ಶುಕ್ರವಾರ, ಜುಲೈ 1, 2022
27 °C
ಪರ್ಸ್‌ನಿಂದ ಕಳವಾಗುತ್ತದೆ ಎಂದು ಎಚ್ಚರದಿಂದ ಇರುತ್ತಿದ್ದ ಜನ, ಈಗ ತಲೆಕೆಡಿಸಿಕೊಳ್ಳಬೇಕಾದ್ದು ತಮ್ಮ ಸ್ಮಾರ್ಟ್ ಫೋನ್‌ಗಳಲ್ಲಿರುವ ಪಾಸ್‍ವರ್ಡ್, ಯುಪಿಐ ಪಿನ್‍ಗಳ ಬಗ್ಗೆ

ಇ- ಮೋಸದ ಈ ಜಗತ್ತು

ಡಾ. ಕೆ.ಎಸ್.ಪವಿತ್ರ Updated:

ಅಕ್ಷರ ಗಾತ್ರ : | |

Prajavani

ಪ್ರತಿದಿನ ಬೇಡದ ಎಷ್ಟು ಕರೆಗಳಿಗೆ ನೀವು ಉತ್ತರಿಸು ತ್ತೀರಿ?! ಎಷ್ಟು ಬಾರಿ ಒಟಿಪಿ- ಯುಪಿಐ ಪಿನ್ ಕೊಡಬೇಡಿ ಎಂಬ ಬ್ಯಾಂಕುಗಳ ಸಂದೇಶಗಳನ್ನು ಎಚ್ಚರದಿಂದ ಗಮನಿಸುತ್ತೀರಿ? ಈ ಪ್ರಶ್ನೆಗಳನ್ನು ಕೇಳಿಕೊಳ್ಳಲೇಬೇಕಾದ ಸಮಯವೀಗ ಬಂದಿದೆ. ಇ-ಮೋಸ, ಬ್ಯಾಂಕಿಂಗ್ ಮೋಸಗಳು ಎಷ್ಟು ಸಾಮಾನ್ಯ ವೆಂದರೆ, ಇಂದು ಯಾರಿಗೂ ಅವು ಅಚ್ಚರಿಯನ್ನುಂಟು ಮಾಡುವುದಿಲ್ಲ.

ಕಳೆದ ಒಂದು ವರ್ಷದಲ್ಲಿ ಪ್ರತಿದಿನಕ್ಕೆ 229ರಂತೆ ಇ-ಮೋಸಗಳು, ಇ-ಕಳವಿನಿಂದ ಜನರು ಸುಮಾರು ಒಂದೂವರೆ ಲಕ್ಷ ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಅದರಲ್ಲಿ ಕಳೆದುಕೊಂಡವರಿಗೆ ಮರಳಿ ದೊರಕಿರುವುದು ಕೇವಲ ಶೇ 1 ಅಷ್ಟೆ! ಜಾಗತಿಕವಾಗಿ ನೋಡಿದರೆ, ಭಾರತೀಯರು ಹೀಗೆ ಮೋಸ ಹೋಗುವುದರಲ್ಲಿ ಬಲು ಮುಂದೆ. ಅದರರ್ಥ ಮೋಸ ಮಾಡುವವರೂ ಇಲ್ಲಿ ಹೆಚ್ಚು ಎಂದೇ. ಪರ್ಸ್‌ನಿಂದ ಕಳವಾಗುತ್ತದೆ ಎಂದು ಎಚ್ಚರದಿಂದ ಇರುತ್ತಿದ್ದ ಜನ, ಈಗ ತಲೆಕೆಡಿಸಿಕೊಳ್ಳಬೇಕಾದ್ದು ತಮ್ಮ ಸ್ಮಾರ್ಟ್ ಫೋನ್‌ಗಳಲ್ಲಿರುವ ಪಾಸ್‍ವರ್ಡ್, ಯುಪಿಐ ಪಿನ್‍ಗಳ ಬಗ್ಗೆ!

ಇ-ಮೋಸ ಈಗ ವೈವಿಧ್ಯಮಯ ಬೇರೆ. ‘ಯಾವುದೋ ವ್ಯಕ್ತಿ ಬ್ಯಾಂಕಿನಲ್ಲಿ ಎಷ್ಟೋ ದುಡ್ಡಿಟ್ಟು ಸತ್ತಿದ್ದಾನೆ. ನನಗೆ ಅದು ದೊರಕಿದೆ, ಹಾಗಾಗಿ ನಿಮ್ಮ ಬ್ಯಾಂಕ್ ಅಕೌಂಟ್ ವಿವರ ನೀಡಿದರೆ ಅದಕ್ಕೆ ವರ್ಗಾಯಿಸಿ ನಾವಿಬ್ಬರೂ ಲಾಭ ಪಡೆಯಬಹುದು’ ಎಂಬ ಸಂದೇಶ ನಿಮ್ಮ ಇ-ಮೇಲ್‍ಗೆ ಮತ್ತೆ ಮತ್ತೆ ಬರ ಬಹುದು. ಫೇಸ್‍ಬುಕ್‍ನಲ್ಲಿ ನಿಮ್ಮ ಅಕೌಂಟ್ ಹ್ಯಾಕ್ ಮಾಡಿ, ನಿಮ್ಮ ಸ್ನೇಹಿತರಿಂದ ದುಡ್ಡು ಕೀಳಬಹುದು, ನೀವು ಖರೀದಿಸಿದ ಪುಸ್ತಕದ ಬದಲು ಬೇರೆ ಪುಸ್ತಕ ನಿಮಗೆ ಬಂದು, ನೀವು ಹಿಂತಿರುಗಿಸಲು ಕರೆ ಮಾಡಿದರೆ, ಮಾತನಾಡುತ್ತಾ ಹಲವು ವಿವರ ಕೇಳಿ, ಕ್ಷಣಮಾತ್ರದಲ್ಲಿ ನಿಮ್ಮ ಅಕೌಂಟಿನಿಂದ ದುಡ್ಡು ಮಾಯವಾಗಬಹುದು. ಒಂದೇ ಎರಡೇ, ಕೊನೆಗೆ ನಿಜವಾದ ಬ್ಯಾಂಕಿನಿಂದ ವಿವರ ಕೇಳುವ ಕರೆ ಬಂತೆಂದರೂ ಜನ ಮಾತನಾಡಲೇ ಹೆದರುವಷ್ಟು ಅಸುರಕ್ಷಿತ ಈ ಜಗತ್ತು!

ಇ-ಮೋಸಗಳನ್ನು ಮಾಡುವವರು ಸಾಮಾನ್ಯವಾಗಿ ಒಳ್ಳೆಯ ಶಿಕ್ಷಣವಿರುವ, ಬುದ್ಧಿವಂತ, ಆದರೆ ನಿರುದ್ಯೋಗಿಗಳಾದ ಯುವಕರು. ಸುಲಭವಾಗಿ ದೊರಕುವ ಹಣ, ಮೋಸ ಹೋಗುವವರ ಮನಸ್ಸನ್ನು ಅರಿಯುವ ಜಾಣತನ ಅವರನ್ನು ಆ ದಾರಿಯಲ್ಲಿ ಮುನ್ನಡೆಯುವಂತೆ ಪ್ರೇರೇಪಿಸುತ್ತವೆ. ಆನ್‍ಲೈನ್‍ನಲ್ಲಿ ವ್ಯಕ್ತಿಯನ್ನು ಭೇಟಿ ಮಾಡಬೇಕಾದ ಅವಶ್ಯಕತೆ ಇರದಿರುವುದು, ಧ್ವನಿಯ ಏರಿಳಿತಗಳ ಮೂಲಕವೇ ನಂಬಿಕೆ-ವಿಶ್ವಾಸ ಹುಟ್ಟಿಸಬಹುದಾದ ಅವಕಾಶವು ಇ-ಮೋಸವನ್ನು ಸುಲಭವಾಗಿಸುತ್ತವೆ.

ಮೋಸ ಹೋಗುವವನ ಮನಃಸ್ಥಿತಿಯ ಬಗ್ಗೆ ಮನೋವಿಜ್ಞಾನ ಹೇಳುವುದೇನು? ಬ್ಯಾಂಕುಗಳು, ಮಾರಾಟ ಕಂಪನಿಗಳು ಮತ್ತೆ ಮತ್ತೆ ಸಂದೇಶ ಕಳುಹಿಸಿ ಎಚ್ಚರಿಸಿದರೂ ಜನ ಅದನ್ನು ಅಲಕ್ಷಿಸಿ ಮೋಸ ಹೋಗುವುದೇಕೆ? ಇದಕ್ಕೆ ಹಲವು ಉತ್ತರಗಳಿವೆ. ಯಾವುದೇ ಕಾರ್ಯವನ್ನು ಮಾಡುವಾಗ ಅದನ್ನು ಸಾವಧಾನವಾಗಿ ಮಾಡಿದಷ್ಟೂ ನಾವು ಎಚ್ಚರದಿಂದ ಮಾಡುವ ಸಾಧ್ಯತೆ ಹೆಚ್ಚು. ಆದರೆ ಇಂದು ನಮಗ್ಯಾರಿಗೂ ಸಮಯವಿಲ್ಲ. ಗೂಗಲ್ ಪೇ- ಫೋನ್ ಪೇ ಉಪಯೋಗಿಸುವಾಗ, ನೀಡುವ ಸೂಚನೆಗಳಲ್ಲಿ ಪ್ರಮುಖವಾದದ್ದು ‘ಬಿಡುವಿಲ್ಲದಿರುವಾಗ, ನೀವು ಮತ್ತೊಂದು ಕೆಲಸ ಮಾಡುತ್ತಿರುವಾಗ ಇದನ್ನು ಹಣ ನೀಡಲು ಉಪಯೋಗಿಸಬೇಡಿ’. ಆದರೆ ಓಡಾಡುತ್ತಲೇ, ಮಾತನಾಡುತ್ತಲೇ ಗೂಗಲ್- ಫೋನ್ ಪೇ ಮೂಲಕ ಪಾವತಿ ಮಾಡುವವರು ಅದೆಷ್ಟು ಜನ! ಒಂಟಿತನ, ಸಾಮಾಜಿಕವಾಗಿ ಬೆರೆಯದಿರುವುದು ನಮ್ಮನ್ನು ಅಂತರ್ಜಾಲಕ್ಕೆ ಮತ್ತಷ್ಟು ಅಂಟಿಕೊಳ್ಳುವಂತೆ ಮಾಡುತ್ತವೆ. ಮೋಸ ಹೋಗುವ ಸಾಧ್ಯತೆ ಹೆಚ್ಚಿಸುತ್ತವೆ.

ಇವುಗಳಲ್ಲದೆ ಭಾರತೀಯರಲ್ಲಿ ಹೆಚ್ಚು ಮೋಸ ಹೋಗಲು ಕಾರಣವಾಗುವ ಮತ್ತೊಂದು ಅಂಶವೂ ಇದೆ. ಅದೆಂದರೆ ‘ಏ ಪರವಾಗಿಲ್ಲ, ಏನೂ ಆಗೋಲ್ಲ’ ಎಂಬ ಉಡಾಫೆಯ ಧೋರಣೆ. ಹಾಗಾಗಿ ತಮ್ಮ ಗುರುತು- ಇ-ಮೇಲ್- ಬ್ಯಾಂಕ್ ಖಾತೆಗಳ ಪಾಸ್‌ವರ್ಡ್‌ಗಳನ್ನು ಮುಕ್ತವಾಗಿ ಎಲ್ಲೆಂದರಲ್ಲಿ ಬಳಸುವುದು ಸರ್ವೇ ಸಾಮಾನ್ಯ. ಹಾಗೆಯೇ ಯಾವುದೇ ಸಂದೇಶವು ಸರ್ಕಾರ-ತೆರಿಗೆ ಇಲಾಖೆ- ‍ಪೊಲೀಸ್‌- ಬ್ಯಾಂಕ್‍ಗಳಿಂದ ಎಂದಾಕ್ಷಣ ಹಿಂದೆ ಮುಂದೆ ನೋಡದೆ ಮಾಹಿತಿ ನೀಡುವುದು ಕಂಡುಬರುತ್ತದೆ.

ಮೋಸ ಹೋದ ಬಹಳಷ್ಟು ಜನ ಆ ಕ್ಷಣದಲ್ಲಿ ಅನುಭವಿಸುವ ಹತಾಶೆ ಎಷ್ಟು ತೀವ್ರವೆಂದರೆ, ದೂರು ನೀಡಲೂ ಬಹು ಜನ ಮುಂದಾಗುವುದಿಲ್ಲ. ಇ-ಮೋಸ ತಡೆಯುವ ಉಪಾಯಗಳನ್ನು ನಾವು ಇಂದು ಕಲಿಯಲೇಬೇಕಾದ ಹೊತ್ತು. ಏನು ಮಾಡಬೇಕು? ನಮ್ಮ ಪ್ರತಿಕ್ರಿಯೆಗಳನ್ನು ನಾವು ರೂಪಿಸಿಕೊಳ್ಳಬೇಕು. ದಾರಿಯಲ್ಲಿ ಅಪರಿಚಿತರೊಡನೆ ಮಾತನಾಡದಿರುವುದು, ಪರಿಚಯವಿಲ್ಲದವರಿಗೆ ಬಾಗಿಲು ತೆರೆಯದಿರುವುದು, ಸಹಪ್ರಯಾಣಿಕನೊಡನೆ ಎಲ್ಲವನ್ನೂ ಹೇಳಿಕೊಳ್ಳದಿರುವುದು ಇವು ನಮ್ಮ ಸುರಕ್ಷತೆಯ ಅಂಗವಾಗಿ ಕಲಿತಿರುವ ಅಂಶಗಳಷ್ಟೆ. ಈ ಕೌಶಲಗಳೇ ಇಂದು ಇ-ಜಗತ್ತಿಗೂ ಅನ್ವಯಿಸಲ್ಪಡಬೇಕು. ತತ್‍ಕ್ಷಣ ಪ್ರತಿಕ್ರಿಯಿಸುವ, ಹಣ ವರ್ಗಾವಣೆ ಮಾಡುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು. ಈ ತಕ್ಷಣ ‘ಕೊಳ್ಳಬೇಕು’ ಎನಿಸಿದರೆ, ಕೆಲ ಗಂಟೆಗಳ ಕಾಲವಾ ದರೂ ಮುಂದೆ ಹಾಕಲು ಪ್ರಯತ್ನಿಸಬೇಕು.

ಡಿಜಿಟಲ್ ಜಗತ್ತು ಡಿಜಿಟಲ್ ಮೋಸಗಳನ್ನು ಅನಿ ವಾರ್ಯವಾಗಿ ಹೊಂದಿರುತ್ತದೆ ಎಂಬ ತಿಳಿವಿನಿಂದ, ಎಚ್ಚರದಿಂದ ಮಿದುಳು-ಮನಸ್ಸು ಮತ್ತು ಸ್ವೈಪ್ ಮಾಡುವ ಬೆರಳು ವರ್ತಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.