ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮಿಸಿ... ಕರುಣಾರಸಕ್ಕಿಲ್ಲಿ ಒಡ್ಡುಂಟು

ಕರುಣೆ, ಸಹಿಷ್ಣುತೆ ಆಚರಿಸುವುದು ಬಾಲಕನ ಕೋಳಿಮರಿಯ ಚಿತ್ರ ಶೇರ್ ಮಾಡಿದಷ್ಟು, ಬಣ್ಣಬಣ್ಣದ ಶಾಂತಿ–ಸಹಿಷ್ಣುತೆಯ ಮಾತನಾಡಿದಷ್ಟು ಸರಾಗವಲ್ಲ
Last Updated 16 ಏಪ್ರಿಲ್ 2019, 2:39 IST
ಅಕ್ಷರ ಗಾತ್ರ

ಒಂದು ಕೈಯ್ಯಲ್ಲಿ ಸತ್ತ ಕೋಳಿಮರಿ, ಇನ್ನೊಂದು ಕೈಯ್ಯಲ್ಲಿ ಹತ್ತು ರೂಪಾಯಿ ನೋಟು ಹಿಡಿದುಕೊಂಡಿದ್ದ ಮಿಜೋರಾಮ್‌ನ ಆರು ವರ್ಷದ ಬಾಲಕನ ಭಾವಚಿತ್ರ ಅಂತರ್ಜಾಲದಲ್ಲಿ ಇತ್ತೀಚೆಗೆ ವೈರಲ್ ಆಗಿತ್ತು. ಮಿಜೋರಾಮ್‍ನ ರಾಜಧಾನಿ ಐಜ್ವಾಲ್ ಸಮೀಪದ ಸೈರಂಗ್‍ನವನಾದ ಡೆರೆಕ್ ಎಂಬ ಈ ಬಾಲಕನ ಸೈಕಲ್, ಪಕ್ಕದ ಮನೆಯವರ ಕೋಳಿಮರಿಯೊಂದರ ಮೇಲೆ ಹಾದು ಹೋಗಿತ್ತು. ಸ್ಥಳದಲ್ಲೇ ಮರಿ ಸತ್ತೂ ಹೋಯಿತು. ಆದರೆ ಅದು ಇನ್ನೂ ಬದುಕಿದೆ ಎಂದು ನಂಬಿದ್ದ ಹುಡುಗ ಮನೆಗೆ ಹೋಗಿ, ತಂದೆತಾಯಿಯ ಹತ್ತಿರ ಅದನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ಒತ್ತಾಯಿಸಿದ. ಆಗ ಅವನ ತಂದೆ ಅದನ್ನು ಸ್ಥಳೀಯ ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ಹೇಳಿದರು. ತನ್ನ ಪಾಕೆಟ್ ಮನಿಯಲ್ಲಿ ಉಳಿದ ಹತ್ತು ರೂಪಾಯಿಯನ್ನೂ ಕೋಳಿಮರಿಯನ್ನೂ ತೆಗೆದುಕೊಂಡು ಆಸ್ಪತ್ರೆಗೆ ಹೋದ ಡೆರೆಕ್. ಆಸ್ಪತ್ರೆಯ ಸಿಬ್ಬಂದಿ, ಅದು ಈಗಾಗಲೇ ಸತ್ತಿದೆಯೆಂದೂ, ಬಂದಿದ್ದು ತಡವಾಯಿತೆಂದೂ ಹೇಳಿ ವಾಪಸ್‌ ಕಳಿಸಿದರು. ಅದು ಸತ್ತಿದೆಯೆಂದು ನಂಬದ ಆತ ಮನೆಗೆ ಬಂದು, ಆಸ್ಪತ್ರೆಯವರು ಕೋಳಿಮರಿಯನ್ನು ನೋಡುವ ಬದಲು ತನ್ನ ಫೋಟೊ ತೆಗೆದರೆಂದು ದೂರು ಹೇಳಿದ!

ಆಸ್ಪತ್ರೆಯ ನರ್ಸ್ ಒಬ್ಬರು ತೆಗೆದ ಡೆರೆಕ್‍ನ ಫೋಟೊವನ್ನು ಆತನ ತಂದೆಯ ಸ್ನೇಹಿತರೊಬ್ಬರು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದೇ ತಡ ಅದು ವೈರಲ್ ಆಗಿಬಿಟ್ಟಿತು. ಬಾಲಕನ ಮುಗ್ಧತೆ, ಕರುಣೆಯ ಬಗ್ಗೆ ಹೊಗಳಿಕೆಯ ಸುರಿಮಳೆ. ಕೋಳಿಮರಿ ಮತ್ತು ಹತ್ತು ರೂಪಾಯಿ ನೋಟನ್ನು ಹಿಡಿದುಕೊಂಡು ಆಸ್ಪತ್ರೆಯ ಸಿಬ್ಬಂದಿಯನ್ನು ದೈನ್ಯದಿಂದ ನೋಡುತ್ತ, ಅದನ್ನು ಕಾಪಾಡಲು ಕೋರುತ್ತಿರುವ ಮುದ್ದುಹುಡುಗ ಎಲ್ಲರ ಮನಸ್ಸನ್ನೂ ಗೆಲ್ಲಲೇಬೇಕು, ಗೆದ್ದಿದ್ದಾನೆ.

ಏಕೆಂದರೆ ಹೇಳಿಕೇಳಿ ಇದು ಬುದ್ಧನ ನಾಡು. ಅಂತಹ ಕ್ರೂರಿ ಅಂಗುಲಿಮಾಲನನ್ನೇ ತನ್ನ ಕರುಣೆಯಿಂದ ಮಣಿಸಿದಾತನ ನಾಡು. ಆದರೆ ಇಂತಹ ಭೂಮಿಯಲ್ಲಿ ಕರುಣಾರಸವೆಂಬುದು ನಿರಾತಂಕವಾಗಿ ಹರಿಯುತ್ತಿದೆ ಎಂದು ಹೆಮ್ಮೆಯಿಂದ ಹೇಳುವ ಹಾಗಿಲ್ಲ. ಏಕೆಂದರೆ ಕ್ಷಮಿಸಿ... ಕರುಣೆ, ಸಹಿಷ್ಣುತೆ ಇವುಗಳನ್ನು ಆಚರಿಸುವುದು ಡೆರೆಕ್‍ನ ಕೋಳಿಮರಿಯ ಚಿತ್ರ ಶೇರ್ ಮಾಡಿದಷ್ಟು ಸುಲಭವೂ ಅಲ್ಲ, ಬಾಯಲ್ಲಿ ಬಣ್ಣಬಣ್ಣದ ಶಾಂತಿಯ, ಸಹಿಷ್ಣುತೆಯ ಮಾತಾಡಿದಷ್ಟು ಸರಾಗವೂ ಅಲ್ಲ. ಅದು ಸುಲಭವಾಗಿದ್ದರೆ ನಮ್ಮ ದೇಶದಲ್ಲಿ ಇಷ್ಟೊಂದು ಹಿಂಸಾ ಪ್ರಕರಣಗಳು, ಅಪರಾಧಗಳು ನಡೆಯುತ್ತಿರಲಿಲ್ಲ.

ಕಳೆದ ತಿಂಗಳು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ತನ್ನ ‘ಹಾಲ್ಟ್ ದ ಹೇಟ್’ ವೆಬ್‍ಸೈಟಿನಲ್ಲಿ, 2018ರಲ್ಲಿ ಜರುಗಿದ ದ್ವೇಷಾಧಾರಿತ ಅಪರಾಧಗಳ ಬಗ್ಗೆ ಒಂದು ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿತ್ತು. ಕಾನೂನುಗಳು ಅಪರಾಧವನ್ನು ಮಾತ್ರ ದಾಖಲಿಸುತ್ತವೆ ಮತ್ತು ಮೇಲ್ನೋಟದ ಕಾರಣಗಳನ್ನು ಮಾತ್ರ ಕಲೆ ಹಾಕುತ್ತವೆ. ಆದರೆ ಇಂತಹ ನಿರ್ದಿಷ್ಟ ಅಪರಾಧಗಳ ಹಿಂದಿನ ಸೂಕ್ಷ್ಮ ಕಾರಣಗಳನ್ನು ಗುರುತಿಸುವಲ್ಲಿ ವಿಫಲವಾಗುತ್ತವೆ. ಅದನ್ನು ಅಧ್ಯಯನ ಮಾಡಿ ನಿರ್ಮಿಸಲಾದ ಈ ಸಾಕ್ಷ್ಯಚಿತ್ರ, ನಾವೆತ್ತ ಸಾಗುತ್ತಿದ್ದೇವೆ ಎಂಬುದನ್ನು ತೋರಿಸುತ್ತದೆ. ಒಂದು ನಿರ್ದಿಷ್ಟ ಗುಂಪಿಗೆ ಸೇರಿದ್ದಾರೆ ಎನ್ನುವ, ಕಾರಣವೇ ಅಲ್ಲದ ಕಾರಣ ಈ ದ್ವೇಷಾಧಾರಿತ ಹತ್ಯೆಗಳಿಗೆ, ಹಲ್ಲೆಗಳಿಗೆ ಕಾರಣ. ಆಘಾತಕಾರಿ ಸಂಗತಿಯೆಂದರೆ, ಈ ದ್ವೇಷಾಧಾರಿತ ಹತ್ಯೆಗಳಿಗೆ ಕಾರಣವೇ ಬೇಕಿಲ್ಲ. ನಮ್ಮ ದೊಡ್ಡಸ್ತಿಕೆಯ ಬಲೂನಿಗೆ ಸೂಜಿ ಚುಚ್ಚುವ ಯಾವುದೇ ಜುಜುಬಿ ಸಂಗತಿಯೂ ಈ ಹತ್ಯೆಗೆ ಕಾರಣವಾಗಬಹುದು ಮತ್ತು ನಮ್ಮಲ್ಲಿ ಬಹಳ ಜನರು ಇತರರನ್ನು ಕೀಳಾಗಿಸಿ ತಾವು ದೊಡ್ಡಜನರೆಂಬ ಭ್ರಮೆಯಲ್ಲಿರುತ್ತಾರೆ. ಮಹಿಳೆಯನ್ನು ಕೀಳಾಗಿಸಿ ಪುರುಷ, ಕೆಳಜಾತಿಯವರನ್ನು ಕೀಳಾಗಿಸಿ ಮೇಲ್ಜಾತಿಯವರು ಹೀಗೆ ಅನಾಯಾಸವಾಗಿ ಬರುವ ಹಿರಿಮೆಯನ್ನು ಕಾಪಿಟ್ಟುಕೊಳ್ಳಲು ಪ್ರತಿಯೊಬ್ಬರೂ
ಪ್ರಯತ್ನಪಡುತ್ತಾರೆ.

ಹಾಗಾಗಿ ಜಗತ್ತಿನ ಇತಿಹಾಸವನ್ನು ನೋಡಿದರೆ ಈ ಶ್ರೇಷ್ಠತೆಯ ಹುಚ್ಚು ಹರಿಸಿರುವ ರಕ್ತ ಬೇರೆಲ್ಲ ಕಾರಣಗಳಿಗಿಂತ ಹೆಚ್ಚೇ ಆಗಿದೆ. ಇದಕ್ಕೆ ಎಲ್ಲಾ ದೇಶಕಾಲಗಳೂ ಸಾಕ್ಷಿಯಾಗಿವೆ ಮತ್ತು ಈ ಮೇಲರಿಮೆಯ ಕಾಯಿಲೆಯಿಂದ ತೊಂದರೆಗೀಡಾಗುವುದು ಶ್ರೇಣಿವ್ಯವಸ್ಥೆಯ ತಳದಲ್ಲಿ ಇರುವವರು. ಈ ಸಾಕ್ಷ್ಯಚಿತ್ರದಲ್ಲಿ ದಾಖಲಿಸಿರುವ ಅತಿಹೆಚ್ಚು ಪ್ರಕರಣಗಳು ಜಾತಿ ಆಧಾರಿತವಾಗಿದ್ದರೆ, ಮುಂದಿನ ಹೆಚ್ಚಿನ ಪ್ರಕರಣಗಳು ಲಿಂಗ ತಾರತಮ್ಯ ಹಾಗೂ ಧರ್ಮದ ಆಧಾರಿತವಾಗಿರುವುದು ಇದಕ್ಕೆ ಸಾಕ್ಷಿ. ಹಾಗಾಗಿ 2018ರಲ್ಲಿ ನಡೆದ ದ್ವೇಷಾಪರಾಧ
ಪ್ರಕರಣಗಳಲ್ಲಿ ಶೇಕಡ 65ರಷ್ಟು ಕೃತ್ಯಗಳು ದಲಿತರ ವಿರುದ್ಧ ನಡೆದಿರುವುದು ಅಚ್ಚರಿ ಹುಟ್ಟಿಸುವ ಸಂಗತಿಯೇನಲ್ಲ. ಮಹಿಳೆಯರ ಮೇಲಿನ ಅತ್ಯಾಚಾರದಂತಹ ಪ್ರಕರಣಗಳ ಬಲಿಪಶುಗಳಲ್ಲೂ ದಲಿತ ವರ್ಗದವರದೇ ಸಂಖ್ಯೆ ಹೆಚ್ಚು. ಇನ್ನುಳಿದವರಲ್ಲಿ ಆದಿವಾಸಿಗಳು, ಧಾರ್ಮಿಕ ಹಾಗೂ ಲೈಂಗಿಕ ಅಲ್ಪಸಂಖ್ಯಾತರು ಸೇರುತ್ತಾರೆ.

ಇಂತಹ ಪ್ರಕರಣಗಳು ನಿಯಮಿತವಾಗಿ ವರದಿಯಾಗುತ್ತಿದ್ದರೂ ನಾವು ಅದರ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಯಾರಾದರೂ ಮಾತನಾಡುತ್ತಿದ್ದರೆ ಚರ್ಚೆಯಲ್ಲಿ ಭಾಗವಹಿಸದೇ ಜಾಣ ಅಂತರ ಕಾದುಕೊಳ್ಳುತ್ತೇವೆ. ಆದರೆ ಪುಟ್ಟ ಹುಡುಗನ ಕರುಣೆಯನ್ನು ವ್ಯಾಪಕವಾಗಿ ಶೇರ್ ಮಾಡುತ್ತೇವೆ. ಹಾಗಾದರೆ ಕರುಣೆ, ಹಿಂಸೆ ಇವೆಲ್ಲವುಗಳ ಮಾನದಂಡ ನಮ್ಮ ಮೂಗಿನ ನೇರಕ್ಕೆ ಮಾತ್ರವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT