ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಶಕ್ತಿ ಸಂರಕ್ಷಣೆ ಎಂಬ ಗುರುತರ ಹೊಣೆ

ಅತ್ಯಮೂಲ್ಯ ಶಕ್ತಿಯ ಸರಿಯಾದ ಬಳಕೆ, ಉಳಿತಾಯ ಮತ್ತು ಸಂರಕ್ಷಣೆ ಸರಿಯಾಗಿ ಆಗುತ್ತಿದೆಯೇ?
Last Updated 10 ಫೆಬ್ರುವರಿ 2020, 2:22 IST
ಅಕ್ಷರ ಗಾತ್ರ

ಈಗ ಜಗತ್ತು ನಡೆಯುತ್ತಿರುವುದೇ ಶಕ್ತಿಯ ಮೇಲೆ. ಯಂತ್ರಗಳ ಆಗಮನಕ್ಕೂ ಮುನ್ನ ಸ್ನಾಯುಬಲ, ಮೃಗಬಲವನ್ನೇ ಬಳಸಿ ಎಲ್ಲಾ ಕೆಲಸ ಮಾಡುತ್ತಿದ್ದೆವು. ‘ನಮ್ಮ ಕೆಲಸವನ್ನು ಯಂತ್ರಗಳಿಗೆ ವಹಿಸದೆ ನಾವೇ ಮಾಡಿಕೊಳ್ಳಬೇಕು’ ಎಂಬ ಗಾಂಧೀಜಿಯ ಮಾತಿನಲ್ಲಿ ಪೂರ್ಣ ಅರ್ಥವಿತ್ತು. ಎಲ್ಲರೂ ಕೈಯಾರೆ ಕೆಲಸ ಮಾಡುತ್ತಿದ್ದುದರಿಂದ ಆರ್ಥಿಕತೆ ಮತ್ತು ಆರೋಗ್ಯ ಈಗಿನದಕ್ಕಿಂತ ಚೆನ್ನಾಗಿಯೇ ಇದ್ದವು.

ಯಂತ್ರಗಳು ಕಾಲಿಟ್ಟ ನಂತರ ಬಹುಸಂಖ್ಯೆಯ ಜನ ಕೆಲಸ ಕಳೆದುಕೊಂಡು ಆರ್ಥಿಕತೆ ಕ್ಷೀಣಗೊಂಡಿತು. ಹೆಚ್ಚು ಹೆಚ್ಚು ಯಂತ್ರಗಳು ಬಂದಂತೆ ಅವುಗಳನ್ನು ಬಳಸಲು ಬೇಕಾದ ಶಕ್ತಿಯ ಅವಶ್ಯಕತೆ ಗಣನೀಯವಾಗಿ ಏರಿತು. ಮನೆಯ ಬಹುತೇಕ ವಸ್ತುಗಳ ನಿರ್ವಹಣೆಗೆ ವಿದ್ಯುಚ್ಛಕ್ತಿ ಬೇಕಾಯಿತು. ಮನೆಯ ಹೊರಗಿನ ಕೆಲಸ ಮಾಡಿಸಲು ಬೃಹತ್ ಯಂತ್ರಗಳು ಬಂದವು. ಅವು ನಡೆಯಲು ಇಂಧನಚಾಲಿತ ಶಕ್ತಿ ಬೇಕಾಯಿತು. ಮನುಷ್ಯ ಬಳಕೆಯ ಫ್ಯಾನ್, ಮಿಕ್ಸಿ, ಗೀಸರ್, ವಾಶಿಂಗ್ ಮಶೀನ್, ವ್ಯಾಕ್ಯೂಮ್ ಕ್ಲೀನರ್, ವಾಟರ್ ಪ್ಯೂರಿಫೈಯರ್, ಲಿಫ್ಟ್, ಹೇರ್ ಡ್ರೆಸ್ಸರ್, ಕಾರು, ಬಸ್ಸು, ರೈಲು, ವಿಮಾನ, ಅರ್ಥ್‌ ಮೂವರ್‌ಗಳು ತಮಗೆ ಹೊಂದುವ ಶಕ್ತಿಯನ್ನು ಬಳಸಿಕೊಂಡು ಕೆಲಸ ಮಾಡುವುದು ಪ್ರಾರಂಭವಾಯಿತು. ದಿನೇ ದಿನೇ ಶಕ್ತಿಗೆ ಬೇಡಿಕೆ ಹೆಚ್ಚಿತು.

ನಮಗೆ ಅತಿ ಹೆಚ್ಚು ಶಕ್ತಿ ದೊರೆಯುತ್ತಿರುವುದು ಕಲ್ಲಿದ್ದಲಿನಿಂದ. ಇನ್ನೂ ನೂರೈವತ್ತು ವರ್ಷಗಳಿಗಾಗುವಷ್ಟು ಕಲ್ಲಿದ್ದಲು ಸಂಪನ್ಮೂಲ ನಮ್ಮಲ್ಲಿದೆ. ಇದರ ನಿಕ್ಷೇಪಗಳು ಹೆಚ್ಚಾಗಿರುವುದು ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಛತ್ತೀಸಗಡ ರಾಜ್ಯಗಳ ದಟ್ಟ ಕಾನನಗಳಲ್ಲಿ. ಅಗೆಯಲು ಎಲ್ಲೇ ಕೈ ಹಾಕಿದರೂ ಹೆಕ್ಟೇರ್‌ಗಟ್ಟಲೆ ಕಾಡು ಬಲಿಯಾಗುತ್ತದೆ. ಸಿಗುವ ಕಲ್ಲಿದ್ದಲು ಕಳಪೆಯಾದ್ದರಿಂದ ಹೊಮ್ಮುವ ಶಕ್ತಿಯೂ ಕಡಿಮೆ ಮತ್ತು ಮಾಲಿನ್ಯ ಹೆಚ್ಚು. ಜಗತ್ತಿನ ಮೊದಲ ಹತ್ತು ಅತ್ಯಂತ ಮಲಿನ ನಗರಗಳ ಪಟ್ಟಿಯಲ್ಲಿ ನಮ್ಮ ಏಳು ನಗರಗಳಿವೆ. ಹತ್ತರಲ್ಲಿ ನಾಲ್ಕು ಜನರಿಗೆ ಉಸಿರಾಟದ ಸಮಸ್ಯೆ ಇದೆ. ಜನರ ಒಟ್ಟಾಯುಷ್ಯ ಎರಡೂವರೆ ವರ್ಷ ಕಡಿಮೆಯಾಗಿದೆ.

ಭಾರತವು ವಿಶ್ವವನ್ನು ಕೊಳೆ ಮಾಡುತ್ತಿದೆ ಎಂಬ ಅಮೆರಿಕದ ಆರೋಪಕ್ಕೆ ಬಲ ಬರುತ್ತಿದೆ. ಸ್ವಾತಂತ್ರ್ಯದ 7 ದಶಕಗಳು ಕಳೆದರೂ ಹಳ್ಳಿಗಳ ಸಂಪೂರ್ಣ ವಿದ್ಯುದೀಕರಣ ಸಾಧ್ಯವಾಗಿಲ್ಲ. ರೈತರಿಗೆ ಬೇಕಾದಷ್ಟು ವಿದ್ಯುತ್ ಸಿಗುತ್ತಿಲ್ಲ. ಉದ್ಯಮಗಳು ಶಕ್ತಿಗಾಗಿ ಹೆಚ್ಚಿನ ಬೆಲೆ ತೆರುತ್ತಿವೆ. ಕಲ್ಲಿದ್ದಲು ಉರಿದಷ್ಟೂ ಬೆಳವಣಿಗೆ ವೃದ್ಧಿಯಾಗುತ್ತದೆ ಎನ್ನುತ್ತಾರೆ ಆರ್ಥಿಕ ತಜ್ಞರು. ಇನ್ನು ಮೂರು ವರ್ಷಗಳಲ್ಲಿ ಶಕ್ತಿಯ ಬೇಡಿಕೆ ಈಗಿರುವುದಕ್ಕಿಂತ ಎರಡು ಪಟ್ಟು ಜಾಸ್ತಿಯಾಗುತ್ತದೆ ಎನ್ನುವ ಯೋಜನಾ ತಜ್ಞರು, ಶಕ್ತಿಯ ಪರ್ಯಾಯ ಮೂಲಗಳ ಬಳಕೆಗೆ ಭಾರಿ ಯೋಜನೆಗಳನ್ನು ರೂಪಿಸುತ್ತಿದ್ದಾರೆ.

ಗಾಳಿ ಮತ್ತು ಸೌರಶಕ್ತಿ ಮಾತ್ರ ಪರಿಸರಸ್ನೇಹಿಯಾಗಿದ್ದು ಉಳಿದವು ಭೂಮಿಯ ಬಿಸಿಯನ್ನು ಏರಿಸಿ ಬಿಸಿ ಪ್ರಳಯಕ್ಕೆ ಕುಮ್ಮಕ್ಕು ನೀಡುತ್ತವೆ. ಆದರೂ ವಿಧಿಯಿಲ್ಲದೆ ಅವುಗಳನ್ನೇ ಆಶ್ರಯಿಸುವುದು ಅನಿವಾರ್ಯವಾಗಿದೆ. ಈಗ ಶಕ್ತಿಯು ಕಲ್ಲಿದ್ದಲು, ಡೀಸೆಲ್, ಪೆಟ್ರೋಲ್, ಗ್ಯಾಸ್‍, ಜಲವಿದ್ಯುತ್ ರೂಪದಲ್ಲಿ ನಮಗೆ ಸಿಗುತ್ತಿದೆ. ಉಳಿದದ್ದು ನವೀಕರಿಸಬಹುದಾದ ಮೂಲಗಳಿಂದ ದೊರೆಯುತ್ತಿದೆ. ಇದು ಸಾಲದು. ಹಾಗೆಂದು ಹೊಸ ಜಲ ವಿದ್ಯುತ್ ಯೋಜನೆಗಳಿಗೆ ಕೈ ಹಾಕಿದರೆ, ಇರುವ ಅಷ್ಟಿಷ್ಟು ಕಾಡೂ ಧ್ವಂಸವಾಗಿ ಮತ್ತಷ್ಟು ಹಸಿರು ನಾಶವಾಗುತ್ತದೆ. ಜಲಾಶಯಗಳಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿರುವುದರಿಂದ ಮೊದಲಿನಷ್ಟು ವಿದ್ಯುಚ್ಛಕ್ತಿ ಉತ್ಪಾದನೆಯಾಗುತ್ತಿಲ್ಲ. ಅಣುವಿದ್ಯುತ್ ಸ್ಥಾವರಗಳು ವಿಕಿರಣ ಸೂಸಿ ಆರೋಗ್ಯ ಕೆಡಿಸುತ್ತಿವೆ. ಉಷ್ಣ ಸ್ಥಾವರಗಳು ಅಗಾಧ ನೀರು ಬೇಡುತ್ತಿವೆ.

ಸೌರಶಕ್ತಿಯನ್ನು ಪಡೆಯುವ ಅವಕಾಶ ಆಕಾಶದಷ್ಟು ದೊಡ್ಡದಾಗಿದೆ. 2022ರ ವೇಳೆಗೆ ಸೂರ್ಯ, ಗಾಳಿ, ಬಯೋಮಾಸ್‍ ಹಾಗೂ ನೀರಿನಿಂದ ಒಟ್ಟು 175 ಗಿಗಾವಾಟ್ ಶಕ್ತಿ ಉತ್ಪಾದಿಸುವ ಕಾರ್ಯ ಪ್ರಾರಂಭ
ವಾಗಿದೆಯಾದರೂ ತುರ್ತು ಅಗತ್ಯಗಳಿರುವಾಗ ಅದನ್ನು ಕಾಯುತ್ತ ಕೂರಲಾಗದು. ತ್ವರಿತ ಅಭಿವೃದ್ಧಿ ಸಾಧಿಸಲು, ಉರಿದು ಹೊಗೆಯೆಬ್ಬಿಸುವ ಪಳೆಯುಳಿಕೆ ಇಂಧನಗಳನ್ನೇ ಸಾಧ್ಯವಾದಷ್ಟು ಉತ್ಪಾದಿಸುವುದು, ಇಲ್ಲವಾದರೆ ಆಮದು ಮಾಡಿಕೊಳ್ಳುವುದು ನಡೆದಿದೆ. ಇರುವ ಬೇಡಿಕೆ ಪೂರೈಸಲು ಶೇ 83ರಷ್ಟು ಶಕ್ತಿಮೂಲಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಉತ್ಪಾದಿಸಿದ ಶಕ್ತಿಯನ್ನು ಸಾಗಿಸುವ ಮಾರ್ಗದಲ್ಲಿ ಶೇ 20ರಷ್ಟನ್ನು ಕಳೆದುಕೊಳ್ಳುತ್ತಿದ್ದೇವೆ. ಹಾಗೂ ಹೀಗೂ ಮಾಡಿ, ಲಭ್ಯವಿರುವ ಎಲ್ಲಾ ಮೂಲಗಳಿಂದ ಶಕ್ತಿಯನ್ನು ಪಡೆದು ದೇಶ ನಡೆಸುತ್ತಿದ್ದೇವೆ. ಆದರೆ ಶಕ್ತಿಯ ಸರಿಯಾದ ಬಳಕೆ, ಉಳಿತಾಯ ಮತ್ತು ಸಂರಕ್ಷಣೆ ಸರಿಯಾಗಿ ಆಗುತ್ತಿದೆಯೇ?

ಪರಿಸರಕ್ಕೆ ಹಾನಿಯಾಗದಂತೆ ಮಳೆಗಾಲದಲ್ಲಿ ನೀರು, ಗಾಳಿಯಿಂದ, ಬೇಸಿಗೆಯಲ್ಲಿ ಬಿಸಿಲು, ಜೈವಿಕ ಅನಿಲದಿಂದ ಯಥೇಚ್ಛವಾಗಿ ವಿದ್ಯುತ್ ಉತ್ಪಾದನೆ ಸಾಧ್ಯವಿದೆ. ತ್ಯಾಜ್ಯದಿಂದಲೂ ಇಂಧನ ಪಡೆಯುವ ತಂತ್ರಜ್ಞಾನ ಅಭಿವೃದ್ಧಿಗೊಂಡಿದೆ. ಎಲ್ಲೆಂದರಲ್ಲಿಗೆ ಮಡಚಿ ಒಯ್ಯಬಹುದಾದ ಸ್ಥಾವರಗಳೂ ಇರುವುದ
ರಿಂದ ಬಿಸಿಲಿರುವಲ್ಲೆಲ್ಲಾ ವಿದ್ಯುತ್ ಉತ್ಪಾದನೆಗೆ ಅವಕಾಶವಿದೆ. ವರ್ಷಕ್ಕೆ ಎಷ್ಟು ಬಾರಿ ಸಾಧ್ಯವೋ ಅಷ್ಟು ಸಲ ಮನೆಯ ದೀಪಗಳನ್ನೆಲ್ಲಾ ಕೆಲವು ಗಂಟೆಗಳ ಕಾಲ ಆರಿಸಿ ‘ಬತ್ತೀಬಂದ್’ ಆಚರಿಸಿ, ಶಕ್ತಿ ಸಂರಕ್ಷಣೆಯ ಕೆಲಸಕ್ಕೆ ನಾವೆಲ್ಲರೂ ಕೈ ಜೋಡಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT