ಮಂಗಳವಾರ, ಏಪ್ರಿಲ್ 7, 2020
19 °C
ಬ್ಯಾಂಕುಗಳಿಗೆ ಕನ್ನಡ ಗ್ರಾಹಕರು ಮಾತ್ರ ಬೇಕು, ಆದರೆ ಅವರೊಂದಿಗೆ ಕನ್ನಡದಲ್ಲಿ ವ್ಯವಹರಿಸಲು ಸಾಧ್ಯವಿಲ್ಲ ಎಂದರೆ ಹೇಗೆ?

ಭಾಷೆಯ ಬಳಕೆ: ಉದಾಸೀನ ಬೇಡ

ಕಿಕ್ಕೇರಿ ಎಂ. ಚಂದ್ರಶೇಖರ್ Updated:

ಅಕ್ಷರ ಗಾತ್ರ : | |

Prajavani

ನಮ್ಮ ನೆಲದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಬ್ಯಾಂಕ್‌, ಹೋಟೆಲ್‌, ವಿಮಾನ ನಿಲ್ದಾಣ, ರೈಲು ನಿಲ್ದಾಣ... ಇಂತಹ ಕಡೆ ಕನ್ನಡದ ಬಳಕೆ ಕಡಿಮೆಯಾದಂತೆ ಭಾಸವಾಗುತ್ತದೆ. ಇದಕ್ಕೆ ಹಲವು ಕಾರಣಗಳಿವೆ. ಹೊರರಾಜ್ಯದವರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಕೆಲಸ ಮಾಡುತ್ತಿರುವುದು ಒಂದು ಕಾರಣವಾದರೆ, ಅವರು ಕನ್ನಡ ಕಲಿಯದಿದ್ದರೂ ವ್ಯವಹಾರಕ್ಕೆ ತೊಂದರೆಯಾಗದು ಎಂಬ ಸನ್ನಿವೇಶ ಸೃಷ್ಟಿಸಿರುವುದು ಇನ್ನೊಂದು ಕಾರಣ. 

ಇಂಗ್ಲಿಷ್‌ ಅಥವಾ ಹಿಂದಿ ಭಾಷೆ ನಮಗೆ ಬಾರದಿದ್ದರೂ ಹೇಗೋ ಅದೇ ಭಾಷೆಯಲ್ಲಿ ವ್ಯವಹರಿಸಲು ಯತ್ನಿಸುವ ಮೂಲಕ ಕನ್ನಡೇತರರಿಗೆ ಸಹಕರಿಸುವ ನಮ್ಮ ಮನೋಭಾವ, ಬಳಕೆ ವಿಚಾರದಲ್ಲಿ ಕನ್ನಡಕ್ಕೆ ಹಿನ್ನಡೆ ಉಂಟುಮಾಡುತ್ತಿದೆ. ನಮ್ಮ ನೆಲದಲ್ಲಿ, ನಮ್ಮ ಭಾಷೆಯಲ್ಲಿ ಮಾತನಾಡಲು ನಮಗೇಕೆ ಹಿಂಜರಿಕೆ, ಮುಜುಗರ?! ಇದರಿಂದ, ನಮ್ಮ ನುಡಿಯ ಬೆಳವಣಿಗೆಗೆ ತೊಡಕಾಗುತ್ತಿದೆ ಎಂಬ ತಿಳಿವಳಿಕೆ ನಮಗೆ ಮೂಡುವುದು ಯಾವಾಗ?

ಬೇರೆ ಭಾಷೆಗಳಿಗೆ ಮಣೆ ಹಾಕುವ ನಮ್ಮ ಔದಾರ್ಯವೇ ನಮ್ಮ ಭಾಷೆಯನ್ನು ಅಂಚಿಗೆ ಸರಿಸುತ್ತಿದೆ. ಬ್ಯಾಂಕುಗಳಲ್ಲಿ ರಾಜ್ಯದ ಆಡಳಿತ ಭಾಷೆಗೆ ಕಿಮ್ಮತ್ತು ಸಿಗುತ್ತಿಲ್ಲ. ಸ್ಥಳೀಯ ಗ್ರಾಹಕರಿಗೆ ಅವರು ಚೆನ್ನಾಗಿ ಬಲ್ಲ ಭಾಷೆಯಲ್ಲಿ ಮಾಹಿತಿ ಸಿಗುತ್ತಿಲ್ಲ. ಅವರಿಗೆ ಸರಾಗವಾಗಿ ವ್ಯವಹರಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ನೆಲದಲ್ಲಿ ನಾವೇ ಕೀಳರಿಮೆಯಿಂದ ಬಳಲುವಂತಹ ಸ್ಥಿತಿ ಒದಗಿದೆ. 

ಬ್ಯಾಂಕಿನೊಳಗೆ ಕಾಲಿಡುತ್ತಿದ್ದಂತೆಯೇ ಸಾಮಾನ್ಯವಾಗಿ ಅಲ್ಲಿ ಕೇಳಿಬರುವುದು ಇಂಗ್ಲಿಷ್‌ ಅಥವಾ ಹಿಂದಿ ಭಾಷೆ. ಈ ಎರಡೂ ಭಾಷೆ ಅರ್ಥವಾಗದಿದ್ದರೆ ಅಂಥವರ ಸ್ಥಿತಿಯನ್ನು ಕೇಳುವುದೇ ಬೇಡ. ಕನಿಷ್ಠ ಅರ್ಜಿಗಳಾದರೂ ಕನ್ನಡದಲ್ಲಿ ಸಿಗಬಹುದೆಂದು ತಡಕಾಡಿದರೆ, ಹೆಚ್ಚೆಂದರೆ ಹಣ ಪಾವತಿಸುವ ಚಲನ್‌ ಮಾತ್ರ ಕನ್ನಡದಲ್ಲಿ ಸಿಗಬಹುದು. ಇನ್ನಿತರ ಅರ್ಜಿಗಳು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಇರುತ್ತವೆ. ಇವುಗಳನ್ನು ಗಮನಿಸಿದರೆ, ನಾವು ನಿಜಕ್ಕೂ ಕರ್ನಾಟಕದಲ್ಲಿ ಇದ್ದೇವೆಯೇ ಎಂಬ ಅನುಮಾನ ಮೂಡುತ್ತದೆ.

ಇಂತಹ ಸ್ಥಿತಿ ನಗರಗಳಲ್ಲಿ ಮಾತ್ರವಲ್ಲ, ಗ್ರಾಮೀಣ ಪ್ರದೇಶದ ಬ್ಯಾಂಕುಗಳಲ್ಲೂ ಇದೆ. ‘ಕನ್ನಡದಲ್ಲಿ ಇದ್ದಿದ್ದರೆ ನಾವೇ ಬರೆಯುತ್ತಿದ್ದೆವು. ಇಂಗ್ಲಿಷ್‌ನಲ್ಲಿ ಇದೆ. ಸ್ವಲ್ಪ ಬರೆದುಕೊಡಿ’ ಎಂದು ಇತರರನ್ನು ಅವಲಂಬಿಸಬೇಕಾದ ಅನಿವಾರ್ಯ ಬಹಳಷ್ಟು ರೈತರದು. ಇದೆಂತಹ ಪರಿಸ್ಥಿತಿ? ನಮ್ಮ ನಾಡಲ್ಲಿ ನಾವೇ ಪರಕೀಯರಾಗಿದ್ದೇವೆ. ಬ್ಯಾಂಕುಗಳೇನು ಆಕಾಶದಿಂದ ಉದುರಿವೆಯೇ? ಅಲ್ಲಿನ ಸಿಬ್ಬಂದಿಗೆ ಆ ಪ್ರದೇಶದ ಭಾಷೆ ಕಲಿಯಲು ಏನು ಕಷ್ಟ? ಅವರು ಕನ್ನಡದಲ್ಲಿ ಪಂಡಿತರಾಗಿ ಸಾಹಿತ್ಯ ಸೃಷ್ಟಿಸುವುದು ಬೇಡ. ಜನಸಾಮಾನ್ಯರ ಜೊತೆ ವ್ಯವಹರಿಸುವ ಮಟ್ಟಿಗೆ ಕನ್ನಡ ಕಲಿಯಬಹುದಲ್ಲ! ಗ್ರಾಹಕರಿಂದ ನಡೆಯುವ, ಗ್ರಾಹಕರಿಗಾಗಿ ಇರುವ ಬ್ಯಾಂಕ್‌ಗಳು ಬಹುಸಂಖ್ಯಾತ ಗ್ರಾಹಕರಿಗೆ ಗೊತ್ತಿರುವ ಭಾಷೆಯಲ್ಲಿ ವ್ಯವಹರಿಸುವುದು ಅಗತ್ಯವಲ್ಲವೇ?

‌ನಗರಗಳಲ್ಲಿ ಇಂದು ಕನ್ನಡ ತಕ್ಕಮಟ್ಟಿಗೆ ಉಳಿದಿದ್ದರೆ, ಅದರಲ್ಲಿ ಆಟೊ ಮತ್ತು ಟ್ಯಾಕ್ಸಿ ಚಾಲಕರ ಕೊಡುಗೆ ದೊಡ್ಡದು. ವಾಹನದ ಮೇಲೆ  ಕನ್ನಡದ ನುಡಿಮುತ್ತುಗಳನ್ನು ಬರೆಸಿರುವುದರ ಜೊತೆಗೆ ತಾವು ಕೂಡ ಕನ್ನಡದಲ್ಲೇ ವ್ಯವಹರಿಸುತ್ತಾರೆ. ಭಾಷೆಯ ಬಳಕೆಯನ್ನು ವಿಸ್ತರಿಸುವ ವಿಚಾರದಲ್ಲಿ ಅವರ ಪಾತ್ರ ಕಡಿಮೆಯೇನಲ್ಲ.  

ರಾಜಕಾರಣಿಗಳು ವೇದಿಕೆಯಲ್ಲಿ ಕನ್ನಡದ ಬಗ್ಗೆ ಅಭಿಮಾನದಿಂದ ಮಾತನಾಡುವಾಗ, ಸಿನಿಮಾದಲ್ಲಿ ನಟರು ಕನ್ನಡದ ಬಗ್ಗೆ ಶೌರ್ಯದ ಮಾತುಗಳನ್ನಾಡುವಾಗ ಚಪ್ಪಾಳೆ ತಟ್ಟುವ ನಾವು, ಬ್ಯಾಂಕುಗಳಲ್ಲಿ ಕನ್ನಡದಲ್ಲಿ ಅರ್ಜಿಗಳು, ಚಲನ್‌ಗಳು ಇಲ್ಲದಿರುವಾಗ ಧ್ವನಿಯೆತ್ತದೆ, ಇಂಗ್ಲಿಷ್‌ನಲ್ಲಿ ಮುದ್ರಿತವಾದ ಚಲನ್‌ ಹಿಡಿದು, ಇಂಗ್ಲಿಷ್‌ ಬರುವವರನ್ನು ಹುಡುಕಿಕೊಂಡು ಹೋಗಿ, ಅವರಿಂದ ಬರೆಸಿಕೊಂಡು ಕೊಟ್ಟು ಬರುತ್ತೇವೆ. ಈ ವಿಚಾರದಲ್ಲಿ ಬ್ಯಾಂಕ್ ಅಧಿಕಾರಿಗಳು ತಲೆಕೆಡಿಸಿಕೊಳ್ಳದೇ ಇರಲು ನಮ್ಮ ಈ ಮನೋಭಾವವೇ ಮೂಲ ಕಾರಣ. ಎಲ್ಲವನ್ನೂ ಸಂಘಟನೆಗಳ ಮೂಲಕ ಸರಿಪಡಿಸಲಾಗದು. ವ್ಯಕ್ತಿ ನೆಲೆಯಲ್ಲಿ ಪ್ರತಿಯೊಬ್ಬರಿಗೂ ಜವಾಬ್ದಾರಿ ಇದೆ. ಅದನ್ನು ಅರಿತು ನಿರ್ವಹಿಸಿದರೆ ಭಾಷೆಗೆ ಪೋಷಣೆ ಸಿಗುತ್ತದೆ. ಆದರೆ ನಾವು ಇಂದು ಕೈಚೆಲ್ಲಿ ಕುಳಿತಿದ್ದೇವೆ. ಕೆಲವು ರಾಜ್ಯಗಳ ಜನ ನಮ್ಮಷ್ಟು ದುರ್ಬಲರಾಗಿಲ್ಲ. ಇದಕ್ಕೆ ಉತ್ತಮ ಉದಾಹರಣೆ, ಮಹಾರಾಷ್ಟ್ರ ಮತ್ತು ತಮಿಳುನಾಡು. ಈ ರಾಜ್ಯಗಳಲ್ಲಿ ಅಲ್ಲಿನ ಆಡಳಿತ ಭಾಷೆಯ ಬಳಕೆಗೆ ಸಿಕ್ಕಿರುವ ಒತ್ತಾಸೆಯನ್ನು ನೋಡಿಯಾದರೂ ನಮ್ಮ ಜನ ಮತ್ತು ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಬ್ಯಾಂಕುಗಳಿಗೆ ಕನ್ನಡ ಗ್ರಾಹಕರು ಬೇಕು, ಆದರೆ ಅವರೊಂದಿಗೆ ಕನ್ನಡದಲ್ಲಿ ವ್ಯವಹರಿಸಲು ಸಾಧ್ಯವಿಲ್ಲ ಎಂದರೆ ಹೇಗೆ?

ಭಾಷೆ ಕುರಿತು ದ್ವೇಷಭಾವ ಸಲ್ಲದು. ಅದೇ ರೀತಿ ಅಂಧಾಭಿಮಾನವೂ ಬೇಕಾಗಿಲ್ಲ. ಆದರೆ ನಮ್ಮ ಭಾಷೆಯನ್ನು ಬಳಸಲು, ಆ ಮೂಲಕ ಅದನ್ನು ಪೋಷಿಸಲು ಮತ್ತು ಬೆಳೆಸಲು ಹಿಂಜರಿಯಬೇಕಾದ ಅಗತ್ಯ ಇಲ್ಲ. ಕನ್ನಡವೊಂದನ್ನೇ ನುಡಿಯಬಲ್ಲ, ಬರೆಯಬಲ್ಲ ಗ್ರಾಹಕ, ಆ ಒಂದೇ ಕಾರಣಕ್ಕೆ ಕಿರಿಕಿರಿ ಅನುಭವಿಸುವಂತೆ ಆಗಬಾರದು. ಮಾಹಿತಿ ಪಡೆಯುವ ಹಕ್ಕಿನಿಂದ ವಂಚಿತ ಆಗಬಾರದು. ಅಂತಹ ವಾತಾವರಣ ರೂಪಿಸಬೇಕಾದುದು ಸರ್ಕಾರದ ಕರ್ತವ್ಯ. ಅದಕ್ಕೆ ಏನೆಲ್ಲ ಮಾಡಬೇಕೋ ಅದನ್ನೆಲ್ಲ ಮಾಡುವಂತೆ ಒತ್ತಾಯಿಸುವುದು ನಮ್ಮ ಹಕ್ಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)