ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಆರ್ಥಿಕತೆಗೆ ಬರ: ಆರೋಗ್ಯಕ್ಕೆ ಬರೆ

ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಗುರಿ ಸಾಧನೆಗೆ ಸಾಮೂಹಿಕ ಪ್ರಯತ್ನ ಅವಶ್ಯಕ
Last Updated 13 ಮೇ 2021, 19:31 IST
ಅಕ್ಷರ ಗಾತ್ರ

ಕೊರೊನಾ ಮಹಾಸೋಂಕಿನ ಕಾರಣದಿಂದ ಕರ್ನಾಟಕವೂ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಮತ್ತೆ ಕಟ್ಟುನಿಟ್ಟಿನ ಮತ್ತು ಭಾಗಶಃ ಲಾಕ್‍ಡೌನ್ ಮಾಡಲಾಗಿದೆ. ಇದರಿಂದ, ದೇಶದ ಆರ್ಥಿಕ ಪರಿಸ್ಥಿತಿಯು ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಒಟ್ಟು ಸ್ವದೇಶಿ ಉತ್ಪನ್ನದ ಪ್ರಮಾಣ ಪುನಃ ಕುಸಿಯಲಿದೆ. ಆದ್ದರಿಂದ ಕೊರೊನಾದಂಥ ಸೋಂಕುಗಳನ್ನು ಸೂಕ್ತವಾಗಿ ನಿಯಂತ್ರಿಸಲು ಮತ್ತು ನಿರ್ವಹಣೆ ಮಾಡಲು ಅವಶ್ಯವಾಗಿ ಬೇಕಾದ ಆರೋಗ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಆ ಮೂಲಕ ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಗುರಿಯನ್ನು ನಿಗದಿತ ಅವಧಿಯಲ್ಲಿ ಸಾಧಿಸುವ ಅಗತ್ಯ ಹೆಚ್ಚಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಪ್ರಕಾರ, ಆರೋಗ್ಯವೆಂದರೆ ಕೇವಲ ರೋಗ ಅಥವಾ ಅಶಕ್ತತೆ ಇಲ್ಲದೇ ಇರುವುದಲ್ಲ. ಬದಲಿಗೆ, ಸಂಪೂರ್ಣ ದೈಹಿಕ, ಮಾನಸಿಕ ಮತ್ತು ಸಾಮಾಜಿಕವಾಗಿ ಆರೋಗ್ಯವಾಗಿರುವ ಸ್ಥಿತಿ. ಉತ್ತಮ ಆರೋಗ್ಯವು ಅಭಿವೃದ್ಧಿಯ ಒಂದು ಸಾಧನ ಮತ್ತು ಗುರಿಯಾಗಿದೆ. ಸಾರ್ವತ್ರಿಕ ಆರೋಗ್ಯವೆಂದರೆ ಎಲ್ಲರಿಗೂ ಎಲ್ಲೆಡೆಯೂ ಅಗತ್ಯ ಆರೋಗ್ಯ ಸೇವೆಗಳು ಸಿಗುವಂತೆ ಮಾಡುವುದು ಹಾಗೂ ಕೈಗೆಟಕುವ ದರದಲ್ಲಿ ಅಗತ್ಯ ಔಷಧಿಗಳು, ಲಸಿಕೆಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳುವುದೇ ಆಗಿದೆ. ಸಾರ್ವತ್ರಿಕ ಆರೋಗ್ಯ ರಕ್ಷಣೆಯಿಂದ ಸ್ವಚ್ಛ- ಸ್ವಸ್ಥ ಭಾರತವನ್ನು ಕಟ್ಟಲು ಸಾಧ್ಯ.

ಭಾರತದಲ್ಲಿ ಆರೋಗ್ಯ ಕ್ಷೇತ್ರದಲ್ಲಿನ ಮೂಲ ಸೌಕರ್ಯಗಳು ಮತ್ತು ಉತ್ತಮ ಆರೋಗ್ಯಕ್ಕೆ ಸಂಬಂಧಿಸಿದ ಆರೋಗ್ಯ ಸೂಚಿಗಳು ಬಹಳಷ್ಟು ಕೆಳಮಟ್ಟದಲ್ಲಿವೆ. ವಿಶ್ವಸಂಸ್ಥೆಯು ತನ್ನ ಸದಸ್ಯ ರಾಷ್ಟ್ರಗಳಿಗೆ ನಿಗದಿಪಡಿಸಿರುವ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಮೂರನೇ ಗುರಿಯು 2030ರೊಳಗೆ ಸಾಧಿಸಬೇಕಾದ ಸಾರ್ವತ್ರಿಕ ಆರೋಗ್ಯ ರಕ್ಷಣಾ ಕ್ರಮಗಳಿಗೆ ಸಂಬಂಧಿಸಿದ್ದಾಗಿದೆ. ಇದಲ್ಲದೆ ದೇಶದ ನೀತಿ ಆಯೋಗ ರಚಿಸಿದ ಉನ್ನತ ಮಟ್ಟದ ತಜ್ಞರ ಸಮಿತಿಯು 2022ರೊಳಗೆ ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಗುರಿ ಸಾಧನೆಗೆ ಶಿಫಾರಸು ಮಾಡಿದೆ.

ಸುಸ್ಥಿರ ಅಭಿವೃದ್ಧಿ ಗುರಿಯ ಪ್ರಕಾರ, 2030ರೊಳಗೆ ತಾಯಂದಿರು ಹಾಗೂ ಶಿಶುಗಳ ಮರಣ ಪ್ರಮಾಣವು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಬೇಕು. ಜನರ ಜೀವನಾಯುಷ್ಯವೂ 2025ರೊಳಗೆ 67.5 ವರ್ಷಗಳಿಂದ 70 ವರ್ಷಗಳಿಗೆ ಹೆಚ್ಚಬೇಕು. ಆದರೆ ಕೊರೊನಾದಂತಹ ಮಹಾಸೋಂಕು ಅರ್ಥವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವುದರಿಂದ, ಈ ಗುರಿಗಳನ್ನು ನಿಗದಿತ ಅವಧಿಯಲ್ಲಿ ಸಾಧಿಸಲು ಸಾಧ್ಯವಾಗುವುದಿಲ್ಲ.

ಡಬ್ಲ್ಯುಎಚ್‌ಒ ಪ್ರಕಾರ, ಪ್ರತೀ ಒಂದು ಸಾವಿರ ಜನರಿಗೆ ಒಬ್ಬ ವೈದ್ಯ, 3 ಹಾಸಿಗೆಗಳು ಮತ್ತು ಮೂವರು ದಾದಿಯರು/ಸೂಲಗಿತ್ತಿಯರು ಇರಬೇಕಾಗುತ್ತದೆ. ಆದರೆ ಭಾರತದಲ್ಲಿ ಪ್ರತೀ ಒಂದು ಸಾವಿರ ಜನರಿಗೆ 0.66 ವೈದ್ಯರು, 1.5ರಷ್ಟು ದಾದಿಯರು/ಸೂಲಗಿತ್ತಿಯರು ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ.

ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತವು ಬಹಳಷ್ಟು ಕಡಿಮೆ ಸಂಖ್ಯೆಯಲ್ಲಿ ತೀವ್ರ ನಿಗಾ ಘಟಕದ (ಐಸಿಯು) ಹಾಸಿಗೆಗಳನ್ನು ಹೊಂದಿದೆ. ಪ್ರತೀ ಒಂದು ಲಕ್ಷ ಜನರಿಗೆ ಭಾರತವು 2.3 ಐಸಿಯು ಹಾಸಿಗೆಗಳನ್ನು ಹೊಂದಿದ್ದರೆ, ಈ ಸಂಖ್ಯೆಯು ಜರ್ಮನಿ 34, ಅಮೆರಿಕ 26, ಯು.ಕೆ 10.5, ಫ್ರಾನ್ಸ್ 16 ಮತ್ತು ಚೀನಾದಲ್ಲಿ 3.6ರಷ್ಟಿದೆ.

ಸಾರ್ವಜನಿಕ ಆರೋಗ್ಯ ಮಾನದಂಡದ ಪ್ರಕಾರ, ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಉಪಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳನ್ನು ಸ್ಥಾಪನೆ ಮಾಡಿ, ನಿಯಮಾನುಸಾರ ಆರೋಗ್ಯ ಸಿಬ್ಬಂದಿಯನ್ನು ನೇಮಕ ಮಾಡುವುದು ಅವಶ್ಯಕ. ದುರ್ದೈವದ ಸಂಗತಿ ಎಂದರೆ, 2020ರ ಜುಲೈ ವೇಳೆಗೆ ಶೇ 24ರಷ್ಟು ಉಪ ಆರೋಗ್ಯ ಕೇಂದ್ರಗಳು,
ಶೇ 29ರಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಶೇ 38ರಷ್ಟು ಸಮುದಾಯ ಆರೋಗ್ಯ ಕೇಂದ್ರಗಳ ಕೊರತೆಯಿರುವುದು ಕಂಡುಬಂದಿದೆ.

ಭಾರತವು ಆರೋಗ್ಯ ಕ್ಷೇತ್ರದ ಮೇಲೆ ಮಾಡುವ ವೆಚ್ಚ ತುಂಬಾ ಕಡಿಮೆ. ಇದರಿಂದಾಗಿ ಆರೋಗ್ಯದ ಮೂಲಸೌಕರ್ಯಗಳು ಮತ್ತು ಸೇವೆಗಳನ್ನು ಅಗತ್ಯಾನುಸಾರ ಪೂರೈಸಲು ಸಾಧ್ಯವಾಗುತ್ತಿಲ್ಲ. ಇದು ಮುಂಬರುವ ದಿನಗಳಲ್ಲಿ ದೇಶದ ಸುಸ್ಥಿರ ಆರ್ಥಿಕ ಅಭಿವೃದ್ಧಿಯ ಮೇಲೆ ತೀವ್ರ ದುಷ್ಪರಿಣಾಮ ಬೀರಲಿದೆ. ರಾಷ್ಟ್ರೀಯ ಆರೋಗ್ಯ ನೀತಿಯು 2025ರೊಳಗೆ ಆರೋಗ್ಯ ಕ್ಷೇತ್ರದ ಮೇಲಿನ ವೆಚ್ಚವನ್ನು ಜಿಡಿಪಿಯ ಶೇ 2.5ರಷ್ಟಕ್ಕೆ ಹೆಚ್ಚಿಸಲು ಶಿಫಾರಸು ಮಾಡಿದೆ.

ಕೊರೊನಾ ಸೋಂಕಿನ ಎರಡನೇ ಅಲೆಯಿಂದ ಬಳಲುತ್ತಿರುವ ಮತ್ತು ಅದರಿಂದ ಸಾವಿಗೀಡಾಗುವವರ ಸಂಖ್ಯೆ ದಿನೇ ದಿನೇ ವಿಪರೀತವಾಗಿ ಹೆಚ್ಚುತ್ತಿರುವುದರಿಂದ ಸರ್ಕಾರವು ಅಗತ್ಯವಾದ ಆರೋಗ್ಯ ಮೂಲ ಸೌಕರ್ಯ ಮತ್ತು ಸೇವೆಗಳ ಪೂರೈಕೆಯನ್ನು ತ್ವರಿತಗತಿಯಲ್ಲಿ ಮಾಡಬೇಕಿದೆ.

ರಾಷ್ಟ್ರದ ಆರ್ಥಿಕ ಅಭಿವೃದ್ಧಿಯ ವೇಗ ಮತ್ತು ಜನರ ಜೀವನದ ಗುಣಮಟ್ಟವು ಉತ್ತಮ ಆರೋಗ್ಯ ಮೂಲಸೌಕರ್ಯ, ಆರೋಗ್ಯ ಸೇವೆಗಳ ಲಭ್ಯತೆಯ ಮೇಲೆ ಅವಲಂಬಿತವಾಗಿವೆ. ಆದ್ದರಿಂದ ಇವುಗಳ ಪೂರೈಕೆಯ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರದ ಮೇಲಷ್ಟೇ ಹಾಕುವುದರ ಬದಲು ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಗುರಿ ಸಾಧಿಸುವಲ್ಲಿ ಸಾಮೂಹಿಕ ಪ್ರಯತ್ನ ಮಾಡಬೇಕಾಗಿದೆ. ಖಾಸಗಿ ಆಸ್ಪತ್ರೆಗಳು, ಸ್ಥಳೀಯ ಸ್ವಯಂಸೇವಾ ಸಂಸ್ಥೆಗಳು, ಶೈಕ್ಷಣಿಕ ಮತ್ತು ಧಾರ್ಮಿಕ ಸಂಸ್ಥೆಗಳು ಈ ದಿಸೆಯಲ್ಲಿ ಕೈಜೋಡಿಸಬೇಕಿದೆ. ಸಾರ್ವಜನಿಕರ ಸಕ್ರಿಯ ಪಾಲ್ಗೊಳ್ಳುವಿಕೆ ಸಹ ಅಷ್ಟೇ ಮುಖ್ಯವಾದುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT