‘ವಚನ ದರ್ಶನ’ (ಪ್ರ: ಅಯೋಧ್ಯಾ ಪಬ್ಲಿಕೇಷನ್ಸ್) ಕೃತಿಯು ವಚನಗಳನ್ನು ಉಪನಿಷತ್ತಿಗೆ ಅಧೀನಗೊಳಿಸುವ ಪ್ರಯತ್ನದ ಮೂಲಕ, ಕನ್ನಡದ ವಚನಗಳ ಸ್ವೋಪಜ್ಞ ಜ್ಞಾನಕ್ಕೆ ಅವಮಾನ ಮಾಡುವ ಉದ್ದೇಶ ಹೊಂದಿದೆ. ಕೃತಿಯಲ್ಲಿರುವ ತಪ್ಪುಗಳದ್ದೇ ಒಂದು ತೂಕವಾದರೆ, ಅದರ ತಾತ್ವಿಕ ವೈಫಲ್ಯ ಮತ್ತು ಅದರ ಹಿಂದಿರುವ ಕಪಟತನದ ನಡೆಗಳದ್ದು ಇನ್ನೊಂದು ತೂಕ.

ಪುಸ್ತಕದ ಮುನ್ನುಡಿಯಲ್ಲಿ ಮಲ್ಲೇಪುರಂ ಜಿ. ವೆಂಕಟೇಶ ಅವರು, ಎಂ.ಆರ್. ಶ್ರೀನಿವಾಸಮೂರ್ತಿ (ಎಂಆರ್ಶ್ರೀ) ಅವರ ‘ವಚನ ಧರ್ಮಸಾರ’ ಕೃತಿಯನ್ನು ಉದ್ಧರಿಸುತ್ತ ಹೀಗೆ ಬರೆಯುತ್ತಾರೆ: ‘ವಚನ ಸಾಹಿತ್ಯ ಉಪನಿಷತ್ತುಗಳ ತಿಳಿಬೆಳಕಿನಲ್ಲಿ ಬೆಳೆದು ಬಂದಿದೆಯೆಂದೂ, ವಚನಗಳು ಕನ್ನಡದ ಉಪನಿಷತ್ತುಗಳೆಂದೂ ಎಂಆರ್ಶ್ರೀ ಅವರು ಆ ಕೃತಿಯಲ್ಲಿ ಸಾಧಾರವಾಗಿಯೂ ಯುಕ್ತಿ- ಯುಕ್ತವಾಗಿಯೂ ಪ್ರತಿಪಾದಿಸಿದ್ದರು’. ಇದು ಸತ್ಯದೂರವಾದ ಅಭಿಪ್ರಾಯವಾಗಿದೆ. ಎಂಆರ್ಶ್ರೀ ಅವರು ತಮ್ಮ ಗ್ರಂಥದಲ್ಲಿ ಎಲ್ಲಿಯೂ ಹಾಗೆ ಹೇಳಿಯೇ ಇಲ್ಲ. ಮೈಸೂರು ವಿಶ್ವವಿದ್ಯಾಲಯವು 1942ರಲ್ಲಿ ಪ್ರಕಟಿಸಿದ ‘ವಚನ ಧರ್ಮಸಾರ’ ಕೃತಿಯಲ್ಲಿ ಎಂಆರ್ಶ್ರೀ ಅವರು, ‘ವಚನ ಸಾಹಿತ್ಯ ಎರವಲು ತಂದದ್ದಲ್ಲ; ಅದು ಕನ್ನಡದ ಸ್ವಾರ್ಜಿತ ಸ್ವತ್ತು. ವಚನಕಾರರು ಸಂಸ್ಕೃತದ ಆಚಾರ್ಯರಲ್ಲ; ಅವರು ಅಚ್ಚಗನ್ನಡದ ಬೇಸಾಯಗಾರರು’
ಎಂದಿದ್ದರು.

‘ವಚನ ದರ್ಶನ’ ಕೃತಿಯ ಒಂದಂಶದ ಗುರಿಯೇ ವಚನಗಳನ್ನೂ ಶರಣರನ್ನೂ ಅಪಮೌಲ್ಯಗೊಳಿಸುವುದು ಹಾಗೂ ಅವರ ಜ್ಞಾನವೆಲ್ಲವೂ ಉಪನಿಷತ್ತುಗಳಿಂದ ಬಂದದ್ದು ಎಂಬಂತೆ ಚಿತ್ರಿಸುವುದು. ಇದು ಮನದಟ್ಟಾಗಬೇಕೆಂದರೆ, ಕೆರೂರು ಚರಂತಿಮಠದ ಶಿವಕುಮಾರ ಶಿವಾಚಾರ್ಯರು ಬರೆದ ಲೇಖನವನ್ನೊಮ್ಮೆ ಓದಬೇಕು. ಉಪನಿಷತ್ತುಗಳು ಮತ್ತು ಉಪನಿಷತ್ಕಾರರ ಅಮೋಘ ವೈಭವೀಕರಣದ ಮೂಲಕ, ವಚನಗಳು ಮತ್ತು ವಚನಕಾರರನ್ನು ಗೌಣಗೊಳಿಸುವ ಕೆಲಸವನ್ನು ಅವರು ಮಾಡಿದ್ದಾರೆ.

ತಮ್ಮ ವಾದಕ್ಕೆ ಅವರು ಕೊಡುವ ಕಾರಣವೆಂದರೆ, ಬೆರಳೆಣಿಕೆಯಷ್ಟು ವಚನಗಳಲ್ಲಿ ಕಂಡುಬರುವ ಉಪನಿಷತ್ ಉಕ್ತಿಗಳು. ಆದರೆ, ಸುಮಾರು 20 ಸಾವಿರಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿರುವ ವಚನಗಳಲ್ಲಿ ಅಂಥ ವಚನಗಳ ಸಂಖ್ಯೆ ಶೇ 4ರಷ್ಟು ಮಾತ್ರ ಎನ್ನುವುದನ್ನು ಗಮನಿಸಬೇಕು. ಮಿಕ್ಕ ಶೇ 96ರಷ್ಟು ವಚನಗಳು ಏನು ಹೇಳುತ್ತವೆ ಎನ್ನುವ ಪರಿಗಣನೆಯನ್ನು ‘ವಚನ ದರ್ಶನ’ ಕೃತಿ ಯಾಕೆ ಮಾಡುವುದಿಲ್ಲ?

‘ವಚನ ದರ್ಶನ’ ಕೃತಿಯ ಪ್ರವರ್ತಕರಿಗೆ ಒಂದು ಸರಳ ತಾರ್ಕಿಕ ಪ್ರಶ್ನೆ: ಕೇವಲ ಶೇ 4ರಷ್ಟು ವಚನಗಳಲ್ಲಿ ಉಪನಿಷತ್ ಉಕ್ತಿಗಳಿವೆ ಎಂಬ ಆಧಾರದಲ್ಲಿ ವಚನಗಳು ಉಪನಿಷತ್ತಿಗೆ ಅಧೀನ, ವಚನಕಾರರು ಉಪನಿಷತ್ಕಾರರನ್ನು ಅನುಕರಿಸಿದ್ದಾರೆ ಎನ್ನುವುದಾದರೆ, ಅದೇ ತರ್ಕದ ಆಧಾರದಲ್ಲಿ ಭಗವದ್ಗೀತೆಯನ್ನು ಉಪನಿಷತ್ತಿಗೆ ಅಧೀನ ಎಂದೂ, ಭಗವದ್ಗೀತೆಯ ಕರ್ತೃವು ಉಪನಿಷತ್ಕಾರರನ್ನು ಅನುಕರಿಸಿದ್ದಾನೆ ಎಂದೂ ಹೇಳಬಹುದೆ?

‘ವಚನ ದರ್ಶನ’ ಕೃತಿಯ ಲೇಖನವೊಂದರಲ್ಲಿ ರಾಜಾರಾಂ ಹೆಗಡೆ ಅವರು, ‘ವಚನಗಳ ವಾರಸುದಾರರು ಎಂದು ಕರೆದುಕೊಳ್ಳುವವರಲ್ಲಿ ಅವನ್ನು ಅರ್ಥೈಸುವ
ಹೊಸ ಅಸಾಂಪ್ರದಾಯಿಕ ಜಾಡೊಂದು ಇತ್ತೀಚೆಗೆ ತೆರೆಯಿತು’ (ಪುಟ: 19) ಎಂದು ಹೇಳಿದ್ದಾರೆ. ವಚನಗಳ ಪ್ರವೇಶಿಕೆಗೆ ಪೂರ್ವ ಪೀಠಿಕೆಯೊಂದರ ಅಗತ್ಯ ಇದೆ ಎನ್ನುತ್ತಾ, ಅದನ್ನು ಕ್ರೈಸ್ತ ಧರ್ಮದ ಕ್ಯಾಥೊಲಿಕ್- ಪ್ರಾಟೆಸ್ಟೆಂಟ್ ಹೋರಾಟಗಳ ನೆಲಗಟ್ಟಿನಲ್ಲಿ ವಿವರಿಸುತ್ತಾರೆ.

ಇಂದಿನ ಕೆಲವು ಚಿಂತಕರಿಗೇನೋ ಕ್ಯಾಥೊಲಿಕ್- ಪ್ರಾಟೆಸ್ಟೆಂಟ್ ತಿಕ್ಕಾಟಗಳ ಬೌದ್ಧಿಕ ಸಂದರ್ಭದ ಹಿನ್ನೆಲೆ ಇರಬಹುದು. ಆದರೆ, ಬಸವಣ್ಣನವರು ಅಗ್ರಹಾರ ಸಂಸ್ಕೃತಿಯನ್ನು ‘ನಾನೊಲ್ಲೆ’ ಎಂದು ಹೊರಬಂದು ಕೂಡಲಸಂಗಮಕ್ಕೆ ನಡೆದು ಸಂಗಮನಾಥನ ಎದುರು ಪ್ರಾಣಲಿಂಗಧರರಾದವರು. ಅವರಿಗೆ ಯಾವ ಕ್ಯಾಥೊಲಿಕ್- ಪ್ರಾಟೆಸ್ಟೆಂಟ್ ಹಿನ್ನೆಲೆ ಇತ್ತು? ಅವರಷ್ಟೇ ಅಲ್ಲ, ಬಿಜ್ಜಳ ರಾಜನ ಆಸ್ಥಾನದಲ್ಲಿ ಕರಣಿಕರಾಗಿದ್ದ ಸೊಡ್ಡಳ ಬಾಚರಸರು ಮತ್ತು ಶಾಂತರಸರೂ ಪ್ರಾಣಲಿಂಗಧರರಾದರಲ್ಲ, ಅವರಿಗೆಲ್ಲ ಯಾವ ಕ್ಯಾಥೊಲಿಕ್- ಪ್ರಾಟೆಸ್ಟೆಂಟ್ ಹಿನ್ನೆಲೆಯಿತ್ತು? ಹೆಗಡೆ ಅವರು ಮೊದಲು ಇಂಥ ಪ್ರಶ್ನೆಗಳಿಗೆ ಉತ್ತರ
ಕಂಡುಕೊಳ್ಳಲಿ.

ಅಲ್ಲಮಪ್ರಭು ಅವರು, ‘ಅರಿದೆವರಿದೆವೆಂಬಿರಿ, ಅರಿದ ಪರಿಯೆಂತು ಹೇಳಿರೆ? ಅರಿದವರು ಅರಿದೆವೆಂಬರೆ? ಅರಿಯಬಾರದ ಘನವನರಿದು, ಅರಿಯದಂತಿಪ್ಪರು ಗುಹೇಶ್ವರಾ’ ಎನ್ನುತ್ತಾರೆ. ಅಂಥ ‘ಅರಿವಿನ ಅರಿವು’ ಈ ‘ವಚನ ದರ್ಶನ’ ಪುಸ್ತಕದ ಪ್ರಕಟಣೆಯಲ್ಲಿ ಭಾಗಿಯಾದ ಸಮಸ್ತರಿಗೂ ಆಗಲಿ. ಆ ಮೂಲಕ, ಸಮಾಜದ
ಸಾಮರಸ್ಯ, ಸ್ವಾಸ್ಥ್ಯವನ್ನು ಕದಡುವ ಕುಟಿಲ ಯೋಜನೆಗಳು ನಿಲ್ಲಲಿ.

ಲೇಖಕ: ಪ್ರಾಚೀನ ಇತಿಹಾಸ, ಶಾಸನ ಕ್ಷೇತ್ರದ
ಸ್ವತಂತ್ರ ಸಂಶೋಧಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.