ಮಂಗಳವಾರ, ಮಾರ್ಚ್ 21, 2023
30 °C
ಕೋವಿಡ್ ಬಾಧೆಯ ಈ ಅವಧಿಯಲ್ಲಿ ನಾಯಿ ಕಡಿತದ ಪ್ರಕರಣಗಳ ಸಂಖ್ಯೆಯಲ್ಲಿ ಮೂರ್ನಾಲ್ಕು ಪಟ್ಟು ಏರಿಕೆಯಾಗಿದೆ

ರೇಬಿಸ್ ತಡೆ: ದಾರಿಯೇಕೆ ದುರ್ಗಮ?

ಡಾ. ಮುರಳೀಧರ ಕಿರಣಕೆರೆ Updated:

ಅಕ್ಷರ ಗಾತ್ರ : | |

Prajavani

ಆಸ್ಪತ್ರೆಯಲ್ಲಿ ನನ್ನೆದುರು ಕುಳಿತಿದ್ದ ಪರಿಚಯದ ಆ ವ್ಯಕ್ತಿ ಅಕ್ಷರಶಃ ನಡುಗುತ್ತಿದ್ದರು. ಅಂಗಡಿಯಿಂದ ದಿನಸಿ ತರುವಾಗ ನಾಯಿಯೊಂದು ಅವರ ಕಾಲಿಗೆ ಬಾಯಿ ಹಾಕಿತ್ತು. ಹಲ್ಲುಗಳು ಪ್ಯಾಂಟಿಗೆ ನಾಟಿದ್ದರಿಂದ ತೀರಾ ಆಳದ ಗಾಯವಾಗಿರದಿದ್ದರೂ ಸ್ವಲ್ಪ ರಕ್ತವಂತೂ ಹರಿದಿತ್ತು. ಬೀದಿನಾಯಿಯಾದ್ದರಿಂದ ತಕ್ಷಣ ರೇಬಿಸ್ ಲಸಿಕೆ ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದ್ದೆ. ಆದರೆ ಹಿಂದಿನ ದಿನವಷ್ಟೇ ಕೊರೊನಾ ವ್ಯಾಕ್ಸಿನ್ ತೆಗೆದುಕೊಂಡಿದ್ದ ಅವರು ಈಗ ಮತ್ತೊಂದು ಲಸಿಕೆ ತೆಗೆದುಕೊಳ್ಳುವ ಬಗ್ಗೆ ಗೊಂದಲ, ಭಯದಲ್ಲಿದ್ದರು!

ರೇಬಿಸ್ ನಿಯಂತ್ರಣ ಸಂಸ್ಥೆಯ ಮಾರ್ಗಸೂಚಿ ಯಂತೆ ಎರಡೂ ಲಸಿಕೆಗಳನ್ನು ಒಟ್ಟಿಗೆ ತೆಗೆದುಕೊಳ್ಳಲು ಏನೂ ಸಮಸ್ಯೆಯಿಲ್ಲವೆಂದು ಮನವರಿಕೆ ಮಾಡಿಕೊಟ್ಟ ನಂತರವೇ ಅವರು ತುಸು ನಿರಾಳರಾದದ್ದು.

ಕೇಂದ್ರ ನರವ್ಯೂಹವನ್ನು ಬಾಧಿಸುವ, ರೋಗಲಕ್ಷಣಗಳು ಕಾಣಿಸಿಕೊಂಡ ನಂತರ ಮರಣ ಸಾಧ್ಯತೆ ಹೆಚ್ಚಿರುವ ರೇಬಿಸ್ (ಹುಚ್ಚುನಾಯಿ ರೋಗ), ಪ್ರಾಣಿಜನ್ಯ ರೋಗಗಳಲ್ಲೇ ಅತಿ ಮಾರಕವಾದದ್ದು. ಮಾನವನನ್ನು ಸಾಮಾನ್ಯವಾಗಿ ಬಾಧಿಸುವ ಸೋಂಕು ರೋಗಗಳಲ್ಲಿ ಮೂರನೇ ಎರಡರಷ್ಟು ಕಾಯಿಲೆಗಳು ಬರುವುದು ಪ್ರಾಣಿ-ಪಕ್ಷಿಗಳಿಂದ!

ಸಾವಿರಾರು ವರ್ಷಗಳಿಂದ ಜನ-ಜಾನುವಾರುಗಳ ಜೀವಕ್ಕೆ ಕಂಟಕಕಾರಿಯಾಗಿರುವ ಈ ರೋಗಕ್ಕೆ ಕಾರಣ ಲಿಸ್ಸಾ ಎಂಬ ವೈರಾಣು. ಇದು ವನ್ಯಮೃಗಗಳಾದ ನರಿ, ತೋಳ ಸೇರಿದಂತೆ ನಾಯಿ, ಇಲಿ, ಹೆಗ್ಗಣಗಳಲ್ಲಿ ಸಾಮಾನ್ಯ. ದನ, ಎಮ್ಮೆ, ಕುರಿ, ಮೇಕೆ, ಬೆಕ್ಕು, ಕುದುರೆ ಒಳಗೊಂಡು ಬಿಸಿರಕ್ತದ ಯಾವುದೇ ಪ್ರಾಣಿಯನ್ನೂ ಕಾಯಿಲೆ ಬಾಧಿಸಬಹುದು. ಕೆಲವು ಜಾತಿಯ ಬಾವಲಿ ಗಳು ರೋಗ ಪ್ರಸಾರದಲ್ಲಿ ಪಾತ್ರ ವಹಿಸುತ್ತವೆ.

ಪ್ರತಿವರ್ಷ ವಿಶ್ವದಲ್ಲಿ 59 ಸಾವಿರಕ್ಕೂ ಅಧಿಕ ಮಂದಿ ರೇಬಿಸ್‍ಗೆ ಬಲಿಯಾಗುತ್ತಿದ್ದಾರೆ. ಇದರಲ್ಲಿ ಶೇ 99ರಷ್ಟು ಪ್ರಕರಣಗಳು ವರದಿಯಾಗುತ್ತಿರುವುದು ಏಷ್ಯಾ, ಆಫ್ರಿಕಾದ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ. ನಮ್ಮ ದೇಶದಲ್ಲೇ ಸಾವಿನ ಸಂಖ್ಯೆ ವರ್ಷಕ್ಕೆ ಇಪ್ಪತ್ತು ಸಾವಿರಕ್ಕೂ ಹೆಚ್ಚು. ಶೇ 97ರಷ್ಟು ಪ್ರಕರಣಗಳಿಗೆ ಕಾರಣ ನಾಯಿ ಕಡಿತದ ಮೂಲಕ ಶರೀರ ಸೇರುವ ವೈರಾಣುಗಳು.

ಕೋವಿಡ್ ಬಾಧೆಯ ಈ ಅವಧಿಯಲ್ಲಿ ನಾಯಿ ಕಡಿತದ ಪ್ರಕರಣಗಳ ಸಂಖ್ಯೆಯಲ್ಲಿ ಮೂರ್ನಾಲ್ಕು ಪಟ್ಟು ಏರಿಕೆಯಾಗಿದೆ. ಮುಚ್ಚಿರುವ ಶಾಲೆಗಳು, ಸಹಪಾಠಿಗಳೊಂದಿಗೆ ಒಡನಾಟ ಇಲ್ಲದಿರುವುದು, ಹೊರಾಂಗಣ ಆಟಕ್ಕಿಲ್ಲದ ಅವಕಾಶ, ತಿರುಗಾಟದ ಮೇಲಿನ ತಡೆಯಿಂದಾಗಿ ತೀವ್ರ ಒತ್ತಡದಲ್ಲಿರುವ ಮಕ್ಕಳು ದಿನದ ಬಹುಪಾಲು ಸಮಯವನ್ನು ಕಳೆಯುವುದು ಮನೆಯ ಮುದ್ದು ಪ್ರಾಣಿಗಳ ಜೊತೆಗೆ. ನಿರಂತರ ಆಟ, ಕೀಟಲೆ, ಹಿಂಸೆಯಿಂದ ಕೆರಳುವ ಶ್ವಾನಗಳು ಸ್ವರಕ್ಷಣೆಗಾಗಿ ಕಚ್ಚುತ್ತವೆ.

ಕುಟುಂಬದವರೆಲ್ಲಾ ಮನೆಯೊಳಗೆ ಬಂದಿಯಾಗಿರುವುದರಿಂದ ಉದ್ಭವವಾಗಿರುವ ಒತ್ತಡ, ಅಶಾಂತಿ, ಗಲಾಟೆಯಿಂದಾಗಿ ನಾಯಿಗಳ ಮಾನಸಿಕ ಸ್ಥಿತಿಯೂ ಏರುಪೇರಾಗುವುದು ಸಹಜ. ಅದರಲ್ಲೂ ನಾಯಿಗಳು ಮರಿ ಹಾಕಿರುವಾಗ, ಆಹಾರ ತಿನ್ನುವಾಗ, ಗಾಯ, ನೋವು, ಅನಾರೋಗ್ಯದಂತಹ ಸಮಸ್ಯೆಗಳಿಂದ ಬಳಲುವಾಗ ಸಿಟ್ಟಾಗುವುದು ಶೀಘ್ರ. ಇದರ ಅರಿವಿಲ್ಲದ ಮಕ್ಕಳು ಮುಟ್ಟಲು ಹೋದಾಗ ಕೆರಳಿ ಕಚ್ಚುವುದು ಜಾಸ್ತಿ. ಸಾಮಾನ್ಯವಾಗಿ ನಾಯಿ ಕಡಿತಕ್ಕೆ ಒಳಗಾಗುವವರಲ್ಲಿ ಶೇ 40ರಷ್ಟು 15 ವರ್ಷದೊಳಗಿನ ಮಕ್ಕಳೆ. ನಮ್ಮ ದೇಶವೊಂದರಲ್ಲೇ ವರ್ಷಕ್ಕೆ ಇಂತಹ 1.7 ಕೋಟಿ ಘಟನೆಗಳು ವರದಿಯಾಗುತ್ತಿವೆ.

ನಾಯಿಗಳಿಂದ ಬರಬಹುದಾದ ರೇಬಿಸ್ ಕಾಯಿಲೆ ಯನ್ನು 2030ರೊಳಗೆ ಸಂಪೂರ್ಣ ನಿರ್ಮೂಲನೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಕರೆಯಿತ್ತಿದೆ. ರೋಗಪತ್ತೆಯಲ್ಲಿನ ತೊಡಕುಗಳು, ಜಾಗೃತಿಯ ಕೊರತೆ, ನಿರ್ಲಕ್ಷ್ಯ, ರೇಬಿಸ್ ಇಮ್ಯುನೊಗ್ಲೋಬುಲಿನ್ ಚುಚ್ಚುಮದ್ದು ಹಾಗೂ ಲಸಿಕೆಗಳ ದುಬಾರಿ ದರ, ಅನಿಯಂತ್ರಿತ ಬೀದಿ ನಾಯಿಗಳ ಸಂಖ್ಯೆ, ಇಚ್ಛಾ ಶಕ್ತಿಯ ಅಭಾವದಿಂದಾಗಿ ಗುರಿಯತ್ತಲಿನ ನಡೆ ಮಾತ್ರ ಕುಂಟುತ್ತಾ ಸಾಗಿದೆ.

ಶ್ವಾನಗಳಿಗೆ ನಿಯಮಿತವಾಗಿ ರೇಬಿಸ್ ಲಸಿಕೆ ಹಾಕಿಸುವುದು ಮಾಲೀಕರ ಗುರುತರ ಜವಾಬ್ದಾರಿ. ಜೊತೆಗೆ ಬೀದಿನಾಯಿಗಳ ನಿಯಂತ್ರಣವೂ ಪ್ರಮುಖ ಹೆಜ್ಜೆ. ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಯ ಮೂಲಕ ಸಂಖ್ಯೆಯನ್ನು ನಿಯಂತ್ರಿಸುವುದರ ಜೊತೆಗೆ ಸಾಮೂಹಿಕ ಲಸಿಕಾ ಕಾರ್ಯಕ್ರಮಗಳು ನಿರಂತವಾಗಿ ನಡೆದಾಗ ಮಾತ್ರ ಯಶಸ್ಸು ಸಾಧ್ಯ.

ವನ್ಯಮೃಗಗಳಿಂದಲೂ ರೋಗಾಣುಗಳು ಹರಡುವ ಸಂಭವವಿರುವುದರಿಂದ ಅಮೆರಿಕ, ಯುರೋಪಿನ ಕೆಲವು ದೇಶಗಳಲ್ಲಿ ಬಳಕೆಯಲ್ಲಿರುವ ಆಹಾರದ ಜೊತೆಯಲ್ಲಿ ಬಾಯಿ ಮೂಲಕ ಕೊಡಬಹುದಾದ ಲಸಿಕೆ ಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿ ಹೆಚ್ಚು ಪರಿಣಾಮಕಾರಿಯಾಗಿ ಪ್ರಯೋಗಿಸುವುದು ಇಂದಿನ ತುರ್ತು.

ಜುಲೈ 6ರಂದು ‘ವಿಶ್ವ ಪ್ರಾಣಿಜನ್ಯರೋಗ ದಿನ’ ವನ್ನು ಬೆರಳೆಣಿಕೆಯ ಜಾಲಗೋಷ್ಠಿಗಳ ಮೂಲಕ ತಣ್ಣಗೆ ಆಚರಿಸಲಾಯಿತು. ಇದು, 1885ರಲ್ಲಿ ಶ್ರೇಷ್ಠ ಸೂಕ್ಷ್ಮಾಣು ಶಾಸ್ತ್ರಜ್ಞ ಲೂಯಿ ಪ್ಯಾಸ್ಚರ್ ಆವಿಷ್ಕರಿಸಿದ ರೇಬಿಸ್ ಲಸಿಕೆಯ ಪ್ರಥಮ ಚುಚ್ಚುಮದ್ದನ್ನು ನೀಡಿದ ದಿವಸ. ಮನುಕುಲದ ಸಂರಕ್ಷಣೆಗೆ ಮಹತ್ತರ ಕೊಡುಗೆ ನೀಡಿದ ಈ ವಿಜ್ಞಾನಿಯ ಮರಣದ ದಿನ ಸೆಪ್ಟೆಂಬರ್ 28 ‘ವಿಶ್ವ ರೇಬಿಸ್ ದಿನ’ವಾಗಿ ಆಚರಣೆಯಲ್ಲಿದೆ. ಆದರೆ ಈ ಭೀಕರ ರೋಗದ ಬಗ್ಗೆ ತಿಳಿವಳಿಕೆ ಮೂಡಿಸುವ ಕಾರ್ಯ ಮಾತ್ರ ಈ ಎರಡು ದಿನಗಳಿಗೆ ಸೀಮಿತ!

ಲಸಿಕೆಯಿಂದ ಸುಲಭವಾಗಿ ತಡೆಗಟ್ಟಬಹುದಾದ ರೋಗವೊಂದು ಶತಮಾನಗಳಿಂದ ಸಹಸ್ರಾರು ಜನರನ್ನು ಬಲಿ ಪಡೆಯುತ್ತಲೇ ಸಾಗಿರುವುದು ನಿಜಕ್ಕೂ ದುರಂತ.

ಲೇಖಕ: ಮುಖ್ಯ ಪಶುವೈದ್ಯಾಧಿಕಾರಿ, ಬಾಳೆಬೈಲು, ತೀರ್ಥಹಳ್ಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.