ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಯಾವುದು ನಿಜವಾದ ಪ್ರಶಸ್ತಿ?

ಪ್ರಶಸ್ತಿಯ ಬೆನ್ನೇರಿದವರನ್ನು ಪ್ರತಿರೋಧಿಸಲು ಇರುವ ಒಂದು ಮಾರ್ಗೋಪಾಯವೆಂದರೆ ಪ್ರಶಸ್ತಿಗೆ ಬೆನ್ನು ತೋರಿಸುವುದು
ಟಿ.ಎನ್.‌ವಾಸುದೇವಮೂರ್ತಿ
Published 11 ಡಿಸೆಂಬರ್ 2023, 19:27 IST
Last Updated 11 ಡಿಸೆಂಬರ್ 2023, 19:27 IST
ಅಕ್ಷರ ಗಾತ್ರ

ಇಂದಿನ ಸಾಹಿತ್ಯಕ ಕಾಲಘಟ್ಟಕ್ಕೆ ‘ಪ್ರಶಸ್ತಿ ಸಾಹಿತ್ಯ’ದ ಓಲೈಕೆ ಕಾಲಘಟ್ಟವೆಂಬ ಹೆಸರು ಸೂಕ್ತ ಎಂದು ಅಭಿಪ್ರಾಯಪಟ್ಟಿರುವ ಅರುಣ್ ಜೋಳದಕೂಡ್ಲಿಗಿ, ಪ್ರಶಸ್ತಿಗಳು ಸಾಹಿತ್ಯಕ ವಾತಾವರಣವನ್ನು ಹೇಗೆ
ಕಲುಷಿತಗೊಳಿಸುತ್ತವೆ ಎಂಬುದನ್ನು ತಮ್ಮ ಲೇಖನದಲ್ಲಿ (ಸಂಗತ, ಡಿ. 6) ಸುಸಂಗತವಾಗಿ ವಿಶ್ಲೇಷಿಸಿದ್ದಾರೆ.‌

ಹಿಂದೆ ನವೋದಯ ಯುಗದಲ್ಲಿ ಹೊಸ ಸಾಹಿತ್ಯ ಉದಯಿಸುವ ಸಮಯದಲ್ಲಿ ಕನ್ನಡ ಸಾಹಿತ್ಯಕ್ಕೆ ಪ್ರಚಾರದ ಅಗತ್ಯವಿತ್ತು. ಈ ಮನ್ನಣೆ, ಪ್ರಚಾರದಿಂದ ವಿಪುಲವಾಗಿ ಸಾಹಿತ್ಯ ರಚನೆಯಾಯಿತು.

ಬಳಿಕ ಈ ಬೆಳವಣಿಗೆಗೊಂದು ಕಡಿವಾಣ ಹಾಕಲು ವಿಮರ್ಶೆಯ ಅವಶ್ಯಕತೆಯೂ ಸೃಷ್ಟಿಯಾಯಿತು. ಕುವೆಂಪು, ಬೇಂದ್ರೆ, ಡಿವಿಜಿ ಅಂತಹವರು ಪ್ರಾರಂಭದಲ್ಲಿ ಮನ್ನಣೆ, ಪ್ರಚಾರಕ್ಕೂ ಭಾಜನರಾದರು, ತರುವಾಯ ತೀಕ್ಷ್ಣವಾದ ಟೀಕೆ, ವಿಮರ್ಶೆಗಳಿಗೂ ಗುರಿಯಾದರು. ಈ ಎರಡೂ ಬಗೆಯ ಅಗ್ನಿಪರೀಕ್ಷೆಗಳನ್ನು ಜಯಿಸಿ ಅವರು ಇಂದಿಗೂ ಜೀವಂತವಾಗಿ ಇದ್ದಾರೆ. ಎಷ್ಟೋ ಸಲ ವಿಮರ್ಶೆಗಿಂತ ಹೊಗಳಿಕೆ ಮತ್ತು ಪ್ರಚಾರವು ಕವಿಪ್ರತಿಭೆಯನ್ನು ನಿರ್ನಾಮ ಮಾಡಿಬಿಡುತ್ತವೆ.

ಆಧುನಿಕ ಸಂಪರ್ಕ ಮಾಧ್ಯಮಗಳ ಇಂದಿನ ಯುಗದಲ್ಲಿ ಸಾಹಿತ್ಯ ಪ್ರಚಾರ ಖಂಡಿತವಾಗಿ ಒಂದು ಸವಾಲಾಗಿ ಉಳಿದಿಲ್ಲ. ಇಂದು ಪ್ರಶಸ್ತಿ, ಪ್ರಚಾರವು ಬರೀ ತೋರಿಕೆಯ ಬಡಿವಾರವಾಗಿವೆಯೇ ವಿನಾ ಇವು ಸಾಹಿತ್ಯ ಪ್ರಚಾರಕ್ಕೆ ಯಾವುದೇ ಕಾಯಕಲ್ಪ ಮಾಡಿಲ್ಲ. ಒಬ್ಬ ಸಾಹಿತಿ ಇಂತಹ ಕೃತಿ ರಚಿಸಿರುವರೆಂದು ಜನ ಗುರುತಿಸಿದಾಗ, ಆ ಸಾಹಿತಿಯ ಜೀವನ ಸಾರ್ಥಕಆಗುತ್ತದಲ್ಲದೆ ಅವರಿಗೆ ಇಂತಹ ಪ್ರಶಸ್ತಿ ಸಿಕ್ಕಿದೆ ಎಂದು ಪ್ರಚಾರವಾದಾಗಲಲ್ಲ. ‘ಮನ್ನಣೆಯ ದಾಹವೀ ಎಲ್ಲಕಿಂ ತೀಕ್ಷ್ಣತಮ ತಿನ್ನುವುದದಾತ್ಮವನೆ ಮಂಕುತಿಮ್ಮ’ ಎಂದಿದ್ದಾರೆ ಡಿವಿಜಿ. ಓದುಗರು ತನ್ನನ್ನು ಗುರುತಿಸುತ್ತಿಲ್ಲವೆಂಬ ಕಾರಣಕ್ಕೋ ತನ್ನ ಸೃಜನಶೀಲತೆಯ ಸೆಲೆಗಳು ಬತ್ತಿಹೋಗಿವೆಯೆಂದೋ ಅರಿವಾದಾಗಲಷ್ಟೇ ಸಾಹಿತಿಗಳು ಪ್ರಚಾರದ ಬೆನ್ನು ಹತ್ತುವರು, ಸಾಹಿತಿಯ ಸೋಗು ಹಾಕುವರು. ಪ್ರಶಸ್ತಿಯ ಬೆನ್ನೇರಿದವರು ಲೋಕದ ಕಣ್ಣಿಗೆ ವಿದೂಷಕರಂತೆ ಕಾಣಿಸುತ್ತಿರುತ್ತಾರೆ.

ಪ್ರಶಸ್ತಿಯ ಬೆನ್ನೇರಿದವರನ್ನು ಪ್ರತಿರೋಧಿಸಲು ಇರುವ ಒಂದು ಮಾರ್ಗೋಪಾಯವೆಂದರೆ ಪ್ರಶಸ್ತಿಗೆ ಬೆನ್ನು ತೋರಿಸುವುದು. ಕಳೆದ ದಶಕದಲ್ಲಿ ಈ ತರಹದ ಒಂದು ಪ್ರಶಸ್ತಿ ವಾಪಸಾತಿ ಅಭಿಯಾನವೂ ಪ್ರಾರಂಭವಾಗಿ ಯಾವುದೇ ತಾರ್ಕಿಕ ಅಂತ್ಯ ಕಾಣದೇ ನಿಂತಿತು. ತಾನು ಸೈದ್ಧಾಂತಿಕವಾಗಿ ಒಪ್ಪದಿರುವ ಒಂದು ರಾಜಕೀಯ ಪಕ್ಷ ಆಡಳಿತ ವಹಿಸಿಕೊಂಡಿದೆ ಎಂಬ ಕಾರಣಕ್ಕೆ ಪ್ರತಿಭಟಿಸಿದರೆ, ಅದು ನಶ್ವರವಾದ ಒಂದು ರಾಜಕೀಯ ಪ್ರತಿಕ್ರಿಯೆ ಯಾಗುತ್ತದೆ.

ಪ್ರಶಸ್ತಿ ವಾಪಸಾತಿಗೆ ರಾಜಕೀಯ ಅಥವಾ ಸೈದ್ಧಾಂತಿಕ ಕಾರಣಕ್ಕಿಂತಲೂ ಮಿಗಿಲಾದ ಒಂದು ಸದೃಢ ತಾತ್ವಿಕ ನೆಲೆಗಟ್ಟು ಬೇಕಾಗುತ್ತದೆ. ಉದಾಹರಣೆಗೆ, ಶಾಲಾ ಶಿಕ್ಷಣವನ್ನು ರಾಜ್ಯಭಾಷೆಯಲ್ಲಿ ನೀಡುವುದನ್ನು ಕಡ್ಡಾಯಗೊಳಿಸುವವರೆಗೂ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ದೇವನೂರ ಮಹಾದೇವ ಅವರು ನೃಪತುಂಗ ಪ್ರಶಸ್ತಿಯನ್ನು ನಿರಾಕರಿಸಿದ್ದರು, ರಂಗಕರ್ಮಿ ರಘುನಂದನ ಅವರು ಸಹ ಇಂತಹುದೇ ತಾತ್ವಿಕ ಕಾರಣಕ್ಕೆ ಯಾವುದೇ ಸರ್ಕಾರ ನೀಡುವ ಎಲ್ಲ ತರಹದ ಪ್ರಶಸ್ತಿಗಳನ್ನೂ ನಿರಾಕರಿಸಿದ್ದಾರೆ.

ಯೋಗ್ಯರಲ್ಲದವರಿಂದ ಪಡೆವ ಪ್ರಶಸ್ತಿ ಒಂದು ಕಳಂಕವೆಂದು ಸಾಹಿತಿಗಳು ಭಾವಿಸಬೇಕು. ಗೀತೆಯಲ್ಲಿ ‘ಲೋಕದ ಜನ ಎಂದಿಗೂ ಆತ್ಮಸತ್ವವುಳ್ಳವರನ್ನು ಅನುಸರಿಸುತ್ತಾರೆ’ (ಗೀತೆ 3.20) ಎಂಬ ಮಾತಿದೆ. ಹೀಗೆ ಭಾವಿಸುವ ಸಾಹಿತಿಗಳ ಸಂತಾನ ವೃದ್ಧಿಸಿದಾಗಲಷ್ಟೇ ಪ್ರಶಸ್ತಿ, ಪ್ರಚಾರದ ವಿದೂಷಕತನ ಬಯಲಾಗುತ್ತದೆ. ನಮ್ಮ ನಿಜವಾದ ಬದ್ಧತೆಗೆ ನೂರಾರು ಜನರನ್ನು ಆಕರ್ಷಿಸಬಲ್ಲ ಸಾಮರ್ಥ್ಯ ಇರುತ್ತದೆ.

ಪ್ರಶಸ್ತಿಗಳು ಸಾಹಿತಿಗಳ ಸಂವೇದನೆಯನ್ನು ನಾಶ ಮಾಡುತ್ತಿವೆ ಎಂದು ಭಾವಿಸುವ ಸಾಹಿತಿಗಳು ಈ ಪ್ರಶಸ್ತಿ ನಿರಾಕರಣಾ ಚಳವಳಿಯನ್ನು ದೊಡ್ಡ ಮಟ್ಟದಲ್ಲಿ ಮುಂದುವರಿಸಬೇಕಾಗಿದೆ. ಆಗ, ಪ್ರಶಸ್ತಿ ಹೊಡೆದು ಕೊಳ್ಳುವ ಸಾಹಿತಿಗಳ ವಿದೂಷಕತ್ವ ಮತ್ತು ಪ್ರಶಸ್ತಿಗೆ ಬೆನ್ನು ತೋರಿಸಬಲ್ಲ ಸಾಹಿತಿಗಳ ರಸಋಷಿತ್ವವು ಲೋಕದ ಕಣ್ಣಿಗೆ ಸ್ಪಷ್ಟವಾಗಿ ಕಾಣಿಸಬಲ್ಲವು. ಇಂಥದೊಂದು ಅಭಿಯಾನವನ್ನು ಪ್ರಾರಂಭಿಸುವ ಬದ್ಧತೆ ತೋರಿಸಲಾರದವರ ಮಾತು ಬರೀ ಹಳಹಳಿಕೆಯಂತೆ ಕೇಳಿಸುತ್ತದೆ.

ಪ್ರಶಸ್ತಿ ನೀಡಿಕೆ, ಬೇಡಿಕೆಗಳು ಫ್ಯೂಡಲ್‌ ಯುಗದ ಪ್ರವೃತ್ತಿಗಳಾಗಿವೆ. ಪ್ರಜಾಪ್ರಭುತ್ವ ಯುಗದಲ್ಲಿ ಓದುಗರೇ ನಿಜವಾದ ಪ್ರಶಸ್ತಿದಾತರು. ಪುಸ್ತಕ ಬರುವುದನ್ನೇ ಕಾದು, ಬಂದಕೂಡಲೇ ಅದನ್ನು ಖರೀದಿಸಿ ಆಸಕ್ತಿಯಿಂದ ಓದುವ ಓದುಗರ ಕಾತರ ಮತ್ತು ಆಸಕ್ತಿಯೇ ನಿಜವಾದ ಪ್ರಶಸ್ತಿಯಾಗಿದೆ. ಇದರರ್ಥ, ವೇಗವಾಗಿ ಬಿಕರಿಯಾಗುವ ಪುಸ್ತಕಗಳೆಲ್ಲ ಶ್ರೇಷ್ಠ ಎಂದಲ್ಲ. ಹಲವು ತಲೆಮಾರುಗಳವರೆಗೆ ಓದುಗರ ಮನಸ್ಸಿನಲ್ಲಿ ಉಳಿಯಬಲ್ಲ ಸಾಹಿತಿಗಳಷ್ಟೇ ಸಾರ್ವಕಾಲಿಕರಾಗುತ್ತಾರೆ.

ತನ್ನ ಪುಸ್ತಕವು ಓದುಗರನ್ನು ತಲುಪುವುದಿಲ್ಲ, ತಲುಪಿದರೂ ಅವರು ಅದನ್ನು ಓದುವುದಿಲ್ಲ ಎಂದು ಮನಗಾಣುವ ಸಾಹಿತಿಗಳು ಪ್ರಶಸ್ತಿಯ ಬೆನ್ನ ಹಿಂದೆ ಬಿದ್ದು ಸೋಗಲಾಡಿಗಳಾಗುತ್ತಾರೆ. ಪ್ರಶಸ್ತಿಯ ಲೋಭಕ್ಕೆ ಬಲಿಯಾಗದಂತೆ ಸದ್ದಿಲ್ಲದೇ ಬರೆಯುತ್ತ ಸಹಸ್ರಾರು ಓದುಗರನ್ನು ತಲುಪುತ್ತಿರುವ ಲೆಕ್ಕವಿಲ್ಲ
ದಷ್ಟು ಸಾಹಿತಿಗಳು ಇಂದಿಗೂ ನಮ್ಮ ನಡುವೆ ಇದ್ದಾರೆ. ಅವರು ನಮ್ಮ ಸಾಹಿತ್ಯ ಪರಂಪರೆಯ ನಿಜವಾದ ವಾರಸುದಾರರು. ಹಾಗಲ್ಲದೆ ಪ್ರಶಸ್ತಿ ಲೋಲುಪರೇ ಈ ಯುಗದ ಪ್ರತಿನಿಧಿಗಳೆಂದು ಯಾರಾದರೂ ತೀರ್ಮಾನಿಸಿದರೆ ಅದನ್ನು ಒಪ್ಪಲು ಕಷ್ಟವಾಗುತ್ತದೆ. ಅಂತಹ ತೀರ್ಮಾನದಿಂದ ವಿದೂಷಕರ ಯೋಗ್ಯತೆಗೆ ಸಲ್ಲದ ಬೆಲೆ ಕೊಟ್ಟಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT