ಸೋಮವಾರ, ಆಗಸ್ಟ್ 8, 2022
21 °C
ಸರ್ಕಾರಗಳ ಇಚ್ಛಾಶಕ್ತಿಯ ಕೊರತೆ ಮತ್ತು ಅವೈಜ್ಞಾನಿಕ ಯೋಜನೆಗಳೇ ಗಣಿ ಪ್ರದೇಶದ ಜನರ ದುಃಸ್ಥಿತಿಗೆ ಕಾರಣ ಎಂಬ ವಾದ ಕೇಳಿಬರುತ್ತಿದೆ.

ಸಂಗತ: ಕೇಳುತ್ತಿದೆಯೇ ಗಣಿಯಾಳದವರ ಮನದಾಳ?

ಶ್ರೀಗುರು Updated:

ಅಕ್ಷರ ಗಾತ್ರ : | |

Prajavani

ಸುಮಾರು ಒಂದು ಕೋಟಿ ಜನ, ಭೂಮಿಯಾಳದ ಕತ್ತಲಿನ ಉಸಿರುಗಟ್ಟಿಸುವ ವಾತಾವರಣದಲ್ಲಿ ಮೂರು ಶಿಫ್ಟ್‌ಗಳಲ್ಲಿ ಕೆಲಸ ಮಾಡಿ ಮನೆಗಳಿಗೆ ಬೆಳಕು, ಫ್ಯಾಕ್ಟರಿಗಳಿಗೆ ಶಕ್ತಿ ನೀಡಿ, ತಾವು ಮಾತ್ರ ಎದೆಯ ಗೂಡಿನಲ್ಲಿ ಇಂಗಾಲ ತುಂಬಿಕೊಂಡು, ಬದುಕಿರುವಷ್ಟೂ ದಿನ ನರಳುತ್ತಾರೆ. ಇವರಿಗೆ ಸರಿಯಾದ ಶಿಕ್ಷಣವಿಲ್ಲ. ಇರಲು ಸರಿಯಾದ ಮನೆಗಳಿಲ್ಲ. ಇವರ ಮಕ್ಕಳಿಗೂ ಶಾಲೆಗಳಲ್ಲಿ ಜಾಗವಿಲ್ಲ. ದುಡಿಯುವ ಹಣ ಕುಡಿತಕ್ಕೆ, ಕಾಯಿಲೆಗೆ, ಉಳಿದರೆ ಉಣ್ಣಲಿಕ್ಕೆ.

ಅವರ ಶ್ರಮದಿಂದ ವಿದ್ಯುತ್ ಪಡೆಯುವ ನಾವು, ಬೇಕೆಂದ ಡಿಸೈನಿನ ಮನೆ, ಅಪಾರ್ಟ್‌ಮೆಂಟು, ಬಂಗಲೆ ಕಟ್ಟಿ, ಎ.ಸಿ ರೂಮು, ಝಗಮಗಿಸುವ ಬೆಳಕಿನ ಐಷಾರಾಮಿ ಲೋಕದಲ್ಲಿ ಮುಳುಗಿ ಹೋಗುತ್ತೇವೆ. ಆದರೆ ನಮಗೆ ಅನುಕೂಲ ಕಲ್ಪಿಸಲು ಅಪಾಯಕಾರಿ ಕಲ್ಲಿದ್ದಲು ಗಣಿಗಳಲ್ಲಿ ಜೀವ ಪಣಕ್ಕೊಡ್ಡಿ ದುಡಿಯುವ ಶ್ರಮಜೀವಿಗಳ ಕಿಂಚಿತ್ ನೆನಪೂ ನಮಗಾಗುವುದಿಲ್ಲ.

ಆದರೆ ಸರ್ಕಾರ ಪ್ರತಿವರ್ಷ ಮೇ 4ರಂದು, ಕಲ್ಲಿದ್ದಲು ಗಣಿಗಳಲ್ಲಿ ಕೆಲಸ ಮಾಡುವವರ ಶ್ರಮ– ತ್ಯಾಗಗಳನ್ನು ನೆನೆಸಿಕೊಳ್ಳಲು ‘ಕೋಲ್ ಮೈನರ್ಸ್’ ಡೇ ಆಚರಿಸುತ್ತದೆ. ನಮ್ಮ ಗಣಿಗಳಲ್ಲಿ ದೇಶದ ಅಭಿವೃದ್ಧಿಗೆ ಬೇಕಾದ ಶಕ್ತಿಯಿದೆ ಎಂದು ನಂಬಿದ್ದೇವೆ. ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳ, ಛತ್ತೀಸ್‍ಗಡ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಹೆಚ್ಚಿನ ಕಲ್ಲಿದ್ದಲು ನಿಕ್ಷೇಪಗಳಿವೆ.

ಕಳೆದ 250 ವರ್ಷಗಳಿಂದ ಕಲ್ಲಿದ್ದಲು ಗಣಿಗಾರಿಕೆ ನಡೆಸುತ್ತಿರುವ ನಾವು, ಕಳಪೆ ಕಲ್ಲಿದ್ದಲು ಸುಟ್ಟು, ಬೇಡಿಕೆಯ ಶೇ 70ಕ್ಕಿಂತ ಹೆಚ್ಚು ಶಕ್ತಿ ಸಂಪಾದಿಸಿ, ಬೇಕಾದ ಅಭಿವೃದ್ಧಿ ಕಾಣುತ್ತಿದ್ದೇವೆ. ಸುಡುವಿಕೆಯಿಂದ ಭೂಮಿಯ ಬಿಸಿ ಏರಿದೆ, ಅದನ್ನು ಕಡಿಮೆ ಮಾಡಿ ಎಂದು ಅಮೆರಿಕ ಮೂದಲಿಸಿದಾಗ, ‘ನೀವು ನಿಮ್ಮ ಅಭಿವೃದ್ಧಿಗೆ ಇದನ್ನೇ ಬಳಸಿ ವಿಶ್ವದ ನಂಬರ್ ಒನ್ ಸ್ಥಾನದಲ್ಲಿದ್ದೀರಿ. ಈಗ ನಮಗೆ ಉಪದೇಶ ಮಾಡಲು ನೀವ್ಯಾರು? ನಮಗೆ ಸೋವಿ ಸಿಗುವುದು ಇದೊಂದೇ, ಇದನ್ನೇ ಇನ್ನಷ್ಟು ದಿನ ಬಳಸುತ್ತೇವೆ, ಅಭಿವೃದ್ಧಿಗೆ ಇದು ಅನಿವಾರ್ಯ’ ಎಂದು ಧಮಕಿ ಹಾಕಿ ಗಣಿಗಳ ಮತ್ತಷ್ಟು ಆಳಕ್ಕಿಳಿದಿದ್ದೇವೆ.

ಅಭಿವೃದ್ಧಿಗಾಗಿ ನಮ್ಮ ಜನರ ಆರೋಗ್ಯ ಮತ್ತು ಪರಿಸರ ಎರಡನ್ನೂ ಪಣಕ್ಕಿಟ್ಟಿದ್ದೇವೆ. ಪ್ರಪಂಚದ ಒಟ್ಟು ನಿಕ್ಷೇಪದ ಕಾಲುಭಾಗ, ಅಂದರೆ 250 ಶತಕೋಟಿ ಟನ್ ಕಲ್ಲಿದ್ದಲು ನಿಕ್ಷೇಪ ಅಮೆರಿಕದಲ್ಲಿದೆ. ರಷ್ಯಾ 160, ಆಸ್ಟ್ರೇಲಿಯಾ 147, ಚೀನಾ 138 ಮತ್ತು ನಮ್ಮಲ್ಲಿ 101 ಶತಕೋಟಿ ಟನ್ ನಿಕ್ಷೇಪವಿದೆ. ವಿಶ್ವದ ಒಟ್ಟು ವಿದ್ಯುತ್ ಬೇಡಿಕೆಯ ಶೇ 40ರಷ್ಟು ಕಲ್ಲಿದ್ದಲಿನಿಂದ
ಪೂರೈಕೆಯಾದರೆ, ವಿವಿಧ ಅವಶ್ಯಕತೆಗಳಿಗೆ ಬೇಕಾದ ಉಕ್ಕನ್ನು ಉತ್ಪಾದಿಸಲು ಬಳಸುವ ವಿದ್ಯುತ್ತಿನ ಮುಕ್ಕಾಲು ಪಾಲು ಕಲ್ಲಿದ್ದಲಿನ ಸ್ಥಾವರಗಳಿಂದ ದೊರೆಯುತ್ತಿದೆ.

ಭಾರತದ ಪ್ರಾಕೃತಿಕ ಸಮೃದ್ಧಿ ಇರುವ ಜಾಗಗಳೇ ದೇಶದ ಅತ್ಯಂತ ಹಿಂದುಳಿದ ಪ್ರದೇಶಗಳಾಗಿವೆ. ಎಲ್ಲೆಲ್ಲಿ ಗಣಿಗಾರಿಕೆ ನಡೆದಿದೆಯೋ ಅಲ್ಲಿನ ಪರಿಸರ ನಾಶವಾಗಿ, ಕಾಡು ಬರಿದಾಗಿ ಅಲ್ಲಿನ ಮೂಲನಿವಾಸಿಗಳು ನಿರಾಶ್ರಿತ
ರಾಗಿದ್ದಾರೆ. ಗಣಿ ಪ್ರದೇಶದ ಜನಸಂಖ್ಯೆಯ ಶೇ 60 ಭಾಗದಷ್ಟು ಜನ ಬಡತನ ರೇಖೆಗಿಂತ ಕೆಳಗಿದ್ದಾರೆ. ಅನಾರೋಗ್ಯ, ಅಪೌಷ್ಟಿಕತೆ, ಸಾವು, ವಲಸೆ ಸಾಮಾನ್ಯ ಸಂಗತಿಗಳಾಗಿಬಿಟ್ಟಿವೆ. ಆಹಾರ ಮತ್ತು ಕುಡಿಯುವ ನೀರಿಗಾಗಿ ದೊಂಬಿಗಳಾಗುತ್ತವೆ. ಶಿಕ್ಷಣ ವಂಚಿತ ಯುವಕರು, ಮಕ್ಕಳು ಅದಿರಿನ ಕಳ್ಳತನಕ್ಕಿಳಿದಿದ್ದಾರೆ.

ಇದರ ನಡುವೆ ಬುಡಕಟ್ಟು ಜನರ ಹಕ್ಕುಗಳಿಗಾಗಿ ಹೋರಾಡುವ ಮಾವೊವಾದಿಗಳು ಸರ್ಕಾರದ ವಿರುದ್ಧ ನಿಂತು ಹಿಂಸಾಚಾರದ ದಾರಿ ಹಿಡಿದಿದ್ದಾರೆ. ಬಡತನದ ಜೊತೆ ಅಭದ್ರತೆಯೂ ಸೇರಿಕೊಂಡು ಜನರ ಬದುಕು ಹೀನಾಯವಾಗಿದೆ. ಸರ್ಕಾರಗಳ ಇಚ್ಛಾಶಕ್ತಿಯ ಕೊರತೆ ಮತ್ತು ಅವೈಜ್ಞಾನಿಕ ಯೋಜನೆಗಳೇ ಗಣಿ ಪ್ರದೇಶದ ಜನರ ದುಃಸ್ಥಿತಿಗೆ ಕಾರಣ ಎಂಬ ವಾದ ಮೊದಲಾಗಿದೆ. 2017ರಲ್ಲಿ ಜರ್ಮನಿಯ ಬಾನ್‍ನಲ್ಲಿ ನಡೆದ COP 23 ವಾಯುಗುಣ ಶೃಂಗಸಭೆಯಲ್ಲಿ 2030ರ ವೇಳೆಗೆ ಕಲ್ಲಿದ್ದಲಿನ ಗಣಿಗಾರಿಕೆ ನಿಲ್ಲಿಸುತ್ತೇವೆ ಎಂದು 20 ದೇಶಗಳು ಸಹಿ ಹಾಕಿವೆ. ಪಟ್ಟಿಯಲ್ಲಿ, ಅತಿ ಹೆಚ್ಚು ಕಲ್ಲಿದ್ದಲು ಬಳಸುವ ಅಮೆರಿಕ, ಚೀನಾ, ರಷ್ಯಾ, ಆಸ್ಟ್ರೇಲಿಯಾ ಹೆಸರಿಲ್ಲ.

ಜಗತ್ತಿನಾದ್ಯಂತ ಕೆಲಸದಲ್ಲಿರುವ ಕಲ್ಲಿದ್ದಲು ಕಾರ್ಮಿಕರ ಹಿತ ಕಾಯಲು ‘ವರ್ಲ್ಡ್‌ ಕೋಲ್ ಅಸೋಸಿಯೇಷನ್’ ಇದೆ. ನಮ್ಮಲ್ಲಿ ಜಿಲ್ಲೆಗೊಂದರಂತೆ ಡಿಸ್ಟ್ರಿಕ್ಟ್ ಮಿನರಲ್ ಫೌಂಡೇಷನ್ (ಡಿಎಂಎಫ್) ಸ್ಥಾಪಿಸಲಾಗಿದೆ. 2015ರಲ್ಲಿ ಪ್ರಾರಂಭವಾದ ಪ್ರಧಾನ ಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆಯು ಡಿಎಂಎಫ್‍ಗೆ ಅನುದಾನ ನೀಡಿ ಶೇ 60ರಷ್ಟು ಹಣವನ್ನು ಮಹಿಳೆ, ಮಕ್ಕಳು, ಕುಡಿಯುವ ನೀರು, ಆರೋಗ್ಯ ಮತ್ತು ಜೀವನ ನಿರ್ವಹಣೆಗೆ ಖರ್ಚು ಮಾಡುವ ಯೋಜನೆ ರೂಪಿಸಿದೆ. ಸಂವಿಧಾನದ 5 ಮತ್ತು 6ನೇ ಪರಿಚ್ಛೇದಗಳು ಸ್ಥಳೀಯ ಸಂಪನ್ಮೂಲಗಳ ಮೇಲೆ ಬುಡಕಟ್ಟು ಜನರಿಗೆ ಅಧಿಕಾರ ನೀಡಿ, ಗ್ರಾಮಸಭೆ ಮತ್ತು ಪಂಚಾಯಿತಿಗಳ ಅನುಮತಿ ಇಲ್ಲದೇ ಅಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ನಡೆಯಕೂಡದು ಎಂದಿವೆ.

ಇದನ್ನು ಅರಿತುಕೊಂಡ ಕೆಲ ಬುಡಕಟ್ಟುಗಳು ತಮ್ಮ ನೆಲ- ಜಲವನ್ನು ಕಾನೂನು ಹೋರಾಟದ ಮೂಲಕ ಕಾಪಾಡಿಕೊಂಡಿವೆ. ಆದರೆ ಸರ್ಕಾರದಿಂದ ಗುತ್ತಿಗೆ ಪಡೆದು ನಡೆಯುತ್ತಿರುವ ಗಣಿ ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು