ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಫಲವೆಂಬುದು ಪೂಜೆಗಲ್ಲ, ಪೂಜಿಸಲು!

ಆಹಾರದ ಪೋಲನ್ನು ಯಾವುದೇ ಸಂಸ್ಕೃತಿ ಪುರಸ್ಕರಿಸುವುದಿಲ್ಲ
Last Updated 23 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಊಹಿಸದ ಖಂಡಾಂತರ ಸೋಂಕು ಕೊರೊನಾ, ಹಸಿರುಗ್ರಹ ಭೂಮಿಯನ್ನು ತೀವ್ರ ಕಂಗೆಡಿಸಿದೆ. ಮದ್ದು ಎಂತೋ ಏನೋ ಎನ್ನುವ ಅನಿಶ್ಚಿತತೆಯಲ್ಲಿ ಗಾಯದ ಮೇಲಿನ ಬರೆಯಂತೆ ಉತ್ತರ ಕರ್ನಾಟಕ ನೆರೆಯಿಂದ ತತ್ತರಿಸಿದೆ. ಹಸುಗೂಸುಗಳು ಒಂದಾದರೂ ಬಿಸ್ಕತ್ತು ಕೊಡಿ ಎನ್ನುವಾಗ, ಮಂದಿ ಸಂಗ್ರಹಿಸಿದ್ದ ದವಸ ತೊಯ್ದು ಮರುಗುವಾಗ, ಹಗ್ಗ ಹಿಡಿದು ಸಹಾಯಕ್ಕಾಗಿ ಹಪಹಪಿಸುವಾಗ ಎಂಥವರ ಕರುಳೂ ಹಿಂಡುತ್ತದೆ. ಕೊರೊನಾ ಕರಾಳರೂಪಿಯಾಗಿರುವುದರ ನಡುವೆಯೂ ಮನುಜ ಮತಕ್ಕೆ, ವಿಶ್ವ ಪಥಕ್ಕೆ ನಮ್ಮನ್ನು ಒಂದು ಹೆಜ್ಜೆಯಷ್ಟಾದರೂ ದೂಡಿದೆ ಎಂಬುದೂ ನಿಜ.

ಪರಿಕಲ್ಪನಾತ್ಮಕ ಆಚಾರ, ವಿಚಾರ, ವಿಧಿ ವಿಧಾನಗಳನ್ನು ತೊರೆಯಬೇಕೆಂದೇನಿಲ್ಲ. ಏಕೆಂದರೆ ಅವುಗಳಲ್ಲಿ ಸಾರ್ವಕಾಲಿಕ ಸತ್ಯ ಅಂತರ್ಗತವಾಗಿರುತ್ತದೆ. ಅಮಾವಾಸ್ಯೆಯಂದು ಚಂದ್ರನ ಪ್ರಕಾಶಿತ ಗೋಳಾರ್ಧ ನಮಗೆ ಕಾಣದ್ದರಿಂದ ಕತ್ತಲೆ, ಅಂದು ಎಚ್ಚರದಿಂದ ನಡೆಯಬೇಕೆನ್ನುವುದರಲ್ಲಿ ಅಥವಾ ಹುಳ, ಹುಪ್ಪಟೆ ಮಲ, ಮೂತ್ರ ವಿಸರ್ಜಿಸಬಹುದಾದ್ದರಿಂದ ತೊಲೆ ಕೆಳಗೆ ಮಲಗದಿರು ಎನ್ನುವುದರಲ್ಲಿ ಮೌಢ್ಯವಿಲ್ಲ, ಸಲಹೆಯಿದೆ. ಆದರೆ ಎಲ್ಲ ಆಚರಣೆಗಳಿಗೂ ಎಗ್ಗಿಲ್ಲದೆ ‘ಸಮರ್ಥನೆ’ಗಳನ್ನು ಪೋಣಿಸಿ ವಿಜ್ಞಾನ, ವೈಚಾರಿಕತೆಯನ್ನು ಅಪವ್ಯಾಖ್ಯಾನಿಸುವುದೂ ಮೌಢ್ಯವಾಗುತ್ತದೆ.

ಚಿಂತನೆ, ವಿವೇಕ, ವಿಮರ್ಶೆ ದಿಟ ತಲುಪಿಸುವ ವಾಹಕಗಳು. ಪ್ರಶ್ನಿಸಿಯೇ ಒಪ್ಪುವ ಮನೋವೃತ್ತಿಯು ಕಂದಾಚಾರಗಳಿಗೆ ಕಡಿವಾಣ ಹಾಕುತ್ತದೆ. ವೃಥಾ ಸಮ್ಮತಿಸುವ ಸಂಗತಿಗಳು ಅರ್ಥಹೀನ ಶಕುನಗಳಿಗೆ ಶರಣಾಗಿಸುತ್ತವೆ. ಪ್ರಕೃತಿಗೂ ಮೀರಿದ ಪವಾಡವಿಲ್ಲ. ಅಂಜದೆ ಅದರ ವಿಸ್ಮಯಗಳನ್ನು ಆಹ್ಲಾದಿಸುವುದೇ ಜಾಣತನ. ಬಹುಶಃ ಜನಸಾಂದ್ರತೆ ಕಡಿಮೆಯಿದ್ದ ಕಾರಣ ಒಂದು ಕಾಲದಲ್ಲಿ ಬೀಜಪ್ರಸರಣಕ್ಕಾಗಿ ಹಣ್ಣು, ಹಂಪಲು ನಿವಾಳಿಸೆಸೆಯುವ ಸುಲಭೋಪಾಯ ರೂಢಿಗತವಾಯಿತೇನೋ. ಆದರೆ ಇಂದು ಬದುಕಿನ ಶೈಲಿ ಭಿನ್ನವಾಗಿದೆ. ಜನವಸತಿಯು ನೆಲ, ಕೃಷಿ ಭೂಮಿಯನ್ನು ಮೊಟಕಾಗಿಸಿದೆ. ಹಾಗಾಗಿ, ಬೆಳೆದದ್ದು ಗುಲಗಂಜಿಯಷ್ಟೂ ತ್ಯಾಜ್ಯವಾಗದ ಎಚ್ಚರ ಅನಿವಾರ್ಯ ಮತ್ತು ಜರೂರು. ಈಗಾಗಲೇ ಉಲ್ಬಣಗೊಂಡಿರುವ ತ್ಯಾಜ್ಯ ವಿಲೇವಾರಿ ಸವಾಲು ಇನ್ನಷ್ಟು ಕೊಬ್ಬಬಾರದು. ಅದೆಷ್ಟೋ ಪ್ರಾಣಿಗಳು ಸಂಪೂರ್ಣವಾಗಿ ಹಣ್ಣು, ಹಂಪಲು ಅವಲಂಬಿಗಳು. ಅವಕ್ಕೂ ನಾವು ಪರೋಕ್ಷವಾಗಿ ವಂಚಿಸಿದಂತಾಗುತ್ತದೆ. ಚಪ್ಪರಗಳಿಗೆ, ತೋರಣಗಳಿಗೆ ಕಂದು, ಗರಿಗಳನ್ನು ಇತಿಮಿತಿಯಿಲ್ಲದೆ ಬಳಸಿದರೆ ಆಯಾ ಫಸಲಿನ ಇಳುವರಿಗೆ ಕಂಟಕವೆನ್ನುವುದು ಚಿಣ್ಣರಿಗೂ ಅರ್ಥವಾಗುವ ಕೃಷಿ ಪಾಠ. ವನ ಸಂವೃದ್ಧಿಗೆ ನಮ್ಮ ಪೂರ್ವಜರು ತೊಟ್ಟ ಸಂಕಲ್ಪ, ಹಾಕಿಕೊಂಡ ಯೋಜನೆ, ಅನುಸರಿಸಿದ ಮಾರ್ಗ ಎಲ್ಲವೂ ಹಿರಿಮೆಯದು.

ವಿಷವೃಕ್ಷವಾದರೂ ಕಡಿಯಬಾರದೆನ್ನುವ ಇರಾದೆ ಭಾರತೀಯ ಪರಂಪರೆಯಲ್ಲಿದೆ. ಹಿರಿಯರು ತಮ್ಮ ಕಿಸೆಗಳಲ್ಲಿ ಹೊಂಗೆ, ಸೀಬೆ, ಪರಂಗಿ, ಹುಣಿಸೆ, ಹಲಸು ಬೀಜಗಳನ್ನು ತುಂಬಿಕೊಂಡು ಹೋದಲ್ಲೆಲ್ಲ ವಿತರಿಸುತ್ತಿದ್ದರು, ತಾವೇ ಬಿತ್ತುತ್ತಿದ್ದರು. ತೈತ್ತಿರೀಯ ಉಪನಿಷತ್ತಿನಲ್ಲಿ ‘ಅನ್ನಮ್ ನ ನಿಂದ್ಯತ್, ತದ್ವ್ರತಮ್’ ಎಂಬ ಕಿವಿಮಾತಿದೆ. ಅಂದರೆ, ಅನ್ನವನ್ನು ವ್ಯರ್ಥಮಾಡತಕ್ಕದ್ದಲ್ಲ, ಅದುವೇ ವ್ರತ. ಪೂಜೆ, ಪುನಸ್ಕಾರ, ಹೋಮ, ಹವನ, ಅರ್ಚನೆಯ ಹೆಸರಿನಲ್ಲಿ ಅಮೂಲ್ಯ ಆಹಾರ ವಸ್ತುಗಳನ್ನು ವ್ಯರ್ಥಗೊಳಿಸುವುದು ಸರಿಯಲ್ಲ. ಆಹಾರವೇ ದೈವ. ಆಹಾರವನ್ನು ಗೌರವಿಸಿದರೆ ಬದುಕನ್ನು ಗೌರವಿಸಿದಂತೆ. ಆಹಾರದ ಪೋಲನ್ನು ಜಗತ್ತಿನ ಯಾವುದೇ ಸಂಸ್ಕೃತಿ ಪುರಸ್ಕರಿಸುವುದಿಲ್ಲ. ಅದು ಆಧ್ಯಾತ್ಮಿಕವಾಗಿ, ನೈತಿಕವಾಗಿ, ಸಾಮಾಜಿಕವಾಗಿ ಗಂಭೀರ ಪ್ರಮಾದ.

ವಿಶ್ವಮಾನ್ಯ ವಿಚಾರವಾದಿ ಬಸವಣ್ಣನವರು ಹನ್ನೆರಡನೆಯ ಶತಮಾನದಲ್ಲೇ ‘ಹಸಿದವ ಬಂದರೆ ನಡೆ ನಡೆ ಎನ್ನುವ, ಉಣ್ಣದ ಮೂರ್ತಿಗೆ ಬೋನವನಿಕ್ಕುವ’ ವರ್ತನೆಯನ್ನು ಖಂಡಿಸಿದರು. ದವಸ ಧಾನ್ಯಾದಿಗಳ ಫಸಲು ಪಡೆಯಲು ರೈತರು ಪಡುವ ಪರಿಶ್ರಮ ಅಗಾಧ. ಉತ್ತುವುದೇನು, ಬಿತ್ತುವುದೇನು, ಗೊಬ್ಬರ ಹಾಕುವುದೇನು, ಕಾಯುವುದೇನು, ಮಳೆ ಯಾವಾಗ ಸುರಿದೀತೊ ಎಂದು ಮುಗಿಲು ದಿಟ್ಟಿಸುವುದರಿಂದ ಹಿಡಿದು ಬೆಳೆದ ಬೆಳೆಗೆ ಖರ್ಚು ತೂಗಿ ಒಂದಷ್ಟು ಕಾಸಾದರೂ ಕೈಹತ್ತುವುದೋ ಎಂದು ಹಂಬಲಿಸುವವರಿಗೆ ರೈತಬಂಧುವಿನ ಆತಂಕ ತಪ್ಪಿದ್ದಲ್ಲ.

ಒಂದೊಂದು ಹಣ್ಣು, ಕಾಯಿಯೂ ಪೌಷ್ಟಿಕಾಂಶಗಳ ಬುತ್ತಿ, ಬಗೆ ಬಗೆ ಔಷಧಾಂಶಗಳ ಆಗರ. ಬೂದುಗುಂಬಳ, ನಿಂಬೆ ಉಳಿಸೋಣ. ಹುಳಿ, ದಂರೋಟ್ ಆಗಿಯೊ, ವ್ಯಂಜನ, ಷರಬತ್ತಾಗಿಯೊ ಮೇಜಿಗೆ ಬರಬೇಕಾದ ಇವು ಒಡೆದು ಜರ್ಜರಿತವಾಗಿ ದ್ವಾರಗಳಲ್ಲಿ ಇಟ್ಟಾಡುವುದು ಬೇಡ, ವಾಹನಗಳ ಗಾಲಿಗಳ ಕೆಳಗೆ ಅಪ್ಪಚ್ಚಿಯಾಗುವುದು ಬೇಡ. ಆಹಾರ ಪದಾರ್ಥಗಳು ಒಗೆತ, ತುಳಿತಕ್ಕೊಳಗಾಗುವುದಕ್ಕಿಂತ ವಿಪರ್ಯಾಸವಿಲ್ಲ. ಯಂತ್ರ ಅಥವಾ ವಾಹನಗಳ ನಿಜವಾದ ಆರಾಧನೆಯೆಂದರೆ ಅವನ್ನು ಶುಚಿಯಾಗಿ ಇಟ್ಟುಕೊಳ್ಳುವುದು, ಇನ್ನಷ್ಟು ಪರಿಸರಸ್ನೇಹಿಯಾಗಿ ನಿರ್ವಹಿಸುವುದು. ದುಡಿಸಿಕೊಳ್ಳಬೇಕಾದದ್ದು ಇಂಧನ ತೈಲವನ್ನು, ಎಂಜಿನ್ನನ್ನಲ್ಲ ಎಂಬ ಮಾತಿದೆ. ಒಂದರ್ಥದಲ್ಲಿ ಫಲಗಳನ್ನು ಪೂಜೆಗೆ ಬಳಸುವುದಲ್ಲ, ಫಲಗಳನ್ನೇ ಪೂಜಿಸುವುದು!

ಭಾರತದಲ್ಲಿ ಬಹುಪ್ರಕಾರಗಳಲ್ಲಿ ಅಭಿವೃದ್ಧಿ ಯೋಜನೆಗಳಿವೆ. ಆದಾಗ್ಯೂ ಜೋಪಡಿಗಳಲ್ಲಿ, ಪಾದಚಾರಿ ಮಾರ್ಗಗಳಲ್ಲಿ ಒಂದು ಹೊತ್ತೂ ಊಟ ಲಭಿಸದೆ ಪರಿತಪಿಸುವವರಿದ್ದಾರೆ. ಅವರ ಬವಣೆಯನ್ನು ಅಲ್ಪಮಟ್ಟಿಗಾದರೂ ನೀಗುವ ಸಾಮರ್ಥ್ಯ ಬಹುಜನರ ಸಾಮಾನ್ಯ ಪ್ರಜ್ಞೆಗೆ ನಿಸ್ಸಂದೇಹವಾಗಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT