ಹೊಸ ಕ್ಯಾಲೆಂಡರ್ ವರ್ಷ 2026ರ ಮೊದಲ ದಿನಗಳೇ ಜಗತ್ತಿಗೆ ಅಶಾಂತಿಯ ಸೂಚನೆ ನೀಡಿವೆ. ವೆನೆಜುವೆಲಾ ಮೇಲಿನ ಅಮೆರಿಕ ದಾಳಿ ಜಾಗತಿಕ ರಾಜಕೀಯವನ್ನು ಮತ್ತೊಮ್ಮೆ ಕದಡಿದೆ; ಹೊಸ ಯುದ್ಧದ ಭೀತಿ ಮರುಕಳಿಸುವ ಸಾಧ್ಯತೆಯನ್ನು ಹೆಚ್ಚಿಸಿದೆ. ಶಾಂತಿ ಮತ್ತು ಸೌಹಾರ್ದ ಬಯಸುವವರಿಗೆ ಇದು ಹೊಸ ಆತಂಕದ ಆರಂಭ.

ಮಾನವಕುಲ ಈಗಾಗಲೇ ಎರಡು ಮಹಾಯುದ್ಧಗಳ ಕ್ರೌರ್ಯವನ್ನು ಅನುಭವಿಸಿದೆ. ಪ್ರಥಮ ಮಹಾಯುದ್ಧದಲ್ಲಿ ನಾಲ್ಕು ಕೋಟಿ ಹಾಗೂ ದ್ವಿತೀಯ ಮಹಾಯುದ್ಧದಲ್ಲಿ ಏಳರಿಂದ ಎಂಟೂವರೆ ಕೋಟಿ ಜನರು ಪ್ರಾಣ ಕಳೆದುಕೊಂಡಿರಬಹುದೆಂಬ ಅಂದಾಜು ಇದೆ. ಇಂತಹ ದುರಂತಮರುಕಳಿಸದಿರಲೆಂಬ ಆಶಯದಿಂದಲೇ 1945ರಲ್ಲಿ ವಿಶ್ವಸಂಸ್ಥೆ ಸ್ಥಾಪಿಸಲಾಯಿತು. ‘ಮುಂದಿನ ಪೀಳಿಗೆಯನ್ನು ಯುದ್ಧದ ವಿಪತ್ತಿನಿಂದ ರಕ್ಷಿಸುವುದು’ ಎಂಬ ಅದರ ಮುನ್ನುಡಿಯಲ್ಲಿನ ಪದಪುಂಜ ವಿಶ್ವಕ್ಕೆ ಭರವಸೆ ನೀಡಿತ್ತು.

ಇಂದಿನ ವಾಸ್ತವ ಬೇರೆಯದೇ ಕಥೆ ಹೇಳುತ್ತದೆ. ಓಸ್ಲೋ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಪ್ರಕಾರ, ವಿಶ್ವಸಂಸ್ಥೆ ಸ್ಥಾಪನೆಯ ನಂತರದ ಅತ್ಯಂತ ಹಿಂಸಾತ್ಮಕ ವರ್ಷವಾದ 2024ರಲ್ಲಿ 36 ದೇಶಗಳಲ್ಲಿ 61 ಯುದ್ಧಗಳು ನಡೆದಿವೆ. 2025ರ ಕಥೆಯೂ ಭಿನ್ನವಾಗೇನೂ ಇಲ್ಲ.

ಯುದ್ಧದಲ್ಲಿ ಕಾದಾಡುತ್ತಿರುವ ಬಣಗಳು ನಾಗರಿಕರ ರಕ್ಷಣೆಯನ್ನು ಮಾಡಬೇಕೆಂದು, ಶಾಲೆ ಮತ್ತು ಆಸ್ಪತ್ರೆಯಂಥ ಸ್ಥಳಗಳ ಮೇಲೆ ದಾಳಿ ಮಾಡಬಾರದೆಂದು, ಕೈದಿಗಳನ್ನುಮತ್ತು ಗಾಯಗೊಂಡವರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದನ್ನು, ಯುದ್ಧದಲ್ಲಿ ಯಾವ ಅಸ್ತ್ರಗಳನ್ನು (ರಾಸಾಯನಿಕ, ಜೈವಿಕ) ಬಳಸಬಾರದೆಂಬುದನ್ನು, ಹೀಗೆ ಹತ್ತು ಹಲವು ನೀತಿ ನಿಯಮಗಳನ್ನು ‘ಅಂತರರಾಷ್ಟ್ರೀಯ ಯುದ್ಧ ಕಾನೂನು’ ಹೇಳಿದೆ. ಇವೆಲ್ಲ ಕಾನೂನುಗಳು ಮುಖ್ಯವಾಗಿ ‘ಜಿನೀವಾ ಒಪ್ಪಂದ’ಗಳೆಂದೇ ಪ್ರಖ್ಯಾತವಾಗಿವೆ. ಈ ಕಾನೂನುಗಳ ಪಾಲನೆಯ ಜವಾಬ್ದಾರಿಯನ್ನು ಅಂತರರಾಷ್ಟ್ರೀಯ ರೆಡ್ಕ್ರಾಸ್ ಸಂಸ್ಥೆಗೆ ನೀಡಲಾಗಿದೆ. ದುರದೃಷ್ಟವಶಾತ್, ಕದನಗಳಲ್ಲಿ ಹಲವು ಬಾರಿ ಈ ನಿಯಮಗಳ ಸ್ಪಷ್ಟ ಉಲ್ಲಂಘನೆ ಆಗುತ್ತಲೇ ಇದೆ.

ಹೊನ್ನು, ಮಣ್ಣು, ಹೆಣ್ಣನ್ನು ಯುದ್ಧ ಕಾರಣಗಳಾಗಿ ಈ ಮೊದಲು ಉಲ್ಲೇಖಿಸಲಾಗುತ್ತಿತ್ತು. ಇಂದಿನ ಜಗತ್ತಿನಲ್ಲಿ ತೈಲ, ಖನಿಜ, ಅತಿಯಾದ ರಾಷ್ಟ್ರಪ್ರೇಮ,ಧರ್ಮ, ಅಸುರಕ್ಷತೆ – ಇವೆಲ್ಲವೂ ಯುದ್ಧಕ್ಕೆ ಕಾರಣಗಳಾಗಿವೆ. ಯುದ್ಧಗಳು ರಾಷ್ಟ್ರಗಳ ನಡುವೆ ಮಾತ್ರವಲ್ಲ, ಬಣಗಳ ನಡುವೆ, ಬಂಡುಕೋರರ ನಡುವೆ, ಗೆರಿಲ್ಲಾ ಮತ್ತು ಛದ್ಮ ಸಂಘರ್ಷಗಳ ರೂಪದಲ್ಲೂ ನಡೆಯುತ್ತಿವೆ. ರಣರಂಗ ಎಂಬ ಕಲ್ಪನೆಯೇ ಈಗ ಬದಲಾಗಿದ್ದು, ನಾಗರಿಕರ ವಾಸಸ್ಥಳಗಳು, ವಿದ್ಯುತ್ಕೇಂದ್ರಗಳು, ಸರ್ಕಾರಿ ಕಟ್ಟಡಗಳೇ ದಾಳಿಯ ಗುರಿಯಾಗುತ್ತಿವೆ. ಸೈಬರ್ ದಾಳಿ, ಮಾಹಿತಿ ಯುದ್ಧ ಹಾಗೂ ಆರ್ಥಿಕ ನಿರ್ಬಂಧಗಳು, ಆಯುಧವಿಲ್ಲದೇ ಹೆಚ್ಚು ಪರಿಣಾಮ ಬೀರುವ ಹೊಸ ಯುದ್ಧಗಳಾಗಿವೆ. ಯುದ್ಧವು ಬರೀ ಸಾವು ನೋವನ್ನಷ್ಟೇ ಅಲ್ಲ, ಲಕ್ಷಾಂತರ ಜನರನ್ನು ನಿರಾಶ್ರಿತರನ್ನಾಗಿ ಮಾಡುತ್ತದೆ. ಆರೋಗ್ಯ, ಶಿಕ್ಷಣ ಸೇರಿದಂತೆ ಮೂಲಸೌಕರ್ಯಗಳನ್ನು ನಾಶಮಾಡುತ್ತದೆ. ಯುದ್ಧೋತ್ತರ ಮಾನಸಿಕ ಆಘಾತಗಳು, ಬಡತನ, ಸಾಮಾಜಿಕ ವಿಭಜನೆಗಳು ತಲೆಮಾರುಗಳನ್ನು ಕಾಡುತ್ತವೆ. ಇತ್ತೀಚಿನ ಉದಾಹರಣೆಯನ್ನೇ ನೋಡುವುದಾದರೆ, 1.3 ಕೋಟಿ ಜನ ಸಿರಿಯಾದ ಯುದ್ಧದಲ್ಲಿ ನಿರಾಶ್ರಿತರಾದರು. ವಿಯೆಟ್ನಾಂ ಮತ್ತು ಬೋಸ್ನಿಯಾದ ಯುದ್ಧದ ನಂತರ ಲಕ್ಷಾಂತರ ಜನರು ಮಾನಸಿಕ ಕ್ಷೋಭೆಗೊಳಗಾದರು. ಇರಾಕ್ ಯುದ್ಧದ ಪರಿಣಾಮ ಆದ ಪರಿಸರ ಹಾನಿ ಇನ್ನೂ ಸರಿಯಾಗಿಲ್ಲ.

ಯುದ್ಧವನ್ನು ತಡೆಯಲು ಮೊದಲ ಹೆಜ್ಜೆ, ಹಿಂಸಾತ್ಮಕ ಮನೋಭಾವದಿಂದ ಹೊರಬರುವುದಾಗಿದೆ. ಮಹಾತ್ಮ ಗಾಂಧೀಜಿಯವರು ಹೇಳಿದಂತೆ, ‘ನಿಜವಾದ ಶಾಂತಿಯನ್ನು ಬೋಧಿಸಲು ಬಯಸಿದರೆ, ಮಕ್ಕಳ ಬಳಿಯಿಂದಲೇ ಆರಂಭಿಸಬೇಕು.’ ಜಗತ್ತಿನ ಪ್ರತಿಯೊಂದು ಮಗುವಿಗೂ ಶಾಂತಿಯ ಮೌಲ್ಯಗಳನ್ನು ಕಲಿಸುವುದು ಅಗತ್ಯ. ಶತಮಾನಗಳ ಹಿಂದೆ ಕಳಿಂಗ ಯುದ್ಧದ ಸಾವು ನೋವು ನೋಡಿ ಯುದ್ಧ ತ್ಯಜಿಸಿದ ಅಶೋಕ ಇಂದಿನ ನಾಯಕರಿಗೆ ಮಾದರಿ.

ಅಸಮಾನತೆ, ಪ್ರತ್ಯೇಕತೆ, ಸಂಪನ್ಮೂಲ ಕೊರತೆಯಂತಹ ಸಂಘರ್ಷದ ಮೂಲ ಕಾರಣಗಳನ್ನು ಪರಿಹರಿಸದೆ ಶಾಂತಿ ಸಾಧ್ಯವಿಲ್ಲ. ರಾಜತಾಂತ್ರಿಕ ಮಾತುಕತೆ, ಸಂವಾದ ಹಾಗೂ ಸಮನ್ವಯಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ.

1945ರಲ್ಲಿ ಜಗತ್ತಿನ ಶಾಂತಿ ಅಗತ್ಯಗಳಿಗೆ ತಕ್ಕಂತೆ ರಚನೆಯಾಗಿದ್ದ ವಿಶ್ವಸಂಸ್ಥೆ ನಿರೀಕ್ಷಿತ ಸುಧಾರಣೆ ಕಾಣದೇ ಸೊರಗುತ್ತಿದೆ. ಕೆಲವೇ ಪಟ್ಟಭದ್ರ ಹಿತಾಸಕ್ತಿಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಹಾಗಾಗಿ ವಿಶ್ವಸಂಸ್ಥೆಯನ್ನು ಬಲಪಡಿಸುವುದು ಇಂದಿನ ತುರ್ತು ಅಗತ್ಯ. ಭಾರತದಂತಹ ಪ್ರಭಾವಿ ರಾಷ್ಟ್ರಕ್ಕೆ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ನೀಡಬೇಕು. ವಿಟೊ ಅಧಿಕಾರವನ್ನು ಮರುಪರಿಶೀಲಿಸಬೇಕು. ಅಂತರರಾಷ್ಟ್ರೀಯ ನ್ಯಾಯಾಲಯ ಮತ್ತು ಅಂತರರಾಷ್ಟ್ರೀಯ ಕಾನೂನಿಗೆ ಹೆಚ್ಚಿನ ಗೌರವ ಮತ್ತು ಬಲ ನೀಡಬೇಕು. ಇದರಿಂದ ಯುದ್ಧವನ್ನು ವ್ಯಾಪಾರದ ಭಾಗವಾಗಿ ಬಳಸುತ್ತಿರುವ ದೇಶಗಳಿಗೆ ಜಾಗತಿಕ ಕಡಿವಾಣ ಬೀಳಬಹುದು.

ವಿಶ್ವ ನಾಯಕರು ತಮ್ಮ ಸ್ವಾರ್ಥವನ್ನು ಬದಿಗಿಟ್ಟು ಯುದ್ಧವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸದೆ ಹೋದರೆ, ಜಗತ್ತು ಹಿಂಸೆಯ ಕಾವಲಿಯಲ್ಲಿ ಬೇಯುವುದು ತಪ್ಪುವುದಿಲ್ಲ. ವಿನಾಶದ ಕಬಂಧಬಾಹುಗಳ ವ್ಯಾಪ್ತಿ ಎಲ್ಲಿಯವರೆಗೆ ಇರಬಹುದು ಎನ್ನುವುದನ್ನು ಊಹಿಸುವುದೂ ಸಾಧ್ಯವಿಲ್ಲ.

ಲೇಖಕ: ಜಿನೀವಾದಲ್ಲಿನ ಭಾರತದ ಸ್ಥಾಯಿ ಮಿಷನ್ನಲ್ಲಿ ಭಾರತದ ರಾಜತಾಂತ್ರಿಕ ಪ್ರತಿನಿಧಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.