ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಸಮವಸ್ತ್ರ ಮತ್ತು ಸಮಾನತೆಯ ಮನೋಬಲ

ಕಲಿಯುವವರ ಮನಸ್ಸು ಇತರರ ವೇಷಭೂಷಣಗಳಿಂದ ವಿಕರ್ಷಣೆಗೆ ಒಳಗಾಗಿಬಿಡುತ್ತದೆ ಎನ್ನುವುದು ಉದಾತ್ತ ಭ್ರಮೆಯಷ್ಟೇ
Last Updated 11 ಫೆಬ್ರುವರಿ 2022, 20:15 IST
ಅಕ್ಷರ ಗಾತ್ರ

ನಾಗರಿಕತೆಯು ಮನುಷ್ಯನ ಬದುಕಿನ ಶೈಲಿಯನ್ನು ರಂಗುರಂಗಾಗಿಸುತ್ತಲೇ ಮುಂದುವರಿಯುತ್ತಿರುವುದು ಹೊಟ್ಟೆ ಮತ್ತು ಬಟ್ಟೆಯ ಪ್ರೇರೇಪಣೆಗಳಿಂದ. ಬಟ್ಟೆಯ ಬಗ್ಗೆ ವ್ಯಾಮೋಹ ಬಿಟ್ಟ ಮಹಾತ್ಮ ಗಾಂಧಿಯು ಮಾನಸಿಕ ಸದೃಢತೆಯನ್ನು ಸಾಧಿಸಿ ತೋರಿಸಿದರು, ಅರಸನ ಆಡಂಬರದ ಪೋಷಾಕುಗಳನ್ನು ಕಿತ್ತೊಗೆದು ಜ್ಞಾನೋದಯದ ಮಾರ್ಗವನ್ನು ಪರಿಚಯಿಸಿಕೊಟ್ಟವರು ಗೌತಮ ಬುದ್ಧ. ಇಂದು ಶಾಲಾ ಕಾಲೇಜಿನ ಹದಿಹರೆಯದ ಅನೇಕರಿಗೆ ಸಮವಸ್ತ್ರದ ನೆಪಮಾತ್ರದ ನಿಯಮಗಳು ಮಹಾಗೊಂದಲಗಳನ್ನು ಹುಟ್ಟಿಸಿವೆ. ಸಮವಸ್ತ್ರದೊಳಗೆ ಮೈ ಅಷ್ಟೇ ತೂರಿಸಿಡಬಹುದು, ಆದರೆ ಮನಸ್ಸಿಗೆ ವಸ್ತ್ರ ಹೊದಿಸಲು ಸಾಧ್ಯವೇ? ಅದರಲ್ಲಿಯೂ ಹದಿಹರೆಯವನ್ನು ಅನುಭವಿಸುವ, ಪರೀಕ್ಷಿಸುವ ವೇದಿಕೆಯಾದ ಶಾಲಾಕಾಲೇಜಿನ ದಿನಗಳಲ್ಲಿ? ಶುದ್ಧ ನಿಷ್ಪ್ರಯೋಜಕ ಸಾಹಸ.

ಕಲಿಯುವವರೆಲ್ಲರ ಮನಸ್ಸು ಇತರರ ವೇಷಭೂಷಣಗಳಿಂದ ವಿಕರ್ಷಣೆಗೆ ಒಳಗಾಗಿಬಿಡುತ್ತದೆ ಎನ್ನುವುದು, ಸಮವಸ್ತ್ರದವರೊಂದಿಗಿದ್ದಾಗ
ಸಮಭಾವಗಳು ಉದ್ಭವಿಸಿಬಿಡುತ್ತವೆ ಎನ್ನುವುದು ಸಹ ಕೇವಲ ಉದಾತ್ತ ಭ್ರಮೆಯಷ್ಟೇ. ದುರಂತವೆಂದರೆ, ಹದಿಹರೆಯದ ಮಾನಸಿಕ ಸಂಪನ್ಮೂಲವನ್ನುಮುದುರಿಸಿಡುವ ಸೂತ್ರಗಳು ಇವಾಗಿದ್ದು, ಎಂದಿಗಿಂತಲೂ ಇಂದು ಹೆಚ್ಚು ಪ್ರಬಲವಾಗುತ್ತಿವೆ.

ಇದಕ್ಕೆ ಬಹುಮುಖ್ಯ ಕಾರಣ, ಇಂದಿನ ಮಕ್ಕಳಲ್ಲಿ ಅದರಲ್ಲಿಯೂ ಹದಿಹರೆಯದ ಕೊನೆಯ ಹಂತದಲ್ಲಿ ಇರುವವರಲ್ಲಿ ಸಹಜವಾಗಿಯೇ ವ್ಯಕ್ತಗೊಳ್ಳುತ್ತಿರುವ ಸ್ವತಂತ್ರ ಭಾವಗಳು. ಇದನ್ನು ಗಟ್ಟಿ ಮಾಡುತ್ತಿರುವುದು ಡಿಜಿಟಲ್‌ ಜಗತ್ತಿನ ಸೌಲಭ್ಯ ಮತ್ತು ಸಲಕರಣೆಗಳು. ಈ ಹೊಸ ಸ್ವತಂತ್ರ ಭಾವಗಳನ್ನು ಸರಾಗ ಅನುಮೋದಿಸುವ, ಉತ್ತೇಜಿಸುವ ಪಾಲಕ, ಪೋಷಕ ವರ್ಗವೂ ದ್ವಂದ್ವಗಳಿಗೆ ಸಿಕ್ಕಿಕೊಂಡಿದೆ. ಮಕ್ಕಳ ಮಾನಸಿಕತೆಯ ಬಗ್ಗೆ ಸಂಕೋಚ, ಸಂದೇಹ, ಅಸಹನೆಯತ್ತ ವಾಲುತ್ತಿರುವವರೇ ಹೆಚ್ಚಾಗುತ್ತಿದ್ದಾರೆ.

ಮನೋವಿಶ್ಲೇಷಕ ಎರಿಕ್‌ ಎರಿಕ್ಸನ್‌, ಹದಿಹರೆಯದ ವ್ಯಕ್ತಿತ್ವವಿಕಾಸದ ಎಡವಟ್ಟಿನ ಸ್ಥಿತಿಯನ್ನು ಮಹಾನ್‌ ವ್ಯಕ್ತಿಗಳ ಜೀವನ ವೃತ್ತಾಂತಗಳ ಅಧ್ಯಯನಗಳನ್ನು ಆಧರಿಸಿ ವಿವರಿಸಿದ್ದಾರೆ. ಅವರು ‘ಗಾಂಧೀಸ್‌ ಟ್ರೂತ್’ ಎಂಬ ಅತ್ಯುತ್ತಮ ಮನೋಇತಿಹಾಸದ ಗ್ರಂಥದಲ್ಲಿ ವಿವರಿಸುವ ‘ಐಡೆಂಟಿಟಿ ಕ್ರೈಸಿಸ್’ ಎನ್ನುವ ಮಾನಸಿಕ ಸ್ಥಿತಿಯು ಇಂದಿನ ಹದಿಹರೆಯದವರಿಗೆ ಹೆಚ್ಚು ಅನ್ವಯಿಕ ಎನಿಸುತ್ತದೆ. ಸಾಹಸ, ಸೋಲು, ಸಂತಸ, ಆವೇಶ, ಆಕ್ರೋಶಗಳ ಮನೋಶಾರೀರಿಕ ಪ್ರಕ್ರಿಯೆಗಳನ್ನು ಒಪ್ಪಿಕೊಳ್ಳುತ್ತಾ, ವಿರೋಧಿಸುತ್ತಾ ವಿಚಾರ ಮಾಡುವುದನ್ನೂ ಕಲಿತು ಪಕ್ವತೆಯನ್ನು ಪಡೆಯುವಂತಹ ಮನೋವಿಕಾಸದ ಹಂತವಿದು. ಹದಿಹರೆಯದ ಈ ಸಮಯವನ್ನು ಸಮರ್ಪಕವಾಗಿ ನಿರ್ವಹಿಸದಿದ್ದಾಗ ಮಾನಸಿಕ ದುಃಸ್ಥಿತಿಗಳು ನಂತರದ ವ್ಯಕ್ತಿತ್ವದುದ್ದಕ್ಕೂ ಕಾಣಿಸಿಕೊಳ್ಳುತ್ತವೆ.

ಗೆಳೆಯರ ಹಾವಭಾವಗಳನ್ನು ಅನುಸರಿಸುವುದು, ಹೊಸಹೊಸ ವೇಷಭೂಷಣಗಳತ್ತ ಮನಸ್ಸು ಹರಿಸುವುದು, ಮನೆಯಾಚೆಯ ಜಗತ್ತನ್ನು ತನ್ನದಾಗಿಸಿಕೊಳ್ಳುವ ಸಲುವಾಗಿ ಒಳಗೊಂದು, ಹೊರಗೊಂದು ವರ್ತನೆಗಳನ್ನು ಪ್ರದರ್ಶಿಸುವುದು ತೀರಾ ಸಾಮಾನ್ಯ ಮತ್ತು ಅಷ್ಟೇ ಆರೋಗ್ಯಕರವೂ ಹೌದು. ಬಹಳ ಮುಖ್ಯವಾಗಿ ವಸ್ತ್ರಾಭರಣಗಳು ಈ ವಯೋಮಾನದವರ ಮನೋಬಲ ಹೆಚ್ಚಳದ ಸೂಚನೆಯೂ ಆಗಿರುತ್ತವೆ. ಇತರರೊಂದಿಗೆ ಇದ್ದರೂ ತನ್ನ ವ್ಯಕ್ತಿತ್ವವೇ ಬೇರೆ ಎನ್ನುವುದನ್ನು ಸದಾ ಪ್ರಕಟಿಸಲು ತಯಾರಾಗಿರುವಂತಹ ಮನಸ್ಸಿನ ಸ್ಥಿತಿಯದು.

ಹೊಸದಾಗಿ ವೃತ್ತಿ ಹಿಡಿದ ಪದವೀಧರನೊಬ್ಬ ಕಂಪನಿಯ ವಸ್ತ್ರಸಂಹಿತೆ, ನಿಯಮಗಳ (ಮನೆಯವರ ಮಾತುಗಳನ್ನು ಸದಾ ತಾತ್ಸಾರ ಮಾಡುತ್ತಿದ್ದಂತಹವನು) ಉದ್ದೇಶವನ್ನು ಚೆನ್ನಾಗಿ ಅರ್ಥಮಾಡಿಕೊಂಡು ಅನುಸರಿಸುತ್ತಾನೆ. ಅದೇ ಹದಿಹರೆಯದವನಿಗೆ ಇಂತಹದ್ದೇ ಉಡುಪು ಧರಿಸಬೇಕೆಂದು ಮನೆಯವರು ಒತ್ತಾಯಪಡಿಸಿದಾಗ ಒಪ್ಪಿಕೊಳ್ಳುವುದು ಕಷ್ಟ.

ಇದಕ್ಕೆ ಬಹುಮುಖ್ಯ ಕಾರಣವೆಂದರೆ, ಸ್ವಂತಿಕೆಯ ನಿರ್ಧಾರದ ಹಿಂದೆ ವಿಚಾರ ಮಾಡುವ ಶಕ್ತಿಗಿಂತಲೂ ಮೊದಲು ಬರುವುದು ನರಮಂಡಲದ ಭಾವಗಳು; ಅಂದರೆ ಯಾಕೆ ನನ್ನತನ ಬಯಸದ್ದನ್ನು ಮಾಡಬೇಕು ಎನ್ನುವುದು. ಈ ಮಾದರಿಯ ಭಾವನೆಯನ್ನು ಸ್ವಾಯತ್ತ ಆಪ್ತತೆ (ಪರ್ಸನಲ್‌ ಅಟಾನಮಿ) ಎಂದು ಗುರುತಿಸುತ್ತದೆ ಮನೋವಿಜ್ಞಾನ. ವ್ಯಕ್ತಿತ್ವದ ವಿಕಾಸ ಮತ್ತು ಉನ್ನತಿಗೆ ಇದು ಬಹಳ ಮುಖ್ಯ. ಇಂತಹದ್ದೊಂದು ಗುಣವನ್ನು ಬೆಳೆಯದಂತೆ ಮಾಡಿದಾಗ ವ್ಯಕ್ತಿತ್ವದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದೆಷ್ಟೋ ಬುದ್ಧಿವಂತರ ಮನಸ್ಸು ಕುಕೃತ್ಯಗಳತ್ತ ಹರಿಯುವುದಕ್ಕೂ ಇದೇ ಕಾರಣ ಎನ್ನುತ್ತವೆ ಮನೋವೈಜ್ಞಾನಿಕ ಸಂಶೋಧನೆಗಳು.

ಶಾಲಾಕಾಲೇಜಿನ ಆವರಣಗಳು ಹದಿಹರೆಯದ ಮನಸ್ಸು ಉಲ್ಲಾಸ, ವಿಲಾಸ, ಉದ್ರೇಕ ಮತ್ತು ವಿಚಾರ ಮಾಡುವ ಬಲವನ್ನು ಗಟ್ಟಿಪಡಿಸಿ
ಕೊಳ್ಳುವಂತಹ ಮನೋಸಾಮಾಜಿಕ ವಾತಾವರಣವನ್ನು ಸಹಜವಾಗಿಯೇ ಸೃಷ್ಟಿಸುತ್ತವೆ. ಈ ಮುಕ್ತ ವಾತಾವರಣದ ಮೇಲೆ ಹಿಡಿತ ಸಾಧಿಸುವ ಶಕ್ತಿಗಳು ಹಲವಾರು. ಇಂದು ಈ ಆವರಣವನ್ನು ವಶಪಡಿಸಿಕೊಳ್ಳುವ ಪ್ರಯತ್ನಗಳು ರಾಜಕೀಯ-ಧಾರ್ಮಿಕ ಸ್ವರೂಪದವಾಗಿದ್ದು ಮಕ್ಕಳ ಮನೋವಿಕಾಸವು ಸಹಜ ಮತ್ತು ಸರಾಗವಾಗಿ ಸಾಗುವುದಕ್ಕೆ ಅಡ್ಡಿಯಾಗುತ್ತಿರುವುದು ಕಳವಳಕಾರಿ. ಚೈತನ್ಯವೆಂಬ ಈ ಎಳೆಯ ಚಿಗುರುಗಳನ್ನು ಅತಿಯಾತಂಕದ ವಯಸ್ಕ ಮನಸ್ಸುಗಳು ನಾಶಪಡಿಸುವ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತವೆ.

ಸಮವಸ್ತ್ರ ಧರಿಸುವ ಮೂಲಕ ವಿದ್ಯಾರ್ಥಿಗಳ ಸಾಧನೆ, ಸಮಾನತೆಯ ಮನೋಬಲಗಳು ಹೆಚ್ಚುವು ದಿಲ್ಲ ಎನ್ನುತ್ತವೆ ಮನೋವಿಜ್ಞಾನದ ಅಧ್ಯಯನಗಳು.

ಲೇಖಕ: ಮನೋವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT