ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಕೋವಿಡ್ ಕಾಲದಲ್ಲೊಂದು ‘ವಿಕ್ಟರಿ ಗಾರ್ಡನ್‌’

ಕೋವಿಡ್ ಸಂಕಷ್ಟಕ್ಕೆ ಸಡ್ಡು ಹೊಡೆಯಲು ಕೈದೋಟ ಸಂಸ್ಕೃತಿ ನಮ್ಮ ನೆರವಿಗೆ ಬರಬೇಕಿದೆ
Last Updated 25 ಮೇ 2021, 18:39 IST
ಅಕ್ಷರ ಗಾತ್ರ

‘ನಮ್ಮ ಕಿಟಕಿಯ ಆಚೆ ಏನು ಬೆಳೀಬಹುದು’, ‘ಮನೆಯಲ್ಲೇ ಕಂಪೋಸ್ಟ್ ಮಾಡೋದು ಹೇಗೆ’ ಇಂಥ ಪ್ರಶ್ನಾವಳಿ, ಇಷ್ಟೇ ಅಲ್ಲ, ‘ಟಾಯ್ಲೆಟ್‌ನಲ್ಲಿ ಟಿಶ್ಯೂ ಬದಲಾಗಿ ಯಾವ ಎಲೆ ಬಳಸಬಹುದು?’ ಎಂದು ಕೂಡಾ ಜನ ಕೇಳಿದ್ದರು ಎನ್ನುತ್ತಾರೆ ಅಮೆರಿಕದ ಯೋಗಶಿಕ್ಷಕಿ ಮತ್ತು ನಿಸರ್ಗಸ್ನೇಹಿ ಜೀವನದ ಕುರಿತು ಪ್ರತಿಪಾದನೆ ಮಾಡುತ್ತಿರುವ ಜೇನ್. ಹೀಗೆ ಕೇಳಿದವರೆಲ್ಲರೂ ಹಿಂದೆ ಯಾವತ್ತೂ ಗಿಡಗಳ ಕುರಿತು ಒಂದಿನಿತೂ ಆಸಕ್ತಿ ತೋರದಿದ್ದವರು.

ಮೊದಲ ಮಹಾಯುದ್ಧದ ನಂತರ ಎಲ್ಲೆಡೆ ಆಹಾರಕ್ಕಾಗಿ ಹಾಹಾಕಾರವೆದ್ದಿತ್ತು. ಆಗ ಬ್ರಿಟನ್ನಿನಲ್ಲಿ ಎದ್ದ ಹೊಸ ಆಶಯದ ಅಲೆ ‘ವಿಕ್ಟರಿ ಗಾರ್ಡನ್’. ಸಾವು, ನೋವು, ಹತಾಶೆಗಳ ನಡುವೆ, ನಮ್ಮ ಆಹಾರವನ್ನು ನಾವೇ ಬೆಳೆದು ಆರೋಗ್ಯ ವೃದ್ಧಿಸಿಕೊಳ್ಳುವ ಮೂಲಕ, ಎದುರಾದ ಸಮಸ್ಯೆಯ ವಿರುದ್ಧ ಜಯ ಗಳಿಸುವ ಆಶಯ ಅದು. ‘ವಿಕ್ಟರಿ ಗಾರ್ಡನ್’ ಮನೆಮನೆಯಲ್ಲೂ ಬಟಾಟೆ, ಬೀಟ್‌ರೂಟ್, ಜೋಳ, ಟೊಮ್ಯಾಟೊಗಳನ್ನು ಬೆಳೆದು ಆಹಾರ ಸ್ವಾವಲಂಬನೆಯ ರುಚಿ ತೋರಿಸಿತ್ತು.

ಉತ್ತರ ಅಮೆರಿಕ ರಾಷ್ಟ್ರವಾದ ಕ್ಯೂಬಾಕ್ಕೆ ಎದುರಾಗಿದ್ದು ಇನ್ನೊಂದು ರೀತಿಯ ಸಂಕಷ್ಟ. 1980ರ ದಶಕದಲ್ಲಿ ಅಮೆರಿಕದೊಂದಿಗೆ ವೈರತ್ವ ನೆಲೆಯೂರಿತ್ತು. ಮಿತ್ರರಾಷ್ಟ್ರವಾದ ಸೋವಿಯತ್ ಒಕ್ಕೂಟ ಛಿದ್ರಗೊಂಡು ಬಿಡಿ ದೇಶಗಳಾಗುವ ಹೊಯ್ದಾಟ ನಡೆದಾಗ, ಅಲ್ಲಿಂದ ಆಮದು ಸ್ತಬ್ಧಗೊಂಡಿತ್ತು. ಪೆಟ್ರೋಲಿಯಂ ಉತ್ಪನ್ನಗಳಿಂದ ಮೊದಲುಗೊಂಡು ಆಹಾರಧಾನ್ಯಗಳಿಗೂ ಒಕ್ಕೂಟವನ್ನೇ ನೆಚ್ಚಿಕೊಂಡಿದ್ದ ಕ್ಯೂಬಾ ಸ್ವಾವಲಂಬನೆಯ ಹಾದಿ ಹಿಡಿಯಲೇಬೇಕಿತ್ತು. ಆಗ ನಗರ, ಪಟ್ಟಣ, ಹಳ್ಳಿ ಎಲ್ಲ ಕಡೆ ಹಣ್ಣು, ತರಕಾರಿ, ಧಾನ್ಯಗಳನ್ನು ಸಾಂಪ್ರದಾಯಿಕವಾಗಿ ಬೆಳೆಯುವುದರ ಜೊತೆಗೆ ಪರಂಪರಾಗತ ಆಹಾರ ತಯಾರಿಕೆಗೆ ಒತ್ತು ದೊರೆಯಿತು. ಜನರಿಗೆ ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಮೂಡಿತು.

ಅಂತರ ಕಾಯ್ದುಕೊಳ್ಳುವಿಕೆಯಿಂದಾಗಿ ಪರಸ್ಪರ ದೂರವಾಗುತ್ತಿರುವ ಈ ಕಾಲದಲ್ಲೂ ಹೋಂ ಗಾರ್ಡನ್ ಅಥವಾ ಕೈದೋಟ ಎನ್ನುವ ಹವ್ಯಾಸ ಜನರನ್ನು ಹಿತ್ತಲಿಗೆ, ಖಾಲಿ ಜಾಗಕ್ಕೆ ಕಾಲಿಡುವಂತೆ ಪ್ರೇರೇಪಿಸುತ್ತಿದೆ.

ಹೀಗೆ ಒಂದಿಬ್ಬರಲ್ಲ, ಲಕ್ಷಾಂತರ ಜನರು ಬೀಜ ಬಿತ್ತುವಲ್ಲಿ, ಬೆಳೆಯುವುದರಲ್ಲಿ ಆಸಕ್ತಿ ತೋರಿದ್ದು ಈ ಕೋವಿಡ್ ಕಾಲದಲ್ಲಿ. ‘ಬಿತ್ತನೆ ಬೀಜಗಳ ಮಾರಾಟ ಒಂದೇ ವಾರದಲ್ಲಿ ಮೂರು ಪಟ್ಟು ಹೆಚ್ಚಾಗಿ, ಬೀಜ ಖಾಲಿಯಾಗುವ ಹೊತ್ತು ಬಂದಿತ್ತು’ ಎನ್ನುತ್ತಾರೆ ಒಬ್ಬ ಬೀಜ ಮಾರಾಟಗಾರ. ಸಂಸ್ಥೆಯೊಂದರ ವರದಿಯ ಪ್ರಕಾರ, ಟಿ.ವಿ ನೋಡುವುದನ್ನು ಬಿಟ್ಟರೆ ಗಾರ್ಡನಿಂಗ್ ಜನರ ನೆಚ್ಚಿನ ಹವ್ಯಾಸವಾಗಿ ಅಡುಗೆ, ಓದು ಹಾಗೂ ವ್ಯಾಯಾಮದಂತಹ ಚಟುವಟಿಕೆಗಳನ್ನು ಹಿಂದಿಕ್ಕಿತು. ಗಾರ್ಡನಿಂಗ್ ಆ್ಯಪ್‌ಗಳು, ಯುಟ್ಯೂಬ್ ಚಾನೆಲ್ಲುಗಳಿಗೆ ಎಲ್ಲಿಲ್ಲದ ಬೇಡಿಕೆ ಹುಟ್ಟಿತು.

ಬಿಡುವಿನ ವೇಳೆಯಲ್ಲಿ ಮಾಡಬಹುದಾದ ಚಟುವಟಿಕೆಗಳಲ್ಲಿ ಕೈದೋಟ ಬೆಳೆಯುವುದು ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯವನ್ನು ಉತ್ತಮಪಡಿಸುವ ಹವ್ಯಾಸವೆಂದು ಅಮೆರಿಕದ ಅಧ್ಯಯನ ವರದಿಯೊಂದು ಹೇಳಿದೆ. ‘ಹೊರಾಂಗಣದಲ್ಲಿ ಗಿಡಗಳ ಜೊತೆಗೆ ಕಳೆಯುವ ಸಮಯ ಮೈಗೆ ಕಸರತ್ತನ್ನು ನೀಡುವುದರೊಂದಿಗೆ ಮನಸ್ಸನ್ನೂ ಮಗ್ನವಾಗುವಂತೆ ಮಾಡುತ್ತದೆ. ಬೆಳೆಯುವುದೆಂದರೆ ಮಣ್ಣು, ನೀರು ಗಾಳಿಯೊಂದಿಗೆ ನೇರ ಸಂಬಂಧ ಹೊಂದುವುದು. ಆ ಕೆಲಸದಲ್ಲಿ ತೊಡಗಿದಾಗ, ನೀವು ಬೆಳೆದಿದ್ದನ್ನು ನೆರೆಯವರೊಂದಿಗೆ ಹಂಚಿಕೊಂಡಾಗ ಕೃತಕೃತ್ಯ ಭಾವ ಮನಸ್ಸನ್ನು ತುಂಬುತ್ತದೆ’.

‘ಮಾಡರ್ನ್ ಆರ್ಗ್ಯಾನಿಕ್ ಮೂವ್‌ಮೆಂಟ್’ ದೇಶವಿದೇಶಗಳಲ್ಲಿ ಪ್ರಚಲಿತವಾಗುತ್ತಿದೆ. ನಮಗೆಂದು ನಾವೇ ಬೆಳೆದುಕೊಳ್ಳುವಾಗ ವಿಷಕರ ರಾಸಾಯನಿಕಗಳನ್ನು ಬಳಸದೆ ಸುರಕ್ಷಿತ ವಿಧಾನಗಳಿಗೆ ಮೊರೆ ಹೋಗುತ್ತೇವೆ. ಕೆಲವು ಸಂಸ್ಥೆಗಳು ಕಂಪೋಸ್ಟ್ ತಯಾರಿಕೆ, ಎರೆಗೊಬ್ಬರ ತಯಾರಿಕೆ, ವರ್ಟಿಕಲ್ ಗಾರ್ಡನಿಂಗ್, ಮಣ್ಣು, ನೀರು ಕುರಿತಾದ ವಿವರಗಳು, ಬೀಜ, ಕೈಪಿಡಿ ಇತ್ಯಾದಿಗಳ ಮೂಲಕ ಜನರನ್ನು ತಲುಪುತ್ತಿವೆ.

ಕೈದೋಟದ ಹವ್ಯಾಸವೆಂದರೆ ನಮ್ಮ ಕುಟುಂಬದ ಆಹಾರಾಭ್ಯಾಸವನ್ನು ಪಳಗಿಸುವುದು. ಆಹಾರ ಸರಪಳಿಯನ್ನು ಚಿಕ್ಕದಾಗಿಸುವುದು ಹಾಗೂ ಉಳಿಕೆಯನ್ನು ನಮ್ಮದೇ ನೆಲಕ್ಕೆ ಮರಳಿಸುವುದು. ತ್ಯಾಜ್ಯ ನೀರಿನ ಸಮರ್ಥ ಬಳಕೆ, ಕಸದಿಂದ ಗೊಬ್ಬರ ಇಂಥವುಗಳ ಅರಿವಷ್ಟೇ ಅಲ್ಲ, ಹಸಿರು, ತಂಪಿನ ವಾತಾವರಣದ ನಿರ್ಮಾತೃಗಳೂ ನಾವೆಂಬ ಆತ್ಮವಿಶ್ವಾಸ ಗಳಿಸುವುದು. ದೂರದಿಂದ ಬರುವ ಬಟಾಟೆಯ ಬದಲು ನಿಮ್ಮಲ್ಲಿ ಬೆಳೆಯುವ ಗೆಣಸನ್ನು ಬಳಸಿದರೆ, ನೀವೊಂದಿಷ್ಟು ಇಂಗಾಲದ ಹೆಜ್ಜೆಯನ್ನು ಕಡಿಮೆಗೊಳಿಸುತ್ತೀರಿ. ಪ್ರಕೃತಿಯೊಡನೆ ಬೆರೆತು, ಬೀಜ ಮೊಳಕೆಯಿಂದ ಆಹಾರ ಸಿದ್ಧಗೊಳ್ಳುವವರೆಗಿನ ಎಲ್ಲ ಹಂತಗಳನ್ನೂ ಅರಿಯುತ್ತೀರಿ. ಆರೋಗ್ಯಕರ ಆಹಾರಾಭ್ಯಾಸ ನಿಮ್ಮದಾಗುತ್ತದೆ. ಮಕ್ಕಳನ್ನೂ ತೊಡಗಿಸಿದಿರೆಂದರೆ ಕೈದೋಟದ ಹವ್ಯಾಸ ಒಂದು ಸಂಸ್ಕೃತಿಯಾಗಿ ಬೆಳೆಯುವಲ್ಲಿ ನಿಮ್ಮ ಪಾಲಿನ ಕೊಡುಗೆ ನೀಡುತ್ತಿದ್ದೀರಿ ಎಂದೇ ಅರ್ಥ.

ಹವಾಮಾನ ಬದಲಾವಣೆಯ ವಿರುದ್ಧ ಜಾಗೃತಿ ಮೂಡಿದ ಕಳೆದ ದಶಕದಿಂದ ಅಮೆರಿಕದಲ್ಲಿ ವಿಕ್ಟರಿ ಗಾರ್ಡನ್ನುಗಳು ‘ಕ್ಲೈಮೇಟ್ ವಿಕ್ಟರಿ ಗಾರ್ಡನ್’ ಎಂದು ಹೊಸ ನಾಮಾಂಕಿತ ಪಡೆದಿವೆ. ಯುವ ಸಮುದಾಯ ಓಣಿ, ಬೀದಿಗಳ ಖಾಲಿ ಜಾಗದಲ್ಲಿ ಬೆಳೆದು ಅಲ್ಲೇ ಸುತ್ತಮುತ್ತ ತಾಜಾ ತಾಜಾ ಬಳಸುವ ಹೊಸ ಸಂಪ್ರದಾಯವನ್ನು ಹುಟ್ಟುಹಾಕಿದೆ.

ಈಗಿನ ಕೋವಿಡ್ ಸಂಕಷ್ಟಕ್ಕೆ ಸಡ್ಡು ಹೊಡೆಯಲು ಮತ್ತೆ ಕೈದೋಟ ಸಂಸ್ಕೃತಿ ನಮ್ಮ ನೆರವಿಗೆ ಬರಬೇಕಿದೆ. ‘ಕೋವಿಡ್ ವಿಕ್ಟರಿ ಗಾರ್ಡನ್’ಗಳಾಗಿ ತನು ಮನಗಳಿಗೆ ಹೊಸ ಚೈತನ್ಯ ನೀಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT