ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಯೂನಿಕೋಡ್‌ ಸಮಸ್ಯೆ ಅಲ್ಲ

Last Updated 16 ನವೆಂಬರ್ 2022, 19:14 IST
ಅಕ್ಷರ ಗಾತ್ರ

ಯೂನಿಕೋಡ್‌ನ ಏಕಮುಖ’ ಎಂಬ ಕೃಷ್ಣ ಭಟ್ ಅವರ ಲೇಖನ (ಪ್ರ.ವಾ., ‘ತಂತ್ರಜ್ಞಾನ’ ಪುಟ, ನ. 16) ದಾರಿ ತಪ್ಪಿಸುವಂತಿದೆ. ಫಾಂಟ್ ಸಮಸ್ಯೆಯನ್ನು ಯೂನಿಕೋಡ್ ಸಮಸ್ಯೆ ಎಂದು ಲೇಖನದಲ್ಲಿ ಬಿಂಬಿಸಲಾಗಿದೆ. ಯೂನಿಕೋಡ್ ಎಂಬುದು ಮಾಹಿತಿ ತಂತ್ರಜ್ಞಾನದಲ್ಲಿ ಅಕ್ಷರಗಳ ಸಂಕೇತೀಕರಣದ ಒಂದು ಜಾಗತಿಕ ಶಿಷ್ಟತೆ. ಅದು ಯಾವ ಅಕ್ಷರಕ್ಕೆ ಯಾವ ಸಂಕೇತ ಎಂದು ತೀರ್ಮಾನಿಸುತ್ತದೆಯೇ ವಿನಾ ಅದನ್ನು ಯಾವ ರೂಪದಲ್ಲಿ ಪರದೆಯಲ್ಲಿ ಪ್ರದರ್ಶಿಸಬೇಕು ಅಥವಾ ಯಾವ ರೂಪದಲ್ಲಿ ಮುದ್ರಿಸಬೇಕು ಎಂದು ನಿಗದಿಪಡಿಸುವುದಿಲ್ಲ. ಆ ಕೆಲಸವನ್ನು ಫಾಂಟ್ ಮಾಡುತ್ತದೆ. ಯಾವುದೇ ಭಾಷೆಗೆ ಯಾವ ಫಾಂಟ್ ಬಳಸಬೇಕು ಎಂಬ ಜಾಗತಿಕ ಶಿಷ್ಟತೆ ಇಲ್ಲ. ಯಾವ ಭಾಷೆಗೆ ಯಾವ ಫಾಂಟ್ ಬಳಸಬೇಕು ಎಂದು ಯೂನಿಕೋಡ್ ನಿಗದಿಪಡಿಸುವುದಿಲ್ಲ.

ಯೂನಿಕೋಡ್‌ನಿಂದ ಹಲವಾರು ಲಾಭಗಳಿವೆ. ಮಾಹಿತಿಯ ವರ್ಗಾವಣೆ ಸುಲಭ. ನೀವೇ ಗಮನಿಸಿರಬಹುದು. ನಾನು ಈ ಲೇಖನವನ್ನು ಟೈಪ್ ಮಾಡಿರುವುದು ಯೂನಿಕೋಡ್ ಬಳಸಿ ವಿಂಡೋಸ್ ಲ್ಯಾಪ್‌ಟಾಪ್‌ನಲ್ಲಿ. ನೀವು ಅದನ್ನು ಆರಾಮವಾಗಿ ಆ್ಯಂಡ್ರಾಯ್ಡ್‌ ಮೊಬೈಲ್, ಐಫೋನ್, ಲಿನಕ್ಸ್, ಮ್ಯಾಕ್, ವಿಂಡೋಸ್ ಎಲ್ಲ ವೇದಿಕೆಗಳಲ್ಲಿ ಓದಬಹುದು. ಇದು ಸಾಧ್ಯವಾಗಿರುವುದು ನಾನು ಬಳಸಿದ ಯೂನಿಕೋಡ್‌ನಿಂದಾಗಿ.

ನಾನು ಹಳೆಯ ಶತಮಾನದ ನುಡಿ, ಬರಹ, ಆಕೃತಿ, ಶ್ರೀಲಿಪಿಯಂತಹ ಬೆರಳಚ್ಚಿನ ತಂತ್ರಾಂಶಗಳ ಆ್ಯಸ್ಕಿ (ಯೂನಿಕೋಡ್ ಅಲ್ಲದ) ಫಾಂಟ್ ಬಳಸಿ ಟೈಪ್ ಮಾಡಿದ್ದಿದ್ದಲ್ಲಿ, ನೀವು ಆಯಾ ಫಾಂಟ್ ಬಳಕೆದಾರರಾಗಿದ್ದಲ್ಲಿ ಮಾತ್ರ ನಿಮಗೆ ಅದನ್ನು ಓದಲುಸಾಧ್ಯವಾಗುತ್ತಿತ್ತು.

ಡಿ.ಟಿ.ಪಿ ಮಾಡುವವರಿಗೆ ಒಂದು ಬಹುದೊಡ್ಡ ಸೌಲಭ್ಯ ಯೂನಿಕೋಡ್‌ನಿಂದಾಗಿ ಲಭ್ಯವಾಗಿದೆ. ಅದು ಹುಡುಕುವ ಮತ್ತು ಬದಲಿಸುವ ಸೌಲಭ್ಯ. ಜೊತೆಗೆ ಪದಪರೀಕ್ಷಕ (ಸ್ಪೆಲ್ಲಿಂಗ್‌ ಚೆಕ್‌). ಇವೆರಡೂ ಆ್ಯಸ್ಕಿ ತಂತ್ರಾಂಶಗಳಲ್ಲಿ ಇಲ್ಲ.

ಸ್ವಲ್ಪ ಹಿಂದಿನ ಕಾಲಕ್ಕೆ ಹೋಗೋಣ. ಆಗ ಶ್ರೀಲಿಪಿ, ಆಕೃತಿ, ಪ್ರಕಾಶಕ್ ಮುಂತಾದ ಡಿಟಿಪಿ ತಂತ್ರಾಂಶಗಳಿದ್ದವು. ಆಗ ಯೂನಿಕೋಡ್ ಬಳಕೆ ವ್ಯಾಪಕವಾಗಿರಲಿಲ್ಲ. ಅವರು ಬಳಸುತ್ತಿದ್ದುದು ಯೂನಿಕೋಡ್ ಅಲ್ಲದ ಆ್ಯಸ್ಕಿ ಫಾಂಟ್‌ಗಳನ್ನು. ಅಕ್ಷರಗಳ ಪ್ರದರ್ಶನ ತುಂಡುಗಳಿಗೆ, ಅಂದರೆ ಗ್ಲಿಫ್‌ಗಳಿಗೆ ಒಂದೊಂದು ತುಂಡಿಗೆ ಒಂದೊಂದು ಆ್ಯಸ್ಕಿ ಸಂಕೇತ ಇರುತ್ತಿತ್ತು. ಆ್ಯಸ್ಕಿಯಲ್ಲಿ 256 ಸಂಕೇತಗಳ ಮಿತಿಯಿದೆ. ಒಂದು ಅಕ್ಷರಗುಚ್ಛ, ಉದಾಹರಣೆಗೆ, ‘ಶ್ರೀ’ ಆಗಬೇಕಿದ್ದರೆ ಹಲವು ಗ್ಲಿಫ್‌ಗಳ ಜೋಡಣೆ ಆಗಬೇಕಿತ್ತು. ಅಂದರೆ ಪ್ರತೀ ಗ್ಲಿಫ್‌ಗೂ ಒಂದು ಆ್ಯಸ್ಕಿ ಸಂಕೇತದ ಬಳಕೆ ಆಗಬೇಕಿತ್ತು.

ಕೀಲಿಮಣೆಯ ತಂತ್ರಾಂಶವು ನಾವು ಕೀಲಿಮಣೆಯಲ್ಲಿ ಕುಟ್ಟಿದ ಕೀಲಿಗಳ ಸರಣಿಯನ್ನು ಸಂಬಂಧಿತ ಆ್ಯಸ್ಕಿ ಸಂಕೇತಗಳ ಸರಣಿಯನ್ನಾಗಿ ಮಾರ್ಪಡಿಸುತ್ತಿತ್ತು. ಈ ಕೀಲಿಮಣೆ ತಂತ್ರಾಂಶ ಆಯಾ ಕಂಪನಿಯ ಫಾಂಟ್‌ಗೆ ಒಂದು ರೀತಿಯಲ್ಲಿ ಮದುವೆಯಾದಂತಿತ್ತು. ಅಂದರೆ ನೀವು ಶ್ರೀಲಿಪಿ ತಂತ್ರಾಂಶ ಬಳಸಿ ಟೈಪ್ ಮಾಡಿದರೆ ಆಕೃತಿಯ ಫಾಂಟ್ ಬಳಕೆ ಸಾಧ್ಯವಿರಲಿಲ್ಲ. ಶ್ರೀಲಿಪಿ ತಂತ್ರಾಂಶ ತೆಗೆದುಕೊಂಡವ ಮಾತ್ರ ಶ್ರೀಲಿಪಿ ಫಾಂಟ್‌ನಲ್ಲಿ ಕಡತ ತಯಾರಿ ಮಾಡಬಹುದಿತ್ತು. ಆದುದರಿಂದ ತಂತ್ರಾಂಶ ತಯಾರಕರು ಉತ್ತಮ ಫಾಂಟ್ ತಯಾರಿ ಮಾಡುತ್ತಿದ್ದರು. ಯಾಕೆಂದರೆ ಫಾಂಟ್ ಅನ್ನು ಸುಮ್ಮನೆ ಪ್ರತಿ ಮಾಡಿಕೊಂಡು ಬಳಸಲು ಸಾಧ್ಯವಿರಲಿಲ್ಲ. ಅದನ್ನು ಕೊಂಡುಕೊಂಡವ ಮಾತ್ರ ಬಳಸಬಹುದಿತ್ತು.

ಯೂನಿಕೋಡ್ ವಿಧಾನದಲ್ಲಿ ಮಾಹಿತಿ, ಫಾಂಟ್ (ಅಕ್ಷರಶೈಲಿ) ಮತ್ತು ಕೀಲಿಮಣೆ– ಈ ಮೂರೂ ಸ್ವತಂತ್ರವಾಗಿವೆ. ಅಂದರೆ ನೀವು ವಿಂಡೋಸ್ ಕೀಲಿಮಣೆ ಬಳಸಿ ‘ಶ್ರೀಲಿಪಿ’ ಫಾಂಟ್ ಬಳಸಿದರೆ ಅದನ್ನು ‘ಸಂಪಿಗೆ’ ಫಾಂಟ್ ಬಳಸಿ ಲಿನಕ್ಸ್‌ನಲ್ಲಿ ಓದಬಹುದು. ಯೂನಿಕೋಡ್ ಫಾಂಟ್‌ಗಳನ್ನು (ಅವನ್ನು ಓಪನ್‌ಟೈಪ್ ಫಾಂಟ್ ಎನ್ನುತ್ತಾರೆ) ಹಂಚಿಕೊಂಡು ಬಳಸಬಹುದು. ಶ್ರೀಲಿಪಿಯವರು ಗ್ರಾಹಕರೊಬ್ಬರಿಗೆ ಉತ್ತಮ ಯೂನಿಕೋಡ್ ಫಾಂಟ್ ಮಾಡಿ ಮಾರಿದರೆ, ಅವರು ಅದನ್ನು ತಮ್ಮ ಸ್ನೇಹಿತರಿಗೆ ಹಂಚಿದರೆ ಅವರು ಕೂಡ ಅದನ್ನು ಬಳಸಬಹುದು. ಇದು ತಾಂತ್ರಿಕವಾಗಿ ಸಾಧ್ಯ. ಆದರೆ ಕಾನೂನುಬಾಹಿರ.

ನಮ್ಮಲ್ಲಿ ಹಕ್ಕುಸ್ವಾಮ್ಯದ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಕೆಲಸ ಆಗುತ್ತದೆಯೇ ಎಂದಷ್ಟೆ ನೋಡುವುದು. ಫಾಂಟ್ ಅನ್ನು ಯಾರು ಬೇಕಾದರೂ ಹಂಚಿಕೊಂಡು ಬಳಸಿಕೊಳ್ಳಬಹುದಾದ ಕಾರಣ ಯೂನಿಕೋಡ್‌ನಲ್ಲಿ ಉತ್ತಮ ಫಾಂಟ್‌ಗಳು ಕೆಲವೇ ಕೆಲವು ಬಂದಿವೆ. ಸರ್ಕಾರ ಇಲ್ಲಿ ಪ್ರವೇಶ ಮಾಡಿ ಉತ್ತಮ ಯೂನಿಕೋಡ್ ಫಾಂಟ್‌ಗಳು ತಯಾರಾಗುವಂತೆ ಮಾಡಿ ಜನರಿಗೆ ನೀಡಬೇಕು. ಕೆಲವು ಫಾಂಟ್‌ಗಳು ಬಂದಿವೆ. ಆದರೆ ಆ್ಯಸ್ಕಿ ಫಾಂಟ್‌ಗಳಿಗೆ ಹೋಲಿಸಿದರೆ ಅವುಗಳ ಸಂಖ್ಯೆ ಕಡಿಮೆಯೇ. ಇದು ನಿಜವಾದ ಸಮಸ್ಯೆ; ಯೂನಿಕೋಡ್ ಸಮಸ್ಯೆ ಅಲ್ಲ.

ಲೇಖಕ: ತಂತ್ರಾಂಶ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT