ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿಭಾಷಾ ಸೂತ್ರದ ಕೆಲವು ವಾಸ್ತವಾಂಶ

ಹಿಂದಿಯೇತರ ಭಾಷೆಗಳವರಿಗೆ, ಅದರಲ್ಲೂ ದಕ್ಷಿಣದವರಿಗೆ ಹಿಂದಿಯ ಬಗ್ಗೆ ಹೇವರಿಕೆ ಶುರುವಾಗಲು ಕಾರಣ ಬೇರೆಯದೇ ಇದೆ
Last Updated 10 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

‘ಹಿಂದಿ ಹೇರಿಕೆಯು ರಾಜಕೀಯ ಪಕ್ಷಗಳು ಹುಟ್ಟು ಹಾಕಿದ ಸಮಸ್ಯೆಯಲ್ಲ, ಸಂವಿಧಾನವೇ ಹುಟ್ಟುಹಾಕಿದ ಸಮಸ್ಯೆ’ ಎಂಬ ಎಸ್.ಎಂ. ಜಾಮದಾರ ಅವರ ಲೇಖನವು (ಪ್ರ.ವಾ., ಸೆ. 9) ಸಮಸ್ಯೆಯ ಸಂಪೂರ್ಣ ಸ್ವರೂಪವನ್ನು ಮುಂದಿಟ್ಟಿಲ್ಲ. ಹಿಂದಿಯು ಆಡಳಿತ ಭಾಷೆಯಾಗಿರತಕ್ಕದ್ದು ಎಂದು ಸಂವಿಧಾನವು ಹೇಳಲು ಕಾರಣವಾದ ಹಿನ್ನೆಲೆ ಮತ್ತು ಆಗಿನ ರಾಷ್ಟ್ರ ನಾಯಕರ ಆಲೋಚನೆಗಳನ್ನೂ ವಿಶದಪಡಿಸಬೇಕಾಗಿತ್ತು.

ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಯಾವ ಯುಗದಲ್ಲಿ ಭಾರತದಲ್ಲಿ ಒಂದೇ ಭಾಷೆ ಇತ್ತು ಎಂದು ಅವರು ಎತ್ತಿರುವ ಪ್ರಶ್ನೆ ಸಕಾರಣವಾಗಿದೆ. ಅವರು ಹೇಳಿದಂತೆ ಸಹಸ್ರಾರು ವರ್ಷಗಳಿಂದಲೂ ಯಾವ ಆಳ್ವಿಕೆಯಲ್ಲೂ ದೇಶದಲ್ಲಿ ಒಂದೇ ಭಾಷೆ ಇರಲೇ ಇಲ್ಲ. ಕಾರಣ, ಒಂದು ಆಡಳಿತದ ಕೆಳಗೆ ಭಾರತ ಎಂದೂ ಬಂದಿರಲೇ ಇಲ್ಲ. ಆದರೂ ವೈವಿಧ್ಯಗಳ ಹೊರತಾಗಿಯೂ ಒಟ್ಟಾರೆ ಸಾಂಸ್ಕೃತಿಕ ಏಕತೆ ದೇಶದಲ್ಲಿ ನೆಲೆಸಿತ್ತು. ಸಾಂಸ್ಕೃತಿಕ ಏಕತೆಗೆ ಒಂದೇ ಭಾಷೆ ಇರಬೇಕೆಂದೇನಿಲ್ಲ.

ಬ್ರಿಟಿಷರ ಕಾಲದಲ್ಲಿ ಮಾತ್ರ ದೇಶವು ಒಂದು ಆಳ್ವಿಕೆಯ ಕೆಳಗೆ ಬಂದಾಗ, ಇಡೀ ದೇಶವನ್ನು ಒಂದು ಆಡಳಿತ ಸೂತ್ರದಲ್ಲಿ ಬಂಧಿಸಿಟ್ಟುಕೊಳ್ಳಲು ಅವರಿಗೆ ಒಂದು ಸಾಮಾನ್ಯವಾದ ಭಾಷೆ ಬೇಕಾಗಿತ್ತು. ಅದಕ್ಕೆ ಅವರು ತಮ್ಮ ಭಾಷೆಯಾದ ಇಂಗ್ಲಿಷ್‌ ಅನ್ನೇ ಅಳವಡಿಸಿಕೊಂಡರು ಮತ್ತು ತಮ್ಮ ಆಡಳಿತ ನಡೆಸಲು ಬೇಕಾಗಿದ್ದ ದೇಶೀಯ ಸಿಬ್ಬಂದಿಯೆಲ್ಲ ಅಗತ್ಯವಿರುವಷ್ಟು ಇಂಗ್ಲಿಷ್ ಶಿಕ್ಷಣ ಹೊಂದಿರುವುದನ್ನು ‘ಕಡ್ಡಾಯ ಇಂಗ್ಲಿಷ್ ಶಿಕ್ಷಣ’ದ ಮೂಲಕ ಆಗುಮಾಡಿಕೊಂಡರು.

ಆಗ ಜನಸಾಮಾನ್ಯರು ಆಡಳಿತದಲ್ಲಿ ಪಾಲ್ಗೊಳ್ಳಲು ಸಾಧ್ಯವೇ ಇರುತ್ತಿರಲಿಲ್ಲ. ಅದರ ಪ್ರಸಕ್ತಿ ಬಂದದ್ದು ಸ್ವಾತಂತ್ರ್ಯಾನಂತರದಲ್ಲಿ ಜನಪ್ರತಿನಿಧಿಗಳು ಕೇಂದ್ರ ಮತ್ತು ರಾಜ್ಯಗಳ ಶಾಸನಸಭೆಗಳಲ್ಲಿ ಆಡಳಿತ ದಲ್ಲಿ ಪಾಲ್ಗೊಳ್ಳಬೇಕಾಗುತ್ತದೆ ಎಂಬ ಪರಿಸ್ಥಿತಿ ಉಂಟಾದಾಗ. ಇದನ್ನು ಮುಂಚೆಯೇ ಆಲೋಚಿಸಿ ಗಾಂಧೀಜಿಯೂ ಒಳಗೊಂಡಂತೆ ನಮ್ಮ ರಾಷ್ಟ್ರೀಯ ನಾಯಕರು, ಆಡಳಿತದಲ್ಲಿ ಜನಸಾಮಾನ್ಯರು ಪಾಲ್ಗೊಂಡು ಅವರಿಗೂ ಸರ್ಕಾರದ ಆಡಳಿತ ನಿಯಮಗಳು, ಆದೇಶಗಳು ಗೊತ್ತಾಗಬೇಕಾಗುತ್ತದೆ, ಶಾಸನಸಭೆಗಳಲ್ಲಿ ಚರ್ಚೆಗೆ ವಿದೇಶಿ ಭಾಷೆಯಾದ ಇಂಗ್ಲಿಷ್ ಜೊತೆಗೆ ದೇಶೀಯ ಭಾಷೆಯೊಂದು ಇರಬೇಕಾಗುತ್ತದೆ ಎಂಬುದನ್ನು ಅಂದಾಜಿಸಿದ್ದರು.

ಒಂದು ವೇಳೆ ಇಂಗ್ಲಿಷ್‌ ಅನ್ನೇ ಎಲ್ಲರೂ ಬಳಸುವ ಪರಿಸ್ಥಿತಿ ಇದ್ದಿದ್ದರೆ ದೇಶಭಾಷೆಯ ಅಗತ್ಯವಿರಲಿಲ್ಲ. ಆಗ ಅವರ ಕಣ್ಣಿಗೆ ಬಿದ್ದದ್ದು ಹಿಂದಿ. ಅದಕ್ಕೆ ಕಾರಣ ಸ್ಪಷ್ಟವೇ ಇದೆ. ಜಾಮದಾರ ಅವರು ಹೇಳಿದಂತೆ ಕೇವಲ ಶೇ 34ರಷ್ಟು ಜನರ ಮಾತೃಭಾಷೆಯಾಗಿರುವ ಹಿಂದಿಯು 29 ರಾಜ್ಯಗಳ ಪೈಕಿ 21 ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೆಚ್ಚು ಬಳಕೆಯಲ್ಲಿಲ್ಲ. ಆದರೆ, ಬಹುಶಃ ಪಶ್ಚಿಮ ಬಂಗಾಳವೊಂದನ್ನು ಹೊರತುಪಡಿಸಿದರೆ, ಉತ್ತರದ ರಾಜ್ಯಗಳವರಿಗೆಲ್ಲ ಹಿಂದಿಯ ಬಳಕೆ ಮತ್ತು ಅದರ ಜ್ಞಾನ, ಹಿಂದಿ ಭಾಷಿಕರ ಮತ್ತು ಹಿಂದಿಯ ಸಂಪರ್ಕ ಸಾಕಷ್ಟು ವ್ಯಾಪಕವಾಗಿಯೇ ಇತ್ತು ಮತ್ತು ಇದೆ.

ಈಗ್ಗೆ ಹತ್ತಿರ ಹತ್ತಿರ ಇನ್ನೂರು ವರ್ಷಗಳಿಂದ ಇಂಗ್ಲಿಷ್‌ ಅನ್ನು ಕಲಿಯುತ್ತಿದ್ದರೂ ಅದು ಇಂದಿಗೂ ಜನಸಾಮಾನ್ಯರಿಗೆ ಅರ್ಥವಾಗುವುದು, ಸಂವಹನ ಸಾಧ್ಯವಾಗುವುದು ಅಷ್ಟರಲ್ಲೇ ಇದೆ. ಸ್ವಾತಂತ್ರ್ಯಪೂರ್ವದಲ್ಲಿದ್ದ ಸ್ಥಿತಿಯೂ ಇದೇ ಆಗಿತ್ತು. ಅದಕ್ಕೆಂದೇ ಹಿಂದಿಯನ್ನು ಹೊರತುಪಡಿಸಿದರೆ ಬೇರಿನ್ನಾವ ಭಾಷೆಯನ್ನೂ ಇಂಗ್ಲಿಷ್‌ಗೆ ಪರ್ಯಾಯವಾಗಿಯಾಗಲೀ ಸಹವರ್ತಿಯಾಗಿ ಆಗಲೀ ಸಂಪರ್ಕಭಾಷೆಯಾಗಿ ತರಲು ಸಾಧ್ಯವಿಲ್ಲವೆಂದು ಅವರಿಗೆ ಅನ್ನಿಸಿದ್ದರಿಂದ, ಆಗಿನ ದೇಶನಾಯಕರ ಒತ್ತಾಸೆಯಿಂದಲೇ ಹಿಂದಿಯು ಸಂವಿಧಾನದಲ್ಲಿ ಸೇರಿತು.

ಇದರ ನಂತರದಲ್ಲಿ ಆದದ್ದು ಮಾತ್ರ ಬೇರೆಯೇ. ಹಿಂದಿ ಪ್ರದೇಶಗಳಲ್ಲಿ ಹೆಸರಿಗಷ್ಟೇ ತ್ರಿಭಾಷಾ ಸೂತ್ರ. ಅಲ್ಲಿರುವುದು ದ್ವಿಭಾಷಾ ಸೂತ್ರ ಇಲ್ಲವೇ ಏಕಭಾಷಾ ಸೂತ್ರ. ಇನ್ನು ಉಳಿದವರಿಗೆ ಮಾತ್ರ ತ್ರಿಭಾಷಾ ಸೂತ್ರ ಎಂಬಂತೆ ಆದದ್ದೇ ಹಿಂದಿಯ ಬಗೆಗಿನ ಆಕ್ರೋಶಕ್ಕೆ ಕಾರಣವಾಯಿತು. ಒಂದು ಸಂಪರ್ಕ ಭಾಷೆಯಾಗಿ ಹಿಂದಿಯ ಬಗ್ಗೆ ಹೆಚ್ಚು ಜನರ ವಿರೋಧವಿರಲಾರದು. ಆದರೆ, ಹಿಂದಿಗೆ ಸಂವಿಧಾನ ಕೊಡಮಾಡಿದ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು ಉತ್ತರದವರು ಅದರಲ್ಲೂ ಹಿಂದಿ ಪ್ರದೇಶದ ಅಧಿಕಾರಿಗಳು, ರಾಜಕಾರಣಿಗಳು ಹಿಂದಿಯನ್ನು ಬಲವಂತವಾಗಿ ಹೇರಲು ಇನ್ನಿಲ್ಲದ ಒತ್ತಾಯ ತಂದದ್ದರಿಂದ, ಎಲ್ಲ ವಾಮಮಾರ್ಗಗಳನ್ನೂ ಬಳಸಿದ್ದರಿಂದ, ಹಿಂದಿ ಕಲಿಕೆಗಾಗಿ, ಬೇರೆ ಯಾವ ಭಾಷೆಗೂ ನೀಡದಷ್ಟು ಹಣವನ್ನು ಕೇಂದ್ರದ ಬಜೆಟ್‌ನಲ್ಲಿ ಮೀಸಲಿರಿಸುತ್ತಿದ್ದುದರಿಂದ ಹಿಂದಿಯೇತರ ಭಾಷೆಗಳವರಿಗೆ ಅದರಲ್ಲೂ ದಕ್ಷಿಣದವರಿಗೆ ಹಿಂದಿಯ ಬಗ್ಗೆ ಹೇವರಿಕೆ ಶುರುವಾಗಲು ಕಾರಣವಾಯಿತು. ಅದರಲ್ಲೂ ತಮ್ಮ ನೆಲದ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ತರಬೇಕೆಂದರೆ ನ್ಯಾಯಾಲಯಗಳು ಅಡ್ಡ ನಿಲ್ಲುತ್ತಿದ್ದುದರಿಂದ, ತಮ್ಮದಲ್ಲದ ಭಾಷೆಯನ್ನು ಅದೂ ತಮ್ಮ ಭಾಷೆಯ ಬದಲಿಗೆ ತರುವ ಹುನ್ನಾರವಿದೆ ಎಂದು ಅನಿಸಿದ ಕಾರಣವೇ ಹಿಂದಿ ಭಾಷಿಕರ, ಹಿಂದಿ ಬಳಕೆ ಪ್ರದೇಶಗಳ ರಾಜಕಾರಣಿಗಳ ಮೇಲಿನ ಅಸಂತೋಷವು ಹಿಂದಿಯ ಬಗೆಗಿನ ಅಸಂತೋಷವಾಗಿ ತಿರುಗಿದೆ.

ಈಗ ಮಾಡಬೇಕಾದ್ದೆಂದರೆ, ಪ್ರಾದೇಶಿಕ ಭಾಷೆಗಳಿಗೆ ನ್ಯಾಯವಾಗಿ ಎಲ್ಲ ಹಂತಗಳಲ್ಲೂ ದೊರೆಯಬೇಕಾಗಿರುವ ಸ್ಥಾನಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಅಲ್ಲ; ಕೇವಲ ಸಂಪರ್ಕಭಾಷೆಯಾಗಿ ಬಳಕೆಗೆ ತರುವ ಯೋಜನೆ ಹಾಕಿಕೊಳ್ಳುವುದೊಂದೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT