದ ಆಘಾತಕಾರಿ ವಿದ್ಯಮಾನ ಇದು. ಇದೊಂದು ಸಾಮಾನ್ಯ ಅಪರಾಧ ಪ್ರಕರಣವೆಂದು ಸುಮ್ಮನಿರಲು ಸಾಧ್ಯವಿಲ್ಲ. ಇನ್ನೂ ಇಂತಹ ನೂರಾರು ಗ್ರೂಪ್‍ಗಳು, ಚಾಟ್‍ರೂಮ್‍ಗಳು, ವೆಬ್‍ಸೈಟ್‍ಗಳು, ಯಾರ ಅಂಕೆಗೂ ಸಿಗದ ವೆಬ್‍ಪೇಜ್‍ಗಳು ಬಹಳಷ್ಟು ಆಕ್ಷೇಪಾರ್ಹ ವಿಷಯಗಳನ್ನು ಎಗ್ಗಿಲ್ಲದೆ ಪ್ರಕಟಿಸುತ್ತಲೇ ಇವೆ. ಅವು ಮಾರ್ಫ್ ಮಾಡಲಾದ ಫೋಟೊಗಳಿರಬಹುದು, ಹದಿಹರೆಯದವರ ಖಾಸಗಿ ವಿಡಿಯೊಗಳಿರಬಹುದು, ಅನೈತಿಕ ವಿಚಾರಗಳಿರಬಹುದು, ಇವೆಲ್ಲವೂ ಯಾವುದೇ ಅಡೆತಡೆಯಿಲ್ಲದೆ ಅಂತರ್ಜಾಲದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಲಭಿಸುತ್ತಲೇ ಇವೆ.

ಯಾವುದೇ ತಂತ್ರಜ್ಞಾನವು ಸಮಾಜವನ್ನು ಉನ್ನತೀಕರಿಸಬಹುದು ಅಥವಾ ಇಂತಹ ವಿಕೃತಿಗಳಿಗೆ ಬಳಕೆಯಾಗಿ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಾ ಅವನತಿಯೆಡೆಗೆ ಕೊಂಡೊಯ್ಯಲೂಬಹುದು. ದೆಹಲಿಯ ಪ್ರಕರಣ ಎರಡು ಪ್ರಮುಖ ಪ್ರಶ್ನೆಗಳನ್ನು ನಮ್ಮ ಮುಂದಿಟ್ಟಿದೆ. ಹದಿಹರೆಯದ ಬಾಲಕರ ಎಲ್ಲೆ ಮೀರಿದ ಅಟಾಟೋಪ ಒಂದು ವಿರಳವಾದ ಅಪರಾಧ ಪ್ರಕರಣವೇ ಅಥವಾ ಒಟ್ಟಾರೆ ಅಸ್ವಸ್ಥ ಸಮಾಜದ ಗುಣಲಕ್ಷಣವೇ? ವಾಟ್ಸ್‌ಆ್ಯಪ್, ಫೇಸ್‍ಬುಕ್, ಇನ್‌ಸ್ಟಾಗ್ರಾಂ, ಟ್ವಿಟರ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ನಾವು ಹಂಚಿಕೊಳ್ಳುವ ನಮ್ಮ ಖಾಸಗಿ ಫೋಟೊಗಳು, ವಿಡಿಯೊಗಳು, ಬರಹಗಳು ಎಷ್ಟರಮಟ್ಟಿಗೆ ಸುರಕ್ಷಿತ?

ಸಮಕಾಲೀನ ಜೀವನಶೈಲಿಯ ಬಹುಮುಖ್ಯ ಭಾಗವಾಗಿರುವ ಸಾಮಾಜಿಕ ಜಾಲತಾಣಗಳು ಹಾಗೂ ದಿನನಿತ್ಯ ಬಳಸುವ ಎಲ್ಲಾ ಆ್ಯಪ್‍ಗಳು ನಮ್ಮ ಖಾಸಗಿ ಮಾಹಿತಿಯನ್ನು ನಮ್ಮ ಒಪ್ಪಿಗೆ ಮೇರೆಗೆ ಪಡೆದುಕೊಂಡ ಮೇಲಷ್ಟೇ ಕೆಲಸ ಮಾಡುವುದು. ಹೀಗಾಗಿ, ಸಾರ್ವಜನಿಕ ಮತ್ತು ವೈಯಕ್ತಿಕ ವಿಚಾರಗಳ ನಡುವೆ ಇಂದು ಬಹಳಷ್ಟು ಅಂತರ ಉಳಿದಿಲ್ಲ. ನಮ್ಮ ಹೆಸರು, ವಯಸ್ಸು, ಫೋನ್ ನಂಬರ್, ಆಧಾರ್ ಸಂಖ್ಯೆ, ಇ–ಮೇಲ್‌ ಐ.ಡಿಯೊಂದಿಗೆ ಜೋಡಣೆಯಾಗಿರುವ ಬಹಳಷ್ಟು ಖಾಸಗಿ ವಿಚಾರಗಳು, ವೈಯಕ್ತಿಕ ಮಾಹಿತಿ, ಬ್ಯಾಂಕ್ ಅಕೌಂಟ್ ವಿವರ ಎಲ್ಲವನ್ನೂ ಆ್ಯಪ್‍ಗಳಿಗೆ ನಾವೇ ಕೊಟ್ಟಿದ್ದೇವೆ. ನಮ್ಮ ವೈಯಕ್ತಿಕ ಮಾಹಿತಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿದ್ದರೂ ಎಲ್ಲವೂ ಸಾರ್ವಜನಿಕವೇ! ಹೀಗಾಗಿ, ಇಂತಹ ಜಾಲತಾಣಗಳಲ್ಲಿ ನಾವು ಪೋಸ್ಟ್ ಮಾಡುವ ಯಾವ ವಿಷಯವೂ ಸುರಕ್ಷಿತವಲ್ಲ.

ಈ ತಂತ್ರಜ್ಞಾನಗಳ ಅರಿವಿರುವ ಪರಿಣತರಲ್ಲಿ ಕೆಲವರು ಒಂದು ವೇಳೆ ವಿಕೃತ ಮನಃಸ್ಥಿತಿಯವರಾಗಿದ್ದರೆ, ಯಾವುದೇ ಯುವತಿಯ ಫೋಟೊಗಳು ಮತ್ತು ವಿಡಿಯೊಗಳನ್ನು ಹೇಗಾದರೂ ಬಳಸಿಕೊಳ್ಳಬಹುದು. ಇದಕ್ಕೆ ಕಡಿವಾಣ ಹಾಕುವ ಬಗ್ಗೆ ಈ ಜಾಲತಾಣಗಳನ್ನು ನಡೆಸುವ ಸಂಸ್ಥೆಗಳು ಸದ್ಯದ ಮಟ್ಟಿಗೆ ಗಂಭೀರವಾಗಿ ನೀತಿಯನ್ನೇ ರೂಪಿಸಿಲ್ಲ. ಈ ನೆಲದ ಕಾನೂನಿನ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಬೇಕಾದ ಅನಿವಾರ್ಯ ಇರುವುದರಿಂದ ಸಾಮಾಜಿಕ ಜಾಲತಾಣಗಳು ಸ್ವಯಂ ನಿಯಂತ್ರಣ ನೀತಿಗಳನ್ನು ಹೊಂದಿದ್ದು, ಎಲ್ಲ ಬಳಕೆದಾರರು ಅವುಗಳನ್ನು ಒಪ್ಪಿಯೇ ಬಳಸುತ್ತಿರುತ್ತಾರೆ. ಆದರೂ ಅಲ್ಲೆಲ್ಲ ಅಶ್ಲೀಲ ಚಿತ್ರಗಳು, ವಿಡಿಯೊಗಳು, ಆಕ್ಷೇಪಾರ್ಹ ಪೋಸ್ಟ್‌ಗಳು ಹೇಗೆ ಪ್ರಕಟವಾಗುತ್ತಲೇ ಇರುತ್ತವೆ?

ತಾವೇ ಸೃಷ್ಟಿಸಿದ ತಂತ್ರಜ್ಞಾನವನ್ನು ನಿಯಂತ್ರಿಸುವಲ್ಲಿ ಈ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಉದ್ಯಮಿಗಳು ಸೋತಿದ್ದಾರೆಯೇ? ಅಥವಾ ಮಾರುಕಟ್ಟೆಯ ಕಾರಣಗಳಿಗಾಗಿ, ಎಲ್ಲ ಗೊತ್ತಿದ್ದರೂ ಪ್ರಕರಣ ಬೆಳಕಿಗೆ ಬಂದರಷ್ಟೇ ಪ್ರತಿಕ್ರಿಯಿಸುವ ತಂತ್ರ ಅಳವಡಿಸಿಕೊಂಡಿದ್ದಾರೆಯೇ? ಅನಾಲಿಟಿಕ್ಸ್‌ನ ಮೂಲಕ ನಮ್ಮೆಲ್ಲರ ಇಷ್ಟಾನಿಷ್ಟಗಳನ್ನು ತಿಳಿದುಕೊಂಡು, ಒಬ್ಬೊಬ್ಬ ವ್ಯಕ್ತಿಗೂ ಇಷ್ಟವಾಗುವ ವಿಷಯಗಳನ್ನಷ್ಟೇ ತಲುಪಿಸುವ ಮೈಕ್ರೊಟಾರ್ಗೆಟಿಂಗ್ ಎಂಬ ಮಾರುಕಟ್ಟೆ ತಂತ್ರಗಾರಿಕೆಯನ್ನು ಕರಗತ ಮಾಡಿಕೊಂಡಿರುವ ಗೂಗಲ್, ಫೇಸ್‍ಬುಕ್‍ನಂತಹ ಸಂಸ್ಥೆಗಳಿಗೆ, ಆಕ್ಷೇಪಾರ್ಹ ವಿಷಯಗಳು ಪ್ರಕಟವಾಗದ ರೀತಿಯಲ್ಲಿ ತಾಂತ್ರಿಕ ತಡೆಗೋಡೆಯನ್ನು ಸೃಷ್ಟಿಸಲು ಸಾಧ್ಯವಾಗುವುದಿಲ್ಲವೇ?

ಇವುಗಳಿಗೆ ಬಳಕೆದಾರರು ಹೆಚ್ಚಾದಷ್ಟೂ ಲಾಭ. ಸಿನಿಮಾ ಆರಂಭವಾಗುವ ಮುಂಚೆ ಮದ್ಯಪಾನ, ಧೂಮಪಾನ, ತಂಬಾಕು ಸೇವನೆ ಹಾನಿಕಾರಕ, ಈ ಚಲನಚಿತ್ರ ಯಾವುದೇ ರೀತಿಯಲ್ಲಿ ಇವುಗಳಿಗೆ ಉತ್ತೇಜನ ನೀಡುವುದಿಲ್ಲ ಎಂದು ಡಿಸ್‌ಕ್ಲೇಮರ್‌ ಪ್ರಕಟಿಸಿ, ಸಿಗರೇಟ್, ಮದ್ಯಸೇವನೆಯ ವಿಜೃಂಭಣೆಯಿರುವ ಸಿನಿಮಾಗಳನ್ನು ಪ್ರದರ್ಶಿಸುವ ರೀತಿ, ಈ ಜಾಲತಾಣಗಳು ಕೂಡ ಆರಂಭಿಕ ಡಿಸ್‌ಕ್ಲೇಮರ್‌ಗಳನ್ನು ಬಳಕೆದಾರರಿಗೆ ನೀಡಿರುತ್ತವೆ. ನಂತರ ನಡೆಯುವುದೇ ಬೇರೆ.

ಚಲನಚಿತ್ರವೊಂದರಲ್ಲಿ ಕಠಿಣಶ್ರಮ ವಹಿಸಿ ಅಭಿನಯಿಸಿದ್ದು, ತಾನು ಅತ್ಯಾಚಾರಕ್ಕೆ ಒಳಗಾದ ಅನುಭವ ನೀಡಿತು ಎಂದ ನಾಯಕನನ್ನು ಆರಾಧಿಸುವವರು, ‘ಅತ್ಯಾಚಾರಕ್ಕೊಳಗಾಗುವ ಸಂದರ್ಭದಲ್ಲಿ ಯುವತಿ ಪ್ರತಿರೋಧಿಸದಿದ್ದರೆ ಬಹುಶಃ ಬದುಕಿರುತ್ತಿದ್ದಳು’ ಎನ್ನುವ ಜನನಾಯಕರನ್ನು ಚುನಾವಣೆಯಲ್ಲಿ ಗೆಲ್ಲಿಸುವ ಜನರು, ಪುರುಷಪ್ರಧಾನ ವ್ಯವಸ್ಥೆಯನ್ನು ಸಮರ್ಥಿಸಿಕೊಳ್ಳುವ ಪ್ರಭಾವಿ ಸಾಂಸ್ಕೃತಿಕ ನಾಯಕರಿರುವ ಸಮಾಜದಲ್ಲಿ ಅಪ್ರಾಪ್ತ ವಯಸ್ಕರು ಹಾದಿತಪ್ಪುವುದು ಅಸಹಜವೇ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು