ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ: ‘ಕಾಯ್ದಿರಿಸದವರ’ ಕಾಯಬೇಕಿದೆ!

ರೈಲಿನ ಜನರಲ್‌ ಬೋಗಿಗಳಲ್ಲಿ ಟಿಕೆಟ್‌ ಕಾಯ್ದಿರಿಸದೆ ಪ್ರಯಾಣಿಸುವವರ ಅತೀವ ಬವಣೆ ತಪ್ಪಿಸಲು ಸರ್ಕಾರ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ
Published 5 ಜೂನ್ 2024, 0:26 IST
Last Updated 5 ಜೂನ್ 2024, 0:26 IST
ಅಕ್ಷರ ಗಾತ್ರ

ವಿಜಯಪುರ- ಮಂಗಳೂರು ಎಕ್ಸ್‌ಪ್ರೆಸ್ ರೈಲು ಹತ್ತಲು ಇತ್ತೀಚೆಗೆ ಅರಸೀಕೆರೆ ಜಂಕ್ಷನ್‍ನಲ್ಲಿ ಟಿಕೆಟ್ ಖರೀದಿಸಿ ಕಾಯುತ್ತಿದ್ದೆ. ವೇಳಾಪಟ್ಟಿ ಪ್ರಕಾರ ರಾತ್ರಿ 2.20ಕ್ಕೆ ಅಲ್ಲಿಗೆ ತಲುಪಬೇಕಿದ್ದ ರೈಲು ಬೆಳಗಿನ ಜಾವ 4.30ಕ್ಕೆ ನಿಲ್ದಾಣವನ್ನು ಪ್ರವೇಶಿಸಿತು. ನಾನು ತೆರಳಬೇಕಿದ್ದ ಹಾಸನಕ್ಕೆ ಅರಸೀಕೆರೆಯಿಂದ ಮುಕ್ಕಾಲು ಗಂಟೆ ಪ್ರಯಾಣವಾದ್ದರಿಂದ ಟಿಕೆಟ್ ಕಾಯ್ದಿರಿಸುವ ಅಗತ್ಯ ಕಂಡುಬಂದಿರಲಿಲ್ಲ. ಹಾಗೊಂದು ವೇಳೆ ಕಾಯ್ದಿರಿಸಲು ಮುಂದಾಗಿದ್ದರೆ, ಅದಕ್ಕೆ ತೀರಾ ದುಬಾರಿ ಮೊತ್ತ ಪಾವತಿಸಬೇಕಿದ್ದ ಕಾರಣದಿಂದಲೂ ಅದರ ಉಸಾಬರಿಗೆ ಹೋಗಿರಲಿಲ್ಲ.

ರೈಲು ನಿಲ್ದಾಣವನ್ನು ಪ್ರವೇಶಿಸಿದ ಕೂಡಲೇ ಜನರಲ್ ಬೋಗಿಗಳತ್ತ ತೆರಳಿ ಒಳಹೋಗಲು ಪ್ರಯತ್ನಿಸಿದೆ. ಮೊದಲು ಸಿಕ್ಕ ಎರಡು ಬೋಗಿಗಳ ಬಾಗಿಲನ್ನು ತೆರೆಯಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಮೊದಲೇ ತುಂಬಿ ತುಳುಕುತ್ತಿದ್ದ ಈ ಬೋಗಿಗಳಿಗೆ ಹೊಸದಾಗಿ ಪ್ರವೇಶ ಪಡೆಯಲು ಯಾರಿಗೂ ಅವಕಾಶ ನೀಡಲೇಬಾರದೆಂದು ನಿರ್ಧರಿಸಿದಂತಿದ್ದ ಆ ಬೋಗಿಗಳ ಒಳಗಿದ್ದ ಕೆಲ ಪ್ರಯಾಣಿಕರು, ಬಾಗಿಲುಗಳನ್ನು ತೆರೆಯದ ಹಾಗೆ ನೋಡಿಕೊಂಡರು. ಬಾಗಿಲು ಮುಚ್ಚಲು ಕೂಡ ಸಾಧ್ಯವಾಗದಷ್ಟು ಜನರನ್ನು ತುಂಬಿಕೊಂಡಿದ್ದ ಮತ್ತೊಂದು ಬೋಗಿಯತ್ತ ಓಡಿದೆ. ಹೇಗೋ ಹರಸಾಹಸ ಮಾಡಿ, ಎರಡು ಪಾದ ಊರಿ ನಿಲ್ಲುವಷ್ಟು ಜಾಗ ದಕ್ಕಿಸಿಕೊಂಡೆ. ನನ್ನ ಹಾಗೆ ಒಳ ಪ್ರವೇಶಿಸಲು ಬಂದ ಇನ್ನಷ್ಟು ಪ್ರಯಾಣಿಕರಿಗೆ ಒಳಗೆ ಕಾಲಿಡಲು ಕೂಡ ಜಾಗ ಸಿಗದೇಹೋಯಿತು. ಅವರು ಬೇರೆ ಬೋಗಿಗಳತ್ತ ಮುಖ ಮಾಡಿದರು.

ರೈಲು ಅರಸೀಕೆರೆ ನಿಲ್ದಾಣವನ್ನು ಬಿಟ್ಟು ಹಾಸನದತ್ತ ಪ್ರಯಾಣ ಆರಂಭಿಸಿತು. ಎಲ್ಲರೂ ಹೇಗೋ ಸಿಕ್ಕ ಜಾಗದಲ್ಲಿ ಕೂರಲು, ನಿಲ್ಲಲು ಅಥವಾ ಮಲಗಲು ನೆಲೆ ಕಲ್ಪಿಸಿಕೊಂಡರು. ಸೀಟಿನ ಅಡಿ, ಓಡಾಡಲು ಇರುವ ಜಾಗ ಹೀಗೆ ಎಲ್ಲೆಂದರಲ್ಲಿ ಬಿದ್ದುಕೊಂಡು ಹಲವರು ನಿದ್ರಿಸುತ್ತಿದ್ದರು. ಪ್ರವೇಶ ದ್ವಾರದ ಮೆಟ್ಟಿಲು
ಗಳನ್ನೂ ಒಳಗೊಂಡು ಕೂರುವಷ್ಟು ಜಾಗ ಹಿಡಿಯಲು ಶಕ್ತರಾದವರು ಕೂತಿದ್ದರು. ಕೆಲವರು ನಿಲ್ಲಲು ಜಾಗ ಸಿಕ್ಕಿದ್ದಕ್ಕೇ ತೃಪ್ತಿಪಟ್ಟುಕೊಂಡು ತೂಕಡಿಸುತ್ತಲೇ ನಿಂತಿದ್ದರು. ಪುಟ್ಟ ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದವರ ಪರಿಸ್ಥಿತಿಯಂತೂ ಅಸಹನೀಯ ವಾಗಿತ್ತು. ರೈಲಿನ ಕಾಯ್ದಿರಿಸದ ಬೋಗಿಗಳು ಒಂದು ರೀತಿಯಲ್ಲಿ ಸಾಮಾನು-ಸರಂಜಾಮುಗಳನ್ನು ತುಂಬಿಕೊಳ್ಳುವ ಲಗೇಜ್ ಗಾಡಿಗಳಂತೆ ಮನುಷ್ಯರನ್ನು ತುಂಬಿಕೊಂಡಿದ್ದವು.

ಇದು ಬರೀ ನಾನು ಪ್ರಯಾಣಿಸುತ್ತಿದ್ದ ರೈಲಿನ ಜನರಲ್ ಬೋಗಿಗಳಲ್ಲಿನ ಪ್ರಯಾಣಿಕರ ಪಾಡಷ್ಟೇ ಆಗಿರಲಿಲ್ಲ. ರಾತ್ರಿ ವೇಳೆ ಪ್ರಯಾಣಿಸುವ ಬಹುತೇಕ ಎಕ್ಸ್‌ಪ್ರೆಸ್ ಮತ್ತು ಸೂಪರ್ ಫಾಸ್ಟ್ ರೈಲುಗಳಲ್ಲಿನ ಕಾಯ್ದಿರಿಸದ ಬೋಗಿಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇರುವುದಿಲ್ಲ. ರಾತ್ರಿ ವೇಳೆ ಯಾವುದಾದರೂ ರೈಲು ನಿಲ್ದಾಣದಲ್ಲಿ ನಿಂತು, ಅಲ್ಲಿ ಓಡಾಡುವ ರೈಲುಗಳ ಜನರಲ್ ಬೋಗಿಗಳತ್ತ ದಿಟ್ಟಿಸಿದರೂ ಸಾಕು, ಭಾರತೀಯ ರೈಲ್ವೆ ಮತ್ತು ಅದನ್ನು ನಿಯಂತ್ರಿಸುವ ಹೊಣೆ ಹೊತ್ತಿರುವ ಸರ್ಕಾರಕ್ಕೆ ಜನರಲ್ ಬೋಗಿಗಳಲ್ಲಿ ಪ್ರಯಾಣಿಸುವ ಜನಸಾಮಾನ್ಯರ ಕುರಿತು ಯಾವ ಪರಿ ಕಾಳಜಿ ಇದೆ ಎಂಬುದು ಅರಿವಾಗುತ್ತದೆ.

‘ವಂದೇ ಭಾರತ್’ ಎಕ್ಸ್‌ಪ್ರೆಸ್ ರೈಲುಗಳ ಸಂಚಾರಕ್ಕೆ ಚಾಲನೆ ನೀಡಲು ಹೆಚ್ಚು ಉತ್ಸುಕತೆ ತೋರಿದ ಸರ್ಕಾರಕ್ಕೆ, ಹೆಚ್ಚಿನ ಸಂಖ್ಯೆಯ ಜನಸಾಮಾನ್ಯರನ್ನು ಒಳಗೊಂಡ ಜನರಲ್ ಬೋಗಿಗಳಲ್ಲಿನ ಪ್ರಯಾಣಿಕರ ಹಿತ ಮುಖ್ಯವಾದಂತೆ ತೋರುವುದಿಲ್ಲ. ಬೇಡಿಕೆಗೆ ಅನುಗುಣವಾಗಿ ರೈಲುಗಳು ಮತ್ತು ಅವುಗಳಲ್ಲಿನ ಜನರಲ್ ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸದೇ ಹೋದಲ್ಲಿ ಈಗ ಪ್ರಯಾಣಿಕರು ಅನುಭವಿಸುತ್ತಿರುವ ಯಾತನೆ ಮತ್ತಷ್ಟು ತೀವ್ರ ಸ್ವರೂಪ ಪಡೆಯಲಿದೆ.

ರಾಜ್ಯ ಸರ್ಕಾರ ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಜಾರಿಗೆ ತಂದ ನಂತರ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್‍ಗಳಲ್ಲಿ ನೂಕುನುಗ್ಗಲು ಉಂಟಾಗಿ, ಪ್ರಯಾಣಿಕರು ಅನುಭವಿಸಿದ ಮತ್ತು ಇಂದಿಗೂ ಅನುಭವಿಸುತ್ತಲೇ ಇರುವ ಪಡಿಪಾಟಲುಗಳ ಸುತ್ತಲಿನ ಚರ್ಚೆ ಮುಂದುವರಿದೇ ಇದೆ. ಇದಕ್ಕೆ ಮಾಧ್ಯಮಗಳಲ್ಲಿ ಕೂಡ ಪ್ರಾಮುಖ್ಯ ದೊರೆಯುತ್ತಿದೆ. ಬೇಡಿಕೆಗೆ ಅನುಗುಣವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಸ್‍ಗಳನ್ನು ಸಂಚಾರಕ್ಕೆ ಬಿಡಬೇಕೆನ್ನುವ ಒತ್ತಡ ಸರ್ಕಾರದ ಮೇಲಿದೆ.
ಇಂತಹುದೇ ಪರಿಸ್ಥಿತಿಯು ರೈಲುಗಳ ಕಾಯ್ದಿರಿಸದ ಬೋಗಿಗಳಲ್ಲಿ ಕೂಡ ಇದೆ. ಆದರೂ ಈ ಕುರಿತು ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿಲ್ಲ. ರಾಜಕಾರಣಿಗಳಾಗಲಿ, ಮಾಧ್ಯಮಗಳಾಗಲಿ ಒಕ್ಕೂಟ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿಲ್ಲ. ಹೀಗೇಕೆ?

ಸಾರ್ವಜನಿಕ ಬಸ್‍ಗಳಿಗೆ ಹೋಲಿಸಿದರೆ, ರಾತ್ರಿ ವೇಳೆ ಸುದೀರ್ಘ ಅವಧಿ ಪ್ರಯಾಣಿಸುವವರನ್ನು ಒಳಗೊಂಡ ರೈಲುಗಳ ಕಾಯ್ದಿರಿಸದ ಬೋಗಿಗಳಲ್ಲಿ ದನಿ ಇಲ್ಲದ ದಮನಿತರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಇಂತಹ ನಿರ್ಲಕ್ಷ್ಯಕ್ಕೆ ಕಾರಣವೇ? ರೈಲುಗಳ ಸ್ಲೀಪರ್, ಹವಾನಿಯಂತ್ರಿತ ಬೋಗಿಗಳಲ್ಲಿ ಶುಚಿತ್ವದ ಕೊರತೆ ಮತ್ತು ಸೌಲಭ್ಯಗಳಲ್ಲಿ ವ್ಯತ್ಯಯವಾದರೆ ಆ ಕುರಿತು ದನಿ ಎತ್ತುವವರು ಮತ್ತು ಅದಕ್ಕೆ ಸ್ಪಂದಿಸುವ ವ್ಯವಸ್ಥೆ ತಕ್ಕಮಟ್ಟಿಗಾದರೂ ಅಸ್ತಿತ್ವದಲ್ಲಿದೆ. ಆದರೆ, ಸಾಮಾನ್ಯ ಪ್ರಯಾಣಿಕರ ಗೋಳು ಕೇಳುವವರು ಯಾರು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT