ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ಪರೀಕ್ಷಾ ಪದ್ಧತಿಯ ಸುಧಾರಣೆ ಯಾವಾಗ?

ಭಾರತದಲ್ಲಿ ಪರೀಕ್ಷೆಯ ಒತ್ತಡಕ್ಕೆ ಸಂಬಂಧಿಸಿದ ಆತ್ಮಹತ್ಯೆಗಳು ಮತ್ತು ಆತ್ಮಹತ್ಯೆ ಪ್ರಯತ್ನಗಳ ಕುರಿತ ಕೆಲವು ಅಂಕಿ–ಅಂಶಗಳು ನಿಜಕ್ಕೂ ಗಾಬರಿ ಹುಟ್ಟಿಸುವಂತಿವೆ
Published 8 ಜುಲೈ 2024, 23:49 IST
Last Updated 8 ಜುಲೈ 2024, 23:49 IST
ಅಕ್ಷರ ಗಾತ್ರ

ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಇತ್ತೀಚೆಗೆ ನಡೆದ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದನ್ನು ಬಿಹಾರದ ನಾಲ್ವರು ಅಭ್ಯರ್ಥಿಗಳು ಸಿಬಿಐ ಎದಿರು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಯುಜಿಸಿ–ನೆಟ್ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಕಾರಣಕ್ಕೆ, ನಡೆದಿದ್ದ ಪರೀಕ್ಷೆಗಳನ್ನು ರದ್ದುಪಡಿಸಲಾಯಿತು. ಗುಜರಾತ್‌ನಲ್ಲಿ ನಡೆದ ಕಿರಿಯ ಕ್ಲರ್ಕ್‌ಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾದ ನಂತರ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಬಿಹಾರದಲ್ಲಿ ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಆ ಪರೀಕ್ಷೆಯನ್ನು ಕೂಡ ರದ್ದುಗೊಳಿಸಲಾಗಿದೆ.

ಇವೆಲ್ಲವುಗಳನ್ನು ಗಮನಿಸಿದಾಗ, ಸರ್ಕಾರಿ ಹುದ್ದೆಗಳ ನೇಮಕಕ್ಕೆ ವಿವಿಧ ನೇಮಕಾತಿ ಪ್ರಾಧಿಕಾರಗಳು ನಡೆಸುವ ಹಾಗೂ ವಿವಿಧ ಕೋರ್ಸ್‌ಗಳಿಗೆ ಪ್ರವೇಶಕ್ಕೆ ನಡೆಸುವ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆಯುವುದು ತೀರಾ ಮಾಮೂಲಿ ಸಂಗತಿ ಎನ್ನುವಂತಾಗಿದೆ. ಈ ಬಗೆಯ ಅಕ್ರಮಗಳಿಂದಾಗಿ, ಬಡ ಮತ್ತು ಪ್ರತಿಭಾವಂತ ಅಭ್ಯರ್ಥಿಗಳು ಸರ್ಕಾರಿ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಹಾಗೆಯೇ, ಅರ್ಹ ವಿದ್ಯಾರ್ಥಿಗಳು ತಮ್ಮ ಇಷ್ಟದ ಕೋರ್ಸ್‌ಗೆ ಸೇರಲು ಸಾಧ್ಯವಾಗದೆ ದುಃಖತಪ್ತರಾಗುತ್ತಿದ್ದಾರೆ.

ಪರೀಕ್ಷಾ ಕೇಂದ್ರಗಳ ಸುತ್ತಲಿನ ಅತಿ ಭದ್ರತೆಯು ವಿದ್ಯಾರ್ಥಿಗಳಲ್ಲಿ, ಅಭ್ಯರ್ಥಿಗಳಲ್ಲಿ ಅಭಯದ ಭಾವನೆ ಮೂಡಿಸುವ ಬದಲಿಗೆ, ಅಲ್ಲಿನ ಅತಿಶಿಸ್ತಿನ ಹುಬ್ಬು ಗಂಟಿಕ್ಕಿದ ಮುಖಗಳು, ಸಿ.ಸಿ.ಟಿ.ವಿ. ಕ್ಯಾಮೆರಾ ಕಣ್ಗಾವಲು ಪರೀಕ್ಷಾರ್ಥಿಗಳಲ್ಲಿ ವಿಲಕ್ಷಣ ಭಯ ಹುಟ್ಟಿಸುತ್ತಿವೆ. ವಿಷಯವೊಂದಕ್ಕೆ ಸಂಬಂಧಿಸಿದಂತೆ ವರ್ಷವಿಡೀ ಓದಿದ್ದನ್ನು, ಪರೀಕ್ಷಾ ಕೊಠಡಿಯಲ್ಲಿ ಕುಳಿತು ನಿರ್ದಿಷ್ಟ ಅವಧಿಯಲ್ಲಿ ಪರೀಕ್ಷೆಯೆಂಬ ಅಗ್ನಿದಿವ್ಯದ ಮೂಲಕ ಹಾ‌‌ಯ್ದು, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವ ಸವಾಲು ಅಭ್ಯರ್ಥಿಗಳ ಹಾಗೂ ವಿದ್ಯಾರ್ಥಿಗಳ ಮುಂದೆ ಇರುತ್ತದೆ.

ಪ್ರತಿ ಪರೀಕ್ಷೆಯ ಹಿಂದೆಯೂ ವಿದ್ಯಾರ್ಥಿಯ ಸೂಕ್ಷ್ಮ ಮಾನಸಿಕ ತಯಾರಿ, ಲಕ್ಷಾಂತರ ರೂಪಾಯಿಗಳ ಹಣ ಮತ್ತು ಪೋಷಕರ ಶ್ರಮವೂ ಸೇರಿರುತ್ತದೆ. ಇದರ ಜೊತೆಯಾಗಿ ಪೋಷಕರ ಒತ್ತಡ, ಪ್ರತಿಷ್ಠೆ, ಭದ್ರ ಭವಿಷ್ಯ, ಜವಾಬ್ದಾರಿ ಎಂಬ ಹೆಚ್ಚುವರಿ ದೇಶಾವರಿ ಮಾತುಗಳಂತೂ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಇನ್ನಷ್ಟು ಪ್ರಕ್ಷುಬ್ಧತೆಯನ್ನು ಸೃಷ್ಟಿಸಿಬಿಟ್ಟಿರುತ್ತವೆ. ಒಮ್ಮೆ ಪರೀಕ್ಷೆ ಮುಗಿದರೆ ಸಾಕು ಎನ್ನುವಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು, ಅಭ್ಯರ್ಥಿಗಳು ಇರುತ್ತಾರೆ. ಇಂತಹ ಪರಿಸ್ಥಿತಿಯ ನಡುವೆ, ಎಲ್ಲೋ ಯಾರೋ ಎಸಗುವ ಪರೀಕ್ಷಾ ಅಕ್ರಮದ ಫಲವಾಗಿ ಇಂಥದ್ದೇ ಮತ್ತೊಂದು ಪರೀಕ್ಷೆಯನ್ನು ಎದುರಿಸಬೇಕಾಗಿ ಬರುವುದು ಎಷ್ಟೊಂದು ಕಷ್ಟ ಎಂಬುದನ್ನು ಯಾರಾದರೂ ಸಹಜವಾಗಿ ಊಹಿಸಬಹುದು.

ಭಾರತದಲ್ಲಿ ಪರೀಕ್ಷೆಯ ಒತ್ತಡಕ್ಕೆ ಸಂಬಂಧಿಸಿದ ಆತ್ಮಹತ್ಯೆಗಳು ಮತ್ತು ಆತ್ಮಹತ್ಯೆ ಪ್ರಯತ್ನಗಳ ಕುರಿತ ಕೆಲವು ಅಂಕಿ–ಅಂಶಗಳು ಗಾಬರಿ ಹುಟ್ಟಿಸುವಂತಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊದಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, 2014 ಮತ್ತು 2018ರ ನಡುವೆ, ಭಾರತದಲ್ಲಿ 134 ವಿದ್ಯಾರ್ಥಿಗಳ ಆತ್ಮಹತ್ಯೆಗಳು ವರದಿಯಾಗಿವೆ. 2019ರಲ್ಲಿ, ತಮಿಳುನಾಡಿನಲ್ಲಿ 27 ವಿದ್ಯಾರ್ಥಿಗಳು ಪರೀಕ್ಷೆಯ ಒತ್ತಡವನ್ನು ಕಾರಣವೆಂದು ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವಿರಾನ್‌ಮೆಂಟ್‌ನ 2020ರ ವರದಿಯು ಭಾರತದಲ್ಲಿ ಪ್ರತಿ ಗಂಟೆಗೆ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸುತ್ತಾನೆ, ವಿದ್ಯಾರ್ಥಿಗಳ ಪೈಕಿ ಶೇಕಡ 46ರಷ್ಟು ಮಂದಿ ಪರೀಕ್ಷೆಗಳಿಂದಾಗಿ ತೀವ್ರ ಒತ್ತಡ ಎದುರಿಸುತ್ತಾರೆ, ಶೇ 25ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯ ಒತ್ತಡದ ಕಾರಣದಿಂದಾಗಿ ಆತ್ಮಹತ್ಯೆಯ ಕುರಿತು ಯೋಚಿಸುತ್ತಾರೆ ಎಂದು ಹೇಳಿದೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆ್ಯಂಡ್‌ ನ್ಯೂರೊಸೈನ್ಸ್ (ನಿಮ್ಹಾನ್ಸ್) 2018ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ವಿದ್ಯಾರ್ಥಿಗಳ ಪೈಕಿ ಶೇ 12ರಷ್ಟು ಮಂದಿ ಆತ್ಮಹತ್ಯೆಯ ಆಲೋಚನೆ ಹೊಂದುತ್ತಾರೆ.

ಜರ್ನಲ್ ಆಫ್ ಇಂಡಿಯನ್ ಅಸೋಸಿಯೇಷನ್ ಫಾರ್ ಚೈಲ್ಡ್ ಆ್ಯಂಡ್ ಅಡೋಲಸೆಂಟ್ ಮೆಂಟಲ್ ಹೆಲ್ತ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ ಪ್ರತಿ ಐದು ಮಂದಿ ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿಯು ಪರೀಕ್ಷೆಗೆ ಸಂಬಂಧಿಸಿದ ಒತ್ತಡ ಅನುಭವಿಸುತ್ತಾನೆ. ಪ್ರತಿ 10 ಮಂದಿಯಲ್ಲಿ ಒಬ್ಬ ಆತ್ಮಹತ್ಯೆಯ ಕಲ್ಪನೆ ಹೊಂದಿರುತ್ತಾನೆ. ಪ್ರತಿ ವರ್ಷ ನಡೆಸಲಾಗುವ ನೀಟ್ ಮತ್ತು ಜೆಇಇ ಹಾಗೂ ಇನ್ನಿತರ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಲ್ಲಿ ಉತ್ತರದ ರಾಜ್ಯಗಳಿಂದ ಇಂತಹ ಅಕ್ರಮಗಳು ವರದಿಯಾ
ಗುತ್ತಲೇ ಇರುತ್ತವೆ. ನೀಟ್ ಪರೀಕ್ಷಾ ಪದ್ಧತಿಯನ್ನೇ ಕೈಬಿಡಬೇಕೆಂಬ ವಾದ ಈಗ ಮತ್ತಷ್ಟು ಬಲ ಪಡೆದಿದೆ.

ಈ ಹೊತ್ತಿನಲ್ಲಿ ಶಿಕ್ಷಣ ತಜ್ಞರು ಇದರ ಬಗ್ಗೆ ಹೆಚ್ಚಿನ ಗಮನಹರಿಸಬೇಕಾದ ಅನಿವಾರ್ಯ ಇದೆ. ಪ್ರಾಮಾಣಿಕವಾಗಿ ಪರೀಕ್ಷೆ ಎದುರಿಸಿದವರ ಪಾಲಿಗೆ ಈ ಅಕ್ರಮಗಳು ಇಡೀ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಅಪನಂಬಿಕೆ ಹುಟ್ಟಿಸುವಂತಹವು. ಇಂತಹ ಪ್ರಕರಣಗಳು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನೇ ಉಡುಗಿಸಿ ತಮ್ಮ ಭವಿಷ್ಯದ ಬಗ್ಗೆ ಭ್ರಮನಿರಸನ ಮೂಡಿಸುವ ಅಪಾಯವಿದೆ. ಈ ಅಕ್ರಮಗಳನ್ನು‌ ತಡೆಯುವ ಗುರುತರ ಜವಾಬ್ದಾರಿ ಸರ್ಕಾರದ ಮೇಲಿದೆ. ಇಲ್ಲವಾದರೆ ಇಂತಹ ಅಕ್ರಮಗಳ ದೂರಗಾಮಿ ದುಷ್ಪ
ರಿಣಾಮವನ್ನು ಊಹಿಸಲೂ ಭಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT