ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಪಂಚಾಯಿತಿ ವ್ಯವಸ್ಥೆ: ವಸ್ತುಸ್ಥಿತಿ ಅರಿಯೋಣ

ಗ್ರಾಮ ಪಂಚಾಯಿತಿ ವ್ಯವಸ್ಥೆಯ ಅರೆಕೊರೆಗಳನ್ನು ಗುರುತಿಸಿ ಅದನ್ನು ಮತ್ತಷ್ಟು ಸದೃಢಗೊಳಿಸುವ ಕುರಿತು ಚಿಂತಿಸಬೇಕಾಗಿದೆ
ಪ.ರಾಮಕೃಷ್ಣ ಶಾಸ್ತ್ರಿ
Published 16 ಮಾರ್ಚ್ 2024, 0:15 IST
Last Updated 16 ಮಾರ್ಚ್ 2024, 0:15 IST
ಅಕ್ಷರ ಗಾತ್ರ

ಮನೆ ತೆರಿಗೆ ವಸೂಲಿ ಮತ್ತು ಸ್ಥಳೀಯ ವಿವಾದಗಳ ಪರಿಹಾರಕ್ಕೆ ಸೀಮಿತವಾಗಿದ್ದ ಗ್ರಾಮ ಪಂಚಾಯಿತಿಗಳಿಗೆ ಹೊಸ ರೂಪ ಕೊಟ್ಟವರು ರಾಮಕೃಷ್ಣ ಹೆಗಡೆ ಮತ್ತು ಅಬ್ದುಲ್‌ ನಜೀರ್‌ ಸಾಬ್.‌ ಅಧಿಕಾರ ವಿಕೇಂದ್ರೀಕರಣದ ಅಭೂತಪೂರ್ವ ಕಲ್ಪನೆಯ ಮಂಡಲ ಪಂಚಾಯಿತಿ ವ್ಯವಸ್ಥೆಯಿಂದ ಅಕ್ಷರ ಅರಿಯದವರೂ ಗೆದ್ದು ಬಂದು ಅಕ್ಕರೆಯಿಂದ ಗ್ರಾಮದ ಅಭಿವೃದ್ಧಿ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟರು.

ಸಂಗ್ರಹಿಸಿದ ತೆರಿಗೆ ಜೊತೆಗೆ ಸರ್ಕಾರ ಕೊಡುವ ಅನುದಾನವನ್ನು ಬಳಸಿ ಗ್ರಾಮಗಳನ್ನು ಸೌಲಭ್ಯದ ಆಗರಗಳನ್ನಾಗಿ ಪರಿವರ್ತಿಸುವ ಕೌಶಲವು ಆಡಳಿತ ವ್ಯವಸ್ಥೆಯ ಅಧ್ಯಯನಕ್ಕಾಗಿ ವಿದೇಶಗಳಿಂದ ಕರ್ನಾಟಕಕ್ಕೆ ಜನ ಬರುವಂತೆ ಮಾಡಿತು. ಆದರೆ ಸರ್ಕಾರ ನಡೆಸುವ ಪಕ್ಷಗಳು ಬದಲಾದವು. ಮೂರು– ನಾಲ್ಕು ಗ್ರಾಮಗಳಿಗೆ ಒಂದರಂತೆ ಇದ್ದ ವ್ಯವಸ್ಥೆ ಬದಲಾಗಿ ಮತ್ತೆ ಗ್ರಾಮಗ್ರಾಮಗಳಲ್ಲೂ ಪಂಚಾಯಿತಿಗಳು ಹುಟ್ಟಿಕೊಂಡವು. ಗ್ರಾಮ ಪಂಚಾಯಿತಿಗಳು ಈಗ ಜನಜೀವನಕ್ಕೆ ಎಷ್ಟು ಆಪ್ತವಾಗಿವೆ ಎಂಬುದರ ವಿಮರ್ಶೆ ಮಾಡಲು ಇದು ಸಕಾಲ ಎನಿಸುತ್ತದೆ.

ಮನೆಗಳಿಗೆ ಕುಡಿಯುವ ನೀರು ಪೂರೈಕೆ ಬಿಟ್ಟರೆ ಪಂಚಾಯಿತಿಗಳು ಏನು ಅಭಿವೃದ್ಧಿ ಮಾಡುತ್ತಿವೆ? ಮೌಲ್ಯಮಾಪನ ಮಾಡಿದರೆ ಹೆಚ್ಚಿನ ಕಡೆ ಒಂದು ದೊಡ್ಡ ಸೊನ್ನೆ ಮಾತ್ರ ಕಾಣಿಸುತ್ತದೆ. ಆದರೆ ಇದಿಷ್ಟೇ ಕೆಲಸಕ್ಕೂ ಪಂಚಾಯಿತಿಯ ಗಳಿಕೆಯನ್ನು ಪೂರ್ತಿ ನುಂಗುವಷ್ಟು ಸಂಖ್ಯೆಯಲ್ಲಿ ಉದ್ಯೋಗಗಳು ಸೃಷ್ಟಿಯಾಗಿವೆ, ನೌಕರರಿಗೆ ಅದೊಂದು ಹುಲ್ಲುಗಾವಲಾಗಿ ಬದಲಾಗಿದೆ.

ಅಚ್ಚರಿಯೆಂದರೆ, ಸರ್ಕಾರ ಕೊಡುವ ತಲಾವಾರು ಅಭಿವೃದ್ಧಿ ನಿಧಿ ಶೇ 40ರಷ್ಟು ನೌಕರರ ಸಂಬಳಕ್ಕೂ ಉಳಿದದ್ದು ನಲ್ಲಿ ನೀರು, ಬೀದಿದೀಪಗಳಿಗೆ ಬಳಸುವ ವಿದ್ಯುತ್ತಿನ ಶುಲ್ಕಕ್ಕೂ ಬಳಕೆಯಾಗಿ ಅಭಿವೃದ್ಧಿಗೆ ಬಿಡಿಗಾಸೂ ಉಳಿಯುವುದಿಲ್ಲ. ಹತ್ತನೆಯ ತರಗತಿ ಓದಿದರೂ ಸಾಕು, ಅಂಥವರಿಗೆ ಪಂಚಾಯಿತಿ ಕಾರ್ಯದರ್ಶಿಯ ಹುದ್ದೆ ನೀಡಿದರು. ಕೆಲವು ಸಾವಿರ ರೂಪಾಯಿ ಮೊತ್ತದ ತೆರಿಗೆ ಸಂಗ್ರಹವಾಗುವ ಪಂಚಾಯಿತಿಗೆ ಅವರೊಬ್ಬರೇ ಸಾಕಾಗುತ್ತಿತ್ತು. ಸಾಲದ್ದಕ್ಕೆ ಪದವೀಧರರೊಬ್ಬರನ್ನು ಅಭಿವೃದ್ಧಿ ಅಧಿಕಾರಿ
ಯನ್ನಾಗಿ ನೇಮಿಸಲಾಯಿತು. ಇವರು ಬಂದ ಮೇಲೆ, ರಾಜ್ಯದಲ್ಲಿರುವ ಐದೂವರೆ ಸಾವಿರಕ್ಕಿಂತ ಹೆಚ್ಚು ಪಂಚಾಯಿತಿಗಳಲ್ಲಿ ಏನು ಬದಲಾವಣೆಯಾಗಿದೆ, ಅಭಿವೃದ್ಧಿ ಎಷ್ಟು ಆಗಿದೆ, ಸಂಪನ್ಮೂಲ ಕ್ರೋಡೀಕರಣಕ್ಕೆ
ಏನು ಜಾದೂ ಮಾಡಿದ್ದಾರೆ, ಸಂಗ್ರಹಿಸಿದ ಮನೆ ತೆರಿಗೆ ಹೇಗೆ ಬಳಕೆಯಾಗುತ್ತದೆ ಎಂದು ಪರಿಶೀಲಿಸುವ ಅಗತ್ಯ ಎದ್ದು ಕಾಣುತ್ತದೆ. ಗುತ್ತಿಗೆದಾರರನ್ನು ಕೇಳಿದರೆ, ‘ಹಿಂದೆ ಕಾರ್ಯದರ್ಶಿ ಒಬ್ಬರಿಗೆ ಕಮಿಷನ್‌ ಕೊಟ್ಟರೆ ಸಾಕಾಗುತ್ತಿತ್ತು, ಈಗ ಇಬ್ಬರಿಗೂ ಕೊಡಬೇಕಾಗಿದೆ’ ಎನ್ನುತ್ತಾರೆ.

ಗ್ರಾಮ ಪಂಚಾಯಿತಿ ತನ್ನ ಸಂಪನ್ಮೂಲವನ್ನು ತಾನೇ ಸಂಗ್ರಹಿಸಿಕೊಳ್ಳಬೇಕು ಎನ್ನುವ ಸರ್ಕಾರ ಅದಕ್ಕೆ ಮಾರ್ಗದರ್ಶಿಸೂತ್ರಗಳನ್ನು ರೂಪಿಸಿದೆ. ಮನೆ ತೆರಿಗೆ ದರ ಏರಿಸುವುದನ್ನು ಬಿಟ್ಟರೆ ವರಮಾನ ಸಂಗ್ರಹಕ್ಕೆ ಬೇರೆ ಯಾವ ಹೊಸ ದಾರಿಯನ್ನೂ ಅಧಿಕಾರಿಗಳು ಶೋಧಿಸಲಿಲ್ಲ. ಗ್ರಾಮೀಣ ಗ್ರಂಥಾಲಯಕ್ಕೆ ಒಬ್ಬ
ಗ್ರಂಥಪಾಲಕರಿರುತ್ತಾರೆ. ತಿಂಗಳಿಗೆ ಹದಿನೈದು ಸಾವಿರ ರೂಪಾಯಿ ವೇತನ. ಈ ಗ್ರಂಥಾಲಯಕ್ಕೆ ಬರುವ
ಸಂದರ್ಶಕರೆಷ್ಟು, ಪುಸ್ತಕಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಓದುವವರೆಷ್ಟು ಮಂದಿ ಎಂದು ಲೆಕ್ಕ ಇಡುವ ವ್ಯವಸ್ಥೆ ಕೂಡ ಅಲ್ಲಿರುವುದಿಲ್ಲ. ಒಬ್ಬರಿಗೆ ಉದ್ಯೋಗ ಸೃಷ್ಟಿಯಾಗಿದೆ ಅಷ್ಟೇ. ಇತ್ತೀಚಿನ ದಿನಗಳಲ್ಲಿ ಎಷ್ಟು ಶೌಚಾಲಯ, ಹೊಸ ಮನೆ, ಕಸದ ತೊಟ್ಟಿ ಜನರ ತೆರಿಗೆ ಹಣದಿಂದ ನಿರ್ಮಾಣವಾಗಿವೆ ಎಂದು ಕೇಳಿದರೆ ಉತ್ತರ ಸಿಗದು.

ಗ್ರಾಮ ಪಂಚಾಯಿತಿಗಳೆಂದರೆ ರಾಜಕೀಯ ಮೇಲಾಟಗಳಿಂದ ಹೊರತಾದ ವ್ಯವಸ್ಥೆ ಎಂಬುದು ಬರೀ ನಂಬಿಕೆ. ಚುನಾವಣೆಯಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ಮತದಾನದ ಹಾಗೆಯೇ ರಾಜಕೀಯ ಪಕ್ಷಗಳ ಪ್ರಭೃತಿಗಳು ಪ್ರಾಬಲ್ಯ ತೋರಿಸುತ್ತಾರೆ. ಗೆದ್ದು ಬಂದ ಬಳಿಕ ಮತದಾರರ ಮುಖವನ್ನೂ ನೋಡದ ಕೆಲವು ಪ್ರತಿನಿಧಿಗಳು ಸಭಾಭತ್ಯೆ ಸಿಗುವ ಕಾರಣ ಮಾಸಿಕ ಸಭೆಗಳಿಗೆ ಹಾಜರಾಗುತ್ತಾರೆ. ಅಲ್ಲಿ ನಡೆಯುವ ಚರ್ಚೆ
ಗಳಲ್ಲಿ ಏನು ವಿಷಯ ಪ್ರಸ್ತಾಪವಾಯಿತು, ನಿರ್ಣಯವಾಯಿತು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವವರ
ಸಂಖ್ಯೆ ಕಡಿಮೆ. ಒಂದಿಬ್ಬರು ಬುದ್ಧಿವಂತರು ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬಹುದು. ಹೀಗಾಗಿ, ಅಗತ್ಯವಿದ್ದರೂ ಕೆಲವರಿಗೆ ಮನೆ ಸಿಕ್ಕಿಲ್ಲ. ರಸ್ತೆ, ಬೀದಿದೀಪ, ಶೌಚಾಲಯ ಸೌಕರ್ಯ ಕಲ್ಪಿಸುವ ಕೆಲಸ ಸಮರ್ಪಕವಾಗಿ ಆಗಿಲ್ಲ. ಮತ ಪಡೆದು ಗ್ರಾಮ ಪಂಚಾಯಿತಿ ಸದಸ್ಯರೆಂದು ಗುರುತಿಸಲ್ಪಡುವವರಿಗೆ
ತಮ್ಮ ಹೊಣೆಗಾರಿಕೆಯ ಮೂಲ ಕಲ್ಪನೆಯೇ ಇರುವುದಿಲ್ಲ.

ನಜೀರ್‌ ಸಾಬ್‌ ನೆಟ್ಟ ಈ ವ್ಯವಸ್ಥೆಯ ಗಿಡಕ್ಕೆ ಇಷ್ಟು ವರ್ಷಗಳ ಮೇಲಾದರೂ ಒಂದು ಕಾಯಕಲ್ಪ ಬೇಕೆಂದು ಪ್ರಾಜ್ಞರಾದ ನಾಗರಿಕರು ಬಯಸುವುದು ಉಚಿತವಲ್ಲವೇ? ಅಧಿಕಾರ ವಿಕೇಂದ್ರೀಕರಣದಿಂದ ಏನೋ ಮಹತ್ತರವಾದುದು ಆಗುತ್ತಿದೆ ಎಂಬ ಭ್ರಮೆ ಬಿಟ್ಟು ವಸ್ತುಸ್ಥಿತಿ ಅರಿಯುವುದು ಯಾವಾಗ? ಇಲ್ಲಿ ಸೃಷ್ಟಿಯಾಗಿರುವ ಹುದ್ದೆಗಳಲ್ಲಿರುವ ನೌಕರರಿಗೆ ತಕ್ಕಷ್ಟು ಕೆಲಸವಿದೆಯೇ? ಜನಪ್ರತಿನಿಧಿಯಾಗಿ ಆಯ್ಕೆಯಾದವರು ಆಯಾ ವರ್ಷ ಮಾಡಿದ ಸಾಧನೆಗಳೇನು... ಈ ಎಲ್ಲವನ್ನೂ ಮೌಲ್ಯಮಾಪನ ಮಾಡಿದರೆ ವಸ್ತುಸ್ಥಿತಿ ಹೊರಗೆ ಬರುತ್ತದೆ. ನ್ಯೂನತೆ ಸರಿಪಡಿಸಲು, ಹೊಸತನ್ನು ಅಳವಡಿಸಿಕೊಳ್ಳಲು
ಸಾಧ್ಯವಾಗುತ್ತದೆ. ಈ ವ್ಯವಸ್ಥೆಗೆ ಕಾಯಕಲ್ಪ ನೀಡುವುದು ಈಗಿನ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT